ADVERTISEMENT

ಪ್ರಜ್ವಲ್ ರೇವಣ್ಣ ಪ್ರಕರಣವನ್ನು ರಾಜಕೀಯ ದೃಷ್ಟಿಯಿಂದ ನೋಡಲೇಬಾರದು: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 16:23 IST
Last Updated 3 ಆಗಸ್ಟ್ 2025, 16:23 IST
<div class="paragraphs"><p>ಜಿ. ಪರಮೇಶ್ವರ</p></div>

ಜಿ. ಪರಮೇಶ್ವರ

   

ಬೆಂಗಳೂರು: ‘ಪ್ರಜ್ವಲ್ ರೇವಣ್ಣ ಪ್ರಕರಣವನ್ನು ರಾಜಕೀಯ ದೃಷ್ಟಿಯಿಂದ ನೋಡಲೇಬಾರದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್‌ಐಟಿ ಅಚ್ಚುಕಟ್ಟಾಗಿ ತನಿಖೆ ಮಾಡಿದೆ. ಈ ತಂಡದವರಿಗೆ ಮುಖ್ಯಮಂತ್ರಿ ಪದಕ ಕೊಡುತ್ತೇವೆ. ರಾಷ್ಟ್ರಪತಿ ಪದಕಕ್ಕೂ ಶಿಫಾರಸು ಮಾಡುತ್ತೇವೆ’ ಎಂದರು.

ADVERTISEMENT

ಒಳ ಮೀಸಲಾತಿ ಜಾರಿಗೆ ‌ಬದ್ಧ: ಒಳ ಮೀಸಲಾತಿಗಾಗಿ ಮಾದಿಗ ಸಮುದಾಯಗಳ‌ ಒಕ್ಕೂಟ ಪ್ರತಿಭಟನೆಗೆ ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಚಿತ್ರದುರ್ಗದಲ್ಲಿ ನಡೆದಿದ್ದ ಪಕ್ಷದ ಸಮಾವೇಶದಲ್ಲಿಯೇ ಘೋಷಣೆ ಮಾಡಲಾಗಿತ್ತು. ನಮ್ಮ ಪ್ರಣಾಳಿಕೆಯಲ್ಲೂ ಭರವಸೆ ಇದೆ. ಯಾರಿಗೂ ಅನ್ಯಾಯ ಆಗದಂತೆ ನಾವು ಜಾರಿ ಮಾಡುತ್ತೇವೆ’ ಎಂದರು.

ನಿಗಮ ಮಂಡಳಿಗಳಿಗೆ ನೇಮಕ ವಿಚಾರವಾಗಿ ಮಾತನಾಡಿದ ಅವರು, ‘ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲಾ ಅವರು ಸದ್ಯದಲ್ಲಿ ಬೆಂಗಳೂರಿಗೆ ಬರಲಿದ್ದಾರೆ. ಅವರ ಹಂತದಲ್ಲಿ ಚರ್ಚೆ ನಡೆದು, ಪಟ್ಟಿ ಅಂತಿಮಗೊಳ್ಳಲಿದೆ’ ಎಂದರು.

ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ ಎಂದು ಆರೋಪಿಸಿ ಆಗಸ್ಟ್‌ 5ರಂದು ಕಾಂಗ್ರೆಸ್‌ ನಡೆಸಲಿರುವ ಪ್ರತಿಭಟನೆಗೆ ವಿರುದ್ಧವಾಗಿ ಬಿಜೆಪಿ ಕೂಡಾ ಪ್ರತಿಭಟನೆ ನಡೆಸಲು ಮುಂದಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರಿಗೂ ಪತಿಭಟನೆ ನಡೆಸುವ ಹಕ್ಕು ಇದೆಯಲ್ಲವೇ. ನಾವು ಅಂಕಿ ಅಂಶಗಳನ್ನು ಇಟ್ಟುಕೊಂಡು ಆರೋಪ ಮಾಡಿದ್ದೇವೆ’ ಎಂದರು.

‘ಲೋಕಸಭೆ ಚುನಾವಣೆ ವೇಳೆ ರಾಜ್ಯ ಸರ್ಕಾರವೇ ಅಧಿಕಾರಿಗಳನ್ನು ‌ನೇಮಿಸಿತ್ತು’ ಎಂಬ ಬಿಜೆಪಿ ಆರೋಪಕ್ಕೆ, ‘ಅದನ್ನು ಚುನಾವಣಾ ಆಯೋಗ ಹೇಳಲಿ. ನಾವು ಮಾಡಿರುವ ಆರೋಪಕ್ಕೆ ಚುನಾವಣಾ ಆಯೋಗದಿಂದ ಉತ್ತರ ಬಯಸುತ್ತೇವೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.