ಲಂಡನ್: ಇರಾನ್ ಮೇಲೆ ಬಾಂಬ್ ದಾಳಿ ನಡೆಸುವ ಅಮೆರಿಕದ ನಿರ್ಧಾರಕ್ಕೆ ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಬೆಂಬಲ ವ್ಯಕ್ತಪಡಿಸಿದ್ದು, ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
'ಇರಾನ್‌ನ ಪರಮಾಣು ಯೋಜನೆಗಳು ಅಂತರರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ಎಂದಿಗೂ ಅನುಮತಿಸುವುದಿಲ್ಲ. ಇರಾನ್‌ನ ಪರಮಾಣು ಬೆದರಿಕೆಯನ್ನು ನಿವಾರಿಸಲು ಅಮೆರಿಕ ಕ್ರಮ ಕೈಗೊಂಡಿದೆ’ ಎಂದು ಕಿಯರ್ ಸ್ಟಾರ್ಮರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಅಸ್ಥಿರವಾಗಿಯೇ ಉಳಿದಿದೆ. ಈ ಪ್ರದೇಶದಲ್ಲಿ ಸ್ಥಿರತೆ ಕಾಪಾಡುವ ಅಗತ್ಯತೆ ಇದೆ. ಇರಾನ್ ಮಾತುಕತೆ ಮೂಲಕ ಬಿಕ್ಕಟ್ಟನ್ನು ಕೊನೆಗೊಳಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ’ ಎಂದು ಸ್ಟಾರ್ಮರ್ ತಿಳಿಸಿದ್ದಾರೆ.
ಇರಾನ್‌ನ ಫೋರ್ಡೊ, ನತಾನ್ಜ್ ಮತ್ತು ಇಸ್‌ಫಹಾನ್ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿದೆ. ಫೋರ್ಡೊ ಮೇಲೆ ಆರು ಬಿ-2 ಬಾಂಬರ್ ಯುದ್ಧ ವಿಮಾನಗಳು 12 ಬಂಕರ್ ನಿಷ್ಕ್ರಿಯಗೊಳಿಸುವ ಬಾಂಬ್‌ಗಳನ್ನು ಬೀಳಿಸಿವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಒಂದು ವೇಳೆ ಇರಾನ್ ಪ್ರತೀಕಾರ ತೀರಿಸಿಕೊಂಡರೆ ಮತ್ತಷ್ಟು ದಾಳಿ ನಡೆಸುತ್ತೇವೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಸಂಘರ್ಷ ಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಐಎಇಎ) ಮಹಾನಿರ್ದೇಶಕ ರಾಫೆಲ್ ಗ್ರೋಸಿ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೋಮವಾರ ತುರ್ತು ಸಭೆ ನಡೆಯಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.