ವಿಶ್ವಸಂಸ್ಥೆ – ಪ್ರಾತಿನಿಧಿಕ ಚಿತ್ರ
ವಿಶ್ವಸಂಸ್ಥೆ, ನ್ಯೂಯಾರ್ಕ್: ಆರ್ಥಿಕ ಪಗ್ರತಿಯಲ್ಲಿ ಗಮನಾರ್ಹ ಸಾಧನೆ ತೋರುತ್ತಿರುವ ಮತ್ತು ಜಾಗತಿಕ ನಾಯಕತ್ವ ವಹಿಸುತ್ತಿರುವ ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಕಾಯಂ ಸದಸ್ಯತ್ವ ಪಡೆಯಲು ಅರ್ಹವಾಗಿದೆ ಎಂದು ಭೂತಾಪ್ ಪ್ರಧಾನಿ ಶೆರಿಂಗ್ ಟೊಬಗೆ ಹೇಳಿದ್ದಾರೆ.
ತೀರಾ ಹಿಂದುಳಿದ ದೇಶಗಳ (ಎಲ್‌ಡಿಸಿ) ಕೆಟಗರಿಯಿಂದ ಪ್ರಗತಿಯತ್ತ ಮುನ್ನಡೆಯಲು ಭೂತಾನ್‌ಗೆ ಭಾರತ ನೀಡಿದ ನೆರವು ಮತ್ತು ಸ್ನೇಹಕ್ಕಾಗಿ, ಟೊಬಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಶ್ವಸಂಸ್ಥೆಯ ಮಹಾ ಅಧಿವೇಶನದ 79ನೇ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, 'ವಿಶ್ವಸಂಸ್ಥೆಯು ಪ್ರಸ್ತುತ ಜಗತ್ತಿನ ವಾಸ್ತವಿಕ ಅಂಶಗಳನ್ನು ಪೂರೈಸುವಂತಿರಬೇಕು. ಭದ್ರತಾ ಮಂಡಳಿಯು ಗತಕಾಲದ ಅವೇಶಷವಾಗಿ ಉಳಿದಿದೆ. ಸದ್ಯದ ಭೌಗೋಳಿಕ ರಾಜಕೀಯ, ಆರ್ಥಿಕ ಚಿತ್ರಣ ಮತ್ತು ಸಾಮಾಜಿಕ ವಾಸ್ತವಾಂಶಗಳನ್ನು ಪ್ರತಿನಿಧಿಸುವಂತಹ ಮಂಡಳಿಯ ಅಗತ್ಯವಿದೆ' ಎಂದು ಪ್ರತಿಪಾದಿಸಿದ್ದಾರೆ.
ಹೆಚ್ಚು ಪರಿಣಾಮಕಾರಿಯನ್ನಾಗಿಸುವ ನಿಟ್ಟಿನಲ್ಲಿ 15 ರಾಷ್ಟ್ರಗಳನ್ನೊಳಗೊಂಡ ಭದ್ರತಾ ಮಂಡಳಿಯ ಸುಧಾರಣೆ ಹಾಗೂ ಭಾರತಕ್ಕೆ ಕಾಯಂ ಸದಸ್ಯತ್ವಕ್ಕಾಗಿ ಭೂತಾನ್ ಬಹುದಿನಗಳಿಂದ ಒತ್ತಾಯಿಸುತ್ತಿದೆ.
'ಗಮನಾರ್ಹವಾದ ಆರ್ಥಿಕ ಪ್ರಗತಿ, ಜನಸಂಖ್ಯೆ ಹಾಗೂ ಜಾಗತಿಕ ನಾಯಕತ್ವ ವಹಿಸುತ್ತಿರುವ ಭಾರತ ಕಾಯಂ ಮಂಡಳಿ ಸದಸ್ಯತ್ವಕ್ಕೆ ಅರ್ಹವಾಗಿದೆ' ಎಂದು ಟೊಬಗೆ ಹೇಳಿದ್ದಾರೆ.
ಇದೇ ವೇಳೆ ಅವರು, ಜಾಗತಿಕ ಶಾಂತಿಗೆ ಶ್ರಮಿಸುತ್ತಿರುವ ಜಪಾನ್‌ಗೂ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಸಿಗಬೇಕು ಎಂದಿದ್ದಾರೆ.
ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳಾದ ಫ್ರಾನ್ಸ್, ಬ್ರಿಟನ್, ಅಮೆರಿಕ ಸಹ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಭಾರತದ ಪರ ಧ್ವನಿ ಎತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.