
ಕನ್ನಡ ಭಾಷೆಯನ್ನು ಹರಡುವುದಕ್ಕೆ ಹಲವು ಮಾರ್ಗಗಳಿವೆ. ಅನ್ಯಭಾಷಿಕರಿಗೆ ಕನ್ನಡ ಕಲಿಸುವುದು ಅದರಲ್ಲಿ ಒಂದು. ಅದು, ರಾಜ್ಯಕ್ಕೆ ಬಂದ ‘ಹೊರಗಿನ’ವರನ್ನು ‘ಒಳಗಿನ’ವರನ್ನಾಗಿ ಮಾಡಿಕೊಳ್ಳುವ ಅತ್ಯುತ್ತಮ ವಿಧಾನವಾಗಿದೆ. ಬೆಂಗಳೂರಿನಲ್ಲಿ ಮತ್ತು ಮೈಸೂರಿನಲ್ಲಿ ಅನ್ಯಭಾಷಿಕರಿಗೆ ಕನ್ನಡ ನುಡಿಯ ಜೇನನ್ನು ಹಂಚುತ್ತಿರುವ ಸಂಸ್ಥೆ–ವ್ಯಕ್ತಿಗಳ ಪರಿಚಯ ಇಲ್ಲಿದೆ. ಜತೆಗೆ, ಕೃತಕ ಬುದ್ಧಿಮತ್ತೆಯ ಕಾಲದಲ್ಲೂ ವಿವಿಧ ಬಣ್ಣ, ವಿನ್ಯಾಸಗಳಲ್ಲಿ ಕನ್ನಡದಲ್ಲಿ ವಿಪುಲವಾಗಿ ಮೈದಳೆಯುತ್ತಿರುವ ಮಕ್ಕಳ ಸಾಹಿತ್ಯದ ಬಗೆಗಿನ ನೋಟವಿದೆ. ಕನ್ನಡದ ಸಮೃದ್ಧ ನಾಳೆಗಳಿಗಾಗಿ ಕನ್ನಡಿಗರು ಏನು ಮಾಡಬೇಕು ಎನ್ನುವುದರ ಹೊಳಹು ಇಲ್ಲಿದೆ.
ಕನ್ನಡದ ನಾಳೆಗಳ ಬಗ್ಗೆ ಕಾಳಜಿಯುಳ್ಳವರು ಬಿಡುಗಣ್ಣಾಗಿರಬೇಕಾದುದು ಎಳೆಯ ಮನಸ್ಸುಗಳ ಬಗ್ಗೆ. ಎಳೆಯರಿಲ್ಲದೆ ನಾಳೆಗಳೂ ಇಲ್ಲ, ಕನ್ನಡವೂ ಇಲ್ಲ. ಹಾಗಾಗಿ, ಕನ್ನಡದ ನಾಳೆಗಳೆಂದರೆ ಮಕ್ಕಳ ಇಂದುಗಳು. ಈ ಇಂದುಗಳನ್ನು ಕನ್ನಡಮಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂತಹದ್ದು ಮಕ್ಕಳ ಸಾಹಿತ್ಯ.
ಕನ್ನಡಕ್ಕೆ ಸಂಬಂಧಿಸಿದಂತೆ ಸಿನಿಮಾ, ರಂಗಭೂಮಿ, ವಿಜ್ಞಾನ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಏನಾಗುತ್ತಿದೆ ಎನ್ನುವ ಕುತೂಹಲದ ಅವಲೋಕನಗಳು ಆಗಾಗ ನಡೆಯುತ್ತಿರುತ್ತವೆ. ಸಾಹಿತ್ಯದಲ್ಲಿನ ಹೊಸತನದ ಹುಡುಕಾಟವೂ ವಿರಳವೇನಲ್ಲ. ಆದರೆ, ಮಕ್ಕಳ ಸಾಹಿತ್ಯದಲ್ಲಿ ಏನಾಗುತ್ತಿದೆ ಎನ್ನುವ ಬಗ್ಗೆ ಚರ್ಚೆಗಳು ಅಪರೂಪ. ಕನ್ನಡ ಸಾಹಿತ್ಯದಲ್ಲಿ ‘ಮಕ್ಕಳ ಸಾಹಿತ್ಯ’ ಅಪೌಷ್ಟಿಕ ಶಿಶು; ಬೀದಿಯಲ್ಲಾಡುವ ಮಗು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಮಕ್ಕಳ ಸಾಹಿತ್ಯ ಹೊಸ ಟಿಸಿಲೊಂದನ್ನು ಕಂಡಿದೆ; ಅದರ ಫಲವಾಗಿಯೇ, ಚಿಣ್ಣರ ಮನಸ್ಸನ್ನು ಥಟ್ಟನೆ ಸೆಳೆಯುವಂಥ ಪುಸ್ತಕಗಳು ರೂಪುಗೊಳ್ಳುತ್ತಿವೆ.
ಪುಸ್ತಕವೊಂದು ಎಳೆಯರ ಗಮನಸೆಳೆಯುವ ನಿಟ್ಟಿನಲ್ಲಿ ವಿಷಯದ ಜೊತೆಗೆ ವಿನ್ಯಾಸದ ಪಾತ್ರವೂ ಮುಖ್ಯ. ಇಂಗ್ಲಿಷ್‌ನಲ್ಲಿ ನೋಡಿ: ನುಣ್ಣನೆ ಕಾಗದದಲ್ಲಿ ಮುದ್ರಣಗೊಳ್ಳುವ ಮಕ್ಕಳ ಕಥೆ–ಪದ್ಯ ಪುಸ್ತಕಗಳಲ್ಲಿ ಬಣ್ಣದ ಚಿತ್ರಗಳಿರುತ್ತವೆ. ವಿವಿಧ ಆಕಾರಗಳಲ್ಲಿ, ಸ್ವರೂಪದಲ್ಲಿ ಪುಸ್ತಕಗಳು ರೂಪುಗೊಳ್ಳುತ್ತವೆ. ಅಕ್ಷರಗಳು ಗೌಣವಾಗಿ, ಬಿಂಬಗಳ ಮೂಲಕವೇ ಮಕ್ಕಳ ಮನಸ್ಸಿಗೆ ವಿಷಯವನ್ನು ಮುಟ್ಟಿಸುವ ಪ್ರಯತ್ನಗಳು ನಡೆಯುತ್ತವೆ. ಇಂಗ್ಲಿಷ್ ಸಾಹಿತ್ಯದಲ್ಲಿ ಸಹಜ ಎನ್ನುವಂತಹದ್ದು ಕನ್ನಡ ಮಕ್ಕಳಿಗೆ ಐಷಾರಾಮಿ ಎನ್ನುವ ಅಭಿಪ್ರಾಯ ಕಳೆದ ಮೂರ್ನಾಲ್ಕು ವರ್ಷಗಳ ಹಿಂದಿನವರೆಗೂ ಇತ್ತು. ಬಹುವರ್ಣದ ಮುದ್ರಣ ಕನ್ನಡದಲ್ಲಿ ಗಿಟ್ಟುವುದಿಲ್ಲ ಎನ್ನುವ ಕಾರಣಕ್ಕೆ ಕಪ್ಪುಬಿಳುಪಿನ ಉತ್ಪನ್ನವೇ ಗತಿ ಎನ್ನುವ ಸ್ಥಿತಿಯಿತ್ತು. ಅಕ್ಷರಗಳ ಗಾತ್ರ ಸ್ವಲ್ಪ ದೊಡ್ಡ ದಾಗಿರುವುದು ಬಿಟ್ಟರೆ, ಮಕ್ಕಳ ಪುಸ್ತಕಗಳಿಗೂ ಉಳಿದ ಪುಸ್ತಕಗಳಿಗೂ ವ್ಯತ್ಯಾಸವಿಲ್ಲದಂತೆ ಕನ್ನಡ ಪುಸ್ತಕೋ ದ್ಯಮವಿತ್ತು. ಈಗ, ಹೊಳೆಯಲ್ಲಿ ನೀರು ಸಾಕಷ್ಟು ಹರಿದಿದೆ; ಎಳೆಯರ ಪುಸ್ತಕದ ಪುಟಗಳು ನವಿಲುಗರಿಗಳಂತಾಗಿವೆ.
ಏನೆಲ್ಲಾ ಆಗಿದೆ ನೋಡಿ: ಈ ಕಾಲದ ಮಕ್ಕಳಿಗೆ ಏನೆಲ್ಲ ಬೇಕು ಎನ್ನುವುದರ ಬಗ್ಗೆ ಪ್ರಕಾಶಕರು ಯೋಚಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯದಲ್ಲಿ ಸಮಕಾಲೀನ ಸಂಗತಿಗಳನ್ನು ತರುವುದು ಹೇಗೆ ಎನ್ನುವ ಚಿಂತನೆ ಶುರುವಾಗಿದೆ. ಈ ಚಿಂತನೆಗಳು ಪ್ರಯತ್ನವಾಗಿಯೂ ಪ್ರಯೋಗವಾಗಿಯೂ ಪುಸ್ತಕಗಳ ರೂಪದಲ್ಲಿ ಮೈದಳೆಯುತ್ತಿವೆ. ಈ ನಿಟ್ಟಿನಲ್ಲಿ ತಕ್ಷಣ ನೆನಪಿಸಿ ಕೊಳ್ಳಬಹುದಾದುದು: ‘ಬಹುರೂಪಿ’, ‘ನವಕರ್ನಾಟಕ’ ಹಾಗೂ ‘ಅಭಿನವ’ ಪ್ರಕಾಶನ ಸಂಸ್ಥೆಗಳ ಪುಸ್ತಕಗಳನ್ನು.
‘ಬಹುರೂಪಿ’ ಪ್ರಕಾಶನದ ಇತ್ತೀಚಿನ ಸುಮಾರು ಮೂವತ್ತು ಪುಸ್ತಕಗಳು ಚಿಣ್ಣರ ಭಾವಜಗತ್ತನ್ನು ಮುದಗೊಳಿಸುವಂತಿವೆ. ಆಕಾರ ಹಾಗೂ ಆಶಯ, ಎರಡು ಕಾರಣಗಳಿಂದಲೂ ಗಮನಸೆಳೆಯುವಂತಿರುವ ಈ ಪುಸ್ತಕಗಳು, ಹೊಳಪು ಕಾಗದ ಹಾಗೂ ಬಣ್ಣದ ಚಿತ್ರಗಳ ಮೂಲಕ ನಳನಳಿಸುತ್ತಿರುವ ಹೂಗಳಂತಿವೆ. ಮಕ್ಕಳ ಪುಸ್ತಕಗಳ ಪ್ರಕಟಣೆಯಲ್ಲಿ ಸದಾ ಮುಂದಿರುವ ‘ನವಕರ್ನಾಟಕ’ ಪ್ರಕಾಶನದ ಪುಸ್ತಕಗಳು ಕೂಡ ಆಧುನಿಕತೆಗೆ ತೆರೆದುಕೊಂಡಿವೆ, ಹೊಸಗಾಲದ ಮಕ್ಕಳ ನಿರೀಕ್ಷೆಗಳಿಗೆ ಸ್ಪಂದಿಸುವಂತಿವೆ. ಈ ಎರಡೂ ಸಂಸ್ಥೆಗಳ ಕೆಲವು ಪ್ರಕಟಣೆಗಳಿಗೆ ‘ಟಾಟಾ ಟ್ರಸ್ಟ್’ನ ಭಾಗವಾದ ‘ಪರಾಗ್’ ಸಂಸ್ಥೆಯ ಸಹಯೋಗ ದೊರೆತಿದೆ. ದೇಶದಲ್ಲಿ ಮಕ್ಕಳ ಸಾಹಿತ್ಯವನ್ನು ಮುನ್ನೆಲೆಗೆ ತರುತ್ತಿರುವ ಪ್ರಯೋಗಗಳಿಗೆ ಬೆಂಬಲವಾಗಿ ನಿಂತಿರುವ ‘ಪರಾಗ್’, ಕನ್ನಡದಲ್ಲೂ ಮಕ್ಕಳ ಸಾಹಿತ್ಯದ ಭಿನ್ನ ಪ್ರಯತ್ನಗಳ ಕೈಕುಲುಕುತ್ತಿದೆ.
ಮಕ್ಕಳ ಸಾಹಿತ್ಯದಲ್ಲಿ ‘ಅಭಿನವ’ ಪ್ರಕಾಶನದ್ದು ಮಹತ್ವದ ಹೆಜ್ಜೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರಗಳು ಕನ್ನಡದಲ್ಲಿ ಹೆಚ್ಚು ದೊರಕಿರುವುದು ‘ಅಭಿನವ’ದ ಪ್ರಕಟಣೆಗಳಿಗೆ. ಕೆ.ವಿ.ತಿರುಮಲೇಶರ ಮಕ್ಕಳ ಪದ್ಯಗಳ ಹತ್ತು ಕೃತಿಗಳನ್ನು ಒಮ್ಮೆಗೇ ಇಡುಗಂಟಿನಂತೆ ಪ್ರಕಟಿಸಿದ್ದು ‘ಅಭಿನವ’ದ ಹೆಗ್ಗಳಿಕೆ. ಈ ಬಳಗ, ಇತ್ತೀಚೆಗೆ ‘ಜಿಬಿ ಹೊಂಬಳ ಪುಸ್ತಕಮಾಲಿಕೆ’ಯಲ್ಲಿ ಮಕ್ಕಳಿಗಾಗಿ ಏಳು ಚಿತ್ರ–ಕಥನ ಪುಸ್ತಕಗಳನ್ನು ಪ್ರಕಟಿಸಿದೆ; ಹೊಸ ಹಾದಿಗೆ ಹೊರಳಿಕೊಂಡಿದೆ.
ಪುಟಾಣಿಗಳ ಸುಂದರ ಪುಸ್ತಕಗಳಿಗೆ ಹೆಸರಾದ ಮತ್ತೊಂದು ಪ್ರಕಾಶನ ‘ಹರಿವು ಬುಕ್ಸ್’. ಹರಿವಿನ ಪ್ರಕಟಣೆಗಳಾದ ‘ಚಿಕ್ಕು ಬುಕ್ಕು’, ‘ಪುಟಾಣಿ ಪಂಟರ್ಸ್’, ‘ಜಿಪ್ಸಿ ಜೀತು’ ಸೇರಿದಂತೆ ಬಹುತೇಕ ಪುಸ್ತಕಗಳು ಆಕರ್ಷಕ ಚಿತ್ರಗಳು ಹಾಗೂ ಗುಣಮಟ್ಟದ ನುಣುಪು ಕಾಗದದಲ್ಲಿ ರೂಪುಗೊಂಡಿವೆ. ಕವಿ ಎಚ್.ಎಸ್.ವೆಂಕಟೇಶ ಮೂರ್ತಿ ಅವರ ಸಂಪಾದಕತ್ವದಲ್ಲಿ ‘ವಸಂತ ಪ್ರಕಾಶನ’ ಪ್ರಕಟಿಸಿದ ‘ವಸಂತ ಬಾಲಸಾಹಿತ್ಯ ಮಾಲೆ’ಯ ಹನ್ನೆರಡು ಪುಸ್ತಕಗಳು, ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಸೇರ್ಪಡೆಯಾಗಿರುವ ಉತ್ತಮ ಕೃತಿಗಳಾಗಿವೆ.
ಕನ್ನಡದ ಪ್ರಕಾಶಕರ ಜೊತೆಗೆ, ದೇಶದ ವಿವಿಧ ಭಾಷೆಗಳಲ್ಲಿ ಮಕ್ಕಳ ಸಾಹಿತ್ಯದ ದಿಕ್ಕುದೆಸೆ ಬದಲಿಸುವ ಪ್ರಯತ್ನದಲ್ಲಿ ತೊಡಗಿರುವ ‘ಪ್ರಥಮ್’ ಸಂಸ್ಥೆ ಕನ್ನಡದಲ್ಲೂ ಹಲವು ಪುಸ್ತಕಗಳನ್ನು ಪ್ರಕಟಿಸುತ್ತಿದೆ. ‘ಪ್ರಥಮ್’ ಪ್ರಕಟಣೆಗಳಿಗೆ ಮುದ್ರಣದ ಗುಣಮಟ್ಟದಲ್ಲಿ ಸದಾ ಪ್ರಥಮದರ್ಜೆ.
ಏಕವ್ಯಕ್ತಿ ಸಾಹಸದ ರೂಪದಲ್ಲೂ ಕೆಲವರು ಉತ್ತಮ ಪುಸ್ತಕಗಳನ್ನು ಪ್ರಕಟಿಸಿರುವುದಿದೆ. ಅವರಲ್ಲಿ ಮುಖ್ಯರಾದವರು, ಬೆಳಗಾವಿ ಮೂಲದ ಅನುಪಮಾ ಬೆಣಚಿನಮರ್ಡಿ. ‘ಅವ್ವ ಪುಸ್ತಕ’ದ ಮೂಲಕ ಅವರು ಪ್ರಕಟಿಸಿರುವ ‘ಪತ್ತೇದಾರ ಪ್ರಣವ’, ‘ಕೊಂಚಿಗೆಯ ಸಾಹಸ’, ‘ಇರುವೆಗಳು ಮತ್ತು ಆಗಂತುಕ’, ‘ಕೆಂಪಿ’ ಮುಂತಾದ ಪುಸ್ತಕಗಳು ಎಳೆಯರಲ್ಲಿ ಪುಸ್ತಕಪ್ರೀತಿಯನ್ನು ಮೂಡಿಸುವಂತಿವೆ. ಮುಖ್ಯವಾಗಿ, ‘ಕನ್ನಡ ವರ್ಣಮಾಲೆ’ ಕೃತಿ, ಬಿಂಬದ ಜೊತೆಗೆ ಅಕ್ಷರವನ್ನು ಪರಿಚಯಿಸುವ, ಇಂಗ್ಲಿಷ್ ಅಕ್ಷರಗಳ ಮೂಲಕ ಉಚ್ಚಾರಣೆ ತಿಳಿಸುವ ವಿಶಿಷ್ಟ ಪ್ರಯತ್ನ; ಕನ್ನಡದಲ್ಲಿ ಇಂಥ ಪ್ರಯತ್ನಗಳು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಶಿವಲಿಂಗಪ್ಪ ಹಂದಿಹಾಳ್ ಅವರ ‘ನೋಟ್‌ಬುಕ್’ (ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕೃತ) ಭಿನ್ನಸಾಧ್ಯತೆಗಳ ಮೂಲಕ ಮಕ್ಕಳನ್ನು ಸೆಳೆಯಲು ಪ್ರಯತ್ನಿಸಿರುವ ಮಕ್ಕಳ ಕಥೆಗಳ ಸಂಕಲನ. ಉತ್ತಮ ಮುದ್ರಣದ ಜೊತೆಗೆ, ಕ್ಯುಆರ್ ಕೋಡ್‌ಗಳ ಮೂಲಕ ಕಥೆಗಳನ್ನು ಕೇಳುವ ಅವಕಾಶ ಪುಸ್ತಕದಲ್ಲಿದೆ. ಇಂಥ ‘ಕೇಳು ಪುಸ್ತಕ’ಗಳು ಮಕ್ಕಳಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕಾಗಿದೆ.
ಗುಣಮಟ್ಟದ ಪ್ರಕಟಣೆಗಳಷ್ಟೇ ಅಲ್ಲ, ಮಕ್ಕಳ ಸಾಹಿತ್ಯದ ಸ್ವರೂಪದ ಬಗೆಗಿನ ಚಿಂತನೆಗಳೂ ಕನ್ನಡದಲ್ಲಿ ನಡೆಯುತ್ತಿವೆ. ಎಳೆಯರಿಗಾಗಿ ಬರೆಯುವವರಿಗೆ ಹಾಗೂ ಮಕ್ಕಳ ಸಾಹಿತ್ಯದ ಕುತೂಹಲಿಗಳಿಗಾಗಿ ‘ಬಹುರೂಪಿ’ ಕಮ್ಮಟಗಳನ್ನು ನಡೆಸಿದೆ. ‘ಪರಾಗ್’ ಸಂಸ್ಥೆಯ ಸಹಯೋಗದಲ್ಲೂ ಮಾತುಕತೆ ಕೂಟಗಳು ನಡೆದಿವೆ.
ಮಕ್ಕಳ ಸಾಹಿತ್ಯಕ್ಕೆ ಜೀವನವನ್ನು ತೆತ್ತುಕೊಂಡಿರುವ ಆನಂದ ಪಾಟೀಲರು ಹಿಂದೊಮ್ಮೆ ಶಾಲಾಮಕ್ಕಳಿಗಾಗಿ ಕಮ್ಮಟಗಳನ್ನು ನಡೆಸಿದ್ದರು. ಈಗಲೂ ಎಳೆಯರ ಲೋಕದಲ್ಲಿ ಅವರದು ದಣಿವರಿಯದ ವಿಹಾರ. ಅದೇ ಹಾದಿಯಲ್ಲಿ, ಸ.ರಘುನಾಥ ಮೇಷ್ಟ್ರು ಮಕ್ಕಳಿಗಾಗಿ ಇತ್ತೀಚೆಗಷ್ಟೇ ಸರಣಿ ಕಮ್ಮಟಗಳನ್ನು ನಡೆಸಿದ್ದಾರೆ. ಮಕ್ಕಳಿಗೆ ಓದುವ, ಬರೆಯುವ ಗುಟ್ಟನ್ನು ಪರಿಚಯಿಸು ವುದರ ಜೊತೆಗೆ, ಕಮ್ಮಟಾರ್ಥಿಗಳ ಬಾಲಪಲುಕು ಗಳನ್ನು ಪುಸ್ತಕ ಆಗಿಸುತ್ತಿದ್ದಾರೆ. ಪಾಟೀಲರು ಹಾಗೂ ರಘುನಾಥರು ತಂತಮ್ಮ ನೆಲೆಯಲ್ಲಿ ಮಕ್ಕಳ ಸೃಜನಶೀಲತೆಗೆ ಹೊಳಪು ನೀಡುವ ಕೆಲಸದಲ್ಲಿ ತೊಡಗಿಕೊಂಡಿದ್ದರೆ, ಇಂಥ ಕೆಲಸಗಳನ್ನು ಮಾಡಲೆಂದೇ ಇರುವ ಧಾರವಾಡದ ‘ಬಾಲ ವಿಕಾಸ ಅಕಾಡೆಮಿ’ ಮಂಕಾಗಿದೆ.
ಆಧುನಿಕತೆಯ ಜೊತೆಗಿನ ಓಟದಲ್ಲಿ ಸೇರಿಕೊಂಡಿರುವ ಕನ್ನಡದ ಮಕ್ಕಳ ಸಾಹಿತ್ಯದಲ್ಲಿ ಹೊಸ ಭಾವ–ಬಣ್ಣ ಕಾಣಿಸುತ್ತಿರುವುದು ನಿಜ. ಇದು ಸ್ವಾಗತಾರ್ಹ ಬೆಳವಣಿಗೆ. ಪ್ರಶ್ನೆ ಇರುವುದು, ಮಕ್ಕಳ ಸಾಹಿತ್ಯ ಸಂಕ್ರಮಣದ ಫಸಲು ಮಕ್ಕಳನ್ನು ಮುಟ್ಟುತ್ತಿದೆಯೇ ಎನ್ನುವುದರಲ್ಲಿ. ಕನ್ನಡದ ಮಕ್ಕಳಿಗೆ ಪಠ್ಯೇತರ ಪುಸ್ತಕ ಹಿಡಿಯುವಷ್ಟು ವ್ಯವಧಾನವನ್ನು ಪೋಷಕರು ಹಾಗೂ ಶೈಕ್ಷಣಿಕ ವ್ಯವಸ್ಥೆ ಉಳಿಸಿದೆಯೆ? ಮಕ್ಕಳ ಎದೆಗೆ ಸಾಹಿತ್ಯದ ಬಿತ್ತಗಳು ಬೀಳುತ್ತಿವೆಯೆ? ಕನ್ನಡ ಶಾಲೆಗಳೇ ಮುಳುಗುವ ಹಡಗುಗಳಾಗಿರುವಾಗ, ಮಕ್ಕಳ ಸಾಹಿತ್ಯವೆಂಬ ನಾವೆಗಳ ಭವಿಷ್ಯವೇನು?
ಪುಸ್ತಕ ಸಂಸ್ಕೃತಿಯ ಬೆಳವಣಿಗೆಯಲ್ಲಿ ಗ್ರಂಥಾಲಯ ಇಲಾಖೆಯದ್ದು ಮಹತ್ವದ ಪಾತ್ರ. ಖರೀದಿ ಪ್ರಕ್ರಿಯೆಗೆ ಪರಿಗಣಿಸಲು ಬಯಸುವ ಪ್ರತಿ ಪುಸ್ತಕ ಗ್ರಂಥಾಲಯ ಇಲಾಖೆಯಲ್ಲಿ ನೋಂದಣಿ ಆಗುವುದು ಕಡ್ಡಾಯ. ನೋಂದಣಿಗೆ ಸಂಬಂಧಿಸಿದಂತೆ ಗ್ರಂಥಾಲಯ ಇಲಾಖೆ ಪುಸ್ತಕದ ಸ್ವರೂಪ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ ಕೆಲವು ಮಾನದಂಡಗಳನ್ನು ಗೊತ್ತುಪಡಿಸಿಕೊಂಡಿದೆ. ಹೊಸಗಾಲದ ಮಕ್ಕಳ ಪುಸ್ತಕಗಳ ಸ್ವರೂಪ ತನ್ನ ಮಾನದಂಡಗಳಿಗೆ ಹೊಂದದೆ ಹೋದಾಗ, ಅವುಗಳನ್ನು ನೋಂದಣಿ ಮಾಡಿಕೊಳ್ಳಲು ಇಲಾಖೆ ನಿರಾಕರಿಸುತ್ತಿದೆ. ‘ಇಲಾಖೆ ‘ಮಕ್ಕಳ ಸಾಹಿತ್ಯ’ಕ್ಕೆ ಸಂಬಂಧಿಸಿದಂತೆ ಅಪ್‌ಡೇಟ್ ಆಗಬೇಕು’ ಎನ್ನುವುದು ‘ಬಹುರೂಪಿ’ ಜಿ.ಎನ್.ಮೋಹನ್ ಅವರ ಒತ್ತಾಯ. ಅಲ್ಲದೆ, ಇಲಾಖೆಯ ದರನೀತಿಯೂ ಮಕ್ಕಳ ಸಾಹಿತ್ಯಕ್ಕೆ ಉತ್ತೇಜನಕಾರಿಯಾಗಿಲ್ಲ. ಸಾಮಾನ್ಯ ಪುಸ್ತಕವೊಂದರ ಖರೀದಿಗೆ ಸಂಬಂಧಿಸಿದಂತೆ ಇಲಾಖೆ ಗೊತ್ತುಪಡಿಸಿರುವ ದರ, ಉತ್ಕೃಷ್ಟ ಗುಣಮಟ್ಟದ ಮಕ್ಕಳ ಸಾಹಿತ್ಯ ಕೃತಿಗಳಿಗೂ ಅನ್ವಯಿಸಲಾಗದು. ಮಕ್ಕಳ ಸಾಹಿತ್ಯದ ಕೃತಿಗಳ ನೋಂದಣಿ ಮತ್ತು ಖರೀದಿಗೆ ಸಂಬಂಧಿಸಿದಂತೆ ಗ್ರಂಥಾಲಯ ಇಲಾಖೆ ವಿಶೇಷ ನೀತಿಯೊಂದನ್ನು ರೂಪಿಸಿಕೊಳ್ಳುವುದು ಅನಿವಾರ್ಯ.
ಎಳೆಯರಿಗಾಗಿ ಬರೆಯುತ್ತಿರುವವರಲ್ಲಿ ಸಾಹಿತ್ಯ ರಚನೆಗೆ ಸಂಬಂಧಿಸಿದ ಗ್ರಹಿಕೆ ಬದಲಾಗುತ್ತಿರುವುದು, ಮಕ್ಕಳ ಸಾಹಿತ್ಯದಲ್ಲಿನ ಇತ್ತೀಚಿನ ದಿನಗಳ ಪ್ರಮುಖ ಬದಲಾವಣೆ. ಲೇಖಕ ಬರೆಯುವುದು ತನಗಾಗಿ, ತನ್ನ ತೃಪ್ತಿಗಾಗಿ ಎನ್ನುವ ಗ್ರಹಿಕೆ ಈ ಮೊದಲಿತ್ತು. ಈಗ, ಬರವಣಿಗೆಯ ಕೇಂದ್ರದಲ್ಲಿ ಮಕ್ಕಳನ್ನು ತಲಪುವ ಉದ್ದೇಶವಿದೆ.-ಆನಂದ ಪಾಟೀಲ,ಹಿರಿಯ ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.