ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ನ್ಯೂಯಾರ್ಕ್/ವಾಷಿಂಗ್ಟನ್: ಚೀನಾದ ಮೇಲೆ ಶೇ 50ರಿಂದ 100ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಅಲ್ಲದೆ ನ್ಯಾಟೊ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ. ಹಾಗಾದಲ್ಲಿ ಮಾತ್ರ ರಷ್ಯಾ ಹಾಗೂ ಉಕ್ರೇನ್ ನಡುವಣ ಯುದ್ಧವನ್ನು ನಿಲ್ಲಿಸಲು ಸಾಧ್ಯ ಎಂದಿದ್ದಾರೆ.
ಸಾಮಾಜಿಕ ಜಾಲತಾಣ 'ಟ್ರುಥ್'ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಟ್ರಂಪ್, 'ನ್ಯಾಟೊ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದು ನಿಜಕ್ಕೂ ಆಘಾತಕಾರಿ. ಇದು ರಷ್ಯಾ ಜೊತೆಗಿನ ಸಂಧಾನವನ್ನು ದುರ್ಬಲಗೊಳಿಸುತ್ತದೆ' ಎಂದು ಹೇಳಿದ್ದಾರೆ.
'ರಷ್ಯಾದಿಂದ ತೈಲ ಖರೀದಿಗೆ ನ್ಯಾಟೊ ನಿಷೇಧ ಹಾಗೂ ಚೀನಾದ ಮೇಲಿನ ಅಧಿಕ ಸುಂಕ ಹೇರಿಕೆಯಿಂದ ಈ ಘೋರ ಯುದ್ಧವನ್ನು ಕೊನೆಗೊಳಿಸಬಹುದಾಗಿದೆ' ಎಂದು ಟ್ರಂಪ್ ಹೇಳಿದ್ದಾರೆ.
'ರಷ್ಯಾದ ಮೇಲೆ ಚೀನಾ ನಿಯಂತ್ರಣವನ್ನುಹೊಂದಿದೆ. ಸುಂಕ ವಿಧಿಸುವುದರಿಂದ ಈ ಹಿಡಿತವನ್ನು ದುರ್ಬಲಗೊಳಿಸಬಹುದಾಗಿದೆ' ಎಂದು ಅವರು ಉಲ್ಲೇಖಿಸಿದ್ದಾರೆ.
'ಇದು ಟ್ರಂಪ್ ಅವರ ಯುದ್ಧವಲ್ಲ. ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಯುದ್ಧವಾಗಿದೆ. ನಾನು ಇಲ್ಲಿ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತೇನೆ. ಸಾವಿರಾರು ಜೀವಗಳನ್ನು ಉಳಿಸಲು ಯತ್ನಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.
'ನಾನು ಹೇಳಿದ್ದನ್ನು ನ್ಯಾಟೊ ಮಾಡಿದ್ದಲ್ಲಿ ಯುದ್ಧ ಆದಷ್ಟು ಬೇಗ ಕೊನೆಗೊಳ್ಳಲಿದೆ. ಇಲ್ಲದಿದ್ದರೆ ನನ್ನ, ಅಮೆರಿಕದ ಸಮಯ, ಶಕ್ತಿ ಹಾಗೂ ಹಣವನ್ನು ವ್ಯರ್ಥ ಮಾಡುತ್ತಿದ್ದೀರಿ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.