ADVERTISEMENT

ಓಮೈಕ್ರಾನ್‌ ತಳಿ ಬಿಎ.2: ಚೀನಾ, ಫ್ರಾನ್ಸ್‌, ಜರ್ಮನಿಯಲ್ಲಿ ಕೋವಿಡ್ ಪ್ರಕರಣ ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮಾರ್ಚ್ 2022, 4:16 IST
Last Updated 22 ಮಾರ್ಚ್ 2022, 4:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಮತ್ತೆ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ವೇಗವಾಗಿ ಪ್ರಸರಣಗೊಳ್ಳುತ್ತಿರುವ ಓಮೈಕ್ರಾನ್‌ನ ರೂಪಾಂತರಿ ತಳಿ ಬಿಎ.2 ಇದಕ್ಕೆ ಕಾರಣ ಎಂದು ತಿಳಿಯಲಾಗಿದೆ. ಯುರೋಪ್‌, ಫ್ರಾನ್ಸ್‌, ಬ್ರಿಟನ್‌ ಹಾಗೂ ಜರ್ಮನಿಯಲ್ಲಿ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಓಮೈಕ್ರಾನ್‌ ವ್ಯಾಪಿಸುವುದನ್ನು ತಡೆಯಲು ಚೀನಾದಲ್ಲಿ ಹಲವು ನಿರ್ಬಂಧಗಳನ್ನು ಅನುಸರಿಸಲಾಗುತ್ತಿದೆ.

ಚೀನಾದ ಶಾಂಘೈನಲ್ಲಿ ಸೋಮವಾರ ಕೋವಿಡ್‌ ದೃಢಪಟ್ಟ 896 ಪ್ರಕರಣಗಳು ದಾಖಲಾಗಿದ್ದು, ಚೀನಾದ ಹೊಸ ಕೋವಿಡ್‌ ಹಾಟ್‌ಸ್ಪಾಟ್‌ ಆಗಿ ಪರಿಣಮಿಸಿದೆ. ಓಮೈಕ್ರಾನ್‌ ಬಿಎ.2 ಹರಡುವುದನ್ನು ತಡೆಯಲು ಚೀನಾದಲ್ಲಿ ಕಠಿಣ ಲಾಕ್‌ಡೌನ್ ನಿರ್ಬಂಧಗಳು, ಸಾಮಾಹಿಕ ಕೋವಿಡ್‌ ಪರೀಕ್ಷೆ ಹಾಗೂ ಕಡ್ಡಾಯ ಕ್ವಾರಂಟೈನ್‌ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಫ್ರಾನ್ಸ್‌ನಲ್ಲಿ ಒಂದು ವಾರದ ಅಂತರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಶೇಕಡ 36ರಷ್ಟು ಹೆಚ್ಚಳವಾಗಿದೆ. ಕಳೆದ ಏಳು ದಿನಗಳಲ್ಲಿ 90,000 ಹೊಸ ಪ್ರಕರಣಗಳು ವರದಿಯಾಗಿವೆ.

ADVERTISEMENT

ಬ್ರಿಟನ್‌ನಲ್ಲಿ ಕೋವಿಡ್‌ ವಿರುದ್ಧ ಹೋರಾಟಕ್ಕೆ ನಾಲ್ಕನೇ ಡೋಸ್‌ ಲಸಿಕೆ ಹಾಕಲು ಕ್ರಮವಹಿಸಲಾಗಿದೆ. 75 ವರ್ಷ ಮೇಲ್ಪಟ್ಟವರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರು ನಾಲ್ಕನೇ ಡೋಸ್‌ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಸೋಮವಾರದಿಂದ ಅವಕಾಶ ಕಲ್ಪಿಸಲಾಗಿದೆ.

ಜರ್ಮನಿ, ಆಸ್ಟ್ರಿಯಾ ಹಾಗೂ ನೆದರ್ಲೆಂಡ್‌ನಲ್ಲಿ ನಿತ್ಯ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.

ಅಮೆರಿಕದಲ್ಲಿ ದಾಖಲಾಗುತ್ತಿರುವ ಕೋವಿಡ್‌ ಪ್ರಕರಣಗಳ ಪೈಕಿ ಶೇಕಡ 50ರಿಂದ 70ರಷ್ಟು ಪ್ರಕರಣಗಳಿಗೆ 'ಓಮೈಕ್ರಾನ್‌ ಬಿಎ.2' ಕಾರಣ ಎಂದು ವಿಶ್ಲೇಷಿಸಲಾಗಿದೆ. ನ್ಯೂಯಾರ್ಕ್‌ ನಗರದಲ್ಲಿ ವೈರಸ್‌ ಸೋಂಕು ಏರುಗತಿಯಲ್ಲಿದೆ. ಮತ್ತೆ ಕೋವಿಡ್‌–19 ಬೂಸ್ಟರ್‌ ಡೋಸ್‌ ವಿತರಿಸುವ ಬಗ್ಗೆ ಏಪ್ರಿಲ್‌ 6ರಂದು ಸಲಹೆಗಾರರ ಸಮಿತಿಯು ಸಭೆ ಸೇರುವುದಾಗಿ ವರದಿಯಾಗಿದೆ.

ಜಪಾನ್‌ನ ಟೋಕಿಯೊದಲ್ಲಿ ನಿತ್ಯ ಸರಾಸರಿ 7,500 ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿವೆ. ಜಪಾನ್‌ನಲ್ಲಿ ಕಠಿಣ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದೆ. ಇಂಡೊನೇಷ್ಯಾ ಎರಡು ವರ್ಷಗಳು ಗಡಿ ಭಾಗವನ್ನು ಮುಚ್ಚುವ ಮೂಲಕ ಪ್ರವಾಸಿಗರಿಗೆ ಹೇರಲಾಗಿದ್ದ ನಿರ್ಬಂಧ ಸಡಿಲಗೊಳಿಸಿದ್ದು, ಕೋವಿಡ್‌ ಲಸಿಕೆಯ ಎಲ್ಲ ಡೋಸ್ ಹಾಕಿಸಿಕೊಂಡಿರುವ ಪ್ರವಾಸಿಗರಿಗೆ ಕ್ವಾರಂಟೈನ್‌ ಕೈಬಿಡಲಾಗಿದೆ.

ಹಾಂಗ್‌ಕಾಂಗ್‌ನಲ್ಲಿ ಭಾರತ, ಬ್ರಿಟನ್‌ ಮತ್ತು ಅಮೆರಿಕ ಸೇರಿದಂತೆ ಒಂಬತ್ತು ದೇಶಗಳ ವಿಮಾನಯಾನದ ಮೇಲೆ ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸಲಾಗುವುದು ಎಂದು ಅಲ್ಲಿನ ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.