ದುಬೈ: ಅಮೆರಿಕ ಹಾಗೂ ಇಸ್ರೇಲ್ ಸೇನೆಗಳು ಇರಾನ್ ಮೇಲಿನ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಹಲವು ತಾಣಗಳನ್ನು ಗುರಿಯಾಗಿಸಿ ಸೋಮವಾರ ಬಾಂಬ್ ಹಾಗೂ ಕ್ಷಿಪಣಿ ದಾಳಿ ನಡೆಸಿವೆ. ಇರಾನ್ ಕೂಡಾ ಪ್ರತೀಕಾರದ ದಾಳಿ ಮುಂದುವರಿಸಿರುವುದರಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿ ಮತ್ತಷ್ಟು ವಿಷಮಗೊಂಡಿದೆ.
ಇರಾನ್‌ನ ಕ್ಷಿಪಣಿ ವ್ಯವಸ್ಥೆಗಳ ಮೇಲೆ ಭಾರಿ ಪ್ರಮಾಣದಲ್ಲಿ ಬಾಂಬ್ ದಾಳಿ ನಡೆದಿದೆ. ಸೋಮವಾರ ಬೆಳಿಗ್ಗೆಯಿಂದಲೇ ರಾಜಧಾನಿ ಟೆಹರಾನ್ ನಾದ್ಯಂತ ಸ್ಫೋಟದ ಸದ್ದು ಕೇಳಿಬಂದಿದೆ. ಅಮೆರಿಕ– ಇಸ್ರೇಲ್ ಸೇನೆಯು ಇರಾನ್‌ನ ಪ್ರಮುಖ ಸೇನಾ ನೆಲೆಗಳು, ಸರ್ಕಾರಿ ಕಟ್ಟಡಗಳು ಮತ್ತು ಗುಪ್ತಚರ ಸಂಸ್ಥೆಯ ಕೇಂದ್ರಗಳನ್ನು ಗುರಿಯಾಗಿಸಿವೆ.
‘ದಾಳಿ ಆರಂಭವಾದಾಗಿ ನಿಂದ ಇದುವರೆಗೆ 555 ಮಂದಿ ಬಲಿಯಾಗಿದ್ದಾರೆ. ದೇಶದ 131 ನಗರಗಳು ದಾಳಿಗೆ ಗುರಿಯಾಗಿವೆ’ ಎಂದು ಇರಾನ್‌ನ ರೆಡ್ ಕ್ರೆಸೆಂಟ್ ಸಂಸ್ಥೆ ಹೇಳಿದೆ.
ಮತ್ತೊಂದೆಡೆ ಇರಾನ್, ಕೊಲ್ಲಿ ರಾಷ್ಟ್ರಗಳಲ್ಲಿನ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ಮುಂದುವರಿಸಿದೆ. ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ತಿರುಗೇಟು ನೀಡುವುದಾಗಿ ಇರಾನ್ ಭಾನುವಾರ ಎಚ್ಚರಿಸಿತ್ತು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿವಾಸ ಸೇರಿದಂತೆ ಟೆಲ್ ಅವೀವ್, ಹೈಫಾ ಮತ್ತು ಪೂರ್ವ ಜೆರುಸಲೇಂನ ಹಲವು ಗುರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕೋರ್ (ಐಆರ್‌ಜಿಸಿ) ತಿಳಿಸಿದೆ. ಸೋಮವಾರ ಬೆಳಿಗ್ಗೆ ಜೆರುಸಲೇಂನಲ್ಲಿ ಹಲವು ಬಾರಿ ಸ್ಫೋಟದ ಸದ್ದು ಕೇಳಿಸಿದೆ.
ಸೇಡು ತೀರಿಸುವೆವು: ‘ಅಮೆರಿಕದ ಸೈನಿಕರ ಸಾವಿಗೆ ಸೇಡು ತೀರಿಸಿಕೊಳ್ಳುತ್ತೇವೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಎಚ್ಚರಿಸಿದ್ದಾರೆ.
‘ದುಃಖದ ವಿಷಯವೆಂದರೆ ಸಂಘರ್ಷವು ಕೊನೆಗೊಳ್ಳುವ ಮುನ್ನ ಅಮೆರಿಕದ ಇನ್ನಷ್ಟು ಯೋಧರು ಬಲಿ ಆಗಬಹುದು’ ಎಂದೂ ಹೇಳಿದ್ದಾರೆ. ಇರಾನ್ ನಡೆಸಿದ ದಾಳಿಯಲ್ಲಿ ತನ್ನ ನಾಲ್ವರು ಯೋಧರು ಮೃತಪಟ್ಟಿರುವುದನ್ನು ಅಮೆರಿಕ ಸೇನೆ ದೃಢಪಡಿಸಿದೆ.
ಇರಾನ್ ಮೇಲೆ ನಡೆಸುತ್ತಿರುವ ‘ನಿರಂತರ’ ದಾಳಿಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಟೆಹರಾನ್‌ನಲ್ಲಿನ ಗುರಿಗಳ ಮೇಲೆ 100 ಯುದ್ಧ ವಿಮಾನಗಳು ಏಕಕಾಲಕ್ಕೆ ದಾಳಿ ನಡೆಸಿವೆ ಎಂದು ಬ್ರಿಗೇಡಿಯರ್ ಜನರಲ್ ಎಫೀ ಡೆಫ್ರಿನ್ ಮಾಹಿತಿ ನೀಡಿದ್ದಾರೆ. ಇರಾನ್‌ನ ವಾಯುಪಡೆಗೆ ಸೇರಿದ ಕಟ್ಟಡಗಳು, ಕ್ಷಿಪಣಿ ಕಮಾಂಡ್ ಕೇಂದ್ರ ಮತ್ತು ಆಂತರಿಕ ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿಗಳು ನಡೆದಿವೆ.
ಬಿ-2 ಸ್ಟೆಲ್ತ್ ಬಾಂಬರ್ ಯುದ್ಧ ವಿಮಾನವು ಇರಾನ್‌ನ ಗುರಿ ನಿರ್ದೇಶಿತ ಕ್ಷಿಪಣಿ ವ್ಯವಸ್ಥೆಗಳ ಮೇಲೆ 2,000 ಪೌಂಡ್ ತೂಕದ ಬಾಂಬ್ (ಸುಮಾರು 900 ಕೆ.ಜಿ) ಹಾಕಿದೆ ಎಂದು ಅಮೆರಿಕದ ಸೇನೆ ಹೇಳಿದೆ. ‘ಇರಾನ್‌ನ ಒಂಬತ್ತು ಯುದ್ಧನೌಕೆಗಳನ್ನು ಮುಳುಗಿಸಲಾಗಿದೆ ಮತ್ತು ನೌಕಾಪಡೆಯ ಪ್ರಧಾನ ಕಚೇರಿಯನ್ನು ನಾಶಪಡಿಸಲಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.
ಇಸ್ರೇಲ್‌ನಲ್ಲಿ 11 ಸಾವು: ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಜೆರುಸಲೇಂ ಮತ್ತು ಬೈತ್ ಶೆಮ್ಶ್ ನಗರದ ಪ್ರಾರ್ಥನಾ ಮಂದಿರ ಸೇರಿದಂತೆ ಹಲವು ತಾಣಗಳನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸಿದೆ ಎಂದು ರಕ್ಷಣಾ ಕಾರ್ಯಾಚರಣೆ ತಂಡವು ತಿಳಿಸಿದೆ. ‘ದಾಳಿಯಲ್ಲಿ ಒಟ್ಟು 28 ಮಂದಿ ಗಾಯಗೊಂಡಿದ್ದಾರೆ. 11 ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ದಿನದ ಬೆಳವಣಿಗೆ...
ಇರಾನ್‌ನ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಕತಾರ್ ಹೇಳಿಕೆ
ಇರಾನ್ ದಾಳಿಗೆ ಅಮೆರಿಕದ ಮತ್ತೊಬ್ಬ ಯೋಧ ಸಾವು; ಮೃತಪಟ್ಟ ಅಮೆರಿಕದ ಯೋಧರ ಸಂಖ್ಯೆ ನಾಲ್ಕಕ್ಕೆ ಏರಿಕೆ
ಕೊಲ್ಲಿ ರಾಷ್ಟ್ರಗಳಲ್ಲಿ ಇದುವರೆಗೆ ಐದು ಬಲಿ
ಸೌದಿ ಅರೇಬಿಯಾದ ರಾಸ್ ತನೂರದಲ್ಲಿರುವ ತೈಲ ಸಂಸ್ಕರಣಾ ಘಟಕದ ಮೇಲೆ ಇರಾನ್ ದಾಳಿ; ಘಟಕದ ಕಾರ್ಯಾಚರಣೆ ಸ್ಥಗಿತ
ಇರಾನ್‌ನಲ್ಲಿ ತನ್ನ ಒಬ್ಬ ಪ್ರಜೆ ಮೃತಪಟ್ಟಿರುವುದನ್ನು ಖಚಿತಪಡಿಸಿದ ಚೀನಾ
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಸೌದಿ ದೊರೆಯ ಜೊತೆಗೆ ದೂರವಾಣಿ ಮಾತುಕತೆ ನಡೆಸಿದರು
ತನ್ನ ಸೇನಾ ನೆಲೆಗಳನ್ನು ಬಳಸಿಕೊಳ್ಳಲು ಅಮೆರಿಕಕ್ಕೆ ಅನುಮತಿ ನೀಡಿದ ಬ್ರಿಟನ್
ಸೋಮವಾರ ಸಂಜೆಯಿಂದ ‘ಸೀಮಿತ’ ಕಾರ್ಯಾಚರಣೆ ಆರಂಭಿಸಿದ ದುಬೈ ವಿಮಾನ ನಿಲ್ದಾಣ
ಹೊರ್ಮುಜ್ ಜಲಸಂಧಿಯತ್ತ ಹೊರಟ ಮೂರು ಹಡಗುಗಳ ಮೇಲೆ ಇರಾನ್ ದಾಳಿ
ಮಾತುಕತೆ ಇಲ್ಲ: ಇರಾನ್
‘ಅಮೆರಿಕದ ಜತೆ ನಾವು ಮಾತುಕತೆ ನಡೆಸುವುದಿಲ್ಲ’ ಎಂದು ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಮುಖ್ಯಸ್ಥ ಅಲಿ ಲಾರೀಜಾನಿ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಇರಾನ್ ಆಡಳಿತವು ಮಾತುಕತೆ ಪ್ರಾರಂಭಿಸಲು ಪ್ರಯತ್ನಿಸಿದೆ ಎಂಬ ಮಾಧ್ಯಮ ವರದಿಗಳನ್ನು ಅವರು ಅಲ್ಲಗಳೆದರು.
‘ಇರಾನ್‌ನ ಹೊಸ ನಾಯಕತ್ವದೊಂದಿಗೆ ಸಂವಾದಕ್ಕೆ ಮುಕ್ತ ನಾಗಿದ್ದೇನೆ. ಅವರು (ಇರಾನ್) ಮಾತುಕತೆ ನಡೆಸಲು ಬಯಸಿದ್ದಾರೆ. ನಾನು ಕೂಡಾ ಮಾತನಾಡಲು ಒಪ್ಪಿಕೊಂಡಿದ್ದೇನೆ’ ಎಂದು ಟ್ರಂಪ್ ಭಾನುವಾರ ಹೇಳಿದ್ದರು.
ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ದೀರ್ಘಾವಧಿಯ ಯುದ್ಧ ನಡೆಸಲು ಇರಾನ್ ಸಿದ್ಧತೆ ಮಾಡಿಕೊಂಡಿದೆ. ಶತ್ರುಗಳಿಗೆ ಪಾಠ ಕಲಿಸಲಿದೆ.– ಅಲಿ ಲಾರೀಜಾನಿ, ಇರಾನ್‌ನ ಸೆಕ್ಯುರಿಟಿ ಕೌನ್ಸಿಲ್ ಮುಖ್ಯಸ್ಥ
ಇರಾನ್ ಮೇಲಿನ ಸೇನಾ ಕಾರ್ಯಾಚರಣೆ ತಕ್ಷಣ ನಿಲ್ಲಲ್ಲ. ನಾಲ್ಕರಿಂದ ಐದು ವಾರಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ.– ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.