ADVERTISEMENT

6.6 ಲಕ್ಷಕ್ಕೂ ಅಧಿಕ ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ: ವಿಶ್ವಸಂಸ್ಥೆ

ಏಜೆನ್ಸೀಸ್
Published 1 ಮಾರ್ಚ್ 2022, 14:44 IST
Last Updated 1 ಮಾರ್ಚ್ 2022, 14:44 IST
ಉಕ್ರೇನ್‌ನಿಂದ ಪಲಾಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು (ಚಿತ್ರ-ಎಎಫ್‌ಪಿ)
ಉಕ್ರೇನ್‌ನಿಂದ ಪಲಾಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು (ಚಿತ್ರ-ಎಎಫ್‌ಪಿ)   

ಜಿನೆವಾ: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರಿದಿದ್ದು, ಸಂಘರ್ಷದಿಂದ ರಕ್ಷಣೆ ಪಡೆಯಲು 6,60,000ಕ್ಕೂ ಅಧಿಕ ಜನರು ಉಕ್ರೇನ್‌ನಿಂದ ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಈ ಮಧ್ಯೆ 10 ಲಕ್ಷ ಜನರು ದೇಶದೊಳಗೆ ಬೇರೆ ಬೇರೆ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಮಂಗಳವಾರ ತಿಳಿಸಿದೆ.

ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದ ಆರನೇ ದಿನದಂದು, ಪೂರ್ವ ಉಕ್ರೇನ್‌ನಲ್ಲಿನ ನಗರಗಳ ಮೇಲೆ ರಷ್ಯಾ ಪಡೆಗಳು ದಾಳಿ ನಡೆಸುತ್ತಿದ್ದು, ಸಾವಿರಾರು ಜನರು ಪಲಾಯನ ಮಾಡುತ್ತಿದ್ದಾರೆ. ಇದು ಈ ಶತಮಾನದಲ್ಲಿ ಯುರೋಪ್‌ನ ಅತಿದೊಡ್ಡ ನಿರಾಶ್ರಿತರ ಬಿಕ್ಕಟ್ಟಾಗಿ ಪರಿಣಮಿಸುವ ಪರಿಸ್ಥಿತಿಯನ್ನು ತೋರಿಸುತ್ತಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ಯುಎನ್‌ಎಚ್‌ಸಿಆರ್ ಹೇಳಿದೆ.

'ನಾವು ಈಗ 6,60,000 ನಿರಾಶ್ರಿತರನ್ನು ಹೊಂದಿದ್ದು, ಇವರೆಲ್ಲ ಕಳೆದ ಆರು ದಿನಗಳಲ್ಲಿ ಉಕ್ರೇನ್‌ನಿಂದ ನೆರೆಯ ದೇಶಗಳಿಗೆ ಪಲಾಯನ ಮಾಡಿದವರು. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ' ಎಂದು ಯುಎನ್‌ಎಚ್‌ಸಿಆರ್ ವಕ್ತಾರ ಶಾಬಿಯಾ ಮಂಟೂ ಜಿನೆವಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಇದನ್ನೂ ಓದಿ

'ಉಕ್ರೇನ್‌ನಿಂದ ಪಲಾಯನ ಮಾಡುವ ನಿರಾಶ್ರಿತರಿಗಾಗಿ ಎಲ್ಲಾ ನೆರೆಯ ದೇಶಗಳು ಇಲ್ಲಿಯವರೆಗೆ ತಮ್ಮ ಗಡಿಗಳನ್ನು ತೆರೆದಿವೆ. ಇದರಲ್ಲಿ ರಷ್ಯಾಗೆ ಕೂಡ ಹೆಚ್ಚಿನ ಸಂಖ್ಯೆಯ ಜನರು ತೆರಳಿದ್ದಾರೆ' ಎಂದು ಹೇಳಿದರು.

ಉಕ್ರೇನಿಯನ್ನರು ಮತ್ತು ಉಕ್ರೇನ್‌ನಲ್ಲಿ ವಾಸಿಸುವ ಮೂರನೇ ದೇಶದ ಪ್ರಜೆಗಳು ಈಗ ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಉಕ್ರೇನ್‌ನಿಂದ ಪಲಾಯನ ಮಾಡುತ್ತಿದ್ದಾರೆ. ಹೀಗೆ ಪಲಾಯನ ಮಾಡುವ ಎಲ್ಲರಿಗೂ ತಮ್ಮ ಭೂಪ್ರದೇಶಕ್ಕೆ ಪ್ರವೇಶವನ್ನು ಮುಂದುವರಿಸಲು ಅನುಮತಿಯನ್ನು ಸರ್ಕಾರಗಳು ನೀಡಬೇಕು ಎಂದು ಯುಎನ್‌ಎಚ್‌ಸಿಆರ್ ಒತ್ತಾಯಿಸಿದೆ.

ರಷ್ಯಾದ ಆಕ್ರಮಣದಿಂದ 10 ಲಕ್ಷ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಉಕ್ರೇನ್‌ಗೆ ಯುಎನ್‌ಎಚ್‌ಸಿಆರ್‌ ಪ್ರತಿನಿಧಿಯಾದ ಕರೋಲಿನಾ ಲಿಂಡ್‌ಹೋಮ್ ಬಿಲ್ಲಿಂಗ್ ಸ್ಟಾಕ್‌ಹೋಮ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಂಸ್ಥೆಯು ಇನ್ನೂ ವಿಶ್ವಾಸಾರ್ಹ ಅಂಕಿಅಂಶಗಳನ್ನು ಹೊಂದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.