ವೊಲೊಡಿಮಿರ್ ಝೆಲೆನ್‌ಸ್ಕಿ, ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ಜೆದ್ದಾ: ರಷ್ಯಾ ವಿರುದ್ಧದ ಯುದ್ಧದಲ್ಲಿ 30 ದಿನಗಳ ಕದನ ವಿರಾಮಕ್ಕೆ ಸಮ್ಮತಿ ಸೂಚಿಸಿರುವ ಬೆನ್ನಲ್ಲೇ ಉಕ್ರೇನ್‌ಗೆ ಸೇನಾ ನೆರವು ನಿರ್ಬಂಧ ತೆರವುಗೊಳಿಸಿರುವುದಾಗಿ ಅಮೆರಿಕ ಘೋಷಿಸಿದೆ.
ಸೌದಿ ಅರೇಬಿಯಾದ ಜೆದ್ದಾದಲ್ಲಿ ಮಂಗಳವಾರ ನಡೆದ ಮಹತ್ವದ ಮಾತುಕತೆಯ ಬಳಿಕ ಈ ಬೆಳವಣಿಗೆ ನಡೆದಿದೆ.
ಮೂರು ವರ್ಷಗಳಿಂದ ನಡೆಯುತ್ತಿರುವ ಉಕ್ರೇನ್-ರಷ್ಯಾ ಯುದ್ಧವನ್ನು ಅಂತ್ಯಗಾಣಿಸುಲು ನಿಟ್ಟಿನಲ್ಲಿ ಉಕ್ರೇನ್ ಹಾಗೂ ಅಮೆರಿಕ ಮಧ್ಯೆ ಸೌದಿ ಅರೇಬಿಯಾದಲ್ಲಿ ಮಂಗಳವಾರ ಮಾತುಕತೆ ನಡೆದಿತ್ತು.
ಅಮೆರಿಕ ಮುಂದಿರಿಸಿದ ಪ್ರಸ್ತಾಪವನ್ನು ಉಕ್ರೇನ್ ಒಪ್ಪಿಕೊಂಡಿದ್ದು, 30 ದಿನಗಳ ಕದನ ವಿರಾಮಕ್ಕೆ ಸಮ್ಮತಿಸಿದೆ ಎಂದು ಅಮೆರಿಕ ಹಾಗೂ ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
ಈಗ ಅಮೆರಿಕ ಕದನ ವಿರಾಮ ಒಪ್ಪಂದ ಪ್ರಸ್ತಾಪವನ್ನು ರಷ್ಯಾದ ಮುಂದಿಡಲಿದೆ.
ರಷ್ಯಾ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಶ್ವೇತಭವನದ ಓವಲ್ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಮಾತುಕತೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ನಡುವೆ ವಾಗ್ವಾದ ಉಂಟಾಗಿತ್ತು.
ಇದರಿಂದ ಉಕ್ರೇನ್‌ಗೆ ನೀಡಲಾಗುತ್ತಿದ್ದ ಸೇನಾ ನೆರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಟ್ರಂಪ್ ಆದೇಶಿಸಿದ್ದರು. ಈಗ ಕದನ ವಿರಾಮಕ್ಕೆ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಉಕ್ರೇನ್‌ಗೆ ಸೇನಾ ನೆರವು ಹಾಗೂ ಗುಪ್ತಚರ ಮಾಹಿತಿ ಹಂಚಿಕೆ ಮರುಸ್ಥಾಪಿಸಲು ಅಮೆರಿಕ ನಿರ್ಧರಿಸಿದೆ.
'ಗುಂಡಿನ ದಾಳಿ ನಿಲ್ಲಿಸಲು ಉಕ್ರೇನ್ ಒಪ್ಪಿಕೊಂಡಿದೆ. ಈಗ ರಷ್ಯಾದ ಮುಂದೆ ಪ್ರಸ್ತಾಪವನ್ನು ಇಡಲಿದ್ದೇವೆ. ಇದನ್ನು ಒಪ್ಪಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟಿದ್ದು' ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.