ADVERTISEMENT

ಸಾವಿಗೂ ಮುನ್ನ ವರದಿಗಾರನಿಗೆ ಕರೆ: ಅನುಮಾನಕ್ಕೆ ಕಾರಣವಾದ ರಮೇಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 20:34 IST
Last Updated 14 ಅಕ್ಟೋಬರ್ 2019, 20:34 IST
ರಮೇಶ್‌
ರಮೇಶ್‌   

ಬೆಂಗಳೂರು: ಕಾಂಗ್ರೆಸ್‌ ಶಾಸಕ ಜಿ.ಪರಮೇಶ್ವರ ಅವರ ಆಪ್ತ ಸಹಾಯಕ ರಮೇಶ್ ನಿಗೂಢ ಸಾವಿನ ತನಿಖೆಯನ್ನು ಪಶ್ಚಿಮ ವಿಭಾಗದ ಪೊಲೀಸರು ಚುರುಕುಗೊಳಿಸಿದ್ದು, ಸಾವಿಗೂ ಮುನ್ನ ವರದಿಗಾರರೊಬ್ಬರಿಗೆ ಕರೆ ಮಾಡಿದ್ದರು ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.

ಎಂಟು ವರ್ಷಗಳಿಂದ ಪರಮೇಶ್ವರ ಅವರ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅವರ ಆಪ್ತರು, ಶಾಸಕರು, ಮಾಧ್ಯಮದವರ ಜೊತೆಗೂ ಒಡನಾಟವಿಟ್ಟುಕೊಂಡಿದ್ದರು. ತಮಗೆ ಕಷ್ಟಗಳು ಎದುರಾದಾಗಲೆಲ್ಲ ಅವರ ಜೊತೆ ಹಂಚಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಸಾವಿಗೂ ಮುನ್ನ ಪರಮೇಶ್ವರ ಚಾಲಕ ಅನಿಲ್, ಇಬ್ಬರು ಸ್ನೇಹಿತರಿಗೆ ಕರೆ ಮಾಡಿದ್ದರು. ಕೊನೆಯದಾಗಿ ಸುದ್ದಿವಾಹಿನಿಯೊಂದರ ವರದಿಗಾರನಿಗೆ ಕರೆ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಸ್ನೇಹಿತನೊಬ್ಬ, ಪರಮೇಶ್ವರ ಅವರ ಅಂಗರಕ್ಷಕನಿಗೆ ಕರೆ ಮಾಡಿ ವಿಷಯ ತಿಳಿಸಿದ್ದ. ಅವರೇ ಠಾಣೆಗೆ ಮಾಹಿತಿ ನೀಡಿದ್ದರು. ಅವರೆಲ್ಲರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಅನುಮಾನದ ಹೇಳಿಕೆ: ಪರಮೇಶ್ವರ ಕಾರು ಚಾಲಕ ಅನಿಲ್ ನೀಡಿರುವ ಹೇಳಿಕೆ ಹಲವು ಅನುಮಾನ ಹುಟ್ಟು ಹಾಕಿದೆ. ಅವರ ಹೇಳಿಕೆ ಪಡೆದು ಪರಿಶೀಲನೆ ನಡೆಸುತ್ತಿರುವ ಪೊಲೀಸರು, ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ‘ಐ.ಟಿ ದಾಳಿ ನಡೆದ ವೇಳೆ ನಾನೂ ಪರಮೇಶ್ವರ ಅವರ ಮನೆಯಲ್ಲೇ ಇದ್ದೆ. ರಮೇಶ್ ಸಹ ಅಲ್ಲಿದ್ದರು. ಆದರೆ, ವಿಚಾರಣೆ ನಡೆಯುತ್ತಿದ್ದರಿಂದ ಮಾತನಾಡಲಿಲ್ಲ.

ಅ. 10ರಂದು ಬೆಳಿಗ್ಗೆ ರಮೇಶ್ ನನಗೆ ಕರೆ ಮಾಡಿದ್ದರು. ಮಿಸ್‌ ಆಗಿ ಬಂತು ಎಂದು ಹೇಳಿ ಕರೆ ಕಡಿತಗೊಳಿಸಿದ್ದರು. ನಾನು ಸಹ ವಾಪಸು ಕರೆ ಮಾಡಲಿಲ್ಲ. ಕೆಲ ಹೊತ್ತಿನ ಬಳಿಕ ಸಾವಿನ ಸುದ್ದಿ ತಿಳಿಯಿತು’ ಎಂಬುದಾಗಿ ಚಾಲಕ ಅನಿಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಐ.ಟಿ ಪಾತ್ರದ ಬಗ್ಗೆಯೂ ಪರಿಶೀಲನೆ
ರಮೇಶ್ ಕಾರಿನಲ್ಲಿ ಮರಣಪತ್ರ ಸಿಕ್ಕಿದೆ. ‘ಮೊನ್ನೆ ನನ್ನ ಮನೆಯಲ್ಲಿ ನಡೆದ ಐ.ಟಿ ದಾಳಿಯಿಂದ ನಾನು ದಿಗ್ಭ್ರಾಂತ ಆಗಿದ್ದೇನೆ. ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂಬುದಾಗಿ ಅದರಲ್ಲಿ ಬರೆಯಲಾಗಿದೆ. ರಮೇಶ್ ಸಾವಿನಲ್ಲಿ ಐ.ಟಿ ಅಧಿಕಾರಿಗಳ ಪಾತ್ರವೇನು ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.