ADVERTISEMENT

‘ಕರ್ತಾರ್‌ಪುರ: ಯಾತ್ರಿಯಾಗಿ ಮನಮೋಹನ್‌ ಸಿಂಗ್‌ ಭಾಗಿ?’

ಕಾರಿಡಾರ್‌ಗೆ ನ.9ರಂದು ಚಾಲನೆ: ಇಮ್ರಾನ್ ಖಾನ್

ಪಿಟಿಐ
Published 20 ಅಕ್ಟೋಬರ್ 2019, 20:00 IST
Last Updated 20 ಅಕ್ಟೋಬರ್ 2019, 20:00 IST
ಮನಮೋಹನ್‌ ಸಿಂಗ್‌
ಮನಮೋಹನ್‌ ಸಿಂಗ್‌   

ನವದೆಹಲಿ/ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿನ ಕರ್ತಾರ್‌ಪುರ ಕಾರಿಡಾರ್‌ ಉದ್ಘಾಟನಾ ಸಮಾರಂಭದ ಅಧಿಕೃತ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಅವರು ಅತಿಥಿಯಾಗಿ ಭಾಗವಹಿಸುವುದಿಲ್ಲ. ಆದರೆ, ಸಾಮಾನ್ಯ ಸಿಖ್ ಯಾತ್ರಾರ್ಥಿಯಾಗಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಸಿಂಗ್ ಅವರ ಆಪ್ತಮೂಲಗಳು ಭಾನುವಾರ ತಿಳಿಸಿವೆ.

ಪಾಕಿಸ್ತಾನದ ವಿದೇಶಾಂಗ ಸಚಿವಷಾ ಮಹಮೂದ್ ಖುರೇಷಿ ಅವರು, ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿಂಗ್ ಅವರು ನನ್ನ ಆಹ್ವಾನ ಒಪ್ಪಿಕೊಂಡಿದ್ದು, ನ. 9ರಂದು ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳುವ ಬದಲು ಸಾಮಾನ್ಯ ಪ್ರಜೆಯಾಗಿ ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದ್ದಾಗಿ ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನದ ಅಧಿಕಾರಿಗಳು ಕಾರಿಡಾರ್ ಉದ್ಘಾಟನೆಗೆ ಕಳುಹಿಸಿದ ಆಹ್ವಾನಕ್ಕೆ ಪ್ರತಿಯಾಗಿ ಬರೆದ ಪತ್ರದಲ್ಲಿ ಸಿಂಗ್ ಅವರು, ‘ಉದ್ಘಾಟನೆಯ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಔಪಚಾರಿಕವಾಗಿ ಭಾಗವಹಿಸುವುದಿಲ್ಲ. ಆದರೆ, ಐತಿಹಾಸಿಕ ದೇಗುಲ ದರ್ಶನಕ್ಕೆ ಸಾಮಾನ್ಯ ಯಾತ್ರಾರ್ಥಿಯಾಗಿ ಭೇಟಿ ನೀಡುವುದಾಗಿ ಹೇಳಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮನಮೋಹನ್ ಸಿಂಗ್ ಅವರು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನೇತೃತ್ವದ ಸರ್ವಪಕ್ಷಗಳ ಸಿಖ್ ಜಾಥಾದ ನಿಯೋಗದ ಭಾಗವಾಗಿ, ದೇಗುಲಕ್ಕೆ ಭೇಟಿ ನೀಡಲಿದ್ದು, ಅಂದೇ ಹಿಂತಿರುಗಲಿದ್ದಾರೆ ಎನ್ನಲಾಗಿದೆ.

ನ. 9ಕ್ಕೆ ಉದ್ಘಾಟನೆ: ಪಾಕಿಸ್ತಾನದ ಬಹುನಿರೀಕ್ಷಿತ ಕರ್ತಾರ್‌ಪುರ ಕಾರಿಡಾರ್ ನವೆಂಬರ್ 9ರಂದು ಉದ್ಘಾಟನೆಯಾಗಲಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾನುವಾರ ಹೇಳಿದ್ದಾರೆ.

‘ಪಾಕಿಸ್ತಾನವು ಜಗತ್ತಿನೆಲ್ಲೆಡೆಯಿಂದ ಸಿಖ್ಖರಿಗೆ ಬಾಗಿಲು ತೆರೆಯಲು ಸಜ್ಜಾಗಿದೆ’ ಎಂದು ಅವರು ಭಾನುವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರತಿದಿನ ಐದು ಸಾವಿರ ಭಾರತೀಯ ಸಿಖ್ಖರು ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡಲು ಅನುಕೂಲ ಕಲ್ಪಿಸಲಾಗಿದೆ ಎಂದು ಪಾಕ್ ವಿದೇಶಾಂಗ ಸಚಿವ ಖುರೇಷಿ ಮಾಹಿತಿ ನೀಡಿದ್ದಾರೆ.

ಕರ್ತಾರ್‌ಪುರದಲ್ಲಿರುವ ದರ್ಬಾರ್ ಸಾಹಿಬ್‌ ಮತ್ತು ಪಂಜಾಬ್‌ನ ಗುರುದಾಸ್‌ಪುರ್‌ ಜಿಲ್ಲೆಯಲ್ಲಿರುವ ಡೇರಾ ಬಾಬಾ ನಾನಕ್ ದೇಗುಲಕ್ಕೆ ಕಾರಿಡಾರ್‌ ಸಂಪರ್ಕ ಕಲ್ಪಿಸುತ್ತದೆ. ಈ ಕಾರಿಡಾರ್ ಭಾರತೀಯ ಯಾತ್ರಿಕರ ವೀಸಾ ಮುಕ್ತ ಸಂಚಾರಕ್ಕೆ ಅನುಕೂಲವಾಗಲಿದೆ.

ಪಾಕಿಸ್ತಾನವು ಭಾರತದ ಗಡಿಯಿಂದ ಕರ್ತಾರ್‌ಪುರದ ಗುರುದ್ವಾರ ದರ್ಬಾರ್ ಸಾಹಿಬ್‌ ವರೆಗೆ ಕಾರಿಡಾರ್ ನಿರ್ಮಿಸುತ್ತಿದೆ. ಅಂತೆಯೇ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್‌ ದೇಗುಲದಿಂದ ಪಾಕಿಸ್ತಾನದ ಗಡಿ ಭಾಗದವರೆಗೆ ಭಾರತವು ಕಾರಿಡಾರ್ ನಿರ್ಮಿಸುತ್ತಿದೆ.

ಆರಂಭವಾಗದ ಆನ್‌ಲೈನ್ ನೋಂದಣಿ

ಕರ್ತಾರ್‌ಪುರ ಯಾತ್ರೆಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕೆಲ ವಿಷಯಗಳು ಇತ್ಯರ್ಥವಾಗದೇ ಇರುವುದರಿಂದ ಭಾನುವಾರ ಯಾತ್ರಾರ್ಥಿಗಳ ಆನ್‌ಲೈನ್ ನೋಂದಣಿ ಆರಂಭವಾಗಲಿಲ್ಲ.

ಪಾಕಿಸ್ತಾನವು ಆನ್‌ಲೈನ್ ನೋಂದಣಿಗೆ ₹1,400 (20 ಡಾಲರ್ ) ಶುಲ್ಕ ವಿಧಿಸಿರುವುದು ಮತ್ತು ಯಾತ್ರಾರ್ಥಿಗಳ ಪ್ರವೇಶ ಮತ್ತು ನಿರ್ಗಮನದ ವೇಳೆ ಸೇರಿದಂತೆ ಉಭಯ ದೇಶಗಳ ನಡುವೆ ಇದುವರೆಗೆ ಸಮಸ್ಯೆಗಳು ಬಗೆಹರಿದಿಲ್ಲ ಎಂದು ಮೂಲಗಳು ತಿಳಿಸಿವೆ.

ಯಾತ್ರಾರ್ಥಿಗಳಿಗೆ 20 ಡಾಲರ್ ಶುಲ್ಕ ವಿಧಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಪ್ರತಿದಿನ ಭೇಟಿ ನೀಡುವ 10 ಸಾವಿರ ಯಾತ್ರಾರ್ಥಿಗಳ ನಿಯೋಗದ ಜೊತೆ ಶಿಷ್ಟಾಚಾರದ ಪ್ರಕಾರ ಭಾರತೀಯ ಅಧಿಕಾರಿಗೆ ಅನುಮತಿ ನೀಡುವಂತೆ ಭಾರತವು, ಪಾಕಿಸ್ತಾನವನ್ನು ಕೇಳಿಕೊಂಡಿತ್ತು. ಆದರೆ, ಇದುವರೆಗೆ ಭಾರತದ ಮನವಿಗೆ ಪಾಕಿಸ್ತಾನ ಸ್ಪಂದಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.