(ಸಾಂದರ್ಭಿಕ ಚಿತ್ರ)
ಬೆಂಗಳೂರು: ಚಾಲಕ ಸೇರಿ ನಾಲ್ವರು ಪ್ರಯಾಣಿಸಬಹುದಾದ ಆಟೊದಲ್ಲಿ ಎಷ್ಟು ಮೂಟೆ ಅಕ್ಕಿ ಸಾಗಿಸಬಹುದು? ಎರಡು ಅಥವಾ ಹೆಚ್ಚೆಂದರೆ ಮೂರು. ಆದರೆ, ಆಹಾರ ಇಲಾಖೆಯ ದಾಖಲೆಗಳ ಪ್ರಕಾರ ಬಜಾಜ್ ಪ್ರಯಾಣಿಕರ ಆಟೊದಲ್ಲಿ ಒಂದೇ ಬಾರಿಗೆ 30 ಟನ್ ಅಕ್ಕಿ ಸಾಗಿಸಲಾಗಿದೆ. ಟಾಟಾ ಇಂಡಿಕಾ ಕಾರಿನಲ್ಲಿ ಒಂದೇ ಟ್ರಿಪ್‌ನಲ್ಲಿ 24.4 ಟನ್ ಅಕ್ಕಿ ಪೂರೈಸಲಾಗಿದೆ.
‘ಅನ್ನಭಾಗ್ಯ’ ಯೋಜನೆಯ ಪಡಿತರದ ಧಾನ್ಯ ವಿತರಣೆಯಲ್ಲಿ, 2017–2022ರ ನಡುವೆ ನಡೆದಿರುವ ಅಕ್ರಮದ ಬಗೆ ಇದು. ಹೀಗೆ ಒಂದೇ ಬಾರಿಗೆ 15–20 ಟನ್ ಅಕ್ಕಿ ಹೊತ್ತ ಆಟೊ–ಕಾರುಗಳ ಪಟ್ಟಿ ದೊಡ್ಡದೇ ಇದೆ. ಈ ಅಕ್ರಮದ ವಿರುದ್ಧ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಾಲೇಖಪಾಲರು ಶಿಫಾರಸು ಮಾಡಿದ್ದಾರೆ.
‘ಪಡಿತರ ವಿತರಣಾ ವ್ಯವಸ್ಥೆಯ ಸಾಗಣೆ, ನಿರ್ವಹಣೆ’ ಕುರಿತ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಈ ಮಾಹಿತಿ ಇದೆ. 2017ರಿಂದ 2022ರವರೆಗೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪಡಿತರ ಸಾಗಣೆಯ ವಹಿವಾಟುಗಳ ಲೆಕ್ಕಪರಿಶೋಧನೆಯನ್ನು ಸಿಎಜಿ ನಡೆಸಿದೆ. ಇದರಲ್ಲಿ ನಾಲ್ಕು ವಿತರಣಾ ಕೇಂದ್ರಗಳಲ್ಲೇ 401.4 ಟನ್‌ಗಳಷ್ಟು ಅಕ್ರಮ ನಡೆದಿದೆ ಎಂದು ವರದಿ ಹೇಳಿದೆ.
‘ನಿಯಮಗಳ ಪ್ರಕಾರ ಸಾಗಣೆ ಒಪ್ಪಂದದಂತೆ, ಆಹಾರ ಇಲಾಖೆಯಲ್ಲಿ ನೋಂದಾಯಿಸಿದ ಟ್ರಕ್‌ಗಳಲ್ಲಿ ಮಾತ್ರವೇ ಪಡಿತರವನ್ನು ಸಾಗಿಸಬೇಕು. ಇಲಾಖೆ ಬಳಿ ಇರುವ ದಾಖಲೆಗಳನ್ನು ಪರಿಶೀಲಿಸಿದಾಗ, ಸಾಗಣೆಗೆ ನೋಂದಾಯಿಸದೇ ಇರುವ ವಾಹನಗಳಲ್ಲಿ ಅಪಾರ ಪ್ರಮಾಣದ ಪಡಿತರ ಸಾಗಿಸಿರುವುದು ಪತ್ತೆಯಾಯಿತು. ಸಾಗಣೆ ಮಾಡಲಾದ 2,510 ಟ್ರಿಪ್‌ಗಳನ್ನು ಪರಿಶೀಲನೆಗೆ ಆಯ್ಕೆಮಾಡಿಕೊಳ್ಳಲಾಗಿತ್ತು. ಅವುಗಳಲ್ಲಿ 1,725 ಟ್ರಿಪ್‌ಗಳು ಅನಧಿಕೃತ ವಾಹನಗಳ ಮೂಲಕ ನಡೆದಿದ್ದವು’ ಎಂದು ಸಿಎಜಿ ಹೇಳಿದೆ.
‘ಪ್ರತಿ ಟ್ರಿಪ್‌ಗೆ ಬಳಸಿಕೊಳ್ಳಲಾದ ಟ್ರಕ್‌ನ ನೋಂದಣಿ ಸಂಖ್ಯೆಯನ್ನು ‘ಟ್ರಕ್ ಚಿಟ್ಸ್’ನಲ್ಲಿ ನಮೂದಿಸಲಾಗಿದೆ. ಆ ನೋಂದಣಿ ಸಂಖ್ಯೆಗಳನ್ನು ‘ವಾಹನ್’ ಪೋರ್ಟಲ್‌ನಲ್ಲಿ ಪರಿಶೀಲಿಸಿದಾಗ ಅವು ಟ್ರಕ್‌ಗಳ ಸಂಖ್ಯೆಗಳಾಗಿರದೆ, ಆಟೊ ಮತ್ತು ಕಾರುಗಳಿಗೆ ಸಂಬಂಧಿಸಿದ್ದಾಗಿದ್ದವು. ಬೆಂಗಳೂರಿನಲ್ಲಿನ ಮೂರು ಮತ್ತು ಹುಮನಾಬಾದ್‌ನ ಒಂದು ಗೋದಾಮುಗಳಿಂದ 17 ಟ್ರಿಪ್‌ಗಳಲ್ಲಿ ಒಟ್ಟು 401.4 ಟನ್ ಪಡಿತರ ಸಾಗಿಸಲಾಗಿದೆ ಎಂದು ದಾಖಲೆಗಳು ಹೇಳುತ್ತವೆ. ಆದರೆ ವಾಸ್ತವದಲ್ಲಿ ಇದು ಸಾಧ್ಯವೇ ಇಲ್ಲ’ ಎಂದು ಸಿಎಜಿ ಹೇಳಿದೆ.
‘ಪಡಿತರದ ಧಾನ್ಯಗಳ ಅಕ್ರಮ ಸಾಗಣೆ ಮತ್ತು ಅನ್ಯ ಬಳಕೆ ನಡೆದಿರುವುದನ್ನು ಈ ಅನಧಿಕೃತ ಮತ್ತು ಶಂಕಾಸ್ಪದ ಟ್ರಿಪ್‌ಗಳು ಸೂಚಿಸುತ್ತವೆ. ಆಟೊ, ಕಾರುಗಳಿಗೂ ಟ್ರಕ್‌ಗಳ ಹೆಸರಿನಲ್ಲಿ ಶುಲ್ಕ ಪಾವತಿ ಮಾಡಲಾಗಿದೆ. ಗೋದಾಮು ನಿರ್ವಹಣಾ ಅಧಿಕಾರಿಗಳ ಮಟ್ಟದಲ್ಲಿ ಭಾರಿ ಲೋಪ ನಡೆದಿದೆ. ರಾಜ್ಯದ ಎಲ್ಲ ಗೋದಾಮುಗಳಲ್ಲಿನ ಸಾಗಣೆ ವಹಿವಾಟನ್ನು ಪರಿಶೀಲಿಸಿದರೆ ಅಕ್ರಮದ ಗಾತ್ರ ಪತ್ತೆಯಾಗಬಹುದು. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಶಿಫಾರಸು ಮಾಡಿದೆ.
ಈ ಬಗ್ಗೆ ವಿವರಣೆ ಕೇಳಿದರೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಉತ್ತರ ಬಂದಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಲಾಖೆ ಮೌನವಹಿಸಿದೆ.-ಸಿಎಜಿ ವರದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.