ADVERTISEMENT

ಪಹಲ್ಗಾಮ್‌ ದಾಳಿಗೆ ಚೀನಾದಲ್ಲಿ ಮೋದಿ ಖಂಡನೆ

ಪ್ರಧಾನಿ ಮೋದಿ– ರಷ್ಯಾ ಅಧ್ಯಕ್ಷ ಪುಟಿನ್‌, ಚೀನಾದ ಜಿನ್‌ಪಿಂಗ್‌ ಭೇಟಿ * ಅಭಿವೃದ್ಧಿ ಬ್ಯಾಂಕ್‌, ಜಂಟಿ ಬಾಂಡ್‌ ಬಿಡುಗಡೆಗೆ ಕರೆ

ಪಿಟಿಐ
Published 1 ಸೆಪ್ಟೆಂಬರ್ 2025, 16:11 IST
Last Updated 1 ಸೆಪ್ಟೆಂಬರ್ 2025, 16:11 IST
<div class="paragraphs"><p>ಚೀನಾದ&nbsp;ಟಿಯಾನ್‌ಜಿನ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ನಡೆದ ಎಸ್‌ಸಿಒ ಶೃಂಗಸಭೆ ಬಳಿಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರಿಗೆ ಸೇರಿದ ‘ಔರಸ್‌ ಲಿಮೋಸಿನ್‌’ ಕಾರಿನಲ್ಲಿ ಜೊತೆಯಾಗಿ ಪ್ರಯಾಣಿಸಿದರು</p></div>

ಚೀನಾದ ಟಿಯಾನ್‌ಜಿನ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ನಡೆದ ಎಸ್‌ಸಿಒ ಶೃಂಗಸಭೆ ಬಳಿಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರಿಗೆ ಸೇರಿದ ‘ಔರಸ್‌ ಲಿಮೋಸಿನ್‌’ ಕಾರಿನಲ್ಲಿ ಜೊತೆಯಾಗಿ ಪ್ರಯಾಣಿಸಿದರು

   

–ಎಎಫ್‌ಪಿ ಚಿತ್ರ

ಟಿಯಾನ್‌ಜಿನ್ (ಚೀನಾ): ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ‘ಶಾಂಘೈ ಸಹಕಾರ ಸಂಘಟನೆ’ (ಎಸ್‌ಸಿಒ) ಶೃಂಗಸಭೆಯು ಬಲವಾಗಿ ಖಂಡಿಸಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸದಸ್ಯ ರಾಷ್ಟ್ರಗಳ ಇಬ್ಬಗೆ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಸಮ್ಮುಖದಲ್ಲೇ ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಶೃಂಗಸಭೆ ಸಮಾರೋಪದಲ್ಲಿ ಮಾತನಾಡಿದ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌, ಅಭಿವೃದ್ಧಿ ಬ್ಯಾಂಕ್‌ ಸ್ಥಾಪನೆ ಕುರಿತು ಒಲವು ವ್ಯಕ್ತಪಡಿಸಿದರು. ಜಂಟಿ ಬಾಂಡ್‌ ಬಿಡುಗಡೆಗೊಳಿಸಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಸಲಹೆ ನೀಡಿದರು. ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದರೆ, ಗಾಜಾದ ಮೇಲೆ ಇಸ್ರೇಲ್‌ ಸೇನಾ ದಾಳಿಯನ್ನು ಸದಸ್ಯ ರಾಷ್ಟ್ರಗಳು ಒಕ್ಕೊರಲಿನಿಂದ ಖಂಡಿಸಿದವು.

ಅಭಿವೃದ್ಧಿ ಬ್ಯಾಂಕ್‌ ಸ್ಥಾಪನೆಗೆ ಷಿ ಕರೆ: ‘ಸದಸ್ಯ ರಾಷ್ಟ್ರಗಳು ಅಭಿವೃದ್ಧಿ ಬ್ಯಾಂಕ್‌ ಸ್ಥಾಪಿಸಲು ಒತ್ತು ನೀಡಬೇಕು’ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಕರೆ ನೀಡಿದ್ದಾರೆ.

‘ಬ್ರಿಕ್ಸ್‌ನ ರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕ್‌ (ಎನ್‌ಡಿಬಿ) ಹಾಗೂ ಏಷ್ಯನ್‌ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (ಎಐಐಬಿ) ಮಾದರಿಯಲ್ಲಿ ಹೊಸ ಅಭಿವೃದ್ಧಿ ಬ್ಯಾಂಕ್‌ ಸ್ಥಾಪನೆಗೆ ಸದಸ್ಯ ರಾಷ್ಟ್ರಗಳು ಒಗ್ಗೂಡಬೇಕು ಎಂದು ಚೀನಾ ಬಯಸುತ್ತಿದೆ. ಇದರಲ್ಲಿ ಭಾರತವು ಎರಡನೇ ಅತಿ ದೊಡ್ಡ ಭಾಗೀದಾರ ರಾಷ್ಟ್ರವಾಗಿರಲಿದೆ’ ಎಂದು ಷಿ ತಿಳಿಸಿದ್ದಾರೆ. 

ಎನ್‌ಡಿಬಿ ಹಾಗೂ ಎಐಐಬಿ ಬ್ಯಾಂಕ್‌ಗಳು ಚೀನಾದಲ್ಲಿಯೇ ಕೇಂದ್ರ ಕಚೇರಿ ಹೊಂದಿವೆ. ಆರಂಭದಲ್ಲಿ ಐಎಂಎಫ್‌, ವಿಶ್ವಬ್ಯಾಂಕ್‌ ಹಾಗೂ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ಗಳನ್ನು (ಎಡಿಬಿ) ಪ್ರತಿಸ್ಪರ್ಧಿಗಳೆಂದೇ ಪರಿಗಣಿಸಲಾಗಿತ್ತು. ಈಗ ಈ ಬ್ಯಾಂಕ್‌ಗಳ ಜೊತೆಗೆ ಚೀನಾ ಕೂಡ ಹಣಕಾಸು ಸಹಕಾರದ ದಿಸೆಯಲ್ಲಿ ಕೆಲಸ ಮಾಡುತ್ತಿದೆ.

ಎಸ್‌ಸಿಒ ವಿಶ್ವದ ಅತಿ ದೊಡ್ಡ ಪ‍್ರಾದೇಶಿಕ ಒಕ್ಕೂಟವಾಗಿ ಬೆಳೆಯುತ್ತಿದ್ದು, 26 ದೇಶಗಳು ಭಾಗಿಯಾಗುತ್ತಿವೆ. 50 ಪ್ರಮುಖ ಕ್ಷೇತ್ರದಲ್ಲಿ ಸಹಭಾಗಿತ್ವ ಹೊಂದಿದ್ದು, ಸುಮಾರು 30 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಷ್ಟು ಉತ್ಪಾದನೆ ಹೊಂದಿವೆ.

ಇದನ್ನು ಗಮನದಲ್ಲಿರಿಸಿಕೊಂಡೇ ಮಾತನಾಡಿದ ಷಿ ಜಿನ್‌ಪಿಂಗ್‌, ‘ಎಸ್‌ಸಿಒದ ಅಂತರರಾಷ್ಟ್ರೀಯ ಪ್ರಭಾವ ಹಾಗೂ ಸ್ವೀಕೃತಿಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸದಸ್ಯ ರಾಷ್ಟ್ರಗಳೆಲ್ಲವೂ ಸ್ನೇಹಿತರು ಹಾಗೂ ಪಾಲುದಾರರು’ ಎಂದು ಹೇಳಿದರು.

ಜಂಟಿ ಬಾಂಡ್‌ ಬಿಡುಗಡೆಗೆ ಪುಟಿನ್ ಸಲಹೆ: ‘ಸದಸ್ಯ ರಾಷ್ಟ್ರಗಳ ನಡುವೆ ಆರ್ಥಿಕ ಸಹಕಾರ ಬಲಪಡಿಸುವುದಕ್ಕಾಗಿ ಜಂಟಿ ಬಾಂಡ್‌ಗಳನ್ನು ಬಿಡುಗಡೆಗೊಳಿಸಬೇಕು’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಇದೇ ವೇಳೆ ಕರೆ ನೀಡಿದ್ದಾರೆ.

ವ್ಯಾಪಾರ ವಹಿವಾಟುಗಳಿಗಾಗಿ ಜಂಟಿ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರುವ ಯೋಜನೆಯನ್ನು ಪುಟಿನ್‌ ಶೃಂಗಸಭೆಯಲ್ಲಿ ಮುಂದಿಟ್ಟಿದ್ದಾರೆ.

ಚೀನಾ, ರಷ್ಯಾ, ಕಜಾಕಸ್ತಾನ, ಕಿರ್ಗಿಸ್ತಾನ, ತಾಜಿಕಿಸ್ತಾನ ನೇತೃತ್ವದಲ್ಲಿ ಎಸ್‌ಸಿಒ 2001ರಲ್ಲಿ ಆರಂಭಗೊಂಡಿತ್ತು. ಇದರಲ್ಲಿ ಭಾರತ, ಪಾಕಿಸ್ತಾನ, ಇರಾನ್‌, ಬೆಲರೂಸ್‌ ಹಾಗೂ ಉಜ್ಬೆಕಿಸ್ತಾನವೂ ಸೇರ್ಪಡೆಗೊಂಡಿವೆ.

ಸಂಘರ್ಷ ಕೊನೆಗೊಳಿಸಿ: ‘ಉಕ್ರೇನ್‌ ಜೊತೆಗಿನ ಸಂಘರ್ಷವನ್ನು ಮಾನವೀಯ ದೃಷ್ಟಿಯಿಂದ ಆದಷ್ಟು ಬೇಗ ಕೊನೆಗಾಣಿಸಬೇಕು’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರಿಗೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

ಪ್ರತಿಸುಂಕದ ಕಾರಣದಿಂದಾಗಿ ಅಮೆರಿಕ ಜೊತೆಗೆ ಇತ್ತೀಚೆಗೆ ಭಾರತದ ಸಂಬಂಧ ಕಳೆದೆರಡು ದಶಕಗಳಲ್ಲಿಯೇ ತೀವ್ರವಾಗಿ ಹದಗೆಟ್ಟಿದೆ. ಅದರ ಬೆನ್ನಲ್ಲೇ, ಇಲ್ಲಿ ನಡೆದ ಎಸ್‌ಸಿಒ ಶೃಂಗಸಭೆ ವೇಳೆ ಉಭಯ ನಾಯಕರು ಭೇಟಿಯಾಗಿ ಚರ್ಚೆ ನಡೆಸಿದರು.

‘ಉಭಯ ರಾಷ್ಟ್ರಗಳ ನಡುವಣ ಆರ್ಥಿಕ, ಇಂಧನ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಂಬಂಧಗಳ ಬೆಳವಣಿಗೆಯ ಕುರಿತು ಎರಡೂ ದೇಶಗಳ ನಾಯಕರು ತೃಪ್ತಿ ವ್ಯಕ್ತಪಡಿಸಿದ್ದಾರೆ’ ಎಂದು ಭಾರತ ಹೇಳಿಕೆ ನೀಡಿದೆ.

‘ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸುವುದಕ್ಕಾಗಿ ಇತ್ತೀಚಿಗೆ ನಡೆದ ಎಲ್ಲ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ. ಎರಡೂ ದೇಶಗಳು ಈ ದಿಸೆಯಲ್ಲಿ ರಚನಾತ್ಮಕ ಹೆಜ್ಜೆಯಿಡಲಿವೆ ಎಂದು ನಿರೀಕ್ಷಿಸುತ್ತಿದ್ದೇವೆ’ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಮಾನವೀಯ ದೃಷ್ಟಿಯಿಂದ ಆದಷ್ಟು ಬೇಗ ಸಂಘರ್ಷವನ್ನು ಕೊನೆಗಾಣಿಸಬೇಕು. ಆ ಪ್ರದೇಶದಲ್ಲಿ ಶಾಶ್ವತವಾಗಿ ಶಾಂತಿ ನೆಲಸಲು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.

ಭೇಟಿಗೆ ಕಾತರ: ‘ಪುಟಿನ್‌ ಅವರು ಭಾರತಕ್ಕೆ ಭೇಟಿ ನೀಡುತ್ತಿರುವುದನ್ನು ಎದುರು ನೋಡುತ್ತಿದ್ದೇವೆ’ ಎಂದು ಮೋದಿ ಹೇಳಿದರು.

ಇದೇ ಡಿಸೆಂಬರ್‌ನಲ್ಲಿ ನಡೆಯಲಿರುವ ಭಾರತ ಹಾಗೂ ರಷ್ಯಾ ನಡುವಿನ 23ನೇ ಶೃಂಗಸಭೆಗೆ ಪುಟಿನ್‌ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ.

‘ಅತ್ಯಂತ ಸಂಕಷ್ಟದ ಕಾಲದಲ್ಲಿ ಭಾರತ ಹಾಗೂ ರಷ್ಯಾ ಸದಾ ಒಟ್ಟಿಗೆ ಸಾಗಿವೆ. ಜಾಗತಿಕ ಶಾಂತಿ, ಸ್ಥಿರತೆ ಹಾಗೂ ಸಮೃದ್ಧಿಗೆ ಉಭಯ ರಾಷ್ಟ್ರಗಳ ನಿಕಟ ಬಾಂಧವ್ಯ ಅಗತ್ಯವಾಗಿದೆ’ ಎಂದು ಮೋದಿ ಪ್ರತಿಪಾದಿಸಿದ್ದಾರೆ.

‘ಉಭಯ ನಾಯಕರು ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಕುರಿತು ಚರ್ಚಿಸಿದರು. ಉಕ್ರೇನ್‌ನಲ್ಲಿ ನಡೆಯುತ್ತಿರುವ ತಾಜಾ ಬೆಳವಣಿಗೆಯನ್ನೂ ಚರ್ಚೆ ಒಳಗೊಂಡಿತ್ತು’ ಎಂದು ವಿದೇಶಾಂಗ ಇಲಾಖೆಯು (ಎಂಇಎ) ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವುದಕ್ಕಾಗಿ ಉಭಯ ರಾಷ್ಟ್ರಗಳ ನಾಯಕರು ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು’ ಎಂದು ಎಂಇಎ ತಿಳಿಸಿದೆ.

‘ಪಹಲ್ಗಾಮ್‌– ಆತ್ಮಸಾಕ್ಷಿ ಮೇಲೆ ನಡೆದ ದಾಳಿ’

‘ಪಹಲ್ಗಾಮ್‌ ದಾಳಿಯು ದೇಶದ ಆತ್ಮಸಾಕ್ಷಿ ಮೇಲೆ ನಡೆದ ದಾಳಿಯಷ್ಟೇ ಅಲ್ಲ ಮಾನವೀಯತೆ ಮೇಲೆ ನಂಬಿಕೆ ಇಟ್ಟಿರುವ ಪ್ರತಿ ದೇಶಕ್ಕೂ ಎಸೆದ ಬಹಿರಂಗ ಸವಾಲಾಗಿದೆ’ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.  ‘ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಇಬ್ಬಗೆ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರ ಸಮ್ಮುಖದಲ್ಲಿಯೇ ಎಸ್‌ಸಿಒ ವಾರ್ಷಿಕ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಮೋದಿ ಭಯೋತ್ಪಾದನೆ ವಿರುದ್ಧ ಹೋರಾಡುವುದು ಮಾನವೀಯತೆಯ ಕರ್ತವ್ಯವಾಗಿದೆ’ ಎಂದು ತಿಳಿಸಿದ್ದಾರೆ.

ಪಾಕಿಸ್ತಾನ ಹಾಗೂ ಅದನ್ನು ಬೆಂಬಲಿಸುವವರಿಗೆ ಮೋದಿ ಈ ಮೂಲಕ ಸ್ಪಷ್ಟವಾದ ಸಂದೇಶ ರವಾನಿಸಿದ್ದಾರೆ.  ‘ಕೆಲವು ದೇಶಗಳು ಭಯೋತ್ಪಾದನೆಯನ್ನು ಮುಕ್ತವಾಗಿ ಬೆಂಬಲಿಸುತ್ತಿದ್ದು ಇದು ನಮಗೂ ಸಮ್ಮತವೇ ಎಂದು ಸಹಜ ಪ್ರಶ್ನೆ ಮೂಡುತ್ತದೆ. ಈ ವಿಚಾರದಲ್ಲಿ ನಾವೆಲ್ಲರೂ ಸ್ಪಷ್ಟ ಹಾಗೂ ಒಂದೇ ಧ್ವನಿ ಹೊಂದಿರಬೇಕು. ಭಯೋತ್ಪಾದನೆ ವಿಚಾರದಲ್ಲಿ ಇಬ್ಬಗೆ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಎಲ್ಲ ಮಾದರಿ ಹಾಗೂ ಸ್ವರೂಪದ  ಭಯೋತ್ಪಾದನೆಯನ್ನು ವಿರೋಧಿಸಬೇಕು. ಮಾನವೀಯತೆಯ ಕಡೆಗೆ ಇದು ನಮ್ಮ ಜವಾಬ್ದಾರಿಯೂ ಆಗಿದೆ’ ಎಂದು ಮೋದಿ ತಿಳಿಸಿದ್ದಾರೆ.

ಶೆಹಬಾಜ್‌ ಷರೀಫ್‌ ಎದುರೇ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಸದಸ್ಯ ರಾಷ್ಟ್ರಗಳ ಬೆಂಬಲ ಪಡೆದಿರುವುದು ಭಾರತಕ್ಕೆ ಸಿಕ್ಕ ಅತಿ ದೊಡ್ಡ ಗೆಲುವು ಎಂದು ವಿಶ್ಲೇಷಿಸಲಾಗಿದೆ.

ಎಸ್‌ಸಿಒ ಶೃಂಗಸಭೆಯ ಪ್ರಮುಖಾಂಶಗಳು

  • ಪಹಲ್ಗಾಮ್‌ ಭಯೋತ್ಪಾದಕರ ದಾಳಿ– ಸದಸ್ಯ ರಾಷ್ಟ್ರಗಳಿಂದಲೂ ಖಂಡನೆ

  • ಭಯೋತ್ಪಾದನೆ ವಿರುದ್ಧ ಹೋರಾಟ–ಭಾರತದ ವಾದ ಬೆಂಬಲಿಸಿದ ಸದಸ್ಯ ರಾಷ್ಟ್ರಗಳು

  • ದಾಳಿಯಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರಿಗೆ ಸಂತಾಪ ಸಲ್ಲಿಕೆ

  • ಗಾಜಾದ ಮೇಲೆ ಇಸ್ರೇಲ್‌ನ ಸೇನಾ ದಾಳಿಗೂ ಖಂಡನೆ

  • ದಾಳಿ ಎಸಗುವವರು ಬೆಂಬಲಿಸುವವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂಬ ಘೋಷಣೆ ಅಂಗೀಕಾರ

  • ಭಯೋತ್ಪಾದನೆ ವಿರುದ್ಧ ಹೋರಾಟ ಪ್ರತ್ಯೇಕತಾವಾದ ಹಾಗೂ ಉಗ್ರವಾದದ ವಿರುದ್ಧ ಹೋರಾಟಕ್ಕೆ ಸದಸ್ಯ ರಾಷ್ಟ್ರಗಳಿಂದ ಬದ್ಧತೆ

  • ಮುಂದಿನ ವರ್ಷದಿಂದ ಸದಸ್ಯ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ವಿದ್ಯಾರ್ಥಿವೇತನ

  • ಶೈಕ್ಷಣಿಕ ಕ್ಷೇತ್ರದ ಉನ್ನತ ಮಟ್ಟದ ಪ್ರತಿಭೆಗಳಿಗೆ ಪಿಎಚ್‌.ಡಿ. ಕಾರ್ಯಕ್ರಮ ಜಂಟಿ ತರಬೇತಿ *ಕೃತಕ ಬುದ್ಧಿಮತ್ತೆ ಸಹಕಾರ ಕೇಂದ್ರದ ಸ್ಥಾಪನೆ

ಪುಟಿನ್‌ ಕಾರಿನಲ್ಲಿ ಪ್ರಯಾಣಿಸಿದ ಮೋದಿ

ಪ್ರಧಾನಿ ಮೋದಿ ಇಲ್ಲಿ ನಡೆದ ಎಸ್‌ಸಿಒ ಶೃಂಗಸಭೆ ಬಳಿಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರಿಗೆ ಸೇರಿದ ‘ಔರಸ್‌’ ಕಾರಿನಲ್ಲಿ ಜೊತೆಯಾಗಿ ಪ್ರಯಾಣಿಸಿದರು.

‘ಉಭಯ ನಾಯಕರ ದ್ವಿಪಕ್ಷೀಯ ಮಾತುಕತೆ ನಡೆಯಬೇಕಿದ್ದ ಸ್ಥಳಕ್ಕೆ ಪ್ರಧಾನಿ ಮೋದಿ ಅವರನ್ನು ಕರೆದೊಯ್ಯುವುದಕ್ಕಾಗಿ ‍ಪುಟಿನ್‌ 10 ನಿಮಿಷ ಕಾದರು. ನಂತರ ಇಬ್ಬರೂ ಒಂದೇ ಕಾರಿನಲ್ಲಿ ಪ್ರಯಾಣಿಸಿ ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದರು. ಹೋಟೆಲ್‌ಗೆ ತಲುಪಿದ ಬಳಿಕವೂ ಕಾರಿನಲ್ಲೇ ಕುಳಿತು ಸುಮಾರು 50 ನಿಮಿಷ ಮಾತುಕತೆ ನಡೆಸಿದರು’ ಎಂದು ರಷ್ಯಾದ ರಾಷ್ಟ್ರೀಯ ರೇಡಿಯೊ ಸ್ಟೇಷನ್‌ ‘ವೆಸ್ಟಿ–ಎಫ್‌ಎಂ’ ವರದಿ ಮಾಡಿದೆ.

‘ಉಭಯ ನಾಯಕರು ಕಾರಿನಲ್ಲೇ ಕುಳಿತು ಸುಮಾರು ಒಂದು ತಾಸು ಖಾಸಗಿ ಸಂಭಾಷಣೆ ನಡೆಸಿದರು’ ಎಂದು ಕ್ರೆಮ್ಲಿನ್‌ನ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಹೇಳಿಕೆ ನೀಡಿದ್ದಾರೆ. ಕಾರಿನಲ್ಲಿ ಪುಟಿನ್‌ ಜೊತೆಗಿರುವ ಚಿತ್ರವನ್ನು ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಎಸ್‌ಸಿಒ ಶೃಂಗಸಭೆಯ ನಂತರ ಪುಟಿನ್‌ ಹಾಗೂ ನಾನು ಒಟ್ಟಾಗಿ ಪ್ರಯಾಣಿಸಿದೆವು. ಅವರೊಂದಿಗಿನ ದ್ವಿಪಕ್ಷೀಯ ಸಭೆಯು ಯಾವಾಗಲೂ ಒಳನೋಟದ್ದಾಗಿರುತ್ತದೆ’ ಎಂದು ಮೋದಿ ಹೇಳಿದ್ದಾರೆ. ‘ಇಬ್ಬರ ನಡುವೆ ಅತ್ಯಂತ ಗೌಪ್ಯ ಸಂಭಾಷಣೆ ನಡೆದಿದ್ದು ಬೇರೆಯವರ ಕಿವಿಗೆ ಕೇಳಿಸಬಾರದು ಎಂಬ ಕಾರಣಕ್ಕೆ ಕಾರಿನಲ್ಲಿ ಚರ್ಚೆ ನಡೆಸಿರುವ ಸಾಧ್ಯತೆಯಿದೆ’ ಎಂದು ಮಾಸ್ಕೊ ರಾಜನೀತಿ ತಜ್ಞರು ವ್ಯಾಖ್ಯಾನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.