ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ಇಸ್ತಾಂಬುಲ್: ಎರಡನೇ ಮಹಾಯುದ್ಧದ ನಂತರ ಯುರೋಪಿನ ಅತ್ಯಂತ ಭೀಕರ ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡಕ್ಕೆ ಮಣಿದಿರುವ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು 3 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಶಾಂತಿ ಮಾತುಕತೆ ನಡೆಸಲಿದ್ದಾರೆ.
ಇಂದು (ಶುಕ್ರವಾರ) ಸಂಜೆ ಟರ್ಕಿ, ಅಮೆರಿಕ ಮತ್ತು ಉಕ್ರೇನ್ ಅಧಿಕಾರಿಗಳ ನಡುವೆ ಸಭೆ ನಡೆಯಲಿದೆ. ಇದಾದ ಬಳಿಕ ಟರ್ಕಿ, ರಷ್ಯಾ ಮತ್ತು ಉಕ್ರೇನ್ ನಿಯೋಗಗಳ ನಡುವೆ ಮಾತುಕತೆ ನಡೆಯಲಿದೆ ಎಂದು ಟರ್ಕಿ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಯುದ್ಧವನ್ನು ಕೊನೆಗೊಳಿಸುವ ಸಲುವಾಗಿ ಮಾತುಕತೆ ನಡೆಸಲು ಇಸ್ತಾನ್‌ಬುಲ್‌ನಲ್ಲಿ ಪುಟಿನ್ ಅವರನ್ನು ಭೇಟಿ ಮಾಡಲು ಸಿದ್ಧ ಎಂದು ಈಚೆಗೆ ಝೆಲೆನ್‌ಸ್ಕಿ ಹೇಳಿದ್ದರು. ಪ್ರಸ್ತಾವಿತ ಉಕ್ರೇನ್-ರಷ್ಯಾ ಶಾಂತಿ ಮಾತುಕತೆಯಲ್ಲಿ ಪಾಲ್ಗೊಳ್ಳಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಮುಂದಾಗಿದ್ದಾರೆ. ಮಾತುಕತೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸಂಬಂಧಿಸಿದಂತೆ ರಷ್ಯಾ ಹೆಚ್ಚಿನ ವಿವರಗಳನ್ನು ಬಿಟ್ಟುಕೊಟ್ಟಿಲ್ಲ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಮಾತುಕತೆಯ ವೇಳೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಮಾತ್ರ ಭೇಟಿಯಾಗಲಿದ್ದಾರೆ. ರಷ್ಯಾದ ನಿಯೋಗದಲ್ಲಿರುವ ಇತರ ಸದಸ್ಯರನ್ನು ಭೇಟಿಯಾಗುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷರ ಸಲಹೆಗಾರರು ತಿಳಿಸಿದ್ದರು.
ಉಕ್ರೇನ್– ರಷ್ಯಾ ನಡುವಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ಉಭಯ ದೇಶಗಳ ನಿಯೋಗಗಳು ಗುರುವಾರ ಟರ್ಕಿಗೆ ಬಂದಿಳಿದಿವೆ. ಆದರೆ, ಮಾತುಕತೆ ವೇಳೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಪರಸ್ಪರ ಭೇಟಿಯಾಗುವ ನಿರೀಕ್ಷೆ ಹುಸಿಯಾಗಿದೆ. ಝೆಲೆನ್‌ಸ್ಕಿ ಅವರು ಗುರುವಾರ ಟರ್ಕಿಗೆ ಬಂದಿಳಿದರೂ, ಮಾತುಕತೆ ನಡೆಸಲಿರುವ ರಷ್ಯಾದ ನಿಯೋಗದ ಜತೆ ಪುಟಿನ್ ಬಂದಿಲ್ಲ.
ಉಕ್ರೇನ್‌ನೊಂದಿಗೆ ಶಾಂತಿ ಮಾತುಕತೆಗಾಗಿ ಸರ್ಕಾರದ ಕೆಳಹಂತದ ಅಧಿಕಾರಿಗಳನ್ನೊಳಗೊಂಡ ರಷ್ಯಾದ ನಿಯೋಗ ಇಸ್ತಾಂಬುಲ್‌ಗೆ ಆಗಮಿಸಿದೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಜಖರೋವಾ ಗುರುವಾರ ತಿಳಿಸಿದ್ದಾರೆ. ಝೆಲೆನ್‌ಸ್ಕಿ ನೇತೃತ್ವದ ಉಕ್ರೇನ್‌ನ ನಿಯೋಗ ಟರ್ಕಿಯ ರಾಜಧಾನಿ ಅಂಕಾರಾಗೆ ಬಂದಿಳಿಯಿತು.
ತನ್ನ ನಿಯೋಗದಲ್ಲಿರುವ ಅಧಿಕಾರಿಗಳ ಹೆಸರುಗಳನ್ನು ರಷ್ಯಾ ಬುಧವಾರ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಪುಟಿನ್ ಹೆಸರು ಇರಲಿಲ್ಲ. ರಷ್ಯಾ, ಶಾಂತಿ ಮಾತುಕತೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಟೀಕೆಯೂ ಕೇಳಿಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.