
ನವೆಂಬರ್‌ನತ್ತ ನಾಡು ಹೆಜ್ಜೆ ಇಡುವ ಹೊತ್ತಿಗೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ‘ಬಿರುಗಾಳಿ’ಯ ಸೂಚನೆಗಳು ಗೋಚರಿಸತೊಡಗಿವೆ. ಇಲ್ಲಿಯವರೆಗೆ ‘ನಾಯಕತ್ವ ಬದಲಾವಣೆ’ ಪದದ ಜಾಗರಣೆ ಮಾಡುತ್ತಿದ್ದ ನಾಯಕರು, ಸಿದ್ದರಾಮಯ್ಯನವರ ‘ಉತ್ತರಾಧಿಕಾರಿ’ ಯಾರೆಂಬ ಚರ್ಚೆಯಲ್ಲಿ ತಲ್ಲೀನರಾಗಿದ್ದಾರೆ.
ಸಿದ್ದರಾಮಯ್ಯನವರ ಮಗ ಡಾ.ಯತೀಂದ್ರ ಅವರು ತಮ್ಮ ತಂದೆಯ ಪರವಾಗಿ ಕಾಂಗ್ರೆಸ್‌ನ ಬಣ ರಾಜಕೀಯಕ್ಕೆ ತಮಗೆ ತಿಳಿಯದ ‘ವೈದ್ಯ ವಿದ್ಯೆ’ ಮೂಲಕ ಚಿಕಿತ್ಸೆ ನೀಡಲು ಹೊರಟಿದ್ದು, ಚರ್ಚೆಯ ದಿಕ್ಕು ಬದಲಾಗಲು ಕಾರಣ. ಬಲೀಂದ್ರ ಪೂಜೆಯ ದಿನ ಬೆಳಗಾವಿಯಲ್ಲಿ ಮಾತನಾಡಿದ ಯತೀಂದ್ರ, ‘ನಮ್ಮ ತಂದೆ ರಾಜಕಾರಣದ ಸಂಧ್ಯಾಕಾಲದಲ್ಲಿದ್ದಾರೆ. ಸೈದ್ಧಾಂತಿಕ ರಾಜಕಾರಣದಲ್ಲಿ ನಂಬಿಕೆ ಇಟ್ಟಿರುವ ಸತೀಶ ಜಾರಕಿಹೊಳಿ ಅವರು ಸಿದ್ದರಾಮಯ್ಯ ನಂತರ ಅಹಿಂದ ನಾಯಕತ್ವ ವಹಿಸಿಕೊಳ್ಳಲು ಸಮರ್ಥರು’ ಎಂದು ಹೇಳಿದ್ದರು.
‘ಮುಂದಿನ ದಸರಾಗಳನ್ನು ನಾನೇ ಉದ್ಘಾಟಿಸುವೆ ಎಂಬ ಭರವಸೆ ಇದೆ. ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ, ನವೆಂಬರ್ ಕ್ರಾಂತಿ ಬರೀ ಭ್ರಾಂತಿ’ ಎಂದು ಸಿದ್ದರಾಮಯ್ಯನವರು ಪ್ರತಿಪಾದಿಸುತ್ತಲೇ ಇದ್ದಾರೆ. ಪರಿಸ್ಥಿತಿ ಹೀಗಿರುವಾಗ, ಯತೀಂದ್ರ ಅವರು ‘ಉತ್ತರಾಧಿಕಾರಿ’ ಪ್ರಶ್ನೆಯನ್ನು ಮುಂಚೂಣಿಗೆ ತಂದಿದ್ದೇಕೆ?
ತಮ್ಮ ತಂದೆಯ ಜತೆ ಚರ್ಚಿಸಿ ಯತೀಂದ್ರ ಇಂತಹ ಮಾತು ಆಡಿದರೇ? ವೇದಿಕೆಯಲ್ಲಿದ್ದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಮೆಚ್ಚಿಸಲು ಆಕಸ್ಮಿಕವಾಗಿ ಇಂತಹ ಅಣಿಮುತ್ತು ಉದುರಿಸಿದರೇ? ಅಥವಾ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಹೀಗೆ ಘೋಷಿಸಿದರೇ? ಇಂತಹ ಪ್ರಶ್ನೆಗಳಿಗೆ ಸದ್ಯಕ್ಕಂತೂ ಉತ್ತರವಿಲ್ಲ. ಆದರೆ, ಯತೀಂದ್ರ ಮಾತು ಕಾಂಗ್ರೆಸ್ ಎಂಬ ಸಮುದ್ರದಲ್ಲಿ ಅಲೆಗಳನ್ನೇ ಎಬ್ಬಿಸಿದೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಂತೂ ಎದ್ದು ಕುಳಿತಿದ್ದಾರೆ.
‘ಎರಡೂವರೆ ವರ್ಷದ ಬಳಿಕ ಅಧಿಕಾರ ಬಿಟ್ಟುಕೊಡಲು ತಮ್ಮ ತಂದೆಗೆ ಹೈಕಮಾಂಡ್ ಹೇಳಿಲ್ಲ’ ಎಂದು ಯತೀಂದ್ರ ಹೇಳಿದ್ದರು. ಬದಲಾವಣೆ ಇಲ್ಲ ಎಂದ ಮೇಲೆ, ಉತ್ತರಾಧಿಕಾರಿಯಾಗಿ ಸತೀಶ ಜಾರಕಿಹೊಳಿ ಹೆಸರನ್ನು ಹರಿಯಬಿಟ್ಟಿದ್ದೇಕೆ?
‘ಎರಡೂವರೆ ವರ್ಷದ ಬಳಿಕ ನಾಯಕತ್ವ ಬದಲಾವಣೆಯಾಗಲಿದೆ’ ಎಂದು ಮುಖ್ಯಮಂತ್ರಿ ಸ್ಥಾನಕ್ಕಾಗಿ ಛಲದಿಂದ ಕಾಯುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತರು ಆಗಾಗ ಹೇಳುತ್ತಲೇ ಬಂದಿದ್ದಾರೆ. ‘ಅಂತಹ ಒಪ್ಪಂದ ಏನೂ ನಡೆದಿಲ್ಲ’ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಇದೇ ನವೆಂಬರ್‌ಗೆ ಎರಡೂವರೆ ವರ್ಷವಾಗಲಿದೆ. ಈ ಹೊತ್ತಿಗೆ ‘ಕ್ರಾಂತಿ’ ಸಂಭವಿಸಲಿದೆ ಎಂಬ ಚರ್ಚೆ ನಡೆಯುತ್ತಲೇ ಇದೆ.
ಸಂಭಾವ್ಯ ಅಥವಾ ಊಹಾತ್ಮಕ ‘ಕ್ರಾಂತಿ’ಯನ್ನು ತಡೆಯಲು ಸಿದ್ದರಾಮಯ್ಯನವರ ಆಪ್ತ ಬಣ ಪದೇ ಪದೇ ದಾಳಗಳನ್ನು ಉರುಳಿಸುತ್ತಲೇ ಇದೆ. ‘ನವೆಂಬರ್‌ನಲ್ಲಿ ಸಂಪುಟ ಪುನರ್‌ರಚನೆಯಾಗಲಿದ್ದು, 10–12 ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗುತ್ತದೆ’ ಎಂಬ ಸುದ್ದಿಯೊಂದನ್ನು ಹಬ್ಬಿಸಲಾಗಿತ್ತು. ಅದರ ಮುಂದುವರಿದ ಭಾಗದಂತೆ ‘ಉತ್ತರಾಧಿಕಾರಿ’ ದಾಳ ಉರುಳಿಸಲಾಗಿದೆ.
ಬಿಹಾರ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆ ಮುನ್ನೆಲೆಗೆ ಬಂದರೆ ಅಥವಾ ಇದೇ ವಿಧಾನಸಭೆ ಅವಧಿಯಲ್ಲೇ ಮುಖ್ಯಮಂತ್ರಿಯಾಗಬೇಕೆಂಬ ಹಟಕ್ಕೆ ಬಿದ್ದಿರುವ ಶಿವಕುಮಾರ್, ತಮ್ಮದೇ ಆದ ರೀತಿಯೊಳಗೆ ಕಾರ್ಯಾಚರಣೆಗೆ ಇಳಿದರೆ ಅದಕ್ಕೆ ಪ್ರತಿ ಕಾರ್ಯತಂತ್ರದ ಭಾಗವಾಗಿ ‘ಉತ್ತರಾಧಿಕಾರಿ’ ವಿಷಯವನ್ನು ಚರ್ಚೆಗೆ ಬಿಡಲಾಗಿದೆ ಎಂಬ ಮಾತುಗಳು ಕಾಂಗ್ರೆಸ್ ಪಡಸಾಲೆಯಲ್ಲಿ ರಿಂಗಣಿಸುತ್ತಿವೆ.
ಈ ಅವಧಿಯನ್ನು ಪೂರ್ಣಗೊಳಿಸಲು ಅಣಿಯಾಗಿರುವ ಸಿದ್ದರಾಮಯ್ಯನವರು, ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ತಮ್ಮದೇ ಆದ ಕಾರ್ಯಶೈಲಿ, ರಾಜಕೀಯ ನಡೆ ಅನುಸರಿಸುತ್ತಿದ್ದಾರೆ. ಅದಕ್ಕಾಗಿಯೇ, ಸಚಿವ ಸಂಪುಟ ಪುನರ್ ರಚನೆಯ ಪ್ರಸ್ತಾವವನ್ನು ಮುಂಚೂಣಿಗೆ ತಂದರು. ಸಚಿವರಾಗಿರುವವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಹಾಗೂ ಆಕಾಂಕ್ಷಿ ಶಾಸಕರು ಸಚಿವ ಸ್ಥಾನಕ್ಕಾಗಿ ತಮ್ಮ ಸುತ್ತಲೇ ಗಿರಕಿ ಹೊಡೆಯುತ್ತಿರಬೇಕು ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು. ಸಚಿವ ಸ್ಥಾನ ಸಿಗದೇ ತಮ್ಮಿಂದ ದೂರವಾಗಬಹುದಾದ ಶಾಸಕರು ಮತ್ತೊಂದು ‘ಶಕ್ತಿ ಕೇಂದ್ರ’ದ ಕಡೆ ಆಕರ್ಷಿತರಾಗದಂತೆ ತಡೆಯುವುದೂ ಈ ಚಾಣಾಕ್ಷ ನಡೆಯ ಭಾಗ.
ನವೆಂಬರ್‌ನಲ್ಲಿ ಪದತ್ಯಾಗ ಮಾಡಲೇಬೇಕಾದ ಸಂಭಾವ್ಯ ಸನ್ನಿವೇಶ ಸೃಷ್ಟಿಯಾದರೆ, 2028ರವರೆಗೂ ಕುರ್ಚಿ ಭದ್ರ ಪಡಿಸಿಕೊಳ್ಳಲು ‘ಉತ್ತರಾಧಿಕಾರಿ’ ತಂತ್ರವನ್ನು ರೂಪಿಸಲಾಗಿದೆಯೇ ಎಂಬ ಚರ್ಚೆಯೂ ಇದೆ. ನಾಯಕತ್ವ ಬದಲಾವಣೆಯ ಸಂದರ್ಭ ಎದುರಾದರೆ, ಶಿವಕುಮಾರ್ ಸಹಜ ಉತ್ತರಾಧಿಕಾರಿಯಾಗುತ್ತಾರೆ. ಅವರಿಗೆ ಎದುರಾಗಿ ಮೂರ್ನಾಲ್ಕು ಪ್ರಬಲ ಸ್ಪರ್ಧಾಳುಗಳನ್ನು ಸೃಷ್ಟಿಸಿದರೆ, ಪೈಪೋಟಿ ಶುರುವಾಗುತ್ತದೆ. ಸರ್ಕಾರವನ್ನು ಮುನ್ನಡೆಸುತ್ತಿರುವ ಸಿದ್ದರಾಮಯ್ಯ, ಕಾಂಗ್ರೆಸ್‌ನ ಹೆಗ್ಗುರುತುಗಳಾದ ‘ಗ್ಯಾರಂಟಿ’ಗಳಿಗೆ ಕುತ್ತು ಬರದಂತೆ ಕಾಪಾಡುತ್ತಿದ್ದಾರೆ. ಹೀಗಿರುವಾಗ, ನಾಯಕತ್ವದ ಪೈಪೋಟಿಗೆ ಬಿದ್ದು, ಸರ್ಕಾರವನ್ನು ಕೆಡವಿಕೊಳ್ಳುವುದಕ್ಕಿಂತ ಇರುವ ನಾಯಕನನ್ನೇ ಮುಂದುವರಿಸುವ ತೀರ್ಮಾನಕ್ಕೆ ಹೈಕಮಾಂಡ್ ಬರಲಿ ಎಂಬ ಲೆಕ್ಕಾಚಾರ ‘ಉತ್ತರಾಧಿಕಾರಿ’ ಪ್ರಸ್ತಾವದ ಹಿಂದೆ ಇದೆ.
ಸತೀಶ ಜಾರಕಿಹೊಳಿ ಹೆಸರನ್ನು ಯತೀಂದ್ರ ಪ್ರಸ್ತಾಪಿಸುತ್ತಿದ್ದಂತೆ, ‘ನಾವ್ಯಾರೂ ಸನ್ಯಾಸಿಗಳಲ್ಲ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ. ತಾವೂ ಒಂದು ಕೈ ನೋಡಿಯೇ ಬಿಡೋಣ ಎಂದು ಗೃಹ ಸಚಿವ ಜಿ. ಪರಮೇಶ್ವರ ಅಣಿಯಾಗಿದ್ದಾರೆ. ಹೀಗೆ, ಹಲವರು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ಹೈಕಮಾಂಡ್ ಮೇಲೆ ಒತ್ತಡ ಹಾಕಿದರೆ, ನಾಯಕತ್ವ ಬದಲಾವಣೆಯ ಗೋಜಿಗೆ ಹೋಗುವುದು ಬೇಡ ಎಂಬ ಮನಸ್ಥಿತಿಗೆ ಪಕ್ಷದ ರಾಷ್ಟ್ರೀಯ ನೇತಾರರು ಬರಬಹುದು ಎಂಬ ತರ್ಕವೇ ಹೊಸ ಬೆಳವಣಿಗೆಯ ಹಿಂದಿದೆ ಎಂಬುದು ರಹಸ್ಯವೇನಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.