ADVERTISEMENT

ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ವಿದೇಶಿಯರು ಕಲೀತಾರೆ ‘ಅ ಆ ಇ ಈ’

ಪ್ರಜಾವಾಣಿ ವಿಶೇಷ
Published 31 ಅಕ್ಟೋಬರ್ 2025, 23:30 IST
Last Updated 31 ಅಕ್ಟೋಬರ್ 2025, 23:30 IST
<div class="paragraphs"><p>ಮೈಸೂರಿನಲ್ಲಿ ಕನ್ನಡ ಕಲಿಯಲು ಬಂದಿದ್ದ ಪೆನ್ವಿಲ್ವೇನಿಯಾ ವಿಶ್ವವಿದ್ಯಾಲಯದ ಕಮಲಿನಿ ಹೆಗಡೆ ಮತ್ತು ಲಡ್ವಿಗ್‌ ಮ್ಯಾಕ್ಸಿಮಿಲಿಯನ್‌ ವಿಶ್ವವಿದ್ಯಾಲಯದ ಅನ್ನೆ ಕ್ಯಾಥರಿನ ಅವರೊಂದಿಗೆ ಶಿಕ್ಷಕಿ ಸಂಘಮಿತ್ರೆ</p></div>

ಮೈಸೂರಿನಲ್ಲಿ ಕನ್ನಡ ಕಲಿಯಲು ಬಂದಿದ್ದ ಪೆನ್ವಿಲ್ವೇನಿಯಾ ವಿಶ್ವವಿದ್ಯಾಲಯದ ಕಮಲಿನಿ ಹೆಗಡೆ ಮತ್ತು ಲಡ್ವಿಗ್‌ ಮ್ಯಾಕ್ಸಿಮಿಲಿಯನ್‌ ವಿಶ್ವವಿದ್ಯಾಲಯದ ಅನ್ನೆ ಕ್ಯಾಥರಿನ ಅವರೊಂದಿಗೆ ಶಿಕ್ಷಕಿ ಸಂಘಮಿತ್ರೆ

   
ಕನ್ನಡ ಭಾಷೆಯನ್ನು ಹರಡುವುದಕ್ಕೆ ಹಲವು ಮಾರ್ಗಗಳಿವೆ. ಅನ್ಯಭಾಷಿಕರಿಗೆ ಕನ್ನಡ ಕಲಿಸುವುದು ಅದರಲ್ಲಿ ಒಂದು. ಅದು ರಾಜ್ಯಕ್ಕೆ ಬಂದ ‘ಹೊರಗಿನ’ವರನ್ನು ‘ಒಳಗಿನ’ವರನ್ನಾಗಿ ಮಾಡಿಕೊಳ್ಳುವ ಅತ್ಯುತ್ತಮ ವಿಧಾನವಾಗಿದೆ. ಬೆಂಗಳೂರಿನಲ್ಲಿ ಮತ್ತು ಮೈಸೂರಿನಲ್ಲಿ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಕಾಯಕದಲ್ಲಿ ತೊಡಗುವ ಮೂಲಕ ಕನ್ನಡ ನುಡಿಯ ಜೇನನ್ನು ಹಂಚುತ್ತಿರುವ ಸಂಸ್ಥೆ–ವ್ಯಕ್ತಿಗಳ ಪರಿಚಯ ಇಲ್ಲಿದೆ. ಜತೆಗೆ ಕೃತಕ ಬುದ್ಧಿಮತ್ತೆಯ ಕಾಲದಲ್ಲೂ ವಿವಿಧ ಬಣ್ಣ ಆಕಾರಗಳಲ್ಲಿ ಕನ್ನಡದಲ್ಲಿ ವಿಪುಲವಾಗಿ ಮೈದಳೆಯುತ್ತಿರುವ ಮಕ್ಕಳ ಸಾಹಿತ್ಯದ ಬಗೆಗಿನ ನೋಟವಿದೆ. ಕನ್ನಡದ ಸಮೃದ್ಧ ನಾಳೆಗಳಿಗಾಗಿ ಕನ್ನಡಿಗರು ಏನು ಮಾಡಬೇಕು ಎನ್ನುವುದರ ಹೊಳಹು ಇಲ್ಲಿದೆ.

ಇದು ಕನ್ನಡಿಗರಿಗೆ ಕನ್ನಡ ಕಲಿಸುವ ಸಾಮಾನ್ಯ ಕಾಯಕವಲ್ಲ. ವಿದೇಶಿಯರಿಗೆ ಕನ್ನಡವನ್ನು ಕಲಿಸುವ ವಿಶಿಷ್ಟ ಕಾಯಕ. ಎರಡೂವರೆ ದಶಕಗಳಿಂದ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಇದು ಸದ್ದಿಲ್ಲದೆ ನಡೆಯುತ್ತಿದೆ ಎಂಬುದೇ ವಿಶೇಷ.

ಇದಕ್ಕೆ ನೀರೆರೆಯುತ್ತಿರುವುದು ಅಮೆರಿಕನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯನ್‌ ಸ್ಟಡೀಸ್‌. ಈ ಸಂಸ್ಥೆಯು ಅಮೆರಿಕದ ವಿದ್ಯಾರ್ಥಿಗಳಿಗೆ ಭಾರತೀಯ ಭಾಷೆಗಳಾದ ಹಿಂದಿ, ಮಲಯಾಳ, ಮರಾಠಿ, ಪಂಜಾಬಿ, ಸಂಸ್ಕೃತ, ತಮಿಳು, ಉರ್ದು, ತೆಲುಗು ಮತ್ತು ಕನ್ನಡ ಕಲಿಯಲು ಶಿಷ್ಯವೇತನ ನೀಡುತ್ತದೆ. ಅದನ್ನು ಬಳಸಿಕೊಂಡು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕರ್ನಾಟಕಕ್ಕೆ ಬಂದು ಕನ್ನಡ ಕಲಿತಿದ್ದಾರೆ. ಅಷ್ಟೇ ಅಲ್ಲ, ಇಲ್ಲಿನ ವಿದ್ವಾಂಸರೊಂದಿಗೆ ಸೇರಿ, ಪೆನ್ಸಿಲ್ವೇನಿಯಾ ವಿವಿಯ ಅಮ್ಮೆಲ್‌ ಶರೋನ್‌ ರನ್ನನ ಗದಾಯುದ್ಧವನ್ನು, ಸೌತ್‌ ಫ್ಲಾರಿಡಾ ವಿವಿಯ ಗಿಲ್‌ ಬೆನ್‌ ಹೀರತ್‌ ಅವರು ಹರಿಹರನ ರಗಳೆಗಳನ್ನು ಅನುವಾದಿಸಿದ್ದಾರೆ. ಕೆಲವರು ಕನ್ನಡದಲ್ಲೇ ಪಿಎಚ್‌ಡಿ ಮಾಡಿದ್ದಾರೆ.

ADVERTISEMENT

ವಿದೇಶಿಯರಿಗೆ ಕನ್ನಡದ ಜೊತೆಗೆ, ಕರ್ನಾಟಕದ ಸಾಹಿತ್ಯ, ಜನ ಸಂಸ್ಕೃತಿ, ಸಮಾಜ, ಚರಿತ್ರೆಯ ಅರಿವನ್ನು ದಾಟಿಸುವಲ್ಲಿ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯೂ ಪರೋಕ್ಷವಾಗಿ ಭಾಗಿಯಾಗಿದೆ. ಏಕೆಂದರೆ ಇಲ್ಲಿ ಪ್ರಾಧ್ಯಾಪಕರಾಗಿದ್ದವರೇ ಕನ್ನಡವನ್ನು ಇಂಗ್ಲಿಷ್‌ ಮೂಲಕ ಹೇಳಿಕೊಡುವ ಸಾಹಸಮಯ ಮತ್ತು ಸೃಜನಶೀಲ ಹೊಣೆಗಾರಿಕೆಗೆ ಹೆಗಲು ಕೊಟ್ಟಿದ್ದಾರೆ. ವಿದೇಶಿಯರಿಗೆ ಕನ್ನಡ ಕಲಿಸುವ ಸಲುವಾಗಿಯೇ ದ್ವಿಭಾಷಿಕ ಸಂವಹನ–ಬೋಧನಾ ಸಾಮರ್ಥ್ಯವನ್ನು ಗಳಿಸಿಕೊಳ್ಳಲು ಇವರೆಲ್ಲ ಪಟ್ಟ ಪರಿಶ್ರಮ, ಮಾಡಿದ ಪ್ರಯೋಗಗಳಿಗೆ ಲೆಕ್ಕವಿಲ್ಲ.

ಈ ಯೋಜನೆಯಡಿ ತೆರೆಯಲಾಗಿದ್ದ ಕಲಿಕಾ ಕೇಂದ್ರದ ಮೊದಲ ಬೋಧಕ ಪ್ರೊ.ಆರ್.ವಿ.ಎಸ್‌.ಸುಂದರಂ. ಅವರೊಂದಿಗೆ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ.ಎಚ್‌.ಎಸ್‌.ಹರಿಶಂಕರ್‌, ಪ್ರೊ.ಎನ್‌.ಎಸ್‌.ತಾರಾನಾಥ್, ಪ್ರೊ.ಲಕ್ಷ್ಮಿನಾರಾಯಣ ಅರೋರ, ಪ್ರೊ.ಅಕ್ಕಮಹಾದೇವಿ ಇದ್ದಾರೆ. ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರೊ.ಜ್ಯೋತಿ ಶಂಕರ್‌, ಮಹಾರಾಜ ಕಾಲೇಜಿನ ಪ್ರೊ.ಆಶಾಕುಮಾರಿ ಈ ಸಾಲಿನಲ್ಲಿದ್ದಾರೆ. ಅಧ್ಯಯನ ಸಂಸ್ಥೆಯಲ್ಲಿ ಪ್ರಸ್ತುತ ಭಾಷಾಂತರಕಾರರಾಗಿರುವ ಸಿ.ಎಸ್‌.ಪೂರ್ಣಿಮ ಈ ಪರಂಪರೆಯನ್ನು ಮುಂದುವರಿಸಿದ್ದಾರೆ.

‘ಕನ್ನಡ ಮಾತನಾಡುವುದನ್ನು ಹೇಳಿಕೊಟ್ಟರೆ ಸಾಕು ಎನ್ನುತ್ತದೆ ಇನ್‌ಸ್ಟಿಟ್ಯೂಟ್. ಆಗ, ಬರಹದ ಭಾಷೆ ಮತ್ತು ಮಾತನಾಡುವ ಭಾಷೆಯನ್ನು ಹೇಳಿಕೊಟ್ಟರೆ ಸಾಕು. ಆದರೆ ಕೆಲವು ಯುವಕ–ಯುವತಿಯರು ಕ್ಲಾಸಿಕಲ್‌ ಕನ್ನಡವನ್ನು ಹೇಳಿಕೊಡಿ ಎನ್ನುತ್ತಾರೆ. ಅವರಿಗೆ ಹಳೆಗನ್ನಡವನ್ನೂ ಹೇಳಿಕೊಡಬೇಕಾಗುತ್ತದೆ. ಹರಿಹರನ ರಗಳೆಗಳ ಬಗ್ಗೆ ಅಧ್ಯಯನ ಮಾಡಿರುವ ಗಿಲ್‌ ಅವರು ನಡುಗನ್ನಡವನ್ನೂ ಶ್ರದ್ಧೆಯಿಂದ ಕಲಿತರು’ ಎಂದು ಪ್ರೊ.ಸುಂದರಂ ಸ್ಮರಿಸಿದರು.

ಅಧ್ಯಯನ ಸಂಸ್ಥೆಗೂ ಅಮೆರಿಕದ ಸಂಸ್ಥೆಗೂ ನೇರ ಸಂಬಂಧವಿಲ್ಲ. ಆದರೆ ಅಮೆರಿಕದ ಸಂಸ್ಥೆ ಈ ವಿದ್ವಾಂಸರ ಸೇವೆಯನ್ನು ಬಳಸಿಕೊಳ್ಳುತ್ತದೆ. ನವದೆಹಲಿಯ ಜೆಎನ್‌ಯುನ ಕನ್ನಡ ವಿಭಾಗದಲ್ಲಿದ್ದಾಗ ಪ್ರೊ.ಪುರುಷೋತ್ತಮ ಬಿಳಿಮಲೆಯವರು ಇನ್‌ಸ್ಟಿಟ್ಯೂಟ್‌ ಅನ್ನು ಮುನ್ನಡೆಸಿದ್ದರು.

90ರ ದಶಕದಲ್ಲಿ ಸೇರಿಕೊಂಡ ಕನ್ನಡ

‘ಅಮೆರಿಕನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯನ್‌ ಸ್ಟಡೀಸ್‌ನಲ್ಲಿ ಒಂದು ವರ್ಷ ಹಾಗೂ ಮೂರು ತಿಂಗಳ ಕಲಿಕಾ ಕಾರ್ಯಕ್ರಮಗಳಿದ್ದು, 90ರ ದಶಕದಲ್ಲಿ ದಶಕದಲ್ಲಿ ಹಿಂದಿ, ಉರ್ದು, ಬಂಗಾಳ, ತಮಿಳು, ಸಂಸ್ಕೃತ ಜೊತೆಗೆ ಕನ್ನಡವೂ ಸೇರಿಕೊಂಡಿತು. ದಕ್ಷಿಣ ಭಾರತ ಎಂದರೆ ತಮಿಳು ಎಂದು ಮಾತ್ರ ತಿಳಿದಿದ್ದ ವಿದೇಶಿಯರಿಗೆ ಕನ್ನಡದ ಮೇಲೆ ಆಸಕ್ತಿ ಹುಟ್ಟಲು ಇದು ಕಾರಣವಾಯಿತು’ ಎಂಬುದು ಪ್ರೊ. ಪುರುಷೋತ್ತಮ ಬಿಳಿಮಲೆ ಅವರ ಪ್ರತಿಪಾದನೆ.

ಮಕರಂದ: ಕನ್ನಡ ಕಲಿಸುವ ಸಂಕಲ್ಪ

ಕನ್ನಡಕ್ಕಾಗಿ ಏನಾದರೂ ಮಾಡಬೇಕು ಎನ್ನುವ ತುಡಿತದಿಂದ ಹುಟ್ಟಿಕೊಂಡ ಸಂಸ್ಥೆ ಅದು. ಹೆಸರು ಮಕರಂದ. ಹೊರ ರಾಜ್ಯದವರಿಗೆ ಕನ್ನಡ ಕಲಿಸುವ ಸಂಕಲ್ಪ ಹೊಂದಿರುವ ಈ ಸಂಸ್ಥೆ ಹುಟ್ಟಿಕೊಂಡದ್ದು, ಬೆಂಗಳೂರು ಉತ್ತರದಲ್ಲಿರುವ ಭಾರತೀಯ ಸಿಟಿಯ ‘ನಿಕು ಹೋಮ್ಸ್‌’ ಎನ್ನುವ ವಸತಿಸಮುಚ್ಚಯದಲ್ಲಿ 200 ಮಂದಿಗೆ ಕನ್ನಡ ಕಲಿಸುವುದರ ಮೂಲಕ.

ಈಗ 100 ಮಂದಿ ಸ್ವಯಂಸೇವಕರು ಕನ್ನಡ ಕಲಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಬೇರೆ ಬೇರೆ ವೃತ್ತಿಗಳಲ್ಲಿರುವವರು ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಪಾಠ ಮಾಡುತ್ತಿದ್ದಾರೆ. ಸಂಸ್ಥೆಯಲ್ಲಿ 18 ವರ್ಷದಿಂದ 70 ವಯಸ್ಸಿನವರೆಗಿನ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳೂ ಇದೇ ವಯಸ್ಸಿವರಿದ್ದಾರೆ.

ಮೊದಲು ಎರಡು ಆವೃತ್ತಿಗಳಲ್ಲಿ ಮುಖಾಮುಖಿ ತರಗತಿಗಳನ್ನು ನಡೆಸಲಾಯಿತು. ಆದರೆ, ಸಮಯ ಹೊಂದಾಣಿಕೆಯೂ ಸೇರಿದಂತೆ ಕೆಲವು ಸಮಸ್ಯೆಗಳು ಉದ್ಭವಿಸಿದವು. ಈಗ ಕನ್ನಡ ತರಗತಿಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ನಡೆಸಲಾಗುತ್ತಿದೆ. ಕರ್ನಾಟಕ, ಭಾರತ ಹಾಗೂ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿರುವವರು ಆನ್‌ಲೈನ್ ಮೂಲಕ ಅನ್ಯಭಾಷಿಕರಿಗೆ ಕನ್ನಡ ಕಲಿಸುತ್ತಿದ್ದಾರೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಕಜಕಿಸ್ತಾನ, ಅಮೆರಿಕದಿಂದ ಪಾಠ ಮಾಡುವವರಿದ್ದಾರೆ. ತರಗತಿ ಒಂದು ಗಂಟೆಯದ್ದಾಗಿರುತ್ತದೆ; ಪರೀಕ್ಷೆಗಳೂ ಇರುತ್ತವೆ. ಘಟಿಕೋತ್ಸವ ಕಾರ್ಯಕ್ರಮ ಮಾಡಿ ‘ನನಗೆ ಕನ್ನಡ ಗೊತ್ತು’ ಎಂದು ಸಾರುವ ಕನ್ನಡ ಕಲಿಕೆಯ ಪ್ರಮಾಣ ಪತ್ರ ವಿತರಿಸಲಾಗುತ್ತಿದೆ.

ಪ್ರಸ್ತುತ 2,000 ಮಂದಿ ಕನ್ನಡ ಕಲಿಯುತ್ತಿದ್ದಾರೆ. ಇದುವರೆಗೆ 6,000 ಮಂದಿ ಕನ್ನಡ ಕಲಿತಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿ, ಗುಜರಾತ್‌ನಿಂದ ಬಂಗಾಳದವರೆಗೆ ಎಲ್ಲ ರಾಜ್ಯಗಳಿಂದ ಬಂದವರೂ ಕನ್ನಡ ಕಲಿಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.