ADVERTISEMENT

ದರ ನಿಯಂತ್ರಣದ ಅವಶ್ಯ | ಸಿನಿಮಾಗೆ ಏಕ ದರದ ಟಿಕೆಟ್: ಗೃಹ ಸಚಿವ ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 15:29 IST
Last Updated 6 ಮಾರ್ಚ್ 2025, 15:29 IST
ಜಿ.ಪರಮೇಶ್ವರ
ಜಿ.ಪರಮೇಶ್ವರ   

ಬೆಂಗಳೂರು: ‘ಮಲ್ಟಿಫ್ಲೆಕ್ಸ್‌ಗಳು ಸಿನಿಮಾ ಟಿಕೆಟ್‌ಗೆ ದುಬಾರಿ ದರ ನಿಗದಿ ಮಾಡಿ ದರೋಡೆ ಮಾಡುತ್ತಿವೆ. ಅದನ್ನು ನಿಯಂತ್ರಿಸಲು ರಾಜ್ಯದಾದ್ಯಂತ ಏಕರೂಪದ ಟಿಕೆಟ್‌ ದರ ನಿಗದಿ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ವಿಧಾನ ಪರಿಷತ್ತಿನಲ್ಲಿ ಗುರುವಾರ ಜೆಡಿಎಸ್‌ನ ಗೋವಿಂದರಾಜು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದಲ್ಲಿ ಟಿಕೆಟ್‌ ದರಗಳನ್ನು ನಿಗದಿ ಮಾಡುವ ಅಧಿಕಾರವನ್ನು ಚಿತ್ರಮಂದಿರಗಳ ಮಾಲೀಕರಿಗೇ ನೀಡಲಾಗಿದೆ. ದರವನ್ನು ನಿಗದಿ ಮಾಡುವ ಅಧಿಕಾರ ಸರ್ಕಾರಕ್ಕೂ ಇದ್ದು, ಅಗತ್ಯವೆನಿಸಿದರೆ ಅದನ್ನು ಬಳಸಬಹುದು’ ಎಂದರು.

‘2018ರ ಬಜೆಟ್‌ನಲ್ಲಿ ಏಕರೂಪ ದರ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು. ಅದರಂತೆ 2018ರ ಮೇನಲ್ಲಿ ಅಧಿಸೂಚನೆಯೂ ಹೊರಬಂದಿತ್ತು. ರಾಜ್ಯದಾದ್ಯಂತ ₹200 ದರ ನಿಗದಿ ಮಾಡಲಾಗಿತ್ತು. ಆದರೆ ಚಿತ್ರಮಂದಿರಗಳ ಮಾಲೀಕರು ನ್ಯಾಯಾಲಯಕ್ಕೆ ಹೋಗಿ, ತಡೆ ತಂದರು. ನಂತರ ಬಂದ ಸರ್ಕಾರ, ಆದೇಶವನ್ನು ವಾಪಸ್‌ ಪಡೆಯಿತು. ಈಗ ಮತ್ತೆ ಅಂತಹ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ’ ಎಂದರು.

ADVERTISEMENT

‘100–150 ಆಸನಗಳು ಇರುವ ಮಲ್ಟಿಫ್ಲೆಕ್ಸ್‌ಗಳು ಟಿಕೆಟ್‌ ಮಾತ್ರವಲ್ಲದೆ, ನೀರು ಮತ್ತು ತಿನಿಸುಗಳಿಗೂ ವಿಪರೀತ ದರ ನಿಗದಿ ಮಾಡುತ್ತಿವೆ. ಇದನ್ನೂ ನಿಯಂತ್ರಿಸುವ ಅವಶ್ಯ ಇದೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು’ ಎಂದರು.

650 ರಾಜ್ಯದಾದ್ಯಂತ ಇರುವ ಚಿತ್ರಮಂದಿರಗಳು

100 ಈಗಾಗಲೇ ಸ್ಥಗಿತವಾಗಿರುವ ಚಿತ್ರಮಂದಿರ

150 ಮುಚ್ಚುವ ಸ್ಥಿತಿಯಲ್ಲಿರುವ ಚಿತ್ರಮಂದಿರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.