
ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್/ವಾಷಿಂಗ್ಟನ್: 'ಯುದ್ಧವನ್ನು ಕೊನೆಗೊಳಿಸದಿದ್ದರೆ ಶೇ 350ರಷ್ಟು ಸುಂಕ ವಿಧಿಸುವುದಾಗಿ ಭಾರತ ಹಾಗೂ ಪಾಕಿಸ್ತಾನದ ಮೇಲೆ ಬೆದರಿಕೆ ಹಾಕಿದ್ದೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಬಳಿಕ ನನಗೆ ಕರೆ ಮಾಡಿದ ಭಾರತ ಪ್ರಧಾನಿ ನರೇಂದ್ರ ಮೋದಿ 'ನಾವು ಯುದ್ಧವನ್ನು ಮುಂದುವರಿಸುವುದಿಲ್ಲ' ಎಂದು ಹೇಳಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧವನ್ನು ಕೊನೆಗೊಳಿಸಿರುವುದಾಗಿ 60ಕ್ಕೂ ಹೆಚ್ಚು ಬಾರಿ ಟ್ರಂಪ್ ನುಡಿದಿದ್ದಾರೆ. ಆದರೆ ಮೂರನೇ ದೇಶದ ಮಧ್ಯಪ್ರವೇಶವನ್ನು ಭಾರತ ನಿರಾಕರಿಸುತ್ತಲೇ ಬಂದಿದೆ.
'ವಿವಾದವನ್ನು ಇತ್ಯರ್ಥಗೊಳಿಸುವುದು ಹೇಗೆ ಎಂಬುದು ನನಗೆ ಗೊತ್ತಿದೆ. ಈ ಹಿಂದೆಯೂ ಅದನ್ನು ಮಾಡಿದ್ದೆ. ಪರಮಾಣು ಸಾಮರ್ಥ್ಯದ ಭಾರತ, ಪಾಕಿಸ್ತಾನ ಸಹ ಯುದ್ಧ ನಡೆಸಲು ಬಯಸಿದ್ದವು' ಎಂದು ಹೇಳಿದ್ದಾರೆ.
'ನೀವು ಯುದ್ಧವನ್ನು ಮುಂದುವರಿಸಬಹುದು. ಆದರೆ ಶೇ 350ರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದೆ. ಯುದ್ದ ನಿಲ್ಲಿಸಿದರೆ ಮಾತ್ರ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುತ್ತೇವೆ' ಎಂದು ಎಚ್ಚರಿಸಿದ್ದೆ ಎಂದಿದ್ದಾರೆ.
'ನಾನು ಮಾಡಿದ್ದನ್ನು ಬೇರೆ ಯಾವ ಅಧ್ಯಕ್ಷರಿಂದಲೂ ಮಾಡಲು ಸಾಧ್ಯವಿಲ್ಲ. ಯುದ್ಧಗಳನ್ನು ಕೊನೆಗೊಳಿಸಲು ಸುಂಕ ವಿಧಾನವನ್ನು ಬಳಸಿದ್ದೇನೆ. ಎಂಟರಲ್ಲಿ ಐದು ಯುದ್ಧಗಳು ಹಣಕಾಸು, ವ್ಯಾಪಾರ ಹಾಗೂ ಸುಂಕಗಳ ಕಾರಣದಿಂದಾಗಿಯೇ ಅಂತ್ಯಗೊಂಡಿವೆ' ಎಂದು ಹೇಳಿದ್ದಾರೆ.
ಲಕ್ಷಾಂತರ ಜನರ ಪ್ರಾಣಗಳನ್ನು ಉಳಿಸಿದ್ದಕ್ಕಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಕರೆ ಮಾಡಿ ತನ್ನನ್ನು ಅಭಿನಂದಿಸಿರುವುದಾಗಿ ಹೇಳಿದ್ದಾರೆ.
ನಂತರ ಪ್ರಧಾನಿ ಮೋದಿ ಕರೆ ಮಾಡಿ ನಾವು ಯುದ್ಧವನ್ನು ನಿಲ್ಲಿಸುತ್ತೇವೆ ಎಂದು ಹೇಳಿದರು. ಬಳಿಕ ಮೋದಿಗೆ ಧನ್ಯವಾದ ಹೇಳಿ ಒಪ್ಪಂದ ಮಾಡಿಕೊಳ್ಳೋಣ ಎಂದು ಹೇಳಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.
26 ಪ್ರವಾಸಿಗರ ಸಾವಿಗೆ ಕಾರಣವಾದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಮೇ 7ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ್ದ ಭಾರತ, ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಬಳಿಕ ಉಭಯ ದೇಶಗಳ ನಡುವೆ ಸಂಘರ್ಷ ತೀವ್ರಗೊಂಡಿತ್ತು. ಮೇ 10ರಂದು ನಡೆದ ಡಿಜಿಎಂಒಗಳ ಮಟ್ಟದ ಮಾತುಕತೆಯಲ್ಲಿ ಕದನ ವಿರಾಮ ಏರ್ಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.