ADVERTISEMENT

ಕಾಳ್ಗಿಚ್ಚು: ಸುಟ್ಟು ಭಸ್ಮವಾದ ಹಾಲಿವುಡ್ ನಟನಟಿಯರ ಮನೆಗಳು; ಕಣ್ಣೀರಿಟ್ಟ ತಾರೆಯರು

ಏಜೆನ್ಸೀಸ್
Published 10 ಜನವರಿ 2025, 4:27 IST
Last Updated 10 ಜನವರಿ 2025, 4:27 IST
<div class="paragraphs"><p>ಕಾಳ್ಗಿಚ್ಚು</p></div>

ಕಾಳ್ಗಿಚ್ಚು

   

ಲಾಸ್‌ ಏಂಜಲೀಸ್‌: ಅಮೆರಿಕದ ಲಾಸ್‌ ಏಂಜಲೀಸ್‌ ಪ್ರದೇಶ ವ್ಯಾಪ್ತಿಯಲ್ಲಿ ಉಂಟಾಗಿರುವ ಕಾಳ್ಗಿಚ್ಚು ನಂದಿಸಲು ಅಗ್ನಿಶಾಮಕ ದಳದ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ಕಾಳ್ಗಿಚ್ಚಿನಿಂದಾಗಿ 8 ಜನರು ಮೃತಪಟ್ಟಿದ್ದು ಸಾವಿರಾರು ಜನರ ಮನೆ ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಕಾಳ್ಗಿಚ್ಚು ನಂದಿಸಲು ನೀರಿನ ಕೊರತೆ ಇರುವುದಾಗಿ ಸ್ಥಳೀಯ ಸರ್ಕಾರಗಳು ತಿಳಿಸಿವೆ.

ADVERTISEMENT

ಪೆಸಿಫಿಕ್‌ ಪ್ಯಾಲಿಸೈಡ್ಸ್‌, ಪ್ಯಾಸಡೀನಾದ ಈಟನ್‌ ಕೆಯಾನ್‌. ಹಾಲಿವುಡ್‌ ಹಿಲ್ಸ್‌, ಲಿಡಿಯಾ ಪ್ರದೇಶ ವ್ಯಾಪ್ತಿಯಲ್ಲಿ ಗುರುವಾರ ಕಾಳ್ಗಿಚ್ಚು ಹೊತ್ತಿಕೊಂಡಿದೆ. ಇದರ ಪರಿಣಾಮ ಹಾಲಿವುಡ್‌ ಹಿಲ್ಸ್‌ನಲ್ಲಿ ನೆಲೆಸಿರುವ ಕೋಟಿ ಕೋಟಿ ವೆಚ್ಚದ ಹಾಲಿವುಡ್‌ನ ಹಲವು ಸಿನಿ ತಾರೆಯರ ಮನೆಗಳು ಸುಟ್ಟು ಭಸ್ಮವಾಗಿವೆ. ನೂರಾರು ಸಿನಿ ತಾರೆಯರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಹಾಗೇ ಹಾಲಿವುಡ್‌ ಸಿನಿ ರಂಗದ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ.

ಯಾವ ಯಾವ ಸಿನಿಮಾ ತಾರೆಯರ ಮನೆಗಳು ಸುಟ್ಟು ಭಸ್ಮವಾಗಿವೆ ಎಂಬುದರ ಮಾಹಿತಿ ಇಲ್ಲಿದೆ...

ಪ್ಯಾರಿಸ್ ಹಿಲ್ಟನ್...

ಹೊಟೇಲ್‌ ಉದ್ಯಮಿಯು ಆಗಿರುವ ನಟ ಪ್ಯಾರಿಸ್ ಹಿಲ್ಟನ್ ಅವರ ಮನೆ ಕಾಳ್ಗಿಚ್ಚಿಗೆ ಆಹುತಿಯಾಗಿದೆ. ಮ್ಯಾಲಿಬು ಸಮುದ್ರದ ಸಮೀಪ ಅವರ ಮನೆ ಇತ್ತು. ತಮ್ಮ ಮನೆ ಬೆಂಕಿಗೆ ಆಹುತಿಯಾಗಿದೆ ಎಂದು ಪ್ಯಾರಿಸ್ ಹಿಲ್ಟನ್ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ. ಸದ್ಯ ಅವರ ಕುಟುಂಬ ಹೊಟೇಲ್‌ನಲ್ಲಿ ತಂಗಿದೆ.

ಆ್ಯಂಟನಿ ಹಾಪ್ಕಿನ್ಸ್..

ಆಸ್ಕರ್ ವಿಜೇತ ನಟ ಆ್ಯಂಟನಿ ಹಾಪ್ಕಿನ್ಸ್ ಅವರ ಐಷಾರಾಮಿ ಮನೆ ಬೆಂಕಿಗೆ ಆಹುತಿಯಾಗಿದೆ ಎಂದು ವರದಿಯಾಗಿದೆ. 87 ವರ್ಷದ ಹಾಪ್ಕಿನ್ಸ್ ಅವರ ಆಸ್ತಿ–ಪಾಸ್ತಿ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಬಗ್ಗೆ ಹಾಪ್ಕಿನ್ಸ್ ಯಾವುದೇ ಸಾರ್ವಜನಿಕ ಹೇಳಿಕೆ ನೀಡಿಲ್ಲ. ಇವರು ನಟಿಸಿದ್ದ ‘ದಿ ಸೈಲೆನ್ಸ್ ಆಫ್ ದಿ ಲ್ಯಾಂಬ್ಸ್‘ ಸಿನಿಮಾ ಹಾಲಿವುಡ್‌ನಲ್ಲಿ ಜನಪ್ರಿಯತೆ ಪಡೆದಿತ್ತು.

 ಜೆಫ್ ಜೆಫ್ ಬ್ರಿಡ್ಜಸ್..

ಮತ್ತೊಬ್ಬ ಆಸ್ಕರ್ ವಿಜೇತ ನಟ ಜೆಫ್ ಬ್ರಿಡ್ಜಸ್ ಕೂಡ ಮ್ಯಾಲಿಬು ಪ್ರದೇಶದಲ್ಲಿದ್ದ ತಮ್ಮ ಮನೆಯನ್ನು ಕಳೆದುಕೊಂಡಿದ್ದಾರೆ ಎಂದು ಮನರಂಜನಾ ಸುದ್ದಿ ತಾಣ ಟಿಎಂಝೆಡ್‌ ವರದಿ ಮಾಡಿದೆ.

 ಬಿಲ್ಲಿ ಕ್ರಿಸ್ಟಲ್...

ಇಲ್ಲಿ 46 ವರ್ಷಗಳಿಂದ ವಾಸಿಸುತ್ತಿದ್ದ ನಮ್ಮ ಮನೆ ನಾಶವಾಗಿದೆ, ಕೇವಲ ಟೆನಿಸ್ ಕೋರ್ಟ್ ಮಾತ್ರ ಉಳಿದಿದೆ ಎಂದು ನಟ ಬಿಲ್ಲಿ ಕ್ರಿಸ್ಟಲ್ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸದ್ಯ 76 ವರ್ಷದ ಕ್ರಿಸ್ಟಲ್ ತಮ್ಮ ಪತ್ನಿ ಜಾನಿಸ್ ಜೊತೆ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದಾರೆ.

ಯುಜಿನ್ ಲೆವಿ -

ಜನಪ್ರಿಯ ಸಿನಿಮಾ ‘ಅಮೆರಿಕನ್ ಪೈ‘ ನಟ ಯುಜಿನ್ ಲೆವಿ ಅವರ ಮನೆ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ಅಮೆರಿಕನ್ ಮಾಧ್ಯಮಗಳು ವರದಿ ಮಾಡಿವೆ. ಲೆವಿ ಅವರು ತಮ್ಮ ಕುಟುಂಬದವರ ಜೊತೆ ಸುರಕ್ಷಿತ ಸ್ಥಳಕ್ಕೆ ಹೋಗಿದ್ದಾರೆ ಎಂದು ಲಾಸ್ ಏಂಜಲೀಸ್ ಟೈಮ್ಸ್‌ ವರದಿ ಮಾಡಿದೆ.

ಜಾನ್ ಗುಡ್‌ಮನ್...

‘ರೋಸಾನ್‘ ಸಿನಿಮಾದ ನಟ ಜಾನ್ ಗುಡ್‌ಮನ್ ಅವರ ಮನೆ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ಪೀಪಲ್ ಮ್ಯಾಗಜೀನ್ ವರದಿ ಮಾಡಿದ್ದು ಸುಟ್ಟು ಹೋದ ಮನೆಯ ಚಿತ್ರಗಳನ್ನು ಹಂಚಿಕೊಂಡಿದೆ. ಆದರೆ ಗುಡ್‌ಮನ್ ತಮ್ಮ ಆಸ್ತಿ ನಾಶದ ಬಗ್ಗೆ ಯಾವುದೇ ಸಾರ್ವಜನಿಕ ಹೇಳಿಕೆ ನೀಡಿಲ್ಲ.

ಮಾರ್ಕ್ ಹ್ಯಾಮಿಲ್...

‘ಸ್ಟಾರ್ ವಾರ್ಸ್‘ ಚಿತ್ರದ ನಟ ಮಾರ್ಕ್ ಹ್ಯಾಮಿಲ್ ತಮ್ಮ ಪತ್ನಿ ಹಾಗೂ ಸಾಕು ನಾಯಿಗಳೊಂದಿಗೆ ಮನೆ ಬಿಟ್ಟು ತೆರಳಿದ್ದಾರೆ ಎಂದು ಅವರ ಗೆಳೆಯರು ಹೇಳಿದ್ದಾರೆ. 73 ವರ್ಷದ ಹ್ಯಾಮಿಲ್ ತಮ್ಮ ಮನೆ ನಾಶವಾದ ಬಗ್ಗೆ ದೃಢಪಡಿಸಿಲ್ಲ ಆದರೆ ನಾವು ನಮ್ಮ ಜೀವ ಉಳಿಸಿಕೊಳ್ಳು ಬೇರೆ ಕಡೆ ಹೋಗುತ್ತಿದ್ದೆವೆ ಎಂದು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿದ್ದಾರೆ.

ಜೆನ್ನಿಫರ್ ಗ್ರೆ...

‘ಡರ್ಟಿ ಡ್ಯಾನ್ಸಿಂಗ್‘ ನಟಿ ಜೆನ್ನಿಫರ್ ಗ್ರೆ ಅವರ ಮನೆ ಬೆಂಕಿಗೆ ಆಹುತಿಯಾಗಿದೆ ಎಂದು ಅವರ ಮಗಳು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ನಿನ್ನೆ ರಾತ್ರಿ ನನ್ನ ತಾಯಿಯ ಮನೆ ಸಂಪೂರ್ಣವಾಗಿ ಸುಟ್ಟುಹೋಯಿತು, ಜೆನ್ನಿಫರ್ ಗ್ರೆ ಸುರಕ್ಷಿತವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

- ಕ್ಯಾರಿ ಎಲ್ವೆಸ್ -

"ದಿ ಪ್ರಿನ್ಸೆಸ್ ಬ್ರೈಡ್" ನಟ ಕ್ಯಾರಿ ಎಲ್ವೆಸ್ ತಮ್ಮ ಮನೆ ನಾಶವಾದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ. 62 ವರ್ಷದ ಎಲ್ವೆಸ್ ಲಾಸ್ ಏಂಜಲೀಸ್ ಬೆಟ್ಟಗಳ ಮೂಲಕ ಹೋಗುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಆ್ಯಡಂ ಬ್ರೋಡಿ...

ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತ ನಟ ಆ್ಯಡಂ ಬ್ರೋಡಿ ಅವರು ಪೆಸಿಫಿಕ್‌ ಪ್ಯಾಲಿಸೈಡ್ಸ್‌ನಲ್ಲಿದ್ದ ತಮ್ಮ ಮನೆಯನ್ನು ಕಳೆದುಕೊಂಡಿದ್ದಾರೆ ಎಂದು ಪೀಪಲ್ ಮ್ಯಾಗಜೀನ್ ವರದಿ ಮಾಡಿದೆ. ಸುಟ್ಟು ಹೋದ ಮನೆಯ ಚಿತ್ರಗಳನ್ನು ಪೀಪಲ್ ಮ್ಯಾಗಜೀನ್ ಪ್ರಕಟಿಸಿದೆ.

ಮೈಲ್ಸ್ ಟೆಲ್ಲರ್...

ನಟ ಮೈಲ್ಸ್ ಟೆಲ್ಲರ್, ಪತ್ನಿ ಕೆಲೀಫ್‌ ಟೆಲ್ಲರ್ ಅವರಿದ್ದ ಮನೆಯೂ ಬೆಂಕಿಗೆ ಆಹುತಿಯಾಗಿದೆ ಎಂದು ಪೀಪಲ್ ಮ್ಯಾಗಜೀನ್ ತಿಳಿಸಿದೆ. ಈ ಬಗ್ಗೆ ಟೆಲ್ಲರ್ ದಂಪತಿ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡಿಲ್ಲ.

ಜೆಮ್ಸ್ ವುಡ್‌...

ಎಮ್ಮಿ ಪುರಸ್ಕಾರ ಪಡೆದಿದ್ದ ನಟ ಜೆಮ್ಸ್ ವುಡ್‌ ಪೆಸಿಫಿಕ್‌ ಪ್ಯಾಲಿಸೈಡ್ಸ್‌ನಲ್ಲಿದ್ದ ತಮ್ಮ ಮನೆಯನ್ನು ಕಳೆದುಕೊಂಡಿದ್ದಾರೆ. ನಿವಾಸದ ಸಮೀಪದಲ್ಲಿರುವ ಗಿಡ ಮರಗಳು ಹೊತ್ತ ಉರಿಯುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಪ್ರೀತಿಯ ಮನೆಯನ್ನು ಕಳೆದುಕೊಂಡೆ ಎಂದು 77 ವರ್ಷದ ವುಡ್‌ ಕಂಬನಿ ಮಿಡಿದಿದ್ದಾರೆ.

ಜೆಮಿ ಲೀ ಕರ್ಟಿಸ್...

ನಮ್ಮ ಮನೆಯ ಅಕ್ಕ ಪಕ್ಕದವರು ಆಸ್ತಿ–ಪಾಸ್ತಿಯನ್ನು ಕಳೆದುಕೊಂಡಿದ್ದಾರೆ. ಆದರೆ ನಮ್ಮ ಮನೆ ಸುರಕ್ಷಿತವಾಗಿದೆ. ಸಂತ್ರಸ್ತರಿಗೆ ನೂರು ಕೋಟಿ ನೀಡುವುದಾಗಿ ಆಸ್ಕರ್ ವಿಜೇತ ಲೀ ಕರ್ಟಿಸ್ ಹೇಳಿದ್ದಾರೆ. ಸದ್ಯ ಅವರು ಸುರಕ್ಷಿತ ಸ್ಥಳದಲ್ಲಿ ನೆಲೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.