ADVERTISEMENT

ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಪರಿಸ್ಥಿತಿ ಬೇರೆ ಆಗುತ್ತದೆ: ಟ್ರಂಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಫೆಬ್ರುವರಿ 2025, 2:59 IST
Last Updated 15 ಫೆಬ್ರುವರಿ 2025, 2:59 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ವಾಷಿಂಗ್ಟನ್: ‘ಹಮಾಸ್ ಗಾಜಾಪಟ್ಟಿಯಲ್ಲಿರುವ ಇಸ್ರೇಲ್‌ನ ಒತ್ತೆಯಾಳುಗಳನ್ನು ಇಂದು (ಶನಿವಾರ) ಮಧ್ಯಾಹ್ನದೊಳಗೆ ಬಿಡುಗಡೆ ಮಾಡದಿದ್ದರೆ ಮುಂದೆ ಏನಾಗಲಿದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಚ್ಚರಿಸಿದ್ದಾರೆ.

ಈ ವಾರದ ಆರಂಭದಲ್ಲಿ ಒತ್ತೆಯಾಳುಗಳ ಬಿಡುಗಡೆಗೆ ವಿಧಿಸಿದ್ದ ಗಡುವನ್ನು ಹಮಾಸ್‌ ಉಲ್ಲೇಖಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, ‘ಹಮಾಸ್ ಬಂಡುಕೋರರು ಇಸ್ರೇಲ್ ಒತ್ತೆಯಾಳುಗಳನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಹಾಗೆಯೇ ಹಮಾಸ್ ಗಾಜಾದಲ್ಲಿರುವ ಒತ್ತೆಯಾಳುಗಳನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ‘ಎಲ್ಲಾ ರೀತಿಯ ನರಕ’ವನ್ನು ಎದುರಿಸಬೇಕಾಗುತ್ತದೆ’ ಎಂದು ಪುನರುಚ್ಚರಿಸಿದ್ದಾರೆ.

‘ಇಂದು ಮಧ್ಯಾಹ್ನ 12 ಗಂಟೆಗೆ ಏನಾಗಲಿದೆ ಎಂದು ನನಗೆ ತಿಳಿದಿಲ್ಲ. ಅದು ನನಗೆ ಬಿಟ್ಟದ್ದು. ನಾನು ತುಂಬಾ ಕಠಿಣ ನಿಲುವು ತೆಗೆದುಕೊಳ್ಳುತ್ತೇನೆ. ಹಮಾಸ್ ವಿರುದ್ಧ ಇಸ್ರೇಲ್ ಏನು ಮಾಡಲಿದೆ ಎಂದು ನಾನು ನಿಮಗೆ ಹೇಳಲಾರೆ’ ಎಂದು ಟ್ರಂಪ್‌ ಗುಡುಗಿದ್ದಾರೆ.

ADVERTISEMENT

‘ಕಳೆದ ವಾರ ಒತ್ತೆಯಾಳಗಿರಿಸಿಕೊಂಡಿದ್ದ ಯುವತಿಯನ್ನು ಹಮಾಸ್ ಬಿಡುಗಡೆ ಮಾಡಿತ್ತು. ಆಕೆಯ ಕೈ ತುಂಡಾಗಿತ್ತು. ಹಾಗೆಯೇ ಇತರೆ ಒತ್ತೆಯಾಳುಗಳ ಚಿತ್ರಗಳನ್ನು ನೋಡಿದ್ದೇನೆ. ಹಮಾಸ್ ಬಂಡುಕೋರರು ಒತ್ತೆಯಾಳುಗಳನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇಸ್ರೇಲ್‌ ಆಧರಿಸಿ ಈಗ ನಾನು ವಿಭಿನ್ನ ನಿಲುವು ತೆಗೆದುಕೊಳ್ಳುವುದು ಅನಿವಾರ್ಯ’ ಎಂದಿದ್ದಾರೆ.

ಯುದ್ಧ ಪುನರಾರಂಭದ ಎಚ್ಚರಿಕೆ ನೀಡಿದ ಇಸ್ರೇಲ್

ಹಮಾಸ್ ಬಂಡುಕೋರರು ಮತ್ತಷ್ಟು ಒತ್ತೆಯಾಳುಗಳನ್ನು ಶನಿವಾರ ಬಿಡುಗಡೆ ಮಾಡದಿದ್ದರೆ ಕದನವಿರಾಮ ಒಪ್ಪಂದದಿಂದ ಹಿಂದೆ ಸರಿದು, ಹಮಾಸ್ ವಿರುದ್ಧ ಮತ್ತೆ ಯುದ್ಧ ಆರಂಭಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.

ಹಮಾಸ್‌ ವಿರುದ್ಧ ಮತ್ತೆ ಯುದ್ಧ ನಡೆಸುವುದಕ್ಕೆ ಸಜ್ಜಾಗಿರುವಂತೆ ಸೇನಾ ಪಡೆಗಳಿಗೆ ಅವರು ನಿರ್ದೇಶನ ನೀಡಿದ್ದಾರೆ.

ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಸರಿಯಾಗಿ ಪಾಲಿಸುತ್ತಿಲ್ಲ ಎಂದು ಆರೋಪಿಸಿರುವ ಹಮಾಸ್‌, ಇಸ್ರೇಲ್‌ನ ಮೂವರು ಒತ್ತೆಯಾಳುಗಳ ಬಿಡುಗಡೆಯನ್ನು ವಿಳಂಬಗೊಳಿಸುವ ಬಗ್ಗೆ ಯೋಚಿಸುತ್ತಿರುವುದಾಗಿ ಮಂಗಳವಾರ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.