ADVERTISEMENT

ವಿಶ್ಲೇಷಣೆ: ಕುವೆಂಪು ಪಾಲಿನ ರತ್ನತ್ರಯರು

ವೈ.ಎಸ್‌.ವಿ.ದತ್ತ
Published 4 ಸೆಪ್ಟೆಂಬರ್ 2025, 23:30 IST
Last Updated 4 ಸೆಪ್ಟೆಂಬರ್ 2025, 23:30 IST
.
.   
ಆಧುನಿಕ ಕರ್ನಾಟಕವನ್ನು ಪ್ರಭಾವಿಸಿದ ಮಹನೀಯರಲ್ಲಿ ಕುವೆಂಪು ಮುಖ್ಯರು. ಈ ಮಹಾಚೇತನಕ್ಕೆ ಬಾಲ್ಯದಲ್ಲಿ ಪ್ರೇರಣೆ ಆಗಿದ್ದವರು, ಮೂವರು ಗುರುಗಳು! ಮಲೆನಾಡಿನ ಪುಟ್ಟ ಬಾಲಕನಲ್ಲಿ ವಿಶ್ವಮಾನವ ಪ್ರಜ್ಞೆಯ ಬೀಜಗಳು ರೂಪುಗೊಳ್ಳುವಲ್ಲಿ ಆ ಗುರುತ್ರಯರ ಪಾತ್ರ ಮಹತ್ವದ್ದು.

ಮಲೆನಾಡಿನ ದಟ್ಟ ಕಾಡಿನ, ಜನವಿದೂರವಾದ ಕುಗ್ರಾಮದಲ್ಲಿ, ಸಂಸ್ಕೃತದ ಮಾತಂತಿರಲಿ ಕನ್ನಡ–ಇಂಗ್ಲಿಷ್‌ ಗಂಧಗಾಳಿಯ ಸೋಂಕೇ ಇಲ್ಲದ ಶೂದ್ರ ಸಮುದಾಯದ ಬಾಲಕನೊಬ್ಬ ಬೆಳೆದ ಪರಿ ಬೆರಗು ಮೂಡಿಸುವಂತಹುದು. ಇಪ್ಪತ್ತನೆಯ ಶತಮಾನದ ಆರಂಭದ ಕಾಲ. ರಾಷ್ಟ್ರೀಯತೆ ಮಡುಗಟ್ಟುತ್ತಾ, ಬಿಡುಗಡೆಗಾಗಿ ಚಡಪಡಿಸುತ್ತಿದ್ದ ಕಾಲ. ಅಂತಹ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯದ ದ್ರಷ್ಟಾರನಾಗಿ, ಕನ್ನಡವನ್ನೂ ಕರ್ನಾಟಕವನ್ನೂ ಕನ್ನಡಿಗರನ್ನೂ ಒಗ್ಗೂಡಿಸಿ ಕಸುವು ತುಂಬಿ ನವೋದಯಕ್ಕೆ ನಾಂದಿ ಹಾಡಿದ ಕುವೆಂಪು ಮುಂದೆ ವಿಶ್ವಪ್ರಜ್ಞೆಯ ಅನಿಕೇತನ ಚೇತನರಾದರು. ಈ ದಿವ್ಯ ಭವ್ಯ ವ್ಯಕ್ತಿತ್ವದ ಬೆಳವಣಿಗೆಗೆ ಅವರ ಬಾಲ್ಯದಲ್ಲಿ ಬುನಾದಿ ಹಾಕಿರಬಹುದಾದ ವ್ಯಕ್ತಿಗಳು ಯಾರಿರಬಹುದು? ಕುತೂಹಲದಿಂದ ಕುವೆಂಪು ಅವರ ‘ನೆನಪಿನ ದೋಣಿಯಲ್ಲಿ’ ಕೃತಿಯ ಪುಟ ತಿರುವತೊಡಗಿದಾಗ ನನಗೆ ಗೋಚರಿಸಿದ ವ್ಯಕ್ತಿಗಳು ಮುಖ್ಯವಾಗಿ ಮೂವರು: ಮೋಸೆಸ್‌, ಮಂಜಪ್ಪಗೌಡ ಹಾಗೂ ಜೇಮ್ಸ್‌ ಕಸಿನ್ಸ್‌.

ಕುವೆಂಪು ತಮ್ಮ ತಂದೆ ವೆಂಕಟಯ್ಯಗೌಡರನ್ನು ‘ಅಪ್ಪಯ್ಯ’ ಎನ್ನುತ್ತಿದ್ದರು. ಅಪ್ಪಯ್ಯ ಅವರು ತಮ್ಮ ಮಗನ ಅಕ್ಷರಾಭ್ಯಾಸಕ್ಕೆಂದು ವ್ಯವಸ್ಥೆ ಮಾಡಿದ್ದೇ ‘ಐಗಳ ಶಾಲೆ’. ಅದು ಮಗನಿಗಾಗಿ ಮಾತ್ರವಲ್ಲ; ತಮ್ಮ ಅವಿಭಕ್ತ ಕುಟುಂಬದ, ತಮ್ಮ ಮಗನ ಓರಗೆಯ ಎಲ್ಲ ಮಕ್ಕಳಿಗಾಗಿ ತಮ್ಮ ಮನೆಯ ಉಪ್ಪರಿಗೆಯಲ್ಲಿ ವ್ಯವಸ್ಥೆ ಮಾಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಕರು ಬಂದು ಅಕ್ಷರ ಕಲಿಸಿ, ಕನ್ನಡದಲ್ಲಿ ತುಸು ಬರೆಯಲು ಓದಲು ಕಲಿಸಿಕೊಡುವ ವ್ಯವಸ್ಥೆ ಅದಾಗಿತ್ತು. ಆದರೆ, ಇಂಗ್ಲಿಷ್‌ ಕಲಿಯಲು ಮಾಡುವುದೇನು? ಹಳ್ಳಿ ಹುಡುಗರಿಗೆ ಇಂಗ್ಲಿಷ್‌ ಹೇಳಿಕೊಡುವವರು ಯಾರು? ಅದಕ್ಕೂ ವ್ಯವಸ್ಥೆಯಾಯಿತು. ಅದರ ಹಿನ್ನೆಲೆ ಕುವೆಂಪು ಅವರೇ ಹೇಳುವಂತೆ ‘ಆಶ್ಚರ್ಯ ವಿಷಾದಾಂಚಿತ’. ಅದನ್ನು ಅವರ ಮಾತಿನಲ್ಲೇ ಕೇಳಿ:

‘ಆ ಹಳ್ಳಿಗರು ಇನ್ನೆಷ್ಟು ವರ್ಷ ಕಾಯಬೇಕಿತ್ತೋ ಇಂಗ್ಲಿಷ್‌ ಕಲಿಯಲು? ಆದರೆ, ಮತ ಪ್ರಚಾರ ಮತ್ತು ಮತಾಂತರ ಉದ್ದೇಶವೇ ಪ್ರಧಾನವಾಗಿದ್ದ ಕ್ರೈಸ್ತ ಮಿಷನರಿಗಳು ಬ್ರಿಟಿಷ್‌ ಸಾಮ್ರಾಜ್ಯದ ಮತ್ತು ಕ್ರೈಸ್ತ ಧರ್ಮದ ಮುಂಚೂಣಿಯ ದಳಗಳಾಗಿ ಸಹ್ಯಾದ್ರಿಯ ಕಾಡು–ಹಳ್ಳಿಗಳಿಗೂ ಕಾಲಿಟ್ಟರು. ಸ್ಕೂಲು ಆಸ್ಪತ್ರೆಗಳನ್ನು ತೆರೆದರು. ಸಾಧ್ಯವಾದಷ್ಟು ಜನರನ್ನು ತಮ್ಮ ಮತಕ್ಕೆ ಸೇರಿಸಿಕೊಂಡರು. ಕನ್ನಡ ಭಾಷೆಗೆ ಪರಿವರ್ತಿತವಾಗಿದ್ದ ಬೈಬಲ್ಲನ್ನು ಮ್ಯಾಥ್ಯೂ ಮಾರ್ಕ್‌ ಲ್ಯಾಕ್ ಜಾನ್‌ ಮೊದಲಾದ ಕ್ರಿಸ್ತ ಶಿಷ್ಯ ಸಂತರ ಸುವಾರ್ತೆಗಳನ್ನು ಓದಲು ಹಂಚಿದರು. ...ಆ ಎಲ್ಲ ಸ್ನೇಹ ಸೌಹಾರ್ದದ ಸಂಪರ್ಕಗಳ ಪರಿಣಾಮವಾಗಿಯೇ ಕ್ರೈಸ್ತ ಪಾದ್ರಿಗಳು ನಮ್ಮ ಮನೆ ಕುಪ್ಪಳಿಯ ಉಪ್ಪರಿಗೆಯ ವಿದ್ಯಾಸಂಸ್ಥೆಗೂ ಒಬ್ಬ ಇಂಗ್ಲಿಷ್‌ ಬಲ್ಲ ಕ್ರೈಸ್ತ ತರುಣನನ್ನು ನಮಗೆ ಮೇಷ್ಟ್ರನ್ನಾಗಿ ಕಳಿಸುವ ಕೃಪೆ ಮಾಡಿದರು. ಅವರ ಹೆಸರು ಮೋಸೆಸ್‌’.

ADVERTISEMENT

ಮೋಸೆಸ್‌ ಮೇಷ್ಟರ ವ್ಯಕ್ತಿತ್ವದ ಪ್ರಭಾವಕ್ಕೆ ತಾವು ಒಳಗಾದುದನ್ನು ವರ್ಣಿಸುವ ಕುವೆಂಪುರವರು, ಅವರು ತಮ್ಮಂತಹ ಮಕ್ಕಳನ್ನೂ ‘ಗುರು’ ತಾನೆಂದು ‘ಲಘು’ವಾಗಿ ಪರಿಗಣಿಸದೇ ಅನೇಕ ವಿಷಯಗಳನ್ನು ತಮ್ಮ ಮಿದುಳಿಗೆ ತುಂಬುವ ಪ್ರಯತ್ನ ಮಾಡಿದರು ಎನ್ನುತ್ತಾರೆ. ಪ್ರಾಥಮಿಕ ಹಂತದಲ್ಲಿಯೇ ಪಾಶ್ಚಾತ್ಯ ಪ್ರಭಾವದ ಆಧುನಿಕ ಪ್ರಪಂಚದ ಪರಿಚಯ ಮಾಡಿಸಿದವರೇ ಮೋಸೆಸ್‌ ಮೇಷ್ಟರು ಎನ್ನುತ್ತಾರೆ. ‘ನಮ್ಮ ಮಿದುಳಿನ ವಿಚಾರದಲ್ಲಿ ಅದುವರೆಗೆ ಯಾರೂ ತೋರಿಸದಿದ್ದ ಗೌರವವನ್ನೂ ಹೊಣೆಗಾರಿಕೆಯನ್ನೂ ಹೊರಿಸಿದರು’ ಎಂದೆನ್ನುವ ಕುವೆಂಪು, ‘ಅದು ತಮ್ಮ ಬದುಕಿಗೆ ಒಂದು ಹೊಸ ಬಾಗಿಲು ತೆರೆದಂತಾಯಿತು, ಒಂದು ವಿಸ್ಮಯಕಾರಕ ನೂತನ ಪ್ರಪಂಚಕ್ಕೆ ಪ್ರವೇಶಿಸಿದಂತಾಯಿತು ನನ್ನ ಪ್ರಜ್ಞೆ’ ಎನ್ನುತ್ತಾರೆ.

ಕುವೆಂಪು ತೀರ್ಥಹಳ್ಳಿಯ ಆಂಗ್ಲೊ ವರ್ನಾಕ್ಯುಲರ್‌ ಶಾಲೆಯಲ್ಲಿ ಕನ್ನಡ ಲೋವರ್‌ ಸೆಕೆಂಡರಿ ಪರೀಕ್ಷೆ ಕಟ್ಟಿ ತೇರ್ಗಡೆ ಹೊಂದಿದ್ದರು. ಆ ದಿನಗಳಲ್ಲಿ ಕುವೆಂಪುರವರ ಮೇಲೆ ಶಿಕ್ಷಕರಲ್ಲದ ಶಿಕ್ಷಕರಾಗಿ ಪ್ರಭಾವ ಬೀರಿದವರು ಅಡಿಕೆಮಂಡಿ ಹೊಸಮನೆ ಮಂಜಪ್ಪಗೌಡರು. ಈ ಮಂಜಪ್ಪಗೌಡರು ಆ ಕಾಲದಲ್ಲಿಯೇ ಕ್ರೈಸ್ತ ಪಾದ್ರಿಗಳ ಪ್ರಭಾವದಿಂದ ಮೈಸೂರಿನ ಹಾರ್ಡ್ವಿಕ್‌ ಸಂಸ್ಥೆಯಲ್ಲಿದ್ದುಕೊಂಡು ಎಸ್‌.ಎಸ್‌.ಎಲ್‌.ಸಿ.ವರೆಗೆ ಓದಿದವರಾಗಿದ್ದರು. ನಂತರ ತಮ್ಮ ಊರಾದ ದೇವಂಗಿಗೆ ಬಂದು ಶಿವಮೊಗ್ಗದಲ್ಲಿ ಅಡಿಕೆ ವ್ಯಾಪಾರದಲ್ಲಿ ತೊಡಗಿಸಿಕೊಂಡರು. ಅವರು ಶಿವಮೊಗ್ಗದಿಂದ ದೇವಂಗಿಗೆ ಹೋಗುವಾಗಲೆಲ್ಲ ತೀರ್ಥಹಳ್ಳಿಯ ಮೂಲಕವೇ ಹೋಗಬೇಕಾಗಿತ್ತು. ಹೀಗಾಗಿ, ತೀರ್ಥಹಳ್ಳಿಯಲ್ಲಿ ಓದುತ್ತಿದ್ದ ಕುವೆಂಪು ಅವರನ್ನು ವಿಚಾರಿಸಿಕೊಳ್ಳದೇ ಇರುತ್ತಿರಲಿಲ್ಲ.

‘ಮಂಜಪ್ಪಗೌಡರು ವಿದ್ಯಾವಂತರಾಗಿಯೂ ಸುಸಂಸ್ಕೃತರಾಗಿಯೂ ನಯವಿನಯವಂತರಾಗಿಯೂ ನಿರ್ಮಲ ವೇಷಭೂಷಣಗಳಿಂದ ಆಕರ್ಷಕರಾಗಿಯೂ ನನ್ನ ಮೆಚ್ಚುಗೆಗೂ ಗೌರವಕ್ಕೂ ಬಹುಬೇಗ ಪಾತ್ರರಾದರು. ಬಹುಶಃ ನನ್ನಲ್ಲಿಯೂ ಏನೋ ವಿಶೇಷತೆಯನ್ನು ಗುರುತಿಸಿದ ಅವರು, ನನ್ನೊಡನೆ ತುಂಬಾ ವಿಶ್ವಾಸದಿಂದ ವರ್ತಿಸುತ್ತಿದ್ದರು. ತಾವು ಇಂಗ್ಲಿಷ್‌ ಪುಸ್ತಕಗಳಲ್ಲಿ ಓದಿ ಮೆಚ್ಚಿದ್ದ ವಿಷಯಗಳನ್ನು, ಕ್ರೈಸ್ತ ಉಪಾಧ್ಯಾಯರುಗಳಿಂದಲೂ ಮತ್ತು ಅವರ ಸಂಗಸಮಾಜದಿಂದಲೂ ಕಲಿತು ತಿಳಿದ ವಿಚಾರಗಳನ್ನು ಕುರಿತು ನನ್ನೊಡನೆ ಸಮಾನಸ್ಕಂದನೆಂಬಂತೆ ಪ್ರಸ್ತಾಪಿಸಿ ನನ್ನ ಕುತೂಹಲವನ್ನು ಕೆರಳಿಸುತ್ತಿದ್ದರು. ಸ್ಯಾಮ್ಯುಎಲ್‌ ಸ್ಮೈಲ್‌ ಎಂಬಾತ ಬರೆದಿದ್ದ ನೀತಿಬೋಧಕ ಗ್ರಂಥಗಳಲ್ಲಿ ನಿದರ್ಶನವಾಗಿರುತ್ತಿದ್ದ ಜಗತ್ತಿನ– ಪಾಶ್ಚಾತ್ಯ ಜಗತ್ತಿನ– ಮಹಾಪುರುಷರ, ಮಹಾಲೇಖಕರ, ಮಹಾಸೇನಾನಿಗಳ, ಮಹಾಕವಿಗಳ ಜೀವನದ ಸಂಗತಿಗಳನ್ನು ಸ್ವಾರಸ್ಯವಾಗಿ ಹೇಳಿ, ನಾವೂ ಅವರಂತೆ ಆಗಬೇಕೆಂದು ಪ್ರೋತ್ಸಾಹಿಸುತ್ತಿದ್ದರು. ನನ್ನ ಅಂತಃಶ್ಚೇತನದ ಪೆಟ್ರೋಲಿಗೆ ಬೆಂಕಿ ತೋರಿಸಿದಂತಾಗುತ್ತಿತ್ತು’.

ಒಮ್ಮೆ ಮಂಜಪ್ಪಗೌಡರು ಕುವೆಂಪುರವರಿಗೆ ತಮ್ಮ ನೆನಪಿನಿಂದಲೇ ಲಾಂಗ್‌ಫೆಲೋ ಕವಿಯ ‘ದಿ ಸಾಮ್‌ ಆಫ್‌ ಲೈಫ್‌’ ಕವನವನ್ನು ಒಂದೊಂದೇ ಪದ್ಯವನ್ನಾಗಿ ಹೇಳುತ್ತಾ ಸಾಧ್ಯವಾದಲ್ಲಿ ನಿದರ್ಶನಗಳನ್ನು ಕೊಡುತ್ತಾ ಸಾಗಿದರಂತೆ. ಆ ಕವನ, ಮಂಜಪ್ಪಗೌಡರ ವಿವರಣೆ ಎಷ್ಟು ಪರಿಣಾಮಕಾರಿಯಾಗಿತ್ತು ಎಂದು ಹೇಳುವ ಕುವೆಂಪುರವರು, ‘ಅದು ನನ್ನ ಆತ್ಮಕ್ಕೆ ಚೈತನ್ಯಪೂರ್ಣವಾದ ಮಂತ್ರದೀಕ್ಷೆಯನ್ನು ಕೊಟ್ಟಿತ್ತು... ಅದ‌ನ್ನು ಆಲಿಸುತ್ತಾ ಆಲಿಸುತ್ತಾ ನನ್ನ ಜೀವ ಜ್ವಾಲಾಮಯವಾಯ್ತು. ನನ್ನ ಅಂತಃಶ್ಚೇತನಕ್ಕೊಂದು ಮೊತ್ತ ಮೊದಲನೆಯ ‘ಉಪನಯನ’ವಾಯ್ತು!’ ಎನ್ನುತ್ತಾರೆ.

ಪ್ರೌಢಶಾಲಾ ವಿದ್ಯಾಭ್ಯಾಸಕ್ಕೆಂದು ಕುವೆಂಪು ಮೈಸೂರಿಗೆ ಬಂದು ವೆಸ್ಲಿಯನ್‌ ಮಿಷನ್‌ ಹೈಸ್ಕೂಲಿಗೆ ಸೇರಿದರು. ಹೊಸಮನೆ ಮಂಜಪ್ಪಗೌಡರ ಪ್ರಭಾವವೋ, ಅಥವಾ ಕುವೆಂಪುರವರೇ ಹೇಳುವಂತೆ ‘ಶೇಕಡ ಅರ್ಧವೋ ಕಾಲೋ ಜನಕ್ಕೆ ಮಾತ್ರ ಆ ಭಾಷೆ ತಿಳಿದಿದ್ದರೂ ಅದಕ್ಕೆ ಅಖಿಲ ಭಾರತೀಯ ವ್ಯಾಪ್ತಿ ಪ್ರಾಪ್ತವಾಯಿತು. ಎಲ್ಲರ ಗೌರವಕ್ಕೂ ಭಾಜನವಾಯಿತು. ಇಂಗ್ಲಿಷ್‌ ಜನವೆಂತೋ ಅಂತೆ ಇಂಗ್ಲಿಷ್‌ ಮಾತನಾಡುವವರೂ ‘ಪೂಜ್ಯ’ರಾಗಿ ಬಿಟ್ಟರು. ದೊರೆಗಳಾದರು. ಆ ಕಾರಣದಿಂದಲೋ ಏನೋ ಆ ಭಾಷೆ ನನ್ನಂತಹ ಎಳೆಯರ ಮೇಲೆ ಪ್ರಭುತ್ವಾಧಿಕಾರ ಸ್ಥಾಪಿಸಿ, ಪೂಜ್ಯ ಸ್ಥಾನವನ್ನು ಗಿಟ್ಟಿಸಿಕೊಂಡು ಬಿಟ್ಟಿತು!’

ಈ ಮನಃಸ್ಥಿತಿಯಲ್ಲೇ ಕುವೆಂಪುರವರು ತಮ್ಮ ಹದಿನೆಂಟನೇ ವಯಸ್ಸಿನಲ್ಲಿ ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಯಾಗಿದ್ದಾಗಲೇ ‘ಬಿಗಿನರ್ಸ್ ಮ್ಯೂಝ್‌’ ಎಂಬ ಹದಿನಾರು ಪುಟದ ಇಂಗ್ಲಿಷ್‌ ಕವನಗಳ ಸಂಗ್ರಹವನ್ನು ಪ್ರಕಟಿಸಿದರು. ಅಷ್ಟೇ ಅಲ್ಲ, ಅಂದಿನ ದಿಗ್ಗಜರಾದ ಎನ್‌.ಎಸ್‌. ಸುಬ್ಬರಾಯರು, ಪ್ರೊ. ಜೆ.ಸಿ. ರಾಲೋ, ಎಂ.ಎಚ್‌. ಕೃಷ್ಣ ಅಯ್ಯಂಗಾರ್‌ ಮೊದಲಾದವರಿಗೆ ತೋರಿಸಿ ‘ಭೇಷ್‌’ ಅನ್ನಿಸಿಕೊಂಡುಬಿಟ್ಟರು. ವಕ್ಕಲಿಗರ ಹುಡುಗನೊಬ್ಬ ಇಂಗ್ಲಿಷ್‌ನಲ್ಲಿ ಕವನ ಬರೆದಿದ್ದಾನೆ ಎಂದು ಹದಿನೆಂಟರ ಪೋರನಿಗೆ ಮಂಡ್ಯದ ವಕ್ಕಲಿಗರ ಯುವಜನ ಸಭಾದಲ್ಲಿ ಸನ್ಮಾನವೂ ಆಯಿತು. ಇದೆಲ್ಲದರಿಂದ ಉಬ್ಬಿಹೋಗಿದ್ದ ಕುವೆಂಪುರವರ ಜೀವನದಲ್ಲಿ ಮಹತ್ತರ ತಿರುವು ನೀಡುವ ಘಟನೆಯೊಂದು ಜರುಗಿತು.

1924ನೇ ಇಸವಿ ಜುಲೈ 2. ಬುಧವಾರ ಎಂ.ಎಚ್‌. ಕೃಷ್ಣ ಅಯ್ಯಂಗಾರ್‌ ಅವರು ಕುವೆಂಪು ಅವರಿಗೆ ವಿಶ್ವವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸಗಳನ್ನು ಕೊಡಲು ಬಂದಿರುವ ಐರಿಷ್‌ ಕವಿ, ಜೇಮ್ಸ್‌ ಹೆಚ್. ಕಸಿನ್ಸ್‌ ಅವರ ವಿಚಾರ ತಿಳಿಸಿ, ಅವರಿಗೆ ಕವನಗಳನ್ನು ತೋರಿಸುವಂತೆ ಹೇಳಿದರು. ಕಸಿನ್ಸ್‌ ಅವರಿಂದಲೂ ಪ್ರಶಂಸೆಯ ಮಾತುಗಳನ್ನು ನಿರೀಕ್ಷಿಸಿಯೇ ಅವರನ್ನು ಕುವೆಂಪು ಭೇಟಿಯಾದರು. ಸ್ವದೇಶಿ ಚಳವಳಿಯಿಂದ ಪ್ರಭಾವಿತರಾಗಿ ಖಾದಿ ವಸ್ತ್ರಧಾರಿಯಾಗಿದ್ದ ಕುವೆಂಪು ಅವರು, ತಮ್ಮ ಇಂಗ್ಲಿಷ್‌ ಕವನ ಸಂಗ್ರಹವನ್ನು ಕಸಿನ್ಸ್‌ರ ಕೈಗಿತ್ತರು. ಸ್ವಲ್ಪ ಹೊತ್ತು ಹಾಳೆಗಳನ್ನು ಮಗುಚಿ ಹಾಕಿದ ಕಸಿನ್ಸ್‌ರವರು ಸ್ವಲ್ಪ ಅಸಮಾಧಾನದಿಂದಲೇ ‘ಏನಿದೆಲ್ಲಾ ಕಗ್ಗ? ಮೈಮೇಲೆ ಸ್ವದೇಶಿ ವಸ್ತ್ರ. ಬರೆದಿರುವುದು ವಿದೇಶಿ. ನಿಮ್ಮ ಭಾಷೆಯಲ್ಲಿ ಏನಾದರೂ ಬರೆಯಿರಿ’ ಎಂದರು. ‘ನೀವು ಇಂಗ್ಲಿಷಿನಲ್ಲಿ ಸೃಜನ ಸಾಹಿತ್ಯ ಸೃಷ್ಟಿ ಮಾಡಲಾರಿರಿ. ಹುಟ್ಟಿನೊಡನೆ ಬಂದ ಭಾಷೆಯಲ್ಲಿ ಮಾತ್ರ ಉತ್ತಮ ಸೃಜನ ಸಾಹಿತ್ಯ ಸೃಷ್ಟಿಯಾಗಬಲ್ಲುದು. ಕವಿತೆಯಲ್ಲಂತೂ ಉತ್ತಮ ಸೃಜನ ಸಾಹಿತ್ಯ ಯಾರಿಗೂ ಪರಭಾಷೆಯಲ್ಲಿ ಸಾಧ್ಯವಿಲ್ಲ’ ಎಂದು ನಿಷ್ಠುರವಾಗಿ ಹೇಳಿ, ಕವನ ಸಂಗ್ರಹವನ್ನು ವಾಪಸು ಕುವೆಂಪು ಕೈಗಿತ್ತರು.

ಈ ಘಟನೆಯನ್ನು ಕುವೆಂಪು ಹೇಳುತ್ತಾ, 1924ನೇ ಜುಲೈ 2ನೇ ತಾರೀಖು ಬುಧವಾರದ ದಿನ ತಮ್ಮ ಜೀವನದಲ್ಲಿ, ವಿಶೇಷವಾಗಿ ಸಾಹಿತ್ಯ ಸಂಬಂಧವಾದ ಜೀವನದಲ್ಲಿ ಒಂದು ಸ್ಮರಣೀಯವಾದ ದಿನ ಎನ್ನುತ್ತಾರೆ. ಕಸಿನ್ಸ್‌ರವರ ಉಪದೇಶ ಚೆನ್ನಾಗಿಯೇ ಕೆಲಸ ಮಾಡಿತು. ಕನ್ನಡದಲ್ಲಿ ಬರೆಯುವ ಸ್ಫೂರ್ತಿಯ ಜೋರಿಗೆ ಸಿಕ್ಕು, ಒಂದೇ ತಿಂಗಳಲ್ಲಿ 67 ಕವನಗಳನ್ನು ರಚಿಸಿ, ತಮ್ಮ ಮೊದಲ ಕನ್ನಡ ಕವನ ಸಂಗ್ರಹ ‘ಕೊಳಲು’ ಕೃತಿಯನ್ನು ಪ್ರಕಟಿಸಿದರು. ಅಂದು ಕನ್ನಡದ ನವೋದಯದ ಮುಖ್ಯ ಪ್ರವಾಹದತ್ತ ತಿರುಗಿದ ಕುವೆಂಪುರವರು ಹಿಂತಿರುಗಿ ನೋಡಲೇ ಇಲ್ಲ. ವಿಶ್ವಪ್ರಜ್ಞೆಯ ಹರಿಕಾರರಾಗಿ ವಿಶ್ವ ಮಾನವತ್ವಕ್ಕೆ ಏರಿದ ಅವರಿಗೆ ನಮನ. ಅವರನ್ನು ರೂಪಿಸಿದ ಗುರುತ್ರಯರಿಗೂ ನಮನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.