ADVERTISEMENT

ಗೋಮೂತ್ರ ಪೇಟೆಂಟ್: ಪರಂಪರೆ ನಮ್ಮದು, ಪುರಾವೆ ಯಾರು ಕೊಟ್ಟರು?

ರಾಧಾಕೃಷ್ಣ ಎಸ್. ಭಡ್ತಿ
Published 8 ಡಿಸೆಂಬರ್ 2025, 11:21 IST
Last Updated 8 ಡಿಸೆಂಬರ್ 2025, 11:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇವತ್ತಿಗೆ ಸರಿಯಾಗಿ 23 ವರ್ಷಗಳ ಹಿಂದೆ, ಡಿಸೆಂಬರ್ 8ರಂದೇ ನಮ್ಮ ಪಾರಂಪರಿಕ, ಔಷಧೀಯ ಮೌಲ್ಯದ ವಸ್ತುವೊಂದರ ಮೇಲಿನ ಆಧಿಕಾರಯುತ ಹಕ್ಕುಸ್ವಾಮ್ಯವನ್ನು ಅಮೆರಿಕ ಕಸಿದುಕೊಂಡು ಬಿಟ್ಟಿತು. ಭಾರತದ ಸಂಸ್ಕೃತಿ, ಆಯುರ್ವೇದ ಪರಂಪರೆ ಮತ್ತು ಗ್ರಾಮೀಣ ವೈದ್ಯ ಪದ್ಧತಿಗಳಲ್ಲಿ ಶತಮಾನಗಳಿಂದ ಉಪಯೋಗವಾಗುತ್ತಿರುವ ಗೋಮೂತ್ರದ ಪೇಟೆಂಟ್ ಇದೇ ದಿನ ಅಮೆರಿದ ಪಾಲಾಗಿಬಿಟ್ಟಿತು. ಇದು ಅಮೆರಿಕದ ಸಂಶೋಧಕರ, ವಿಜ್ಞಾನಿಗಳ ಗೆಲುವು ಎನ್ನುವದಕ್ಕಿಂತ ನಮ್ಮ ಸಾಂಸ್ಕೃತಿಕ, ಬೌದ್ಧಿಕ, ಪಾರಂಪರಿಕ ಮೌಲ್ಯಗಳ ಬಗೆಗೆ ನಮಗಿರುವ ಅಸಡ್ದೆ, ನಿರ್ಲಕ್ಷ್ಯದ ಪ್ರತೀಕ ಎನ್ನದೇ ವೀಧಿಯಿಲ್ಲ.

ಮೇಲ್ನೋಟಕ್ಕೆ ಇದು ಸಾಮಾನ್ಯ ಸುದ್ದಿಯಾಗಿ ಕಂಡರೂ, ಸಾವಿರಾರು ವರ್ಷಗಳಿಂದ ಭಾರತ ದಕ್ಕಿಸಿಕೊಂಡಿದ್ದ ಜ್ಞಾನವನ್ನು ಎರವಲು ಪಡೆದಿದ್ದ ಪಾಶ್ಚಾತ್ಯ ಪಂಡಿತರು ತಮ್ಮದೇ ಸಂಶೋಧನೆ ಎಂಬಂತೆ ಸಾರಿದ ಸುಳ್ಳಿಗೆ ಇದೇ ದಿನ ‘ಅಧಿಕೃತ’ ಎಂಬ ಮುದ್ರೆ ಬಿದ್ದುದು ವಿಷಾದನೀಯ ಮಾತ್ರವಲ್ಲ, ನಮ್ಮ ಗಂಭೀರ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ಇದು ಕೇವಲ ಗೋಮೂತ್ರದ ಪ್ರಶ್ನೆಯೊಂದೇ ಅಲ್ಲ — ಅರಿಸಿನದ ಕಥೆಯೂ ಇದೇ. ಹಾಗೆಯೇ ಬೇವು, ನೇರಳೆ, ಬಾಸ್ಮತಿ ಅಕ್ಕಿ ಸೇರಿದಂತೆ ಹಲವು ಔಷಧೀಯ ಮೂಲಿಕಗಳವರೆಗೆ ಎಲ್ಲವೂ ಒಂದೊಂದಾಗಿ ಪರರ ಪಾಲಾಗುತ್ತಿದೆ.  ಭಾರತವೇ ಮೂಲವಾಗಿದ್ದ ಹಲವು ಪಾರಂಪರಿಕ ಜ್ಞಾನಕ್ಕೆ ಪರರೇ ಪೇಟೆಂಟ್ ಪಡೆದ ಇಂಥ ಸುದೀರ್ಘ ಪಟ್ಟಿಯೇ ಇದೆ. ಹಾಗಾದರೆ ಇಂಥದಕ್ಕೆ ಕಾರಣವೇನು? ಜ್ಞಾನ– ಮೂಲ ಎಲ್ಲವೂ ನಮ್ಮದೇ ಆಗಿದ್ದರೂ ಇದರ ಮೇಲಿನ ಹಕ್ಕು ಪ್ರತಿಪಾದನೆಯಲ್ಲಿ ಸೋಲುತ್ತಿದ್ದೇವೆ ಯಾಕೆ? ಉತ್ತರ ಅತಿ ಸರಳ. ನಮ್ಮದೆಲ್ಲವೂ ನಮ್ಮದೇ ಎನ್ನುವುದಕ್ಕೆ ಜಗತ್ತಿನ ಅಧಿಕೃತ ವೇದಿಕೆಗಳಲ್ಲಿ ಸೂಕ್ತ ಪುರಾವೆ ನೀಡುವಲ್ಲಿ ನಾವು ಸೋಲುತ್ತಿದ್ದೇವೆ. 

ಸ್ಮರಣೆಯೊಂದೇ ಸಾಲದು!

ಭಾರತದಲ್ಲಿ ಗೋಮೂತ್ರವನ್ನು ಧಾರ್ಮಿಕ, ಸಾಂಸ್ಕೃತಿಕ, ಹಾಗೂ ಆಯುರ್ವೇದ ಕ್ಷೇತ್ರಗಳಲ್ಲಿ ಲಾಗಾಯ್ತಿನಿಂದ ಯಥೇಚ್ಛವಾಗಿ ಉಪಯೋಗಿಸುತ್ತ ಬಂದಿದ್ದರೂ, ಇಂಥ ಜ್ಞಾನವನ್ನು ಜಾಗತಿಕ ಪೇಟೆಂಟ್ ವ್ಯವಸ್ಥೆಯಲ್ಲಿ ‘ಪರಂಪರಾ ಮಾಹಿತಿ’ಯಾಗಿ ಸಾಬೀತುಪಡಿಸಬೇಕಿತ್ತು. ಹಾಗೊಮ್ಮೆ ಮಾಡದೇ ಹೋಗಿದ್ದರಿಂದ ಅಮೆರಿಕ ಅಥವಾ ಪಾಶ್ಚಾತ್ಯ ಪೇಟೆಂಟ್ ಸಂಸ್ಥೆಗಳ ಮುಂದೆ ‘ಇದು ನಮಗೆ ಗೊತ್ತು’ ಎಂಬ ಕೇವಲ ಬಾಯಿ ಮಾತಿನ ಪ್ರತಿಪಾದನೆ ನಿಲ್ಲದೇ ಹೋಗುತ್ತಿದೆ.

ಹಾಗಾದರೆ ಪೇಟೆಂಟ್ ಪಡೆಯುವುದಕ್ಕೆ ಮುಖ್ಯವಾಗಿ ಬೇಕಾದುದೇನು?

ಮೂರು ಪ್ರಮುಖ ಅಂಶಗಳು ಅವಶ್ಯಕ: ಮೊದಲನೆಯದ್ದು ವೈಜ್ಞಾನಿಕ ಹಾಗೂ ಸಾಂಸ್ಥಿಕ ಮಟ್ಟದ ಸಂಶೋಧನೆ. ಎರಡನೆಯದ್ದು ಸ್ಪಷ್ಟ ದಾಖಲೆ ಮತ್ತು ಪ್ರಕಟಿತ ಜ್ಞಾನ. ಇದಲ್ಲದೇ ವೈಶಿಷ್ಟ್ಯಪೂರ್ಣ, ಹೊಸ ಸಂಯೋಗ ಅಥವಾ ವಿಧಾನವನ್ನು ಸೂಕ್ತ ವೇದಿಕೆಯಲ್ಲಿ ಸಾಬೀತುಪಡಿಸಬೇಕಾದುದ್ದು.

ಭಾರತದಲ್ಲಿ ವೇದ ಪಠಣ ಸೇರಿದಂತೆ ನಮ್ಮೆಲ್ಲ, ಪಾರಂಪರಿಕ ಜ್ಞಾನ ಮೌಖಿಕವಾಗಿ ತಲೆಮಾರುಗಳಿಗೆ ಹರಿದು ಬಂದಿದೆ. ಇದಕ್ಕೆ ತೀರಾ ಇತ್ತೀಚಿನವರೆಗೂ ಲಿಖಿತ ಗ್ರಂಥಸ್ಥ ಸ್ವರೂಪ ಇರಲಿಲ್ಲ.  ಆಯುರ್ವೇದ ಗ್ರಂಥಗಳಲ್ಲಿ ಇದ್ದರೂ ಆ ಗ್ರಂಥಗಳಿಗೆ ವಿಶ್ವಪಟಲದಲ್ಲಿ ಮಾನ್ಯತೆ ಕಲ್ಪಿಸುವ ವ್ಯವಸ್ಥೆಯ ಕೊರತೆ ಇತ್ತು. ಈ ಎರಡೂ ಕಾರಣಗಳು ಇಂಥ ವಿಚಾರದಲ್ಲಿ ಭಾರತದ ಹಿನ್ನಡೆಗೆ ಪ್ರಮುಖ ಕಾರಣ. 

ಗೋಮೂತ್ರ ಪ್ರಕರಣದಲ್ಲಿ ಎಡವಿದ್ದೆಲ್ಲಿ? 

ಅಮೆರಿಕದಲ್ಲಿ ಪೇಟೆಂಟ್ ಪಡೆದ ಸಂಶೋಧಕರು ಗೋಮೂತ್ರದ ರಾಸಾಯನಿಕ ಸಂಯೋಜನೆಗಳಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿರ್ದಿಷ್ಟ ತಂತ್ರವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿದರು. ಆದರೆ ಭಾರತಕ್ಕಿದ್ದ ಪ್ರಾಚೀನ ಬಳಕೆ ಇದಕ್ಕಿಂತ ಸಾಮಾನ್ಯ ಸ್ವರೂಪದ್ದಾಗಿತ್ತು. ಅದು ಕೇವಲ ಪಾರಂಪರಿಕ ವೈದ್ಯ ಪದ್ಧತಿ; ನಿಯಂತ್ರಿತ ಪ್ರಯೋಗಶಾಲಾ ಅಧ್ಯಯನ ಅಲ್ಲ.

ಪೇಟೆಂಟ್ ಕಾನೂನಿನಲ್ಲಿ ಸಾಂಪ್ರದಾಯಿಕ ಜ್ಞಾನವಾಗಲೀ, ಸಾಮಾನ್ಯ ಉಪಯೋಗ (General Prior Use)ವಾಗಲಿ ಗಣನೆಗೆ ಬರುವುದಿಲ್ಲ.  ಸ್ಪಷ್ಟ ಮತ್ಯು ನಿಖರ ಪ್ರಯೋಗಶಾಲೆಯಲ್ಲಿನ ಫಲಿತಾಂಶ (Novel Process)ಕ್ಕೆ ಮಾತ್ರ ಮಾನ್ಯತೆ. ಹೀಗಾಗಿ, ಪರಂಪರೆ ಭಾರತದದ್ದಾದರೂ ‘ಹೊಸ ವೈಜ್ಞಾನಿಕ ವಿಧಾನ’ದ ಪೇಟೆಂಟ್ ಅಮೆರಿಕಕ್ಕೆ ದಕ್ಕಿತು.

ಬೌದ್ಧಿಕ ಆಸ್ತಿಯ ನೋಂದಣಿಯಲ್ಲಿನ ವೈಫಲ್ಯ

1. ದಾಖಲಾತಿ ಕೊರತೆ

ಅಯುರ್ವೇದ, ಸಿದ್ಧ, ಯೋಗ, ಗ್ರಾಮೀಣ ವೈದ್ಯ ಪದ್ಧತಿಗಳಲ್ಲಿ ಅನೇಕ ಸಂಗತಿಗಳು ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿವೆ. ಇಂದಿಗೂ ಇವುಗಳಲ್ಲಿ ಅವೆಷ್ಟೋ ವಿಷಯಗಳು ವಿಜ್ಞಾನ ಪತ್ರಿಕೆಗಳಲ್ಲಿ (science medical journal) ಲಿಖಿತವಾಗಿಲಿಲ್ಲ. ಪೇಟೆಂಟ್ ವ್ಯವಸ್ಥೆ ಯಾವುದೇ ಮೌಖಿಕ ಇತಿಹಾಸವನ್ನು ಪರಿಗಣಿಸುತ್ತಿಲ್ಲ.

2. ವಿಜ್ಞಾನ–ಪರ್ಯಾಯವಿಲ್ಲದ ಸಂಶೋಧನೆ

ಭಾರತೀಯ ಔಷಧಗಳ ಪರಂಪರೆ ಇದ್ದರೂ, ಅದನ್ನು ಆಧುನಿಕ ವೈದ್ಯಕೀಯ ಶೈಲಿಯಲ್ಲಿ ಪರೀಕ್ಷಿಸಿ ಫಲಿತಾಂಶ ಪ್ರಕಟಿಸುವ ಪ್ರಯತ್ನಗಳು ತೀರಾ ಅಲ್ಪ.

ಉದಾಹರಣೆಗೆ: ಗೋಮೂತ್ರದ ರಾಸಾಯನಿಕ ಸಂಯೋಜನೆ, ಪ್ರತಿರೋಧಕ ಪರಿಣಾಮ, ಪ್ರಮಾಣ ನಿಯಂತ್ರಣ... ಇವುಗಳಲ್ಲಿನ ಸಂಶೋಧನೆಗೆ ಸಾಂಸ್ಥಿಕ ಮಟ್ಟದಲ್ಲಿ ಪ್ರೋತ್ಸಾಹ ಲಭ್ಯವಾಗಲಿಲ್ಲ.

3. ಸರ್ಕಾರಗಳ ಮಟ್ಟದ ನಿರ್ಲಕ್ಷ್ಯ

1990ರ ದಶಕದವರೆಗೂ ಭಾರತದಲ್ಲಿ ಪರಂಪರೆಯ ಜ್ಞಾನ ರಕ್ಷಣೆ ಕುರಿತ ರಾಷ್ಟ್ರೀಯ ನೀತಿ ಇರಲೇ ಇಲ್ಲ. ನಂತರ Traditional Knowledge Digital Library (TKDL) ಅಸ್ತಿತ್ವಕ್ಕೆ ಬಂದರೂ ಅದು ಜಾರಿಯಾಗಿದ್ದು ದಶಕಗಳ ನಂತರ; ಅಷ್ಟರಲ್ಲಿ ಹಲವು ಪೇಟೆಂಟ್ ಪ್ರಕರಣಗಳು ನಮ್ಮ ಕೈ ಜಾರಿ ಪಾಶ್ಚಾತ್ಯ ದೇಶಗಳ ಪಾಲಾಗಿಬಿಟ್ಟಿದ್ದವು.

4. ಪೇಟೆಂಟ್ ವ್ಯವಸ್ಥೆಯ ಅರಿವೇ ಇಲ್ಲ

ನಮ್ಮ ಇಡೀ ಶೈಕ್ಷಣಿಕ ವಿಧಾನವೇ ಬೌದ್ಧಿಕ ಆಸ್ತಿಯ ಅರಿವಿನಿಂದ ಬಲು ದೂರ. ಹತ್ತು ಹಲವು ಮಹತ್ವದ ಸಂಶೋಧನೆಗಳು ನಡೆಯುತ್ತಲೇ ಇದ್ದರೂ ಸಂಶೋಧಕರಿಗೆ ತಮ್ಮ ಮಹತ್ವದ ಹೊಳಹುಗಳಿಗೆ ಪೇಟೆಂಟ್ ಪಡೆಯಬೇಕೆಂಬ ಕನಿಷ್ಠ ಅರಿವೇ ಇಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಬಹುತೇಕರದ್ದು ನಿರ್ಲಕ್ಷ್ಯ. ಪಾಶ್ಚಾತ್ಯ ರಾಷ್ಟ್ರಗಳು ವಿಜ್ಞಾನಕ್ಕೂ, ವಾಣಿಜ್ಯಕ್ಕೂ ಸಂಶೋಧನೆಯನ್ನು ಬಳಸುತ್ತವೆ; ನಾವು ಪರಂಪರೆಯನ್ನು ಕೇವಲ ಸಂಪ್ರದಾಯವಾಗಿ ನೋಡಿದ್ದೇವೆ.

ಪಾಠ ಕಲಿಸದ ಅರಿಸಿನ ಪ್ರಕರಣ

ಅರಿಸಿನ (Turmeric) ಬಳಸಿ ಗಾಯಗಳ ಚಿಕಿತ್ಸೆ ಹಾಗೂ ಆ್ಯಂಟಿಬಯೋಟಿಕ ಆಗಿ ಇದರ ಬಳಕೆಯ ಪದ್ಧತಿ ಭಾರತದಲ್ಲಿ ಸಹಸ್ರಾರು ವರ್ಷಗಳಿಂದಲೂ ಇದೆ. ಆದರೆ 1995ರಲ್ಲಿ ಅಮೆರಿಕದ ಎರಡು ಸಂಶೋಧಕರು ಅರಿಸಿನದಿಂದ ಗಾಯಗಳ ಗುಣಪಡಿಸುವ ಗುಣಕ್ಕೆ ಪೇಟೆಂಟ್ ಪಡೆದುಬಿಟ್ಟರು. ಆ ಬಳಿಕವಷ್ಟೇ ಎಚ್ಚೆತ್ತ ಭಾರತ ತನ್ನ ಕಾನೂನು ಹೋರಾಟವನ್ನು ಆರಂಭಿಸಿದ್ದು. ಕೊನೆಗಂತೂ ಭಾರತ ಅದನ್ನು ರದ್ದುಗೊಳಿಸಲು ಸಫಲವಾಗಿದ್ದರೂ ಪಾಶ್ಚಾತ್ಯರು ದಾರಿ ತಪ್ಪಿಸುವ ಕೆಲಸವನ್ನು ಮುಂದುವರಿಸಿಕೊಂಡೇ ಬಂದಿದ್ದಾರೆ.

ಇದು ಒಂದು ಪ್ರಶ್ನೆಗೆ ಉದಾಹರಣೆಯಷ್ಟೇ. ಎಷ್ಟೋ ವಿಚಾರದಲ್ಲಿ ಇದಾಗುತ್ತಿದೆ. ಸೋತ ನಂತರ ಸೋಲಿನ ವಿರುದ್ಧ ಹೋರಾಡುವುದಕ್ಕಿಂತ, ಗೆಲ್ಲಲು ಮುಂಚಿತವಾಗಿಯೇ ಪ್ರಯತ್ನಿಸುವುದು ವಿಹಿತವಲ್ಲವೇ?

ಜ್ಞಾನವನ್ನೂ ಕದಿಯುವ ಚಾಳಿ 

ಜಾಗತಿಕ ಮಾರುಕಟ್ಟೆಯಲ್ಲಿ ಪರಂಪರೆಯ ಜ್ಞಾನಕ್ಕೆ ಈಗ ಕೋಟ್ಯಂತರ ಮೌಲ್ಯ. ಪಾಶ್ಚಾತ್ಯ ರಾಷ್ಟ್ರಗಳ ಕಂಪನಿಗಳು ‘ಬಯೋ–ಪ್ರಾಸ್‌ಪೆಕ್ಟಿಂಗ್’ ಹೆಸರಿನಲ್ಲಿ ನಮ್ಮ ಜ್ಞಾನವನ್ನು ಅಧ್ಯಯನ ಮಾಡಿ ಹೊಸ ಸಂಯೋಗದ ಹೆಸರಿನಲ್ಲಿ ಪೇಟೆಂಟ್ ಪಡೆಯುವ ಪ್ರವೃತ್ತಿ ಹೆಚ್ಚಿದೆ. ಈ ಹಂತದಲ್ಲಾದರೂ ಭಾರತ ಎಚ್ಚೆತ್ತುಕೊಳ್ಳಬೇಕಿದೆ. ಇದಕ್ಕಾಗಿ ನಮ್ಮ ಎಂದಿನ ಪಾರಂಪರಿಕ ಜ್ಞಾನವನ್ನು ವೈಜ್ಞಾನಿಕ ದಾಖಲೀಕರಣ ಮಾಡಲು ಕ್ರಮ ಕೈಗೊಳ್ಳಬೇಕು. ಅರಿಸಿನದಂತೆ ಗೋಮೂತ್ರ ಇತ್ಯಾದಿಗಳ ವಿಚಾರದಲ್ಲಿ ಅಂತರರಾಷ್ಟ್ರೀಯ ಪೇಟೆಂಟ್ ಕಚೇರಿಗಳೊಂದಿಗೆ ನಿರಂತರ ಕಾನೂನು ಹೋರಾಟಕ್ಕೆ ಪ್ರತ್ಯೇಕ ಸಚಿವಾಲಯ ರಚನೆಯಾಗಬೇಕಿದೆ. ದಾಖಲಾತಿ ಮತ್ತು ಡೇಟಾಬೇಸ್‌ಗಳನ್ನು ವಿಸ್ತರಿಸಬೇಕು. ಸ್ಥಳೀಯ ಸಂಶೋಧಕರಿಗಾಗಿ ಪೇಟೆಂಟ್ ಸಹಾಯ ನಿಧಿ ಸ್ಥಾಪನೆಯಾಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಆಯುರ್ವೇದ ಮತ್ತು ಆಧುನಿಕ ವೈದ್ಯ ವಿಜ್ಞಾನ, ಕೃಷಿ ಇಲಾಖೆ, ಶಿಕ್ಷಣ ಇಲಾಖೆ ಹೀಗೆ ನಾನಾ ಕ್ಷೇತ್ರಗಳ ಸಂವಹನ ಮತ್ತು ಸುಲಲಿತ ಕಾರ್ಯ ನಿರ್ವಹಣೆಗೆ ಸಮರ್ಥ ಸೇತುವೆ ನಿರ್ಮಾಣ ಆಗಬೇಕಿದೆ.

ಸಂಸ್ಕೃತಿಯ ರಕ್ಷಣೆಗಾಗಿ ಹೋರಾಟ ಎಂಬುದು ಒಂದು ರಾಷ್ಟ್ರೀಯ ಕರ್ತವ್ಯ. ಏಕೆಂದರೆ ಗೋಮೂತ್ರ, ಅರಿಸಿನ, ಬೇವು ಇತ್ಯಾದಿಗಳು ಕೇವಲ ವೈದ್ಯಕೀಯ ಜಡ ಪದಾರ್ಥಗಳಲ್ಲ. ಬದಲಿಗೆ ಇವು ನಮ್ಮ ನಾಗರಿಕತೆಯ ಮೌಲಿಕ ಗುರುತುಗಳು. ಭಾರತದ ಜ್ಞಾನಸಂಪತ್ತಿನ ಪರಂಪರೆ ಕೇವಲ ಪುರಾಣ, ಪದ್ಧತಿ ಹಾಗೂ ನಂಬಿಕೆಗಳಷ್ಟೇ ಅಲ್ಲ. ಇದನ್ನು ಮೀರಿ ಜಗತ್ತಿಗೆ ವಿಜ್ಞಾನವನ್ನು ಕೊಟ್ಟ ಮಹತ್ವಪೂರ್ಣ ಆಸ್ತಿ. ಇದಕ್ಕೆ ಜಾಗತಿಕ ಮಾನ್ಯತೆ ದೊರಕಲು ಭಾವನೆಗಿಂತ ಬಲವಾದ ದಾಖಲೆ, ಪರಂಪರಿಗಿಂತ ದೃಢವಾದ ಪುರಾವೆ ಅಗತ್ಯ.

‘ಜ್ಞಾನ ನಮ್ಮದು — ಪೇಟೆಂಟ್ ಮತ್ತೊಬ್ಬರದು’ ಎಂಬ ವೈಪರಿತ್ಯ ಅಂತ್ಯಗೊಳ್ಳಬೇಕಾದರೆ ಭಾರತದ ವಿಜ್ಞಾನ ಲೋಕ, ಆಯುರ್ವೇದ ವಲಯ, ಕಾನೂನು ತಜ್ಞರು ಮತ್ತು ಸರ್ಕಾರ ಸಮನ್ವಯದಿಂದ ಕೆಲಸ ಮಾಡಬೇಕು.

ಹಾಗಾದಲ್ಲಿ ಮಾತ್ರ, ನಮ್ಮ ಪರಂಪರೆ ನಮ್ಮ ಹಕ್ಕಾಗಿಯೇ ಉಳಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.