ವೊಲೊಡಿಮಿರ್ ಝೆಲೆನ್‌ಸ್ಕಿ, ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ವಾಷಿಂಗ್ಟನ್: ರಷ್ಯಾ ಹಾಗೂ ಉಕ್ರೇನ್ ನಡುವಣ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ನಡುವಣ ಮುಖಾಮುಖಿ ಭೇಟಿಗೆ ವ್ಯವಸ್ಥೆ ಆರಂಭಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹಾಗೂ ಐರೋಪ್ಯ ಒಕ್ಕೂಟದ ನಾಯಕರ ಜತೆ ಶ್ವೇತಭವನದಲ್ಲಿ ನಡೆದ ಮಹತ್ವದ ಸಭೆಯ ಬಳಿಕ ಸಾಮಾಜಿಕ ಮಾಧ್ಯಮ 'ಟ್ರುಥ್'ನಲ್ಲಿ ಈ ಕುರಿತು ಟ್ರಂಪ್ ಮಾಹಿತಿ ನೀಡಿದ್ದಾರೆ.
'ಸಭೆಯ ಬಳಿಕ ನಾನು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಕರೆ ಮಾಡಿದ್ದೇನೆ. ಪುಟಿನ್ ಹಾಗೂ ಝೆಲೆನ್‌ಸ್ಕಿ ನಡುವಣ ಮಾತುಕತೆಗಾಗಿ ವ್ಯವಸ್ಥೆ ಮಾಡಲು ಸಿದ್ಧತೆ ಆರಂಭಿಸಿದ್ದೇನೆ. ಸ್ಥಳ ಇನ್ನಷ್ಟೇ ನಿಗದಿಯಾಗಬೇಕಿದೆ. ಆ ಸಭೆ ನಡೆದ ಬಳಿಕ ಉಭಯ ರಾಷ್ಟ್ರಗಳ ಅಧ್ಯಕ್ಷರು ಹಾಗೂ ನಾನು ಸೇರಿದಂತೆ ತ್ರಿಪಕ್ಷೀಯ ಮಾತುಕತೆ ನಡೆಯಲಿದೆ' ಎಂದು ತಿಳಿಸಿದ್ದಾರೆ.
'ಸುಮಾರು ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಯುದ್ಧ ಕೊನೆಗಾಣಿಸಲು ಇದೊಂದು ಉತ್ತಮ ಬೆಳವಣಿಗೆಯಾಗಿದೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರು ರಷ್ಯಾ ಮತ್ತು ಉಕ್ರೇನ್ ದೇಶದೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಉಕ್ರೇನ್ ಅಧ್ಯಕ್ಷ ಹಾಗೂ ಐರೋಪ್ಯ ಒಕ್ಕೂಟದ ನಾಯಕರ ಜತೆಗೆ ಶ್ವೇತಭವನದಲ್ಲಿ ನಡೆದ ಮಾತುಕತೆ ಫಲಪ್ರದದಾಯಕವಾಗಿತ್ತು ಎಂದು ಟ್ರಂಪ್ ತಿಳಿಸಿದ್ದಾರೆ.
'ಸಭೆಯಲ್ಲಿ ಐರೋಪ್ಯ ಒಕ್ಕೂಟ ಹಾಗೂ ಅಮೆರಿಕ ಒದಗಿಸುತ್ತಿರುವ ಉಕ್ರೇನ್‌ನ ಭದ್ರತೆ ಗ್ಯಾರಂಟಿಯ ಕುರಿತು ಚರ್ಚಿಸಲಾಯಿತು. ರಷ್ಯಾ/ಉಕ್ರೇನ್ ನಡುವೆ ಶಾಂತಿ ಸ್ಥಾಪಿಸಲು ಸಾಧ್ಯತೆ ಬಗ್ಗೆ ಎಲ್ಲರೂ ಸಂತೋಷವಾಗಿದ್ದಾರೆ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.