
ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಪೂರ್ಣ ಪ್ರಮಾಣದಲ್ಲಿ ಓದದೇ, ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸದನದಿಂದ ತೆರಳುವ ವೇಳೆ ನಡೆದ ಕೋಲಾಹಲ ಶುಕ್ರವಾರ ಎರಡೂ ಸದನಗಳಲ್ಲಿ ಕಲಹಕ್ಕೆ ಎಡೆ ಮಾಡಿಕೊಟ್ಟಿತು.
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಅವರಿಗೆ ಧಮ್ಕಿ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಎದುರಿಸುತ್ತಿರುವ ರಾಜೀವ್ ಗೌಡ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ.
ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಎಲ್ಲ ನಾಲ್ಕು ಕಾರಿಡಾರ್‌ಗಳನ್ನು 2030ಕ್ಕೆ ಪೂರ್ಣಗೊಳಿಸುವ ಹೊಸ ಗುರಿಯನ್ನು ಕೆ–ರೈಡ್ ಇಟ್ಟುಕೊಂಡಿದೆ. ಎರಡನೇ ಕಾರಿಡಾರ್‌ನಲ್ಲಿ ಚಿಕ್ಕಬಾಣಾವರದಿಂದ ಯಶವಂತಪುರವರೆಗೆ 2027ರ ಡಿಸೆಂಬರ್ ಒಳಗೆ ಮೊದಲ ರೈಲು ಸಂಚರಿಸುವ ಸಾಧ್ಯತೆ ಇದೆ.
ಪಕ್ಷದ ಬೆಳ್ಳಿ ಹಬ್ಬ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಪ್ರಯತ್ನದ ಭಾಗವಾಗಿ ಜೆಡಿಎಸ್ ಪಕ್ಷದಿಂದ, ಶನಿವಾರ (ಜ.24) ಇಲ್ಲಿನ ಹೊರವಲಯದ ಹುಡಾ ಬಡಾವಣೆಯಲ್ಲಿ ಸಮಾವೇಶ ಆಯೋಜಿಸಲಾಗಿದೆ.
ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ನೇಮಿಸಿರುವ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡವು (ಎಸ್‌ಐಟಿ) ಪೂರ್ಣಗೊಳಿಸಿದೆ.
16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆನ್‌ಲೈನ್ ವೇದಿಕೆಗಳನ್ನು ನಿರ್ಬಂಧಿಸಲು ಆಂಧ್ರಪ್ರದೇಶ ಸರ್ಕಾರ ಚಿಂತಿಸಿದೆ. ಆನ್‌ಲೈನ್ ವೇದಿಕೆಗಳಿಗೆ ಅನ್ವಯವಾಗುವ ಅಸ್ತಿತ್ವದಲ್ಲಿರುವ ಕಾನೂನುಗಳು, ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಪರಿಶೀಲಿಸಲಿಕ್ಕಾಗಿಯೇ ಪ್ರಮುಖ ಸಚಿವರ ಸಮಿತಿಯೊಂದನ್ನು 2025ರ ಅಕ್ಟೋಬರ್‌ನಲ್ಲೇ ರಚಿಸಲಾಗಿದೆ ಎಂದು ಗೃಹ ಸಚಿವೆ ವಂಗಲಪುಡಿ ಅನಿತಾ ಶುಕ್ರವಾರ ತಿಳಿಸಿದ್ದಾರೆ.
‘ತಮಿಳುನಾಡಿನಲ್ಲಿನ ಡಿಎಂಕೆ ನೇತೃತ್ವದ ಸರ್ಕಾರವು ಭ್ರಷ್ಟಾಚಾರ, ಮಾಫಿಯಾ ಹಾಗೂ ಅಪರಾಧ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಹಾಗಾಗಿ, ಈ ಸರ್ಕಾರ ಪತನಗೊಳ್ಳುವುದಕ್ಕೆ ದಿನಗಣನೆ ಆರಂಭವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.
ಇರಾನ್‌ನಲ್ಲಿ ಈಚೆಗೆ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕನಿಷ್ಠ 5,002 ಮಂದಿ ಮೃತಪಟ್ಟಿದ್ದಾರೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಸಂಘಟನೆ ಶುಕ್ರವಾರ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ(ಡಬ್ಲುಎಚ್‌ಒ) ಹೊರಬರುವ ಪ್ರಕ್ರಿಯೆಯನ್ನು ಅಮೆರಿಕ ಪೂರ್ಣಗೊಳಿಸಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಎಡಗೈ ಬ್ಯಾಟರ್ ಇಶಾನ್ ಕಿಶನ್ (76; 32ಎ, 4x11, 6x4) ಮೂರನೇ ಕ್ರಮಾಂಕದಲ್ಲಿ ಸ್ಫೋಟಕ ಆಟ ಪ್ರದರ್ಶಿಸಿದರು. ನಾಯಕ ಸೂರ್ಯಕುಮಾರ್ ಯಾದವ್ (ಔಟಾಗದೇ 82;37ಎ, 4x9, 6x4) ದೀರ್ಘಕಾಲದ ನಂತರ ಸ್ಮರಣೀಯ ಇನಿಂಗ್ಸ್ ಆಡಿದರು. ಅವರಿಬ್ಬರ ಆಟದ ಬಲದಿಂದ ಭಾರತ ಶುಕ್ರವಾರ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಏಳು ವಿಕೆಟ್‌ಗಳ ಸುಲಭ ಜಯ ಗಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.