ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ವಾಷಿಂಗ್ಟನ್: ವಿಶ್ವದಾದ್ಯಂತ 20 ಕಂಪನಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕ ಕ್ರಮ ಕೈಗೊಳ್ಳುವ ಭಾಗವಾಗಿ ಇರಾನ್ ಜತೆಗೆ ತೈಲ ಅಥವಾ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಖರೀದಿ ಮಾಡುತ್ತಿರುವ ಆರೋಪದಡಿ ಭಾರತದ ಆರು ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಭಾರತದ ಕಂಪನಿಗಳು ಇರಾನ್ ಮೇಲೆ ಅಮೆರಿಕ ವಿಧಿಸಿದ್ದ ನಿರ್ಬಂಧಗಳನ್ನು ಉಲ್ಲಂಘಿಸಿ ಪೆಟ್ರೋಲಿಯಂ ಉತ್ಪನ್ನಗಳ ಖರೀದಿ ಮತ್ತು ಮಾರುಕಟ್ಟೆ ವಹಿವಾಟು ನಡೆಸುತ್ತಿವೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಆರೋಪಿಸಿದೆ.
ಆಲ್ಕೆಮಿಕಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಗ್ಲೋಬಲ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ಲಿಮಿಟೆಡ್, ಜುಪಿಟರ್ ಡೈ ಕೆಮ್ ಪ್ರೈವೇಟ್ ಲಿಮಿಟೆಡ್, ರಾಮ್ನಿಕ್ಲಾಲ್ ಎಸ್ ಗೊಸಾಲಿಯಾ, ಪರ್ಸಿಸ್ಟೆಂಟ್ ಪೆಟ್ರೋಕೆಮ್ ಪ್ರೈವೇಟ್ ಲಿಮಿಟೆಡ್, ಕಾಂಚನ್ ಪಾಲಿಮರ್ಸ್ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ.
ಆಲ್ಕೆಮಿಕಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು 2024ರ ಜನವರಿಯಿಂದ ಡಿಸೆಂಬರ್‌ವರೆಗೆ 84 ಮಿಲಿಯನ್ ಅಮೆರಿಕನ್ ಡಾಲರ್‌ಗಿಂತಲೂ (ಅಂದಾಜು ₹736 ಕೋಟಿ) ಹೆಚ್ಚು ಮೌಲ್ಯದ ಇರಾನ್‌ನ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಆಮದು ಮಾಡಿಕೊಂಡ ಆರೋಪ ಎದುರಿಸುತ್ತಿದೆ.
ಗ್ಲೋಬಲ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ಲಿಮಿಟೆಡ್ 2024ರಿಂದ 2025ರ ನಡುವೆ 51 ಮಿಲಿಯನ್ ಡಾಲರ್ ಮೌಲ್ಯದ (ಅಂದಾಜು ₹446 ಕೋಟಿ) ಮೆಥನಾಲ್ ಸೇರಿದಂತೆ ಇರಾನ್‌ನ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಖರೀದಿಸಿದೆ ಎಂದು ಆರೋಪಿಸಲಾಗಿದೆ.
ಜುಪಿಟರ್ ಡೈ ಕೆಮ್ ಪ್ರೈವೇಟ್ ಲಿಮಿಟೆಡ್ ಇದೇ ಅವಧಿಯಲ್ಲಿ 49 ಮಿಲಿಯನ್ ಡಾಲರ್ ಮೌಲ್ಯದ (ಅಂದಾಜು ₹429 ಕೋಟಿ) ಟೊಲ್ಯೂನ್ ಸೇರಿದಂತೆ ಇರಾನಿನ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ ಎಂದು ವರದಿಯಾಗಿದೆ.
ರಾಮ್ನಿಕ್ಲಾಲ್ ಎಸ್ ಗೊಸಾಲಿಯಾ ಕಂಪನಿಯು ಮೆಥನಾಲ್ ಮತ್ತು ಟೊಲ್ಯೂನ್ ಸೇರಿದಂತೆ 22 ಮಿಲಿಯನ್ ಡಾಲರ್ ಮೌಲ್ಯದ (ಅಂದಾಜು ₹192 ಕೋಟಿ) ಇರಾನಿನ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಖರೀದಿಸಿದೆ ಎಂದು ಆರೋಪಿಸಲಾಗಿದೆ.
ಪರ್ಸಿಸ್ಟೆಂಟ್ ಪೆಟ್ರೋಕೆಮ್ ಪ್ರೈವೇಟ್ ಲಿಮಿಟೆಡ್ 2024ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಮೆಥನಾಲ್ ಸೇರಿದಂತೆ 14 ಮಿಲಿಯನ್ ಡಾಲರ್ ಮೌಲ್ಯದ (ಅಂದಾಜು ₹122 ಕೋಟಿ) ಇರಾನಿನ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ ಎಂದು ಆರೋಪಿಸಲಾಗಿದೆ.
ಕಾಂಚನ್ ಪಾಲಿಮರ್ಸ್ 1.3 ಮಿಲಿಯನ್ ಡಾಲರ್ ಮೌಲ್ಯದ (ಅಂದಾಜು ₹11 ಕೋಟಿ) ಇರಾನಿನ ಪಾಲಿಥಿಲೀನ್ ಉತ್ಪನ್ನಗಳನ್ನು ಖರೀದಿಸಿದೆ ಎಂದು ಹೇಳಲಾಗಿದೆ.
ಭಾರತವು ಇರಾನ್ ಜತೆ ಉತ್ತಮ ವ್ಯಾಪಾರ ಸಂಬಂಧಗಳನ್ನು ಹೊಂದಿದೆ. ಆದರೂ ಇರಾನ್ ಮೇಲೆ ಅಮೆರಿಕ ನಿರ್ಬಂಧಗಳನ್ನು ಹೇರಿದ ನಂತರ 2019ರಿಂದ ಈಚೆಗೆ ಇರಾನ್‌ನಿಂದ ತೈಲ ಉತ್ಪನ್ನಗಳ ಆಮದನ್ನು ಗಣನೀಯವಾಗಿ ಕಡಿಮೆ ಮಾಡಿದೆ.
ಇರಾನ್ ಜತೆಗೆ ತೈಲ ಅಥವಾ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಖರೀದಿ ಮಾಡುತ್ತಿರುವ ಆರೋಪದಡಿ ಅಮೆರಿಕವು ಭಾರತದ ಮೇಲೆ ಮಾತ್ರವಲ್ಲದೆ ಟರ್ಕಿ, ಯುಎಇ, ಚೀನಾ ಮತ್ತು ಇಂಡೋನೇಷ್ಯಾದ ಕಂಪನಿಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ.
ಇರಾನ್‌ನ ತೈಲ ಅಥವಾ ಪೆಟ್ರೋಕೆಮಿಕಲ್ ಉತ್ಪನ್ನಗಳ ಎಲ್ಲ ರೀತಿಯ ಖರೀದಿಗಳನ್ನು ನಿಲ್ಲಿಸಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇ ತಿಂಗಳಲ್ಲಿ ಹೇಳಿದ್ದರು. ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವ ಯಾವುದೇ ದೇಶ ಅಥವಾ ವ್ಯಕ್ತಿಯ ಮೇಲೆ ತಕ್ಷಣವೇ ನಿರ್ಬಂಧ ಹೇರಲಾಗುತ್ತದೆ ಎಂದು ಎಚ್ಚರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.