ಆ್ಯಂಟೊನಿಯೊ ಗುಟೆರಸ್
(ರಾಯಿಟರ್ಸ್ ಚಿತ್ರ)
ವಿಶ್ವಸಂಸ್ಥೆ: ಇರಾನ್ ಅಣ್ವಸ್ತ್ರ ನೆಲೆಗಳನ್ನು ಗುರಿಯಾಗಿಸಿ ಅಮೆರಿಕ ನಡೆಸಿರುವ ಬಾಂಬ್ ದಾಳಿ ಸಂಬಂಧ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇರಾನ್‌ನ ಮೂರು ಅಣು ಕೇಂದ್ರಗಳನ್ನು ಬಾಂಬ್ ದಾಳಿ ನಡೆಸಿ ನಾಶಪಡಿಸಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಆ ಮೂಲಕ ಇಸ್ರೇಲ್-ಇರಾನ್ ನಡುವಣ ಯುದ್ಧದಲ್ಲಿ ಅಮೆರಿಕ ನೇರ ಮಧ್ಯಪ್ರವೇಶ ಮಾಡಿತ್ತು.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಗುಟೆರಸ್, 'ಮಧ್ಯಪ್ರಾಚ್ಯದಲ್ಲಿ ಈಗಿನ ಯುದ್ಧ ವರ್ಧಿತ ಬೆಳವಣಿಗೆಯೂ ತೀವ್ರ ಅಪಾಯಕಾರಿಯಾಗಿದೆ. ಇದು ಅಂತರರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಗೆ ನೇರ ಬೆದರಿಕೆಯಾಗುವ ಸಾಧ್ಯತೆಯಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
'ಈ ಸಂಘರ್ಷವು ಮಿತಿ ಮೀರಿ ಹೋಗುವ ಅಪಾಯವೂ ಕಾಡುತ್ತಿದೆ. ಈ ಪ್ರದೇಶದ ಹಾಗೂ ನಾಗರಿಕರ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ' ಎಂದು ಹೇಳಿದ್ದಾರೆ.
'ಉದ್ವಿಗ್ನ ಸ್ಥಿತಿಯನ್ನು ಶಮನ ಮಾಡುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಕಾನೂನು ಹಾಗೂ ನಿಮಯಗಳ ಅಡಿಯಲ್ಲಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಂತೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ನಾನು ಒತ್ತಾಯಿಸುತ್ತೇನೆ' ಎಂದು ವಿನಂತಿಸಿದ್ದಾರೆ.
'ಈ ಅಪಾಯಕಾರಿ ಗಳಿಗೆಯಲ್ಲಿ ಸಂಪೂರ್ಣ ಅವ್ಯವಸ್ಥೆಯನ್ನು ತಪ್ಪಿಸುವುದು ಅತ್ಯಗತ್ಯವಾಗಿದೆ. ಮಿಲಿಟರಿ ಕಾರ್ಯಾಚರಣೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ರಾಜತಾಂತ್ರಿಕತೆ ನಮ್ಮ ಮುಂದಿರುವ ಏಕೈಕ ಮಾರ್ಗವಾಗಿದೆ. ಶಾಂತಿಯೊಂದೇ ಭರವಸೆಯಾಗಿದೆ' ಎಂದು ಅವರು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.