ADVERTISEMENT

ವೆನಿಜುವೆಲಾದಿಂದ ಅಮೆರಿಕಕ್ಕೆ 30-50 ಮಿಲಿಯನ್ ಬ್ಯಾರೆಲ್ ತೈಲ: ಟ್ರಂಪ್ ಘೋಷಣೆ

ಪಿಟಿಐ
Published 7 ಜನವರಿ 2026, 2:12 IST
Last Updated 7 ಜನವರಿ 2026, 2:12 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

(ಪಿಟಿಐ ಚಿತ್ರ)

ವಾಷಿಂಗ್ಟನ್: ವೆನೆಜುವೆಲಾದ 'ಮಧ್ಯಂತರ ಆಡಳಿತ'ವು ಅಮೆರಿಕಕ್ಕೆ ಮಾರುಕಟ್ಟೆ ದರಗಳಲ್ಲಿ 30ರಿಂದ 50 ಮಿಲಿಯನ್ ಬ್ಯಾರೆಲ್ 'ಗರಿಷ್ಠ ಗುಣಮಟ್ಟ'ದ ತೈಲವನ್ನು ಪೂರೈಸಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ 'ಟ್ರುಥ್‌'ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, 'ಈ ವಿಷಯ ಹಂಚಿಕೊಳ್ಳಲು ಸಂತೋಷವಾಗುತ್ತಿದೆ' ಎಂದಿದ್ದಾರೆ.

'ಈ ತೈಲವನ್ನು ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಈ ಹಣ ನನ್ನ ಅಧೀನದಲ್ಲಿ ಇರಲಿದ್ದು, ವೆನೆಜುವೆಲಾ ಮತ್ತು ಅಮೆರಿಕದ ಜನರಿಗೆ ಪ್ರಯೋಜನವಾಗುವಂತೆ ವಿನಿಯೋಗಿಸುವುದನ್ನು ಖಚಿತಪಡಿಸಲಿದ್ದೇನೆ' ಎಂದಿದ್ದಾರೆ.

'ಈ ಯೋಜನೆಯನ್ನು ತಕ್ಷಣ ಕಾರ್ಯಗತಗೊಳಿಸುವಂತೆ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಅವರಿಗೆ ನಿರ್ದೇಶನ ನೀಡಿದ್ದೇನೆ' ಎಂದು ತಿಳಿಸಿದ್ದಾರೆ.

'ಇದು ನೇರವಾಗಿ ಸ್ಟೋರೆಜ್ ಹಡುಗಗಳ ಮೂಲಕ ಅಮೆರಿಕದ ಬಂದರನ್ನು ತಲುಪಲಿದೆ' ಎಂದು ಹೇಳಿದ್ದಾರೆ.

ಏತನ್ಮಧ್ಯೆ ವೆನಿಜುವೆಲಾದ ತೈಲ ಕಂಪನಿಗಳ ನಿರ್ವಾಹಕರೊಂದಿಗೆ ವಾಷಿಂಗ್ಟನ್‌ನ ಓವಲ್ ಕಚೇರಿಯಲ್ಲಿ ಶುಕ್ರವಾರ ಸಭೆ ನಿಗದಿಯಾಗಿದೆ ಎಂದು ತಿಳಿದು ಬಂದಿದೆ.

ವೆನೆಜುವೆಲಾ: 24 ಭದ್ರತಾ ಸಿಬ್ಬಂದಿ ಸಾವು

ವೆನೆಜುವೆಲಾದ ಮೇಲೆ ವಾರಾಂತ್ಯದಲ್ಲಿ ಅಮೆರಿಕ ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ 24 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ವೆನೆಜುವೆಲಾದ ರಾಜಧಾನಿ ಕರಾಕಸ್ ಮೇಲೆ ಶನಿವಾರ ಭಾರಿ ಪ್ರಮಾಣದಲ್ಲಿ ವಾಯು ದಾಳಿ ನಡೆಸಿದ್ದ ಅಮೆರಿಕ, ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್ ಅವರನ್ನು ಸೆರೆ ಹಿಡಿದಿತ್ತು.

ಮತ್ತೊಂದೆಡೆ ವೆನೆಜುವೆಲಾದ ಮೇಲಿನ ದಾಳಿಯನ್ನು ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.