ADVERTISEMENT

ರಷ್ಯಾದಿಂದ ಸೈಬರ್ ದಾಳಿ: ಸಂಪೂರ್ಣ ಇಂಟರ್ನೆಟ್ ಸಂಪರ್ಕ ಕಳೆದುಕೊಂಡ ಉಕ್ರೇನ್

ಐಎಎನ್ಎಸ್
Published 25 ಫೆಬ್ರುವರಿ 2022, 7:48 IST
Last Updated 25 ಫೆಬ್ರುವರಿ 2022, 7:48 IST
ಕೀವ್ ನಗರವನ್ನು ತೊರೆಯುತ್ತಿರುವ ನಾಗರಿಕರು (ಚಿತ್ರ-ಎಪಿ/ಪಿಟಿಐ)
ಕೀವ್ ನಗರವನ್ನು ತೊರೆಯುತ್ತಿರುವ ನಾಗರಿಕರು (ಚಿತ್ರ-ಎಪಿ/ಪಿಟಿಐ)   

ಕೀವ್: ಉಕ್ರೇನಿಯನ್ ಸರ್ಕಾರಿ ವೆಬ್‌ಸೈಟ್‌ಗಳು ಮತ್ತು ಬ್ಯಾಂಕುಗಳ ಮೇಲೆ ದಾಳಿ ಮಾಡಿದ ನಂತರ, ಈಗ ಪೂರ್ಣ ಪ್ರಮಾಣದ ಯುದ್ಧದ ಮಧ್ಯೆ ಸ್ಥಳೀಯರನ್ನು ಸುಮ್ಮನಾಗಿಸಲು ದೇಶದಲ್ಲಿ ಇಂಟರ್ನೆಟ್ ಮೂಲಸೌಕರ್ಯಕ್ಕೆ ರಷ್ಯಾ ಪ್ರಾಯೋಜಿತ ಹ್ಯಾಕರ್‌ಗಳು ತಡೆಯೊಡ್ಡಿದ್ದಾರೆ.

ರಷ್ಯಾದ ಸೈಬರ್ ಆಕ್ರಮಣವು ಈಗಾಗಲೇ ದೇಶದ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಿದೆ ಎಂದು ಶುಕ್ರವಾರ ವರದಿಗಳು ತಿಳಿಸಿವೆ.

ಈ ಸ್ಥಗಿತಗಳು ಖಾರ್ಕಿವ್ ಸೇರಿದಂತೆ ಉಕ್ರೇನ್‌ನಾದ್ಯಂತ ಹಲವಾರು ನಗರಗಳು ಮತ್ತು ಇತರ ಪ್ರದೇಶಗಳಿಗೆ ಸೇವೆ ಸಲ್ಲಿಸುತ್ತಿರುವ ಟ್ರಯೋಲನ್ ಇಂಟರ್ನೆಟ್ ಸೇವಾ ಪೂರೈಕೆದಾರರ ಮೇಲೂ ಪರಿಣಾಮ ಬೀರುತ್ತವೆ ಎಂದು ದಿ ವರ್ಜ್ ವರದಿ ಮಾಡಿದೆ.

ADVERTISEMENT

'ಉಕ್ರೇನ್ ನಿಯಂತ್ರಿತ ನಗರವಾದ ಖಾರ್ಕಿವ್‌ನಲ್ಲಿ ಭಾರಿ ಸ್ಫೋಟಗಳು ಕೇಳಿಬಂದ ಸ್ವಲ್ಪ ಸಮಯದ ನಂತರ ಗಮನಾರ್ಹ ರೀತಿಯಲ್ಲಿ ಇಂಟರ್ನೆಟ್ ಅಡೆತಡೆಗಳು ಎದುರಾಗಿವೆ. ಮೊಬೈಲ್‌ಗಳು ಕಾರ್ಯನಿರ್ವಹಿಸುವಾಗಲೇ ಪೂರೈಕೆದಾರ ಟ್ರಿಯೋಲನ್‌ ಸ್ಥಿರ-ಲೈನ್ ಸೇವೆಯಲ್ಲಿ ನಷ್ಟ ಉಂಟಾಗಿರುವುದನ್ನು ಬಳಕೆದಾರರು ವರದಿ ಮಾಡಿದ್ದಾರೆ ಎಂದು ಜಾಗತಿಕ ಇಂಟರ್ನೆಟ್ ಮಾನಿಟರ್ ಪ್ಲಾಟ್‌ಫಾರ್ಮ್ ನೆಟ್‌ಬ್ಲಾಕ್ಸ್ ಟ್ವೀಟ್ ಮಾಡಿದೆ.

ಡೊನೆಟ್ಸ್‌ ಮಾರಿಯುಪೋಲ್‌ನ ಆಯಕಟ್ಟಿನ ಬಂದರು ನಗರದಲ್ಲಿ ಇಂಟರ್ನೆಟ್ ಅಡಚಣೆ ಉಂಟಾಗಿದೆ. ನಾಗರಿಕರ ಸಾವು ನೋವುಗಳ ವರದಿಗಳ ನಡುವೆಯೇ ಅನೇಕರು ಟೆಲಿಕಾಂ ಸೇವೆಗಳನ್ನು ಕಳೆದುಕೊಂಡಿದ್ದಾರೆ ಎಂದು ನೆಟ್‌ಬ್ಲಾಕ್ಸ್‌ (NetBlocks) ಹೇಳಿದೆ.

ದೇಶದ ಇಂಟರ್ನೆಟ್ ಮೂಲಸೌಕರ್ಯದ ಮೇಲೆ ನೇರ ದಾಳಿಯ ಸಾಧ್ಯತೆಯ ಬಗ್ಗೆ ಹಲವಾರು ನಾಗರಿಕ ಸಮಾಜದ ಗುಂಪುಗಳು ಕಳವಳ ವ್ಯಕ್ತಪಡಿಸಿವೆ.

ರಷ್ಯಾ ಈ ಹಿಂದೆ ಉಕ್ರೇನ್‌ನ ಸರ್ಕಾರಿ ಸೈಟ್‌ಗಳ ವಿರುದ್ಧ ದಾಳಿ ಮಾಡಿತ್ತು. ಆದರೆ ಈಗ ತಳಮಟ್ಟದಿಂದಲೇ ದೂರಸಂಪರ್ಕ ಮೂಲಸೌಕರ್ಯವನ್ನು ನಿಷ್ಕ್ರಿಯಗೊಳಿಸಿದೆ. ಈ ಮೂಲಕ ಉಕ್ರೇನಿಯನ್ನರನ್ನು ಮೌನಗೊಳಿಸುವತ್ತ ಕ್ರಮ ಕೈಗೊಂಡಿದೆ.

ಇದಕ್ಕೂ ಮುನ್ನ, ರಷ್ಯಾ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಲೇ ಅನೇಕ ಸೈಬರ್ ದಾಳಿಗಳು ನಡೆದಿದ್ದವು. ಹೀಗಾಗಿ ಪ್ರಮುಖ ಉಕ್ರೇನಿಯನ್ ಸರ್ಕಾರಿ ವೆಬ್‌ಸೈಟ್‌ಗಳು ಸ್ಥಗಿತಗೊಂಡಿವೆ. ಉಕ್ರೇನ್ ಸಚಿವ ಸಂಪುಟದ ವೆಬ್‌ಸೈಟ್‌ಗಳು ಮತ್ತು ವಿದೇಶಾಂಗ ವ್ಯವಹಾರಗಳು, ಮೂಲಸೌಕರ್ಯ, ಶಿಕ್ಷಣ ಮತ್ತು ಇತರ ಸಚಿವಾಲಯಗಳ ವೆಬ್‌ಸೈಟ್‌ಗಳು ಸ್ಥಗಿತಗೊಂಡಿವೆ.

ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯೊಂದಿಗೆ ರಷ್ಯಾ ಸೈಬರ್ ಕಾರ್ಯಾಚರಣೆಗಳನ್ನು ಬಳಸುವ ಸಾಧ್ಯತೆಯಿದೆ ಎಂದು ಯುಎಸ್ ಅಧಿಕಾರಿಗಳು ಎಚ್ಚರಿಸಿದ್ದರು.

ಇನ್ನಷ್ಟು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.