ಕಿಮ್ ಜಾಂಗ್ ಉನ್
ಬೀಜಿಂಗ್: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಚೀನಾದ ಬೀಜಿಂಗ್‌ನಲ್ಲಿ ಭೇಟಿ ಮಾಡಿದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕುಳಿತ ಕುರ್ಚಿ, ಬಳಸಿದ ಲೋಟ ಸಹಿತ ಎಲ್ಲವನ್ನೂ ಅವರ ಸಿಬ್ಬಂದಿ ಒರೆಸಿ, ಲಭ್ಯವಾಗಬಹುದಾದ ಡಿಎನ್‌ಎ ನಾಶಪಡಿಸಿದ್ದಾರೆ. ಈ ಕುರಿತ ವಿಡಿಯೊ ಹರಿದಾಡುತ್ತಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ತಮ್ಮ ರಾಷ್ಟ್ರದ ನಾಯಕ ಮುಟ್ಟಿರಬಹುದಾದ ಎಲ್ಲಾ ವಸ್ತುಗಳನ್ನೂ ಅತ್ಯಂತ ಎಚ್ಚರಿಕೆಯಿಂದ ಅವರ ಸಿಬ್ಬಂದಿ ಒರೆಸಿ ಅಳಿಸಿದ್ದಾರೆ. ಕುರ್ಚಿ, ಅವರು ಒರಗಿರಬಹುದಾದ ಮೇಜು, ನೀರು ಕುಡಿದ ಲೋಟವನ್ನೂ ತೆಗೆದುಕೊಂಡು ಹೋಗಲಾಗಿದೆ. ಆ ಮೂಲಕ ಕಿಮ್ ಅಲ್ಲಿದ್ದರು ಎಂಬ ಎಲ್ಲಾ ದಾಖಲೆಗಳನ್ನೂ ಅಳಿಸುವ ಪ್ರಯತ್ನವನ್ನು ಅವರ ಸಿಬ್ಬಂದಿ ಮಾಡಿದ್ದಾರೆ.
ಈ ಕುರಿತು ರಷ್ಯಾದ ವರದಿಗಾರ ಅಲೆಕ್ಸಾಂಡರ್ ಯುನಾಶೆವ್ ಅವರು ತಮ್ಮ ಚಾನಲ್ ‘ಯುನಾಶೆವ್ ಲೈವ್’ನಲ್ಲಿ ವರದಿ ಮಾಡಿದ್ದಾರೆ.
‘ಪುಟಿನ್ ಮತ್ತು ಕಿಮ್ ನಡುವಿನ ಸಭೆ ಫಲಪ್ರದವಾಗಿದೆ. ಉಭಯ ನಾಯಕರು ಜತೆಗೂಡಿ ಚಹಾ ಸೇವಿಸಿದ್ದಾರೆ. ಅತ್ಯಂತ ಹಸನ್ಮುಖದಿಂದಲೇ ಸಭಾಗೃಹದಿಂದ ಹೊರಬಂದರು. ಇದರ ಬೆನ್ನಲ್ಲೇ ಸಭೆ ನಡೆದ ಕೊಠಡಿಯನ್ನು ಉತ್ತರ ಕೊರಿಯಾದ ಸಿಬ್ಬಂದಿ ಶುಚಿಗೊಳಿಸಿದ್ದಾರೆ’ ಎಂದು ಯುನಾಶೆವ್ ಹೇಳಿದ್ದಾರೆ.
‘ಕಿಮ್ ಅವರ ವಿಧಿವಿಜ್ಞಾನದ ಮಟ್ಟ ಈ ಮಟ್ಟಿಗೆ ಹೆಚ್ಚಾಗಲು ಕಾರಣಗಳೇನು ಎಂಬುದು ಸ್ಪಷ್ಟವಾಗಿಲ್ಲ. ರಷ್ಯಾದ ಭದ್ರತಾ ಸೇವೆಯ ಭಯ ಅಥವಾ ಚೀನಾದ ಕಣ್ಗಾವಲಿನ ಆತಂಕ ಇರಬಹುದು. ಹಾಗೆಂದ ಮಾತ್ರಕ್ಕೆ ತಮ್ಮ ಜೈವಿಕ ಗುರುತುಗಳನ್ನು ಮರೆಮಾಚುತ್ತಿರುವುದು ಕಿಮ್ ಒಬ್ಬರೇ ಅಲ್ಲ’ ಎಂದಿದ್ದಾರೆ.
ಡಿಎನ್‌ಎ ಕಳ್ಳತನ ನಿಯಂತ್ರಿಸಲು ಯಾವುದೇ ಹಂತಕ್ಕಾದರೂ ಹೋಗುವುದಾಗಿ ಪುಟಿನ್ ಹೇಳಿದ್ದರು. 2017ರ ನಂತರದಲ್ಲಿ ಪ್ರತಿ ವಿದೇಶ ಪ್ರವಾಸದ ಸಂದರ್ಭದಲ್ಲೂ ಪುಟಿನ್ ಅವರ ಮೂತ್ರ ಹಾಗೂ ಮಲದ ಮಾದರಿಯನ್ನೂ ಬಿಡದೆ ಅವರ ಅಂಗರಕ್ಷಕರು ಚೀಲದಲ್ಲಿ ಸಂಗ್ರಹಿಸಿ ಸ್ವದೇಶಕ್ಕೆ ತರುತ್ತಾರೆ. ಅಲಸ್ಕಾದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಯ ಸಂದರ್ಭದಲ್ಲೂ ಪುಟಿನ್ ಅವರ ಯಾವುದೇ ಜೈವಿಕ ಮಾದರಿಯನ್ನು ಅವರ ಅಂಗರಕ್ಷಕರು ಬಿಡದೆ ಸ್ವದೇಶಕ್ಕೆ ತಂದಿರುವುದು ಸುದ್ದಿಯಾಗಿತ್ತು.
ಬೀಜಿಂಗ್‌ನಲ್ಲಿ ಮಾತನಾಡಿರುವ ಕಿಮ್, ಅಗತ್ಯವಿದ್ದಲ್ಲಿ ಪುಟಿನ್ ಹಾಗೂ ರಷ್ಯಾದ ಜನತೆಯೊಂದಿಗೆ ಉತ್ತರ ಕೊರಿಯಾ ನಿಲ್ಲುವುದಾಗಿ ಕಿಮ್ ವಾಗ್ದಾನ ಮಾಡಿದ್ದಾರೆ.
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ತನ್ನ ಸೇನೆಯನ್ನು ಕಳುಹಿಸಿದ ಪ್ಯಾಂಗ್ಯಾಂಗ್‌ನ ನಿರ್ಧಾರಕ್ಕೆ ಪುಟಿನ್ ಧನ್ಯವಾದ ತಿಳಿಸಿದ್ದರು. ಈ ಯುದ್ಧಕ್ಕೆ ಉತ್ತರ ಕೊರಿಯಾ 13 ಸಾವಿರ ಸೈನಿಕರನ್ನು ನಿಯೋಜಿಸಿತ್ತು. ಅದರಲ್ಲಿ 2 ಸಾವಿರ ಯೋಧರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕೋವಿಡ್–19ರ ನಂತರ ಇದೇ ಮೊದಲ ಬಾರಿಗೆ ಚೀನಾಗೆ ಕಿಮ್ ಭೇಟಿ ನೀಡಿದ್ದಾರೆ. 2ನೇ ವಿಶ್ವ ಯುದ್ಧದಲ್ಲಿ ಜಪಾನ್ ಶರಣಾಗತಿಯನ್ನು ನೆನಪಿಸಿಕೊಳ್ಳುವ ‘ವಿಜಯ ದಿನ’ ಸಮಾರಂಭದಲ್ಲಿ ಜಗತ್ತಿನ ಡಜನ್‌ಗೂ ಹೆಚ್ಚು ನಾಯಕರು ಚೀನಾದಲ್ಲಿ ಸೇರಿದ್ದರು. ಈ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಷಿ ಜಿಂಗ್‌ಪಿಂಗ್ ಅವರು ಪುಟಿನ್ ಹಾಗೂ ಕಿಮ್ ಭೇಟಿಗೆ ವೇದಿಕೆ ಕಲ್ಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.