ಗಾಜಾದಲ್ಲಿ ಆಹಾರಕ್ಕಾಗಿ ನಿಂತಿರುವ ಜನ
ರಾಯಿಟರ್ಸ್ ಚಿತ್ರ
ಗಾಜಾ: ಪ್ಯಾಲೆಸ್ಟೀನ್– ಇಸ್ರೇಲ್ ನಡುವಿನ ಯುದ್ಧ ಆರಂಭವಾಗಿ 21 ತಿಂಗಳು ಕಳೆದಿವೆ. ಈ ಅವಧಿಯಲ್ಲಿ ಮೃತಪಟ್ಟವರ ಸಂಖ್ಯೆ 59 ಸಾವಿರ ದಾಟಿದೆ.
ಇನ್ನೊಂದೆಡೆ ಹಸಿವು, ಅಪೌಷ್ಟಿಕತೆಯಿಂದ ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ ನಾಲ್ವರು ಮಕ್ಕಳು ಹಸಿವಿನಿಂದ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಹೇಳಿರುವುದಾಗಿ ರಾಯಿಟರ್ಸ್ ವರದಿ ತಿಳಿಸಿದೆ.
ಈ ಯುದ್ಧದ ಅವಧಿಯಲ್ಲಿ ಹಸಿವಿನಿಂದ 101 ಜನ ಮೃತಪಟ್ಟಿದ್ದು ಅವರಲ್ಲಿ 80 ಜನ ಮಕ್ಕಳೇ ಆಗಿದ್ದಾರೆ. ಇತ್ತೀಚೆಗೆ ಸಾವಿನ ಸಂಖ್ಯೆ ಹೆಚ್ಚಳವಾಗಿದ್ದು, ಒಂದೇ ದಿನದಲ್ಲಿ 15 ಜನ ಹಸಿವಿನಿಂದ ಉಸಿರು ಚೆಲ್ಲಿದ್ದಾರೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ.
ಗಾಜಾ ಪ್ರದೇಶಕ್ಕೆ ಬರುವ ಎಲ್ಲಾ ನೆರವುಗಳನ್ನು ಇಸ್ರೇಲ್ ಹಿಡಿದುಟ್ಟುಕೊಳ್ಳುತ್ತಿದ್ದು, ಅಗತ್ಯ ವಸ್ತುಗಳಿಗೂ ಪರದಾಡುವಂತಹ ಸ್ಥಿತಿ ಅಲ್ಲಿಯ ಜನರದ್ದಾಗಿದೆ.
ಜನ ಮಾತ್ರವಲ್ಲದೆ ವೈದ್ಯರು, ಮಾನವೀಯ ನೆರವು ಕಾರ್ಯಕರ್ತರೂ ಕೂಡ ಕೆಲಸದ ವೇಳೆಯಲ್ಲಿಯೇ ಪ್ರಜ್ಞೆತಪ್ಪಿ ಬೀಳುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ಯಾಲೆಸ್ಟೀನಿಯನ್ ನಿರಾಶ್ರಿತರ ಸಂಸ್ಥೆ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೇಲಿ ಮಿಲಿಟರಿ, ‘ಇಸ್ರೇಲ್ ಸೇನೆ ನೆರವನ್ನು ಹಿಡಿದಿಟ್ಟುಕೊಳ್ಳುತ್ತಿದೆ ಎನ್ನುವುದು ಸುಳ್ಳು, ಪ್ಯಾಲೆಸ್ಟೀನಿಯನ್ ಉಗ್ರಗಾಮಿ ಗುಂಪು ಹಮಾಸ್ ಆಹಾರವನ್ನು ಕದ್ದಿದೆ ಎಂದು ಆರೋಪಿಸಿದೆ’ ಆದರೆ ಹಮಾಸ್ ಆ ಆರೋಪವನ್ನು ನಿರಾಕರಿಸಿದೆ.
ಆಹಾರ ಮತ್ತು ಔಷಧಗಳ ಕೊರತೆ
ಗುಂಡಿನ ದಾಳಿಗೆ ಸಿಲುಕಿ ಗಾಯಗೊಂಡವರಿಂದ ಈಗಾಗಲೇ ಗಾಜಾದ ಆಸ್ಪತ್ರೆಗಳು ತುಂಬಿತುಳುಕುತ್ತಿವೆ, ಅವರು ಅಪೌಷ್ಟಿಕತೆಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಖಲೀಲ್ ಅಲ್ ದೆಖರನ್ ಹೇಳಿದ್ದಾರೆ.
ಗಾಜಾದಲ್ಲಿ ಸುಮಾರು 60 ಸಾವಿರ ಗರ್ಭಿಣಿಯರು ಸೇರಿ 6 ಲಕ್ಷ ಜನ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹಸಿವಿನಿಂದ ಬಳಲುತ್ತಿರುವವರಲ್ಲಿ ನಿರ್ಜಲೀಕರಣ ಮತ್ತು ರಕ್ತಹೀನತೆ ಲಕ್ಷಣಗಳು ಕಂಡುಬರುತ್ತವೆ ಎಂದು ದೆಖರನ್ ಹೇಳಿದ್ದಾರೆ.
ಹಮಾಸ್ ಗುಂಪನ್ನು ನಾಶಗೊಳಿಸಲು ಗಾಜಾ ಮೇಲೆ ದಾಳಿ ನಡೆಸುತ್ತಿರುವುದಾಗಿ ಇಸ್ರೇಲ್ ಹೇಳಿದೆ. 2023 ಅಕ್ಟೋಬರ್ 7 ರಂದು ಹಮಾಸ್. ಇಸ್ರೇಲ್ ಮೇಲೆ ಭೀಕರ ದಾಳಿ ನಡೆಸಿತ್ತು. ಇದರಲ್ಲಿ ನಾಗರಿಕರು ಸೇರಿದಂತೆ ಕನಿಷ್ಠ 1,200 ಇಸ್ರೇಲಿಗಳು ಮೃತಪಟ್ಟಿತ್ತು. ಅಲ್ಲಿಂದ ಗಾಜಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸುಮಾರು 60 ಸಾವಿರ ಜನ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.