ADVERTISEMENT

ಅಮೆರಿಕ ನಿರ್ಗಮನದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಗೆ ಬೆಂಬಲ ಘೋಷಿಸಿದ ಚೀನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜನವರಿ 2025, 11:02 IST
Last Updated 21 ಜನವರಿ 2025, 11:02 IST
<div class="paragraphs"><p>ಡೊನಾಲ್ಡ್‌ ಟ್ರಂಪ್ </p></div>

ಡೊನಾಲ್ಡ್‌ ಟ್ರಂಪ್

   

ಬೀಜಿಂಗ್‌ : ‘ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಾಮುಖ್ಯತೆಯನ್ನು ಹೆಚ್ಚಿಸಬೇಕೇ ಹೊರತು ದುರ್ಬಲಗೊಳಿಸಬಾರದು’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗೌ ಜಿಯಾಕುನ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚೀನಾ ತನ್ನ ಜವಾಬ್ದಾರಿಗಳನ್ನು ಪೂರೈಸುವುದರ ಜತೆಗೆ ಡಬ್ಲ್ಯುಎಚ್‌ಒಗೆ ಅಗತ್ಯ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹೊರಬರುತ್ತಿದೆ ಎಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಘೋಷಣೆ ಮಾಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಚೀನಾ, ಡಬ್ಲ್ಯುಎಚ್‌ಒ ಕುರಿತಾದ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಟ್ರಂಪ್‌ ಹೇಳಿದ್ದು ಹೀಗೆ...

ಕೋವಿಡ್‌–19 ಸಾಂಕ್ರಾಮಿಕ ಸೇರಿ ಇತರ ಅಂತರರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟುಗಳ ನಿರ್ವಹಣೆಯಲ್ಲಿ ಡಬ್ಲ್ಯುಎಚ್‌ಒ ವಿಫಲವಾಗಿದೆ. ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ನಿರ್ಗಮಿಸುತ್ತದೆ. ಡಬ್ಲ್ಯುಎಚ್‌ಒ ನಮ್ಮನ್ನು ಅಳಿಸಿ ಹಾಕಲು ನೋಡಿತ್ತು. ಎಲ್ಲರೂ ನಮ್ಮನ್ನು ತುಳಿಯಲು ನೋಡಿದ್ದರು. ಆದರೆ, ಅದು ಇನ್ನು ಮುಂದೆ ನಡೆಯುವುದಿಲ್ಲ ಎಂದು ಟ್ರಂಪ್ ಹೇಳಿದ್ದರು.

‘ಮುಂದಿನ 12 ತಿಂಗಳಲ್ಲಿ ಅಮೆರಿಕ ಡಬ್ಲ್ಯುಎಚ್‌ಒನಿಂದ ಹೊರಬರಲಿದೆ. ಜತೆಗೆ ಡಬ್ಲ್ಯುಎಚ್‌ಒಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ನಿಲ್ಲಿಸಲಿದೆ. ಸಂಸ್ಥೆಯಿಂದ ಹೊರಬರುವ ಪ್ರಕ್ರಿಯೆ ಜಾರಿಯಲ್ಲಿರುವಾಗ ಸಾಂಕ್ರಾಮಿಕ ರೋಗಗಳ ನಿರ್ವಹಣೆ ಒಪ್ಪಂದ ಮಾತುಕತೆಗಳು ನಿಲ್ಲಲಿವೆ. ಅಲ್ಲದೆ ಸಂಸ್ಥೆಯೊಂದಿಗೆ ಕೆಲಸ ಮಾಡುವ ಅಮೆರಿಕದ ಸರ್ಕಾರಿ ಸಿಬ್ಬಂದಿಯನ್ನು ವಾಪಸ್‌ ಕರೆಸಿಕೊಳ್ಳಲಾಗುವುದು. ಸಂಸ್ಥೆಯೊಂದಿಗೆ ಅಗತ್ಯ ಮಾತುಕತೆಗಳನ್ನು ನಡೆಸಲು ಪಾಲುದಾರರನ್ನು ಮರು ನೇಮಕ ಮಾಡಲಾಗುವುದು’ ಎಂದು ಟ್ರಂಪ್ ತಿಳಿಸಿದ್ದರು.

ಅಮೆರಿಕವು ಡಬ್ಲ್ಯುಎಚ್‌ಒ ಅತಿದೊಡ್ಡ ಆರ್ಥಿಕ ಬೆಂಬಲವಾಗಿತ್ತು. ಡಬ್ಲ್ಯುಎಚ್‌ಒನ ಒಟ್ಟು ನಿಧಿಯ ಶೇ 18ರಷ್ಟು ಕೊಡುಗೆಯನ್ನು ಅಮೆರಿಕ ನೀಡುತ್ತಿತ್ತು. ಅಮೆರಿಕದ ಈ ಕ್ರಮವು ಕ್ಷಯ, ಎಚ್ಐವಿ ಅಥವಾ ಏಡ್ಸ್‌ ಸೇರಿ ಇತರ ಆರೋಗ್ಯ ತುರ್ತುಸ್ಥಿತಿಗಳನ್ನು ನಿರ್ವಹಿಸುವಲ್ಲಿ ಡಬ್ಲ್ಯುಎಚ್‌ಒ ತೊಂದರೆ ಅನುಭವಿಸಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.