ADVERTISEMENT

ಸಹಪಾಠಿಯನ್ನು ಕೊಂದ ವಿದ್ಯಾರ್ಥಿಗಳಿಗೆ ಮರಣದಂಡನೆ: ಆದೇಶ ಎತ್ತಿಹಿಡಿದ ಬಾಂಗ್ಲಾ HC

ಪಿಟಿಐ
Published 16 ಮಾರ್ಚ್ 2025, 12:58 IST
Last Updated 16 ಮಾರ್ಚ್ 2025, 12:58 IST
<div class="paragraphs"><p>ಬಾಂಗ್ಲಾದೇಶ ಧ್ವಜ</p></div>

ಬಾಂಗ್ಲಾದೇಶ ಧ್ವಜ

   

– ಪಿಟಿಐ ಚಿತ್ರ

ಢಾಕಾ: ರಾಜಕೀಯ ನಂಟು ಹೊಂದಿದ್ದ ಆರೋಪದಲ್ಲಿ 2019ರಲ್ಲಿ ಸಹಪಾಟಿಯನ್ನು ಕೊಂದಿದ್ದ 20 ವಿದ್ಯಾರ್ಥಿಗಳಿಗೆ ಮರಣದಂಡನೆ ವಿಧಿಸಿರುವ ಕೆಳ ನ್ಯಾಯಾಲಯದ ತೀರ್ಪನ್ನು ಬಾಂಗ್ಲಾದೇಶ ಹೈಕೋರ್ಟ್‌ ಭಾನುವಾರ ಎತ್ತಿಹಿಡಿದಿದೆ.

ADVERTISEMENT

ನ್ಯಾಯಮೂರ್ತಿಗಳಾದ ಎಕೆಎಂ ಅಸಾದುಜ್ಜಮಾನ್‌ ಮತ್ತು ಸಯ್ಯದ್‌ ಇನಾಯೆತ್‌ ಹೊಸೈನ್‌ ಅವರಿದ್ದ ದ್ವಿಸದಸ್ಯ ಪೀಠವು, ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಹಾಗೂ ಮರಣದಂಡನೆ ಉಲ್ಲೇಖ ಕುರಿತ ವಿಚಾರಣೆಯನ್ನು ಒಟ್ಟಿಗೆ ನಡೆಸಿ ತೀರ್ಪು ಪ್ರಕಟಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಕ್ಷೆಗೆ ಗುರಿಯಾಗಿರುವ ಎಲ್ಲರೂ, ಬಾಂಗ್ಲಾದೇಶ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (ಬಿಯುಇಟಿ) ವಿದ್ಯಾರ್ಥಿಗಳಾಗಿದ್ದು, ಸದ್ಯ ನಿಷೇಧಗೊಂಡಿರುವ ಬಾಂಗ್ಲಾದೇಶ ಛತ್ರ ಲೀಗ್‌ಗೆ (ಬಿಸಿಎಲ್‌) ಸೇರಿದವರಾಗಿದ್ದಾರೆ. ಇದು, ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರ 'ಅವಾಮಿ ಲೀಗ್‌' ಪಕ್ಷದ ವಿದ್ಯಾರ್ಥಿ ಘಟಕವಾಗಿದೆ.

'ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌' ವಿಷಯದ 2ನೇ ವರ್ಷದ ವಿದ್ಯಾರ್ಥಿಯಾಗಿದ್ದ ಅಬ್ರಾರ್‌ ಫಹಾದ್‌ ಅವರ ಶವ ವಿವಿಯ ವಿದ್ಯಾರ್ಥಿನಿಲಯದಲ್ಲಿ 2019ರ ಅಕ್ಟೋಬರ್‌ 8ರಂದು ಬೆಳಿಗ್ಗೆ ಪತ್ತೆಯಾಗಿತ್ತು. ಆತನ ಮೇಲೆ, ಕ್ರಿಕೆಟ್‌ ಬ್ಯಾಟ್‌ ಹಾಗೂ ಇತರ ವಸ್ತುಗಳಿಂದ ಸುಮಾರು 6 ಗಂಟೆ ಕಾಲ, 25 ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದರು ಎಂಬುದು ತನಿಖೆಯ ನಂತರ ಗೊತ್ತಾಗಿತ್ತು.

ಹಸೀನಾ ಸರ್ಕಾರದ ವಿರುದ್ಧ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡ ಕಾರಣಕ್ಕೆ ಫಹಾದ್‌ ಮೇಲೆ ಹಿಂದಿನ ದಿನ ದಾಳಿ ಮಾಡಲಾಗಿತ್ತು.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಈ ವಿದ್ಯಾರ್ಥಿಗಳನ್ನು ಬಿಯುಇಟಿ ಮತ್ತು ಬಿಸಿಎಲ್‌, ಕೂಡಲೇ ಹೊರಹಾಕಿದ್ದವು.

ಢಾಕಾ ನ್ಯಾಯಾಲಯ, ಅವಾಮಿ ಲೀಗ್‌ ಅಧಿಕಾರದಲ್ಲಿದ್ದಾಗಲೇ (2021ರ ಡಿಸೆಂಬರ್‌ 8ರಂದು) 20 ವಿದ್ಯಾರ್ಥಿಗಳಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿತ್ತು. ಹೈಕೋರ್ಟ್‌, ಈ ಆದೇಶವನ್ನು ಎತ್ತಿಹಿಡಿದಿರುವುದಷ್ಟೇ ಅಲ್ಲದೆ, 'ಬಿಯುಇಟಿ ವಿದ್ಯಾರ್ಥಿಗಳಾಗಿದ್ದ ಇತರ ಐವರಿಗೂ ಮರಣದಂಡನೆ ವಿಧಿಸಿದೆ' ಎಂದು ಅಟಾರ್ನಿ ಜನರಲ್‌ ಎಂ. ಅಸಾದುಜ್ಜಮಾನ್‌ ಹೇಳಿದ್ದಾರೆ.

ಹೈಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಫಹಾದ್‌ ತಂದೆ, 'ತೀರ್ಪು ಸಮಾಧಾನ ತಂದಿದೆ. ಇದು ಶೀಘ್ರದಲ್ಲೇ ಜಾರಿಯಾಗಬೇಕು' ಎಂದಿದ್ದಾರೆ. ಫಹಾದ್ ಸಹೋದರ ಫೈಯಾಜ್‌, 'ಇಷ್ಟು ಶೀಘ್ರದಲ್ಲೇ ತೀರ್ಪು ಪ್ರಕಟವಾಗಲಿದೆ ಎಂದು ನಿರೀಕ್ಷಿಸಿರಲಿಲ್ಲ' ಎಂದು ಹೇಳಿದ್ದಾರೆ.

ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪ್ರತಿವಾದಿ ವಕೀಲ ಅಝಿಝುರ್‌ ರಹಮಾನ್‌ ದುಲು, ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಶಿಕ್ಷೆಗೆ ಗುರಿಯಾಗಿರುವವರ ಪೈಕಿ, ಮುನ್ತಾಸಿರ್‌ ಅಲ್‌ ಜಮೀ ಎಂಬಾತ ಕಾಶಿಮುರ್‌ ಕೇಂದ್ರ ಕಾರಾಗೃಹದಿಂದ ಕಳೆದ ವರ್ಷ (2024ರಲ್ಲಿ) ಪರಾರಿಯಾಗಿದ್ದಾನೆ.

ದೇಶದಾದ್ಯಂತ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಶೇಖ್‌ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ 2024ರ ಆಗಸ್ಟ್‌ 5ರಂದು ದೇಶದಿಂದ ಪಲಾಯನ ಮಾಡಿದ್ದರು. ಮರುದಿನ (ಆಗಸ್ಟ್‌ 6ರಂದು) ಮುನ್ತಾಸಿರ್‌ ಸೇರಿದಂತೆ 86 ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.