ADVERTISEMENT

ರಷ್ಯಾ–ಉಕ್ರೇನ್ ಬಿಕ್ಕಟ್ಟು: ಸೆಂಟ್ರಲ್ ಕೀವ್‌ನಲ್ಲಿ ಎರಡು ಪ್ರಬಲ ಸ್ಫೋಟದ ಸದ್ದು

ಏಜೆನ್ಸೀಸ್
Published 25 ಫೆಬ್ರುವರಿ 2022, 5:54 IST
Last Updated 25 ಫೆಬ್ರುವರಿ 2022, 5:54 IST
ಚಿತ್ರ: ಎಎಫ್‌ಪಿ
ಚಿತ್ರ: ಎಎಫ್‌ಪಿ   

ಕೀವ್: ಶುಕ್ರವಾರದ ಆರಂಭದಲ್ಲಿ ಸೆಂಟ್ರಲ್ ಕೀವ್‌ನಲ್ಲಿ ಎರಡು ಸ್ಫೋಟದ ಸದ್ದು ಜೋರಾಗಿ ಕೇಳಿಬಂದಿವೆ ಎಂದು ಎಎಫ್‌ಪಿ ಪತ್ರಕರ್ತರೊಬ್ಬರು ತಿಳಿಸಿದ್ದಾರೆ. ರಷ್ಯಾದ ಪಡೆಗಳು ಆಕ್ರಮಣದಲ್ಲಿ ಉಕ್ರೇನ್ ರಾಜಧಾನಿಗೆ ತೀರಾ ಹತ್ತಿರವಾಗುತ್ತಿವೆ.

ಕೀವ್‌ನ ನಾಗರಿಕ ಪ್ರದೇಶಗಳ ಮೇಲೆ ರಷ್ಯಾ ಗುಂಡು ಹಾರಿಸಿದೆ. ಆದರೆ, ಉಕ್ರೇನ್‌ನ ವಾಯು ರಕ್ಷಣಾ ವ್ಯವಸ್ಥೆಗಳು 'ಎರಡು ಮಾರಣಾಂತಿಕ ದಾಳಿಗಳನ್ನು' ಹಿಮ್ಮೆಟ್ಟಿಸಿವೆ ಎಂದು ಉಕ್ರೇನ್ ಸೇನೆಯು ತನ್ನ ಅಧಿಕೃತ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದೆ.

'ಕ್ಷಿಪಣಿ ಅವಶೇಷಗಳು' ವಸತಿ ಕಟ್ಟಡವೊಂದಕ್ಕೆ ಅಪ್ಪಳಿಸಿದ ನಂತರ ಮೂವರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಕೀವ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ ತಿಳಿಸಿದ್ದಾರೆ. ಕಟ್ಟಡದ ಗೋಡೆಯ ಒಂದು ಭಾಗವನ್ನು ಕಿತ್ತುಹಾಕಿರುವ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿರುವ ಫೋಟೊವೊಂದನ್ನು ಅವರು ಟ್ವೀಟ್ ಮಾಡಿದ್ದಾರೆ.

ADVERTISEMENT

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆ ಮತ್ತು ವಾಯು ದಾಳಿಯನ್ನು ಘೋಷಿಸಿದ ನಂತರ ಗುರುವಾರ ಉಕ್ರೇನ್ ನಗರಗಳ ಮೇಲೆ ಕ್ಷಿಪಣಿಗಳು ಮತ್ತು ಶೆಲ್ ದಾಳಿಗಳು ನಡೆದಿವೆ. ಗುರುವಾರ ಒಂದೇ ದಿನ ನಾಗರಿಕರು ಮತ್ತು ಸೇನಾ ಸಿಬ್ಬಂದಿ ಸೇರಿದಂತೆ 137 ಜನರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿಕೊಂಡಿದ್ದಾರೆ.

ರಷ್ಯಾದ ಈ ನಡೆಯನ್ನು ವಿಶ್ವಸಮುದಾಯ ಖಂಡಿಸಿದ್ದು, ಕಠಿಣ ನಿರ್ಬಂಧ ವಿಧಿಸುವುದಾಗಿ ಎಚ್ಚರಿಕೆ ನೀಡಿವೆ.

ಗುರುವಾರ, ರಷ್ಯಾದ ಪ್ಯಾರಾಟ್ರೂಪರ್‌ಗಳು ಬೆಲಾರಸ್‌ನ ದಿಕ್ಕಿನಿಂದ ಹೆಲಿಕಾಪ್ಟರ್‌ಗಳು ಮತ್ತು ಜೆಟ್‌ಗಳೊಂದಿಗೆ ನುಗ್ಗಿದ ನಂತರ ಕೀವ್‌ನ ಹೊರವಲಯದ ಗೊಸ್ಟೊಮೆಲ್ ಏರ್‌ಫೀಲ್ಡ್‌ ಅನ್ನು ವಶಪಡಿಸಿಕೊಂಡಿವೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.