ADVERTISEMENT

ಪಾಕ್–ಅಫ್ಗಾನ್‌ ಸಂಘರ್ಷ |ಸಂಯಮ ಕಾಪಾಡಿಕೊಳ್ಳಿ: ಉಭಯ ದೇಶಗಳಿಗೆ ರಷ್ಯಾ, ಚೀನಾ ಸಲಹೆ

ಪಿಟಿಐ
Published 27 ಫೆಬ್ರುವರಿ 2026, 19:23 IST
Last Updated 27 ಫೆಬ್ರುವರಿ 2026, 19:23 IST
   

ಬೀಜಿಂಗ್‌/ಮಾಸ್ಕೊ: ಉಭಯ ದೇಶಗಳು ಸಂಯಮ ಕಾಪಾಡಿಕೊಳ್ಳಬೇಕು. ಮಾತುಕತೆ ಮೂಲಕ ಸಂಘರ್ಷ ಶಮನಕ್ಕೆ ಯತ್ನಿಸಬೇಕು ಎಂದು ರಷ್ಯಾ ಹಾಗೂ ಚೀನಾ ಸಲಹೆ ನೀಡಿವೆ. ‘ಎರಡು ರಾಷ್ಟ್ರಗಳ ನಡುವಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದೇವೆ’ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರೆ ಮಾವೊ ನಿಂಗ್‌ ತಿಳಿಸಿದ್ದಾರೆ.

‘ಪಾಕಿಸ್ತಾನ ಹಾಗೂ ಅಪ್ಗಾನಿಸ್ತಾನವು ನಿಕಟ ನೆರೆಹೊರೆಯವರು. ಚೀನಾಕ್ಕೂ ನೆರೆಹೊರೆಯವರಾಗಿದ್ದು ಹಾಗೂ ಸ್ನೇಹಿತರೇ ಆಗಿದ್ದಾರೆ. ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಸಂಘರ್ಷ ಹಾಗೂ ಸಾವು–ನೋವಿನ ಕುರಿತಂತೆ ಚೀನಾವು ತೀವ್ರ ಕಳವಳ ಹೊಂದಿದೆ’ ಎಂದು ಹೇಳಿದ್ದಾರೆ.

‘ಎಲ್ಲಾ ಮಾದರಿಯ ಭಯೋತ್ಪಾದನೆ ನಿಗ್ರಹವನ್ನು ಚೀನಾ ಬೆಂಬಲಿಸುತ್ತದೆ. ಎರಡು ರಾಷ್ಟ್ರಗಳು ಮಾತುಕತೆಯ ಮೂಲಕ ಆದಷ್ಟು ಬೇಗ ಕದನ ವಿರಾಮ ಘೋಷಿಸುವ ಮೂಲಕ ಪ್ರಾಣ ಹಾನಿ ತಪ್ಪಿಸಬೇಕು’ ಎಂದು ಈ ವೇಳೆ ಕರೆ ನೀಡಿದ್ದಾರೆ. 

ADVERTISEMENT

ಯುದ್ಧ ನಿಲ್ಲಿಸಿ ಮಾತುಕತೆ ನಡೆಸಿ: ‘ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನವು ಸಂಘರ್ಷವನ್ನು ಕೊನೆಗೊಳಿಸಿ ರಾಜತಾಂತ್ರಿಕ ಮಾರ್ಗದ ಮೂಲಕ ಭಿನ್ನಮತವನ್ನು ಬಗೆಹರಿಸಿಕೊಳ್ಳಬೇಕು’ ಎಂದು ರಷ್ಯಾ ಒತ್ತಾಯಿಸಿದೆ.

‘ಎರಡು ಕಡೆಗಳಲ್ಲಿ ನಾಗರಿಕರು ಸೇರಿದಂತೆ ಹಲವಾರು ಸಾವು–ನೋವು ಅನುಭವಿಸಿದ್ದಾರೆ. ನಮ್ಮ ಮಿತ್ರ ರಾಷ್ಟ್ರಗಳಾದ ‍ಪಾಕಿಸ್ತಾನ ಹಾಗೂ ಅಫ್ಗಾನ್‌ ಅಪಾಯಕಾರಿ ಸಂಘರ್ಷ ಕೊನೆಗೊಳಿಸಿ ರಾಜತಾಂತ್ರಿಕ ಮಾರ್ಗದ ಮೂಲಕ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತೇವೆ’ ಎಂದು ವಿದೇಶಾಂಗ ಇಲಾಖೆ ವಕ್ತಾರ ಮರಿಯಾ ಝಕ್ರಾರೊವಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.