ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ವಾಷಿಂಗ್ಟನ್/ಮಾಸ್ಕೋ/ಕೀವ್: ಕಪ್ಪು ಸಮುದ್ರದಲ್ಲಿ ಸರಕು ಸಾಗಣೆ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳುವುದು ಮತ್ತು ಇಂಧನ ಸೌಲಭ್ಯಗಳ ಮೇಲೆ ದಾಳಿಗಳನ್ನು ನಿಷೇಧಿಸುವ ಕುರಿತಂತೆ ರಷ್ಯಾ ಮತ್ತು ಉಕ್ರೇನ್ ಪ್ರತ್ಯೇಕ ಒಪ್ಪಂದಗಳನ್ನು ಮಾಡಿಕೊಂಡಿವೆ ಎಂದು ಅಮೆರಿಕ ಹೇಳಿದೆ.
ಈ ಒಪ್ಪಂದಗಳು ಜಾರಿಗೆ ಬಂದರೆ, ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಮೂರು ವರ್ಷಗಳ ಯುದ್ಧವನ್ನು ಕೊನೆಗೊಳಿಸಲು ಕದನ ವಿರಾಮ ಘೋಷಣೆ ಮತ್ತು ಶಾಂತಿ ಮಾತುಕತೆ ನಡೆಸಲು ಅನುಕೂಲವಾಗಲಿದೆ ಎಂದು ಅಮೆರಿಕ ತಿಳಿಸಿದೆ.
ಆದಾಗ್ಯೂ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲನ್‌ಸ್ಕಿ ಅವರನ್ನು ನಂಬಲು ಸಾಧ್ಯವಿಲ್ಲ. ಆದ್ದರಿಂದ ಒಪ್ಪಂದ ನಿಯಮಗಳನ್ನು ಗೌರವಿಸುವಂತೆ ಝೆಲನ್‌ಸ್ಕಿ ಅವರಿಗೆ ಶ್ವೇತ ಭವನ ಆದೇಶಿಸಿದರೆ ಮಾತ್ರ ಕಪ್ಪು ಸಮುದ್ರ ಒಪ್ಪಂದಕ್ಕೆ ಸಹಿ ಹಾಕುವುದಾಗಿ ರಷ್ಯಾ ಸ್ಪಷ್ಟಪಡಿಸಿದೆ.
ರಷ್ಯಾ–ಉಕ್ರೇನ್ ಕದನ ವಿರಾಮ ಘೋಷಣೆ ಸಂಬಂಧ ಮಾತುಕತೆಗಳು ಪ್ರಗತಿಯಲ್ಲಿವೆ. ಇದೇ ವಿಚಾರವಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಈಚೆಗೆ ಸುದೀರ್ಘ ಮಾತುಕತೆ ನಡೆಸಿದ್ದರು.
ಆ ವೇಳೆ, 30 ದಿನ ಕದನವಿರಾಮ ಘೋಷಿಸಬೇಕು ಎಂಬ ಟ್ರಂಪ್ ಪ್ರಸ್ತಾವವನ್ನು ಪುಟಿನ್ ತಳ್ಳಿಹಾಕಿದ್ದರು. ಅದರ ಬೆನ್ನಲ್ಲೇ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ದಾಳಿ ನಿಲ್ಲಿಸಲು ರಷ್ಯಾ ನಿರಾಕರಿಸಿದೆ. ಯುದ್ಧ ಇನ್ನಷ್ಟು ಕಾಲ ಮುಂದುವರಿಯುವುದನ್ನು ತಡೆಯಲು ಒತ್ತಡ ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.
ಕದನ ವಿರಾಮ ಮಾತುಕತೆ ಪ್ರಸ್ತಾವವನ್ನು ಪುಟಿನ್ ತಿರಸ್ಕರಿಸಿದ ಹಿಂದೆಯೇ, ರಷ್ಯಾದ ಸೇನೆ ಉಕ್ರೇನ್‌ನ ವಿವಿಧ ನಗರಗಳ ಮೇಲೆ ಸರಣಿ ಡ್ರೋನ್ ದಾಳಿ ನಡೆಸಿತ್ತು. ಈ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಆಸ್ಪತ್ರೆಗಳು, ಇಂಧನ ಮೂಲಸೌಕರ್ಯಗಳಿಗೆ ಹಾನಿಯಾಗಿದೆ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.