ಇಲಾನ್ ಮಸ್ಕ್, ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉದ್ಯಮಿ ಇಲಾನ್ ಮಸ್ಕ್ ನಡುವಿನ ಸಂಘರ್ಷವು ತಾರಕಕ್ಕೇರಿದೆ. ಬಹುಶಃ ಇಲಾನ್ ಮಸ್ಕ್ ತಮ್ಮ ಅಂಗಡಿಯನ್ನು ಮುಚ್ಚಿ ದಕ್ಷಿಣ ಆಫ್ರಿಕಾಗೆ ಹಿಂತಿರುಗಬೇಕಾಗಬಹುದು ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಸಾಮಾಜಿಕ ಮಾಧ್ಯಮ 'ಟ್ರುಥ್'ನಲ್ಲಿ ಟ್ರಂಪ್ ಈ ಕುರಿತು ಪೋಸ್ಟ್ ಮಾಡಿದ್ದಾರೆ.
'ನಾನು ವಿದ್ಯುತ್ ಚಾಲಿತ ವಾಹನಗಳ ಆಧ್ಯಾದೇಶವನ್ನು ವಿರೋಧಿಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಬೆಂಬಲಿಸುವ ಮೊದಲೇ ಇಲಾನ್ ಮಸ್ಕ್ ಅವರಿಗೆ ತಿಳಿದಿತ್ತು. ಇದು ಅಸಂಬದ್ಧವಾಗಿದ್ದು, ನನ್ನ ಅಭಿಯಾನದ ಭಾಗವಾಗಿತ್ತು. ವಿದ್ಯುತ್ ಚಾಲಿತ ಕಾರುಗಳು ಒಕೆ, ಆದರೆ ಎಲ್ಲರೂ ಅದನ್ನು ಹೊಂದಿರಬೇಕು ಎಂದು ಒತ್ತಾಯಿಸುವುದು ಸರಿಯಲ್ಲ' ಎಂದು ಅವರು ಹೇಳಿದ್ದಾರೆ.
'ಇತಿಹಾಸದಲ್ಲಿ ಈವರೆಗೆ ಯಾವುದೇ ವ್ಯಕ್ತಿಗಿಂತಲೂ ಹೆಚ್ಚು ಸಬ್ಸಿಡಿಯನ್ನು ಇಲಾನ್ ಮಸ್ಕ್ ಗಿಟ್ಟಿಸಿಕೊಂಡಿರುತ್ತಾರೆ. ಒಂದು ವೇಳೆ ಸಬ್ಸಿಡಿ ಇಲ್ಲದಿದ್ದರೆ ಬಹುಶಃ ಅಂಗಡಿ ಮುಚ್ಚಿ ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಬೇಕಾಗಬಹುದು' ಎಂದು ಕುಟುಕಿದ್ದಾರೆ.
'ಇನ್ನು ಮುಂದೆ ರಾಕೆಟ್ ಅಥವಾ ಉಪ್ರಗ್ರಹಗಳ ಉಡ್ಡಯನ ಬೇಡ. ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯೂ ಬೇಡ. ನಮ್ಮ ದೇಶದ ಸಂಪತ್ತು ಉಳಿಯುತ್ತದೆ. ಬಹುಶಃ ಅಮೆರಿಕದ ಸರ್ಕಾರದ ಕಾರ್ಯದಕ್ಷತಾ ಇಲಾಖೆಯು (ಡಿಒಜಿಇ) ಇದರ ಮೇಲೆ ನಿಗಾ ವಹಿಸಬೇಕು. ಹಾಗೆಯೇ ದೊಡ್ಡ ಮೊತ್ತವನ್ನು ಉಳಿಸಬಹುದು' ಎಂದು ಬರೆದುಕೊಂಡಿದ್ದಾರೆ.
ಎರಡನೇ ಅವಧಿಗೆ ಅಮೆರಿಕದ ಚುಕ್ಕಾಣಿ ಹಿಡಿದ ಡೊನಾಲ್ಡ್ ಟ್ರಂಪ್, ಚುನಾವಣೆಯಲ್ಲಿ ತಮ್ಮ ಬೆಂಬಲಿಸಿದ್ದ ಟೆಸ್ಲಾ ಮಾಲೀಕ ಇಲಾನ್ ಮಸ್ಕ್ ಅವರನ್ನು ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆ (ಡಿಒಜಿಇ)ಯ ಉಸ್ತುವಾರಿಯಾಗಿ ನೇಮಕ ಮಾಡಿದ್ದರು. ಆಡಳಿತ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳುವುದರ ಜೊತೆಗೆ ಅನಗತ್ಯ ವೆಚ್ಚಗಳನ್ನು ಕಡಿತ ಮಾಡುವುದು ಈ ಇಲಾಖೆಯ ಉದ್ದೇಶವಾಗಿತ್ತು.
ಆದರೆ ಟ್ರಂಪ್ ಜತೆಗಿನ ಭಿನಾಭಿಪ್ರಾಯದಿಂದಾಗಿ ಡಿಒಜಿಇ ಮುಖ್ಯಸ್ಥ ಸ್ಥಾನವನ್ನು ಮಸ್ಕ್ ತೊರೆದಿದ್ದರು. ಪ್ರಸ್ತುತ ಇಬ್ಬರ ನಡುವೆ ಉಂಟಾಗಿರುವ ಮನಸ್ತಾಪವು ದ್ವೇಷ ಸಾಧಿಸುವ ಮಟ್ಟಕ್ಕೆ ಬೆಳೆದಿದೆ. ಟ್ರಂಪ್ ಅವರ ತೆರಿಗೆ ಮತ್ತು ಖರ್ಚು ಮಸೂದೆಯನ್ನು ವಿರೋಧಿಸಿ ಮಸ್ಕ್ ಟೀಕೆ ಮಾಡಲು ಆರಂಭಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರೂ ಪರಸ್ಪರ ಅರೋಪ–ಪ್ರತ್ಯಾರೋಪ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.