ಇರಾನ್ ಮೇಲೆ ಅಮೆರಿಕ ದಾಳಿ
ದುಬೈ: ಅಮೆರಿಕ ನಡೆಸಿದ ಬಾಂಬ್ ದಾಳಿಯಿಂದಾಗಿ ನಮ್ಮ ಪರಮಾಣು ಘಟಕಗಳು ತೀವ್ರ ಹಾನಿಗೊಳಗಾಗಿವೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಬುಧವಾರ ದೃಢಪಡಿಸಿದ್ದಾರೆ.
ರಹಸ್ಯವಾಗಿ ಕಾರ್ಯಾಚರಣೆ ನಡೆಸಿ, ಶತ್ರು ರಾಷ್ಟ್ರಗಳ ಗುರಿಗಳನ್ನು ನಾಶ ಮಾಡುವ ಸಾಮರ್ಥ್ಯವುಳ್ಳ ಬಿ–2 ಯುದ್ಧ ವಿಮಾನಗಳನ್ನು ಬಳಸಿ ಬಾಂಬ್ ಹಾಕಲಾಗಿದೆ. 30 ಅತ್ಯಾಧುನಿಕ ಟೊಮಾಹಾಕ್ ಕ್ಷಿಪಣಿಗಳನ್ನು ಬಳಸಿ ದಾಳಿ ನಡೆಸಲಾಗಿದೆ ಎಂದು ಬಘೈ ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಮಧ್ಯಪ್ರವೇಶಿಸುವ ಕುರಿತು ಶೀಘ್ರವೇ ನಿರ್ಧರಿಸಲಾಗುವುದು ಎಂದು ಹೇಳುತ್ತಿದ್ದ ಅಮೆರಿಕ, ಶನಿವಾರ ತಡರಾತ್ರಿ ಇರಾನ್‌ನ ಮೂರು ಪ್ರಮುಖ ಪರಮಾಣು ಘಟಕಗಳ ಮೇಲೆ ಭಾರಿ ಬಾಂಬ್ ದಾಳಿ ನಡೆಸಿತ್ತು.
‘ಇರಾನ್‌ನ ಫೋರ್ಡೊ, ನಟಾನ್ಜ್ ಹಾಗೂ ಎಸ್‌ಫಹಾನ್‌ನಲ್ಲಿರುವ ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕವು ‘ಆಪರೇಷನ್ ಮಿಡ್‌ನೈಟ್ ಹ್ಯಾಮರ್’ ಹೆಸರಿನ ಸೇನಾ ಕಾರ್ಯಾಚರಣೆ ನಡೆಸಿತ್ತು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಇಸ್ರೇಲ್ ಮತ್ತು ಇರಾನ್ ಪೂರ್ಣ ಪ್ರಮಾಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಹೇಳಿದ್ದರು.
‘ಕತಾರ್ ಸರ್ಕಾರವು ಅಮೆರಿಕದ ಮನವಿಯ ಮೇರೆಗೆ ಇರಾನ್‌ನೊಂದಿಗೆ ಮಾತುಕತೆ ನಡೆಸಿ ಕದನ ವಿರಾಮಕ್ಕೆ ಒಪ್ಪಿಸಿದೆ’ ಎಂದು ಮೂಲಗಳು ತಿಳಿಸಿದ್ದವು. ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಸೋಮವಾರ ರಾತ್ರಿ ಇರಾನ್ ನಡೆಸಿದ ಕ್ಷಿಪಣಿ ದಾಳಿಯ ಬಳಿಕ ಈ ಕ್ಷಿಪ್ರ ಬೆಳವಣಿಗೆ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.