ಪ್ರಿಯಾಂಕ್ ಖರ್ಗೆ
ಬೆಂಗಳೂರು: ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದರೆ ಬಡತನ ದೂರವಾಗಲಿದೆಯೇ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡಿರುವ ಪ್ರಶ್ನೆಗೆ ಟೀಕಾಪ್ರಹಾರವನ್ನೇ ಮಾಡಿರುವ ಬಿಜೆಪಿ ಖರ್ಗೆ 'ಹಿಂದೂ ವಿರೋಧಿ ' ಎಂದಿತ್ತು.
ಈಗ ಬಿಜೆಪಿ ಟೀಕೆಗಳಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
'ಪ್ರಶ್ನೆಗಳನ್ನು ಎತ್ತಿದರೆ, ವಸ್ತು ಸ್ಥಿತಿಯನ್ನು ಹೇಳಿದರೆ ಹಿಂದೂ ವಿರೋಧಿ ಎಂದು ಹೇಳಿ ಉತ್ತರದಾಯಿತ್ವದಿಂದ ಜಾರಿಕೊಳ್ಳುವುದು ಬಿಜೆಪಿಯ ಹಳೆ ಚಾಳಿ!. ಬಿಜೆಪಿ ಏನಾದರೂ 12ನೇ ಶತಮಾನದಲ್ಲಿ ಇದ್ದಿದ್ದರೆ ಮೌಢ್ಯದ ವಿರುದ್ಧ ವಚನ ಚಳವಳಿ ಕಟ್ಟಿದ್ದ ಶರಣರಿಗೂ ಹಿಂದೂ ವಿರೋಧಿ ಪಟ್ಟ ಕಟ್ಟಿಬಿಡುತ್ತಿದ್ದರೋ ಏನೋ! ಆದರೆ ಆಗಿನ ಮನುವಾದಿಗಳು ಶರಣರಿಗೆ ಪೀಡಿಸಿದ್ದರು ಎನ್ನುವುದು ಇತಿಹಾಸ' ಎಂದು ಹೇಳಿದ್ದಾರೆ.
ಈ ಸಂಬಂಧ ಬಿಜೆಪಿಗೆ ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಮಾಡಿರುವ ಪೋಸ್ಟ್ ಇಲ್ಲಿದೆ...
'ಉತ್ತರದ ಕಾಶಿಯಲಿ ಕತ್ತೆ ಮಿಂದೈ ತರಲು ದಕ್ಷಿಣದ ದೇಶಕದು ಕುದುರೆಯಹುದೆ?' ಎಂದು ಹೇಳಿದ ಕುವೆಂಪುರನ್ನು ಹಿಂದೂ ವಿರೋಧಿ ಎನ್ನುವ ದಮ್ಮು ತಾಕತ್ತು ಇದೆಯೇ?
-ನೀರ ಕಂಡಲ್ಲಿ ಮುಳುಗುವರಯ್ಯ / ಮರ ಕಂಡಲ್ಲಿ ಸುತ್ತುವರಯ್ಯ / ಬತ್ತುವ ಜಲವ ಒಣಗುವ ಮರವ ಮೆಚ್ಚಿದವರು / ನಿನ್ನನೆತ್ತಬಲ್ಲರು ಕೂಡಲ ಸಂಗಮದೇವ.
-ವೇದಕ್ಕೆ ಬರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವ ಆಗಮದ ಮೂಗ ಕೊಯ್ಯುವೆ ನೋಡಯ್ಯ ಎಂದ ಬಸವಣ್ಣರನ್ನು ಹಿಂದೂ ವಿರೋಧಿ ಎನ್ನುವಿರಾ?
-ವೇದ ಶಾಸ್ತ್ರ ಪುರಾಣಗಳೆಂಬ ಕೊಟ್ಟಣ ಕುಟ್ಟುತ್ತಾ ನುಚ್ಚು ತೌಡು ಕಾಣಿರೋ ಎಂದ ಅಕ್ಕಮಹಾದೇವಿಯನ್ನು ಹಿಂದೂ ವಿರೋಧಿ ಎನ್ನುವಿರಾ?
-ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗಿ ಹೊಟ್ಟೆಯಡಿಯಾಗಿ ಬೀಳುವ ಲೊಟ್ಟೆ ಮೂಗನ ಕಂಡರೆ ಮೆಟ್ಟಿದ ಎಡಪಾದರಕ್ಷೆಯ ತಕ್ಕೊಂಡು ಲಟಲಟನೆ ಹೊಡೆ' ಎಂದ ಅಂಬಿಗರ ಚೌಡಯ್ಯರನ್ನು ಹಿಂದೂ ವಿರೋಧಿ ಎನ್ನುವಿರಾ?
-ಕಲ್ಲಮನೆಯಡಿ ಕಲ್ಲದೇವರ ಮಾಡಿ, ಆ ಕಲ್ಲು ಕಲ್ಲ ಮೇಲೆ ಕೆಡೆದರೆ ದೇವರೆತ್ತ ಹೋದರೋ? ಎಂದಿದ್ದ ಅಲ್ಲಮರನ್ನು ಹಿಂದೂ ವಿರೋಧಿ ಎನ್ನುವಿರಾ?
'ಸೌ ಚುಹೇ ಖಾಕೆ ಬಿಲ್ಲಿ ಹಜ್ ಕೊ ಚಲೀ' ಎಂಬ ನುಡಿಗಟ್ಟು ಉರ್ದುವಿನಲ್ಲೂ ಇದೆ, ಯಾವ ಧರ್ಮವೂ ಕೂಡ ಕೆಟ್ಟ ಕೆಲಸ ಮಾಡಿ ಪುಣ್ಯ ಕ್ಷೇತ್ರಕ್ಕೆ ಬಂದರೆ ಪಾಪ ಪರಿಹಾರವಾಗುತ್ತದೆ ಎಂದಿಲ್ಲ, ನಿಮ್ಮ ಒಳ್ಳೆಯ ಕೆಲಸಗಳೇ ನಿಮ್ಮ ಪುಣ್ಯಕ್ಕೆ ದಾರಿ ಎನ್ನುತ್ತವೆ.
ಬಿಜೆಪಿಯವರು ಮೊದಲು ಹಿಂದೂ ಧರ್ಮದ ಅಧ್ಯಯನ ಮಾಡಲಿ, ಪಾಪ, ಪುಣ್ಯಗಳು ನದಿಗಳಲ್ಲಿ ಮುಳುಗೇಳುವುದರಿಂದ ನಿರ್ಧಾರವಾಗುವುದಿಲ್ಲ, ನಾವು ಮಾಡಿದ ಕೆಟ್ಟ ಕೆಲಸಗಳಿಗೆ ಕುಂಭ ಸ್ನಾನದಿಂದ ಮಾಫಿಯೂ ದೊರಕುವುದಿಲ್ಲ. ಗಂಗಾ ಸ್ನಾನ ಮಾಡಿದರೆ ಕೆಟ್ಟವನು ಒಳ್ಳೆಯವನಾಗುವುದಿಲ್ಲ, ಕರ್ಮ, ಕಾಯಕಗಳು ಮಾತ್ರ ನಮ್ಮನ್ನು ಉದ್ದರಿಸಬಲ್ಲವು ಎನ್ನುವುದನ್ನು ಹಲವು ಮಹನೀಯರು ಹೇಳಿದ್ದಾರೆ. ಬಿಜೆಪಿಯವರು ಧರ್ಮದ ಹೆಸರು ಹೇಳಿಕೊಂಡು ರಾಜಕಾರಣ ಮಾಡುವುದನ್ನು ಬಿಟ್ಟು, ಸಾಧನೆ ಹೇಳಿಕೊಂಡು ರಾಜಕಾರಣ ಮಾಡಿ ತೋರಿಸಲಿ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.