ADVERTISEMENT

ಅಮೆರಿಕ ನೆರವು ಸ್ಥಗಿತ: ಆಫ್ಗಾನಿಸ್ತಾನದಲ್ಲಿ ಬಾಣಂತಿಯರ ಸಾವು ಹೆಚ್ಚಲಿದೆ ಎಂದ UN

ರಾಯಿಟರ್ಸ್
Published 4 ಫೆಬ್ರುವರಿ 2025, 14:39 IST
Last Updated 4 ಫೆಬ್ರುವರಿ 2025, 14:39 IST
<div class="paragraphs"><p>ಆಫ್ಗಾನಿಸ್ತಾನದ ಆಸ್ಪತ್ರೆ</p></div>

ಆಫ್ಗಾನಿಸ್ತಾನದ ಆಸ್ಪತ್ರೆ

   

ರಾಯಿಟರ್ಸ್ ಚಿತ್ರ

ಜಿನೆವಾ: ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವು ಸ್ಥಗಿತಗೊಳಿಸಿದ ಅಮೆರಿಕದ ಕ್ರಮದಿಂದಾಗಿ ಆಫ್ಗಾನಿಸ್ತಾನದಲ್ಲಿ 2025ರಿಂದ 2028ರವರೆಗೆ ಕನಿಷ್ಠ ಒಂದು ಸಾವಿರ ಬಾಣಂತಿಯರ ಸಾವು ಸಂಭವಿಸಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ADVERTISEMENT

ಹಾಲಿ ಅಸ್ತಿತ್ವದಲ್ಲಿರುವ ಎಲ್ಲಾ ರೀತಿಯ ನೆರವನ್ನೂ 90 ದಿನಗಳ ಅವಧಿಗೆ ಸ್ಥಗಿತಗೊಳಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಆದೇಶಿಸಿದ್ದಾರೆ. ಇದರಿಂದ ಅಮೆರಿಕದ ನೆರವು ಪಡೆಯುತ್ತಿರುವ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಿವೆ. ಕುಟುಂಬ ಕಲ್ಯಾಣ ಯೋಜನೆ ಮತ್ತು ಗರ್ಭಪಾತ ತಡೆಗಟ್ಟಲು ನೀಡುತ್ತಿದ್ದ ನೆರವನ್ನು ಅಮೆರಿಕ ಸ್ಥಗಿತಗೊಳಿಸಿದೆ. 

ಏಷ್ಯಾ ಮತ್ತು ಪೆಸಿಫಿಕ್ ಪ್ರಾಂತ್ಯದಲ್ಲಿ ಲೈಂಗಿಕ ಮತ್ತು ಪ್ರಜನನ ಆರೋಗ್ಯಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಏಜೆನ್ಸಿಯ ಪ್ರಾದೇಶಿಕ ನಿರ್ದೇಶಕ ಪಿಒ ಸ್ಮಿತ್ ಅವರು ಪ್ರತಿಕ್ರಿಯಿಸಿ, ‘ಆರೋಗ್ಯ ಸೌಲಭ್ಯದಿಂದ ಆಫ್ಗಾನಿಸ್ತಾನದ 90 ಲಕ್ಷ ಜನರು ವಂಚಿತರಾಗಲಿದ್ದಾರೆ. ಪಾಕಿಸ್ತಾನದಲ್ಲಿ ನಿರಾಶ್ರಿತರಾಗಿರುವ 12 ಲಕ್ಷ ಜನರು ಆರೋಗ್ಯ ಸೌಲಭ್ಯ ಸಿಗದೆ ಪರದಾಡಲಿದ್ದಾರೆ’ ಎಂದು ಅಂದಾಜಿಸಿದ್ದಾರೆ.

‘ಜಗತ್ತಿನಲ್ಲಿ ಗರ್ಭಿಣಿಯರ ಸಾವು ಪ್ರಕರಣ ಆಫ್ಗಾನಿಸ್ತಾನದಲ್ಲಿ ಅಧಿಕವಾಗಿದೆ. ಜಗತ್ತಿನಲ್ಲೇ ಅತ್ಯಂತ ಸೌಲಭ್ಯ ವಂಚಿತ ಜನರು ಇಲ್ಲಿದ್ದಾರೆ. ಪ್ರತಿ ಎರಡು ಗಂಟೆಗೆ ಒಬ್ಬ ಬಾಣಂತಿ ಮೃತಪಡುತ್ತಿದ್ದಾರೆ. ಒಂದೊಮ್ಮೆ ನಮ್ಮ ಯೋಜನೆಗೆ ಅಗತ್ಯ ಅನುದಾನ ಸಿಗದಿದ್ದರೆ, ಅನೈರ್ಮಲ್ಯ ಪ್ರದೇಶದಲ್ಲಿ, ಯಾರ ನೆರವೂ ಇಲ್ಲದೆ ತಾಯಿಯೊಬ್ಬಳು ಮಗುವಿಗೆ ಜನ್ಮ ನೀಡಬೇಕಾಗುತ್ತದೆ. ನವಜಾತಶಿಶುಗಳು ಆರಂಭಿಕ ಆರೈಕೆ, ಚಿಕಿತ್ಸೆ ಸಿಗದೆ ಸಾಯುವ ಸಂಭವ ಹೆಚ್ಚು’ ಎಂದಿದ್ದಾರೆ.

‘ಅಮೆರಿಕದ ನೆರವು ರದ್ದಾದಲ್ಲಿ ಆಫ್ಗಾನಿಸ್ತಾನದ ವಿಷಯದಲ್ಲಿ 2025ರಿಂದ 2028ರವರೆಗೆ 1,200ರಷ್ಟು ಬಾಣಂತಿಯರ ಸಾವು ಸಂಭವಿಸಬಹುದು ಹಾಗೂ 1.09 ಲಕ್ಷ ಅನಪೇಕ್ಷಿತ ಗರ್ಭಧಾರಣೆ ಆಗಬಹುದು’ ಎಂದಿದ್ದಾರೆ.

ಏಷ್ಯಾ ಮತ್ತು ಪೆಸಿಫಿಕ್ ಪ್ರಾಂತ್ಯದಲ್ಲಿ ಅಮೆರಿಕದಿಂದ ₹670 ಕೋಟಿ ನೆರವು ಲಭಿಸುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.