ಇಸ್ಮಾಯಿಲ್ ಹನಿಯೆಹ್
-ರಾಯಿಟರ್ಸ್ ಚಿತ್ರ
ದುಬೈ/ಲಂಡನ್: ಹಮಾಸ್ ಬಂಡುಕೋರರ ನಾಯಕ ಇಸ್ಮಾಯಿಲ್ ಹನಿಯೆಹ್ ಅವರಿದ್ದ ಟೆಹರಾನ್ ನಿವಾಸದ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಘಟನೆಯಲ್ಲಿ ಇಸ್ಮಾಯಿಲ್ ಹನಿಯೆಹ್ ಮತ್ತು ಅವರ ಅಂಗರಕ್ಷಕ ಮೃತಪಟ್ಟಿದ್ದಾರೆ ಎಂದು ಇರಾನ್ ಸೇನೆ, ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಖಚಿತಪಡಿಸಿದೆ.
ಗಾಜಾದೊಳಗಿನ ಇರಾನ್ ಬೆಂಬಲಿತ ಗುಂಪಿನ ಇತರೆ ನಾಯಕರಿಗೆ ಹೋಲಿಸಿದರೆ ಉತ್ತಮ ವಾಕ್ಚಾತುರ್ಯ ಹೊಂದಿದ್ದ ಇಸ್ಮಾಯಿಲ್ ಹನಿಯೆಹ್ ಅವರು ಅಂತರರಾಷ್ಟ್ರೀಯ ರಾಜತಾಂತ್ರಿಕತೆಯ ಮೂಲಕೆ ಗಮನ ಸೆಳೆದಿದ್ದರು.
2017ರಲ್ಲಿ ಖಲೀದ್ ಮೆಶಾಲ್ ಅವರ ಉತ್ತರಾಧಿಕಾರಿಯಾಗಿ ಇಸ್ಮಾಯಿಲ್ ಹನಿಯೆಹ್ ಅವರು ಹಮಾಸ್ ರಾಜಕೀಯ ಬ್ಯೂರೊದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಹಮಾಸ್‌ನ ಪ್ರತಿಸ್ಪರ್ಧಿಗಳು ಸೇರಿದಂತೆ ವಿವಿಧ ಪ್ಯಾಲೇಸ್ಟಿನಿಯನ್ ಬಣಗಳ ಮುಖ್ಯಸ್ಥರೊಂದಿಗೆ ಹನಿಯೆಹ್ ಉತ್ತಮ ಸಂಬಂಧ ಹೊಂದಿದ್ದರು.
ಟರ್ಕಿ ಮತ್ತು ಕತಾರ್ ನಡುವೆ ಇದ್ದ ನಿರ್ಬಂಧಗಳು ಮತ್ತು ಕದನ ವಿರಾಮ ಮಾತುಕತೆಗಳ ಸಮಾಲೋಚಕರಾಗಿ ಇಸ್ಮಾಯಿಲ್ ಹನಿಯೆಹ್ ಅವರನ್ನು ಇರಾನ್ ನೇಮಿಸಿಕೊಂಡಿತ್ತು.
ಏಪ್ರಿಲ್‌ನಲ್ಲಿ ಗಾಜಾದ ಮೇಲೆ ವಾಯು ದಾಳಿ ನಡೆಸಿರುವ ಇಸ್ರೇಲ್ ಪಡೆಗಳು, ಇಸ್ಮಾಯಿಲ್ ಹನಿಯೆಹ್ ಅವರ ಮೂವರು ಮಕ್ಕಳು, ನಾಲ್ವರು ಮೊಮ್ಮಕ್ಕಳನ್ನು ಹತ್ಯೆ ಮಾಡಿದ್ದವು. ತಮ್ಮ ಮಕ್ಕಳು ಮತ್ತು ಮಕ್ಕಳನ್ನು ಹತ್ಯೆ ಮಾಡಿದ್ದ ಇಸ್ರೇಲ್ ಸೇನೆ ವಿರುದ್ಧ ಇಸ್ಮಾಯಿಲ್ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
‘ನನ್ನ ಮಕ್ಕಳು ಮತ್ತು ಮೊಮ್ಮಕ್ಕಳ ಹತ್ಯೆಯು ಹಮಾಸ್ –ಇಸ್ರೇಲ್ ಮಧ್ಯೆ ನಡೆಯುತ್ತಿರುವ ಕದನ ವಿರಾಮ ಮಾತುಕತೆಗಳನ್ನು ಮತ್ತಷ್ಟು ಮೃದುಗೊಳಿಸಲು ಒತ್ತಡ ಹೇರುವುದಿಲ್ಲ’ ಎಂದು ಅಲ್ ಜಜೀರಾ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.