ಮಾಸ್ಕೊ: ‘ಕದನ ವಿರಾಮ ಕುರಿತು ಚರ್ಚಿಸಲು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರನ್ನು ಭೇಟಿ ಮಾಡಲು ಸಿದ್ಧರಿದ್ದಾರೆ. ಇದಕ್ಕೂ ಮುನ್ನ ಕೆಲವು ಪ್ರಮುಖ ವಿಚಾರಗಳ ಕುರಿತು ಸ್ಪಷ್ಟತೆ ಅಗತ್ಯ ಇದೆ’ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ಗುರುವಾರ ಹೇಳಿದ್ದಾರೆ.
‘ಒಂದು ವೇಳೆ, ಉಕ್ರೇನ್ ಮತ್ತು ರಷ್ಯಾ ನಡುವೆ ಕದನ ವಿರಾಮ ಕುರಿತು ಒಪ್ಪಂದ ಏರ್ಪಟ್ಟಲ್ಲಿ, ಅದಕ್ಕೆ ಸಹಿ ಹಾಕುವುದಕ್ಕೆ ಝೆಲೆನ್‌ಸ್ಕಿ ಅವರಿಗೆ ಯಾವ ಅಧಿಕಾರ ಇದೆ? ಇದು ಸೇರಿದಂತೆ ಹಲವು ವಿಚಾರಗಳ ಕುರಿತು ಉನ್ನತ ಮಟ್ಟದಲ್ಲಿ ಚರ್ಚೆ ನಡೆಯಬೇಕು. ಆ ನಂತರ, ತಜ್ಞರು ಮತ್ತು ಸಚಿವರು ಸೂಕ್ತ ಶಿಫಾರಸುಗಳನ್ನು ಸಿದ್ಧಪಡಿಸಬೇಕು’ ಎಂದು ಲಾವ್ರೋವ್ ಹೇಳಿದರು.
‘ಝೆಲೆನ್‌ಸ್ಕಿ ಅವರ ಅಧಿಕಾರಾವಧಿ ಕಳೆದ ವರ್ಷ ಮೇನಲ್ಲಿ ಮುಗಿಯಲಿತ್ತು. ಯುದ್ಧ ನಡೆಯುತ್ತಿರುವ ಕಾರಣ, ಉಕ್ರೇನ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ಇನ್ನೂ ನಡೆದಿಲ್ಲ. ಝೆಲೆನ್‌ಸ್ಕಿಯವರೇ ನ್ಯಾಯಸಮ್ಮತ ಅಧ್ಯಕ್ಷ ಎಂದು ಉಕ್ರೇನ್ ಹೇಳುತ್ತಿದೆ. ಆದರೆ, ಝೆಲೆನ್‌ಸ್ಕಿ ಅಧ್ಯಕ್ಷರಾಗಿ ಮುಂದುವರಿಯುತ್ತಿರುವುದು ಕಾನೂನುಬದ್ಧವೇ ಎಂಬ ಶಂಕೆಯನ್ನು ಪುಟಿನ್ ಹಲವು ಬಾರಿ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಲಾವ್ರೋವ್ ಹೇಳಿದರು.
‘ಒಂದು ವೇಳೆ, ಕದನ ವಿರಾಮ ಒಪ್ಪಂದಕ್ಕೆ ಝೆಲೆನ್‌ಸ್ಕಿ ಸಹಿ ಹಾಕುತ್ತಾರೆ ಎಂದುಕೊಳ್ಳೋಣ. ಇವರ ಅವಧಿ ಮುಗಿದ ನಂತರ ಉಕ್ರೇನ್‌ನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ನಾಯಕ, ಒಪ್ಪಂದಕ್ಕೆ ಝೆಲೆನ್‌ಸ್ಕಿ ಸಹಿ ಹಾಕಿದ್ದನ್ನು ಪ್ರಶ್ನಿಸಬಹುದು. ತಾಂತ್ರಿಕವಾಗಿ ನೋಡುವದಾದರೆ, ಝೆಲೆನ್‌ಸ್ಕಿ ಅವರ ಅವಧಿ ಮುಗಿದೇ ಅಂತ್ಯಗೊಂಡಿರುತ್ತದೆ ಅಲ್ಲವೇ’ ಎಂದು ರಷ್ಯಾ ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಕೊನೆಗಾಣಿಸುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪುಟಿನ್ ಅವರೊಂದಿಗೆ ಸೋಮವಾರ ನಡೆಸಿದ ಸಭೆ ಹಾಗೂ ನಂತರ ನಡೆದ ಬೆಳವಣಿಗೆಗಳ ಕಾರಣಗಳಿಂದಾಗಿ, ಲಾವ್ರೋವ್ ಅವರ ಈ ಹೇಳಿಕೆಗೆ ಮಹತ್ವ ಬಂದಿದೆ.
‘ಶಾಶ್ವತವಾಗಿ ಶಾಂತಿ ನೆಲಸುವಂತಹ ಒಪ್ಪಂದದ ಬಗ್ಗೆ ಉಕ್ರೇನ್‌ಗೆ ಆಸಕ್ತಿ ಇಲ್ಲ. ಅದು ರಷ್ಯಾದ ಬೇಡಿಕೆಗಳಿಗೆ ಹೊಂದಾಣಿಕೆಯಾಗದಂತಹ ಭದ್ರತಾ ಖಾತ್ರಿಯನ್ನು ಬಯಸುತ್ತದೆ’ ಎಂದು ಲಾವ್ರೋವ್ ಹೇಳಿದರು. ‘ಉಭಯ ದೇಶಗಳ ನಡುವಿನ ಪ್ರಸ್ತುತ ಸನ್ನಿವೇಶಗಳ ಕುರಿತು ಉಕ್ರೇನ್ ಸರ್ಕಾರ ಹಾಗೂ ಅದರ ಪ್ರತಿನಿಧಿಗಳು ನೀಡುತ್ತಿರುವ ಹೇಳಿಕೆಗಳು ಈ ಮಾತಿಗೆ ಪುಷ್ಟಿ ನೀಡುವಂತಿವೆ’ ಎಂದಿದ್ದಾರೆ. ಉಕ್ರೇನ್‌ನಲ್ಲಿ ಐರೋಪ್ಯ ದೇಶಗಳ ಸೇನೆ ನಿಯೋಜನೆ ಕುರಿತ ಪ್ರಶ್ನೆಗೆ‘ಇಂತಹ ನಡೆ ಒಪ್ಪುವಂಥದ್ದಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
2022ರಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವೆ ನಡೆದಿದ್ದ ಮಾತುಕತೆ ಆಧಾರದಲ್ಲಿ ಭದ್ರತಾ ಖಾತ್ರಿ ಕಂಡುಕೊಳ್ಳುವುದು ಉಕ್ರೇನ್ ಪಾಲಿಗೆ ಅತ್ಯುತ್ತಮ ಆಯ್ಕೆಯಾಗಿದೆ.-ಸರ್ಗೆ ಲಾವ್ರೋವ್, ರಷ್ಯಾ ವಿದೇಶಾಂಗ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.