ADVERTISEMENT

ಬರಗೂರು ರಾಮಚಂದ್ರಪ್ಪ ಅವರ ವಿಶ್ಲೇಷಣೆ: ಎಲ್ಲ ಧರ್ಮಗಳ ‘ವಿವೇಕ’

ಪ್ರೊ.ಬರಗೂರು ರಾಮಚಂದ್ರಪ್ಪ
Published 11 ಜನವರಿ 2026, 23:30 IST
Last Updated 11 ಜನವರಿ 2026, 23:30 IST
<div class="paragraphs"><p>ಎಲ್ಲ ಧರ್ಮಗಳ ‘ವಿವೇಕ’</p></div>

ಎಲ್ಲ ಧರ್ಮಗಳ ‘ವಿವೇಕ’

   

ಕೆಲವರ ವಿಚಾರಧಾರೆಗೆ ಚಾರಿತ್ರಿಕ ಮಹತ್ವ ಇರುತ್ತದೆ. ಇನ್ನು ಕೆಲವರ ವಿಚಾರಧಾರೆಗೆ ಚಾರಿತ್ರಿಕ ಮಹತ್ವದ ಜೊತೆಜೊತೆಗೇ ಸಮಕಾಲೀನ ಪ್ರಸ್ತುತತೆಯೂ ಇರುತ್ತದೆ. ಈ ಪ್ರಸ್ತುತತೆಗೆ ಎರಡು
ಕಾರಣಗಳು: ಒಂದು, ಅಂಥವರ ವಿಚಾರಧಾರೆಯಲ್ಲಿರುವ ದರ್ಶನಾತ್ಮಕ ಹಾಗೂ ಸಾರ್ವತ್ರಿಕ ಸತ್ಯದ ಸಂಗತಿಗಳು. ಎರಡು, ಅಂದಿನ ವಾಸ್ತವಗಳಿಗೆ ಹೋಲುವ ಸಾಮಾಜಿಕ ವಾತಾವರಣ ಇಂದಿನ ದಿನಮಾನದಲ್ಲೂ ಇರುವುದು. ವಿವೇಕಾನಂದರಂತಹ ದಾರ್ಶನಿಕರು ಎರಡು ಕಾರಣಗಳಿಂದಲೂ ಪ್ರಸ್ತುತರಾಗುತ್ತಾರೆ. ತಮ್ಮ ಆಧ್ಯಾತ್ಮಿಕ ಚಿಂತನೆಯ ಜೊತೆಜೊತೆಗೇ ಸಾಮಾಜಿಕ ಕಾಳಜಿಯ ಕರುಳ ಚಿಂತನೆಯಲ್ಲಿ ತೊಡಗುವ ಮೂಲಕ ವಿವೇಕಾನಂದರು ಸಮಕಾಲೀನರಾಗುತ್ತಾರೆ.

ಅಧ್ಯಾತ್ಮದ ಆಕಾಶಯಾನದಲ್ಲಿ ಸಂಭ್ರಮಿಸದೆ ಭೂಮಿಯ ಸಂಕಟಕ್ಕೆ ಸ್ಪಂದಿಸಿದ್ದು, ಪ್ರತಿಕ್ರಿಯಿಸಿದ್ದು, ಬದಲಾವಣೆ ಬಯಸಿದ್ದು ಇವರ ವ್ಯಕ್ತಿತ್ವದ ವಿಶೇಷ. 163 ವರ್ಷಗಳ ಹಿಂದೆ ಜನಿಸಿದ (ಜ.1,1863) ವಿವೇಕಾನಂದರನ್ನು ನೆನಪಿಸಿಕೊಳ್ಳಲು, ಧರ್ಮಕ್ಕೆ ಸಮಾನತೆಯ ಆಯಾಮ ಒದಗಿಸಿದ್ದು ಕೂಡ ಒಂದು ಮುಖ್ಯ ಕಾರಣ. ವಿವೇಕಾನಂದರು ಧರ್ಮದ ವಿಚಾರ ಮಾತಾಡುವಾಗ ಬಳಸುವ ಪರಿಭಾಷೆಯು ಧರ್ಮ ಮತ್ತು ಸಮಾಜಗಳನ್ನು ಒಟ್ಟಿಗೇ ಇಟ್ಟು ನೋಡುವ ಚಿಂತನೆಯ ಗತಿಬಿಂಬವಾಗಿದೆ. ಆ ‘ಗತಿಬಿಂಬ’ದಲ್ಲಿ ಇಂದಿನ ಗಾಂಧಿ, ಅಂಬೇಡ್ಕರ್, ನೆಹರೂ, ಕುವೆಂಪು ಮುಂತಾದವರು ಕಾಣಿಸುವುದು ಸಮಕಾಲೀನ ಪ್ರಸ್ತುತತೆಯ ಸಂಕೇತವಾಗಿದೆ.

ADVERTISEMENT

ಗಾಂಧೀಜಿಯವರು ವಿವೇಕಾನಂದರಂತೆಯೇ ಹಿಂದೂ ಧರ್ಮವನ್ನು ನಂಬಿಕೆಯ ನೆಲೆಯಾಗಿಸಿ
ಕೊಂಡಿದ್ದವರು. ಆರಂಭದ ದಿನಗಳಲ್ಲಿದ್ದ ತಮ್ಮ ಜಡ ಸಾಮಾಜಿಕ ಚಿಂತನೆಗಳನ್ನು ತೊಡೆದು ಹೊರಬಂದವರು. ತನ್ನ ಎಲ್ಲ ಭಯಾನಕತೆಗಳಿಂದ ನಮಗೆ ಇವತ್ತು ಕಾಣಿಸುತ್ತಿರುವ ಜಾತಿಯನ್ನು ಶಾಸ್ತ್ರಗಳು ಪುರಸ್ಕರಿಸುವುದಾದರೆ, ನಾನು ನನ್ನನ್ನು ಹಿಂದೂವೆಂದು ಕರೆದುಕೊಂಡು ಅದರಲ್ಲಿ ಉಳಿಯಲಾರೆ ಎಂದು ಒಬ್ಬ ಪತ್ರಿಕಾ ವರದಿಗಾರರಿಗೆ ಸ್ಪಷ್ಟವಾಗಿಹೇಳಿದವರು (1936). ಎಲ್ಲ ಧರ್ಮಗಳನ್ನು ಸಮದೃಷ್ಟಿಯಿಂದ ನೋಡಬೇಕು ಎಂದು ಪ್ರತಿಪಾದಿಸಿದವರು. ಇಬ್ಬರೂ ಧಾರ್ಮಿಕ ಸಹಿಷ್ಣುತೆಯ ಪ್ರತಿಪಾದಕರು ಮತ್ತು ಹಿಂದೂ ಧರ್ಮದ ಒಳ ವಿಮರ್ಶಕರು. ಪ್ರಪಂಚದ ಯಾವ ಧರ್ಮವೂ ಹಿಂದೂ ಧರ್ಮದಷ್ಟು ಭವ್ಯವಾಣಿಯಲ್ಲಿ ಮನುಷ್ಯತ್ವದ ಘನತೆಯನ್ನು ಬೋಧಿಸುವುದಿಲ್ಲ ಎಂದು ಮೆಚ್ಚುವ ವಿವೇಕಾನಂದರು ಅದೇ ಉಸಿರಿನಲ್ಲಿ ದೀನ ದಲಿತರ ಕುತ್ತಿಗೆಯನ್ನು ಹಿಂದೂ ಧರ್ಮದಲ್ಲಿ ಕ್ರೂರವಾಗಿ ತುಳಿಯಲಾಗುತ್ತಿದೆಯೆಂಬ ಅಂಶವನ್ನೂ ಹೇಳುತ್ತಾರೆ. ಅಂತೆಯೇ ತಪ್ಪು ಹಿಂದೂ ಧರ್ಮದ್ದಲ್ಲ, ಅಲ್ಲಿರುವ ಸಂಪ್ರದಾಯ ಶರಣರದು; ಪುರೋಹಿತರದು. ಪಾರಮಾರ್ಥಿಕ ಮತ್ತು ವ್ಯಾವಹಾರಿಕ ಎಂದು ನಾನಾ ರೀತಿಯ ಕ್ರೂರ ವಿಧಾನಗಳನ್ನು ಸೃಷ್ಟಿಸುವ ಠಕ್ಕರದು ಎಂದು ನೇರವಾಗಿ ನುಡಿದಿದ್ದಾರೆ (ವಿವೇಕಾನಂದರ ಕೃತಿಶ್ರೇಣಿ, ಸಂಪುಟ–6).

ವಿವೇಕಾನಂದರು ಅಸ್ಪೃಶ್ಯತೆ ಹಾಗೂ ಜಾತಿ ವ್ಯವಸ್ಥೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದಾರೆ. ನಮ್ಮ ದೇಶದಲ್ಲಿ ಯಾರಾದರೂ ಕೆಳಜಾತಿಯಲ್ಲಿ ಹುಟ್ಟಿದರೆ ಆಯಿತು; ಅವರಿಗೆ ಉಳಿಗಾಲವಿಲ್ಲ. ನಾವು ಅವರನ್ನು ಮುಟ್ಟುವುದಿಲ್ಲ, ಅವರ ಸಂಗವನ್ನು ನಿರಾಕರಿಸುತ್ತೇವೆ. ಎಂತಹ ದಬ್ಬಾಳಿಕೆಯಿದು (ಕೃತಿಶ್ರೇಣಿ, ಸಂಪುಟ–13) ಎಂದು ವಿಷಾದ ಮತ್ತು ನೋವಿನಿಂದ ನುಡಿದಿದ್ದಾರೆ. ನಮ್ಮ ದೇಶ ಬದುಕಿರುವುದೇ ದೀನರ ಜೋಪಡಿಗಳಲ್ಲಿ ಎಂಬುದನ್ನು ನೆನಪಿಡಿ. ಆದರೆ, ಅವರಿಗೆ ಯಾರೂ ಸಹಾಯ ಮಾಡುತ್ತಿಲ್ಲ, ಪ್ರಾಣ ಹೋದರೂ ಸರಿ, ದೀನ ದಲಿತರಿಗೆ ದಯೆ ತೋರುವುದು ನಮ್ಮ ಗುರಿ. ದೀನ ದಲಿತರ ಮನೆಯ ಬಾಗಿಲಿಗೆ ನೆಮ್ಮದಿ, ನೀತಿ, ಧರ್ಮ ಬರುವಂತೆ ಮಾಡುವೆನು. ಹೀಗೆ ನಾನು ಮಾಡುತ್ತೇನೆ; ಇಲ್ಲವೇ ಮಡಿಯುತ್ತೇನೆ (ಕೃತಿಶ್ರೇಣಿ, ಸಂ.–6) ಎಂದು ಘೋಷಿಸಿದ್ದಾರೆ.

ವಿವೇಕಾನಂದರ ಅಂದಿನ ಈ ಎಲ್ಲ ಮನದಾಳದಮಾತುಗಳನ್ನು ಗಮನಿಸಿದಾಗ, ಇಂದಿನ ಅಂಬೇಡ್ಕರ್ ಅವರ ವಿಚಾರಧಾರೆಯ ಮಹತ್ವ ಮತ್ತಷ್ಟು ಮನವರಿಕೆ ಆಗುತ್ತದೆ. ಅಸ್ಪೃಶ್ಯತೆ ವಿರೋಧಿಯಾದ ಹೋರಾಟ ವನ್ನು ಕಟ್ಟಿ ತಮ್ಮ ಚಿಂತನೆಯಲ್ಲಿ ಮಹಿಳೆಯರು, ಕಾರ್ಮಿಕರು ಮತ್ತು ಬಡವರ ಪರವಾದ ಪ್ರತಿಪಾದನೆ ಯನ್ನು ಅಂತರ್ಗತ ಮಾಡಿಕೊಂಡು, ಅಂತಃಕರಣ
ಪೂರ್ವಕ ಪ್ರತಿರೋಧದ ಪ್ರತೀಕವಾದ ಅಂಬೇಡ್ಕರ್ ಅವರ ವಿವೇಕ ಮಾನವೀಯವಾದುದು. ‘ಧರ್ಮ ಇರುವುದು ಮನುಷ್ಯರಿಗಾಗಿ; ಮನುಷ್ಯರಿರುವುದು ಧರ್ಮಕ್ಕಾಗಿ ಅಲ್ಲ’ ಎಂಬ ಅಂಬೇಡ್ಕರ್ ಅವರ ಅಭಿಪ್ರಾಯ ಸದಾ ಮಾನ್ಯವಾದುದು. ಹಿಂದೂ ಧರ್ಮದಾಚೆಗೆ ನಿಂತ ಅಂಬೇಡ್ಕರ್ ಅವರ ದೀನ ದಲಿತರ ಪರವಾದ ವಿಚಾರಧಾರೆ ಮತ್ತು ಹಿಂದೂ ಧರ್ಮದ ಒಳಗಿದ್ದೇ ದೀನ ದಲಿತರ ಪರ ದನಿಯೆತ್ತಿದ ವಿವೇಕಾನಂದರ ವಿಚಾರಧಾರೆಯನ್ನು ಅಕಡೆಮಿಕ್ ದೃಷ್ಟಿಯಿಂದ ಅಧ್ಯಯನ ಮಾಡಬಹುದು.

ಅಂಬೇಡ್ಕರ್ ಅವರು ಬುದ್ಧ ಗುರುವಿನ ಅನುಯಾ ಯಿಗಳೆಂದು ಜಗತ್ತಿಗೇ ಗೊತ್ತು. ವಿವೇಕಾನಂದರಿಗೂ, ಬುದ್ಧ ಗುರುವಿನ ಬಗ್ಗೆ ಅಪಾರ ಗೌರವ. ಬುದ್ಧ, ವೇದಕ್ಕಾಗಲಿ, ಜಾತಿಗಾಗಲಿ, ಪುರೋಹಿತರಿಗಾಗಲಿ, ಆಚಾರಕ್ಕಾಗಲಿ ಬಾಗಲಿಲ್ಲ... ಸತ್ಯಾನ್ವೇಷಣೆಯಲ್ಲಿ ಇಂತಹ ದಿಟ್ಟತನ ಮತ್ತು ಸರ್ವಜನರ ಮೇಲೆ ಪ್ರೀತಿ ಇದ್ದಂತಹ ಇನ್ನೊಬ್ಬ ವ್ಯಕ್ತಿಯನ್ನು ಪ್ರಪಂಚ ಮತ್ತೆಂದೂ ಕಂಡಿಲ್ಲ ಎಂದು ವಿವೇಕಾನಂದರು ಪ್ರಶಂಸಿಸಿದ್ದಾರೆ (ಕೃತಿಶ್ರೇಣಿ, ಸಂಪುಟ–8).

ವಿವೇಕಾನಂದರು ಸಮಾಜದ ವೈವಿಧ್ಯಕ್ಕೆ ಬೆಲೆ ಕೊಟ್ಟವರು. ಅಂತೆಯೇ ಧಾರ್ಮಿಕ ಸಹಿಷ್ಣುತೆಯ ಪ್ರತಿಪಾದಕರು. 1893ರ ಸೆಪ್ಟೆಂಬರ್ 11ರಂದು ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಮೊದಲ ಭಾಷಣದಲ್ಲಿ ವಿವೇಕಾನಂದರು ನಮ್ಮ ದೇಶದ ಮತ್ತು ಧರ್ಮದ ಬಗ್ಗೆ ಹೇಳಿದ ಮಾತುಗಳು ಇಂದಿಗೂ ಅನುಸರಣೀಯ ಆದರ್ಶವನ್ನು ಒಳಗೊಂಡಿವೆ. ಅವರ ನುಡಿಗಳು ಹೀಗಿವೆ: ‘ಧಾರ್ಮಿಕ ಸಹನೆಯನ್ನು ಎಲ್ಲಾ ಧರ್ಮಗಳೂ ಸ್ವೀಕಾರಯೋಗ್ಯ ಎಂಬುದನ್ನು ಜಗತ್ತಿಗೆ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಪರಧರ್ಮ ಸಹಿಷ್ಣುತೆಯಲ್ಲಿ ನಮಗೆ ನಂಬಿಕೆ
ಉಂಟು. ಅಷ್ಟೇ ಅಲ್ಲ, ಎಲ್ಲಾ ಧರ್ಮಗಳೂ ಸತ್ಯ ಎಂಬುದನ್ನು ನಾವು ಒಪ್ಪುತ್ತೇವೆ. ಜಗತ್ತಿನ ಎಲ್ಲ ರಾಷ್ಟ್ರ ಗಳಲ್ಲಿ, ಎಲ್ಲ ಧರ್ಮಗಳಲ್ಲಿ, ಯಾರು ಯಾರು ಹಿಂಸೆಗೆ ಒಳಗಾದರೂ, ಅವರಿಗೆಲ್ಲ ಆಶ್ರಯವನ್ನು ನೀಡಿದ ದೇಶಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು’. ವಿವೇಕಾನಂದರ ಅಂದಿನ ಈ ನುಡಿಗಳನ್ನು ಇಂದಿನ ವಿವೇಕವಾಗಿ ಹೃದಯಸ್ಥ ಮಾಡಿಕೊಂಡರೆ ಧಾರ್ಮಿಕ ಮೂಲಭೂತವಾದಕ್ಕೆ ಅವಕಾಶವೇ ಇರುವುದಿಲ್ಲ.

ವಿವೇಕಾನಂದರ ಈ ಹೆಮ್ಮೆಯ ನುಡಿಗಳ ಜೊತೆಗೆ ಅವರಂತೆಯೇ ವೈವಿಧ್ಯಕ್ಕೆ ಬದ್ಧರಾದ ನೆಹರೂ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಹೇಳಿದ ಮಾತು ಗಳನ್ನು ಗಮನಿಸಬಹುದು. ‘ನಾವು ಯಾವುದೇ ಧರ್ಮಕ್ಕೆ ಸೇರಿರಲಿ, ನಾವೆಲ್ಲರೂ ಸಮಾನ ಹಕ್ಕು, ಸೌಕರ್ಯ ಮತ್ತು ಕರ್ತವ್ಯದಿಂದ ಕೂಡಿದ ಭಾರತದ ಮಕ್ಕಳು... ಭಾರತವು ಅನೇಕ ಧರ್ಮಗಳಿಂದ ಕೂಡಿದ ರಾಷ್ಟ್ರವಾಗಿದೆ. ನಾವೆಲ್ಲ ಒಬ್ಬರನ್ನೊಬ್ಬರು ಅರಿತುಕೊಂಡು ಪರಸ್ಪರರ ನಂಬಿಕೆ, ಧರ್ಮಗಳಿಗೆ ಬೆಲೆ ಕೊಟ್ಟು ಶಾಂತಿಯಿಂದ ಸಹಬಾಳ್ವೆ ಮಾಡಬೇಕು’ ಎನ್ನುವುದು ನೆಹರೂ ನುಡಿ.

ವಿವೇಕಾನಂದರು ಶಿಕ್ಷಣ ಸ್ವಾಮ್ಯದ ವಿಷಯಕ್ಕೆ ಬಂದಾಗ ಬ್ರಾಹ್ಮಣರನ್ನು ಟೀಕಿಸಿದರೂ ಅವರ ದೃಷ್ಟಿಕೋನದಲ್ಲಿ ಇದ್ದದ್ದು ಒಟ್ಟು ಪುರೋಹಿತಶಾಹಿ ಮನೋಧರ್ಮದ ವಿರೋಧವೇ ಹೊರತು ಜಾತಿ
ವಿರೋಧ ಅಲ್ಲ. ಕುವೆಂಪು ಅವರು ತಮ್ಮ ಬಗ್ಗೆ ಬ್ರಾಹ್ಮಣ ವಿರೋಧಿ ಎಂಬ ತಪ್ಪು ತಿಳಿವಳಿಕೆ ಮೂಡಿದಾಗ ಸ್ಪಷ್ಟನೆ ನೀಡಿ, ‘ವರ್ಣಾಶ್ರಮದ ವಿಷಯ ಬಂದಾಗ ಅನಿವಾರ್ಯವಾಗಿ ಬ್ರಾಹ್ಮಣ ಜಾತಿಯ ಪ್ರಸ್ತಾಪ ಮಾಡುತ್ತೇನೆಯೇ ಹೊರತು ನಾನು ಯಾವುದೇ ಜಾತಿಯ ವಿರೋಧಿಯಲ್ಲ. ಯಾಕೆಂದರೆ ನನಗೆ ಜಾತಿಯೇ ಇಲ್ಲ’ ಎನ್ನುತ್ತಾರೆ. ‘ಪುರೋಹಿತಶಾಹಿಯು ಎಲ್ಲಾ ಧರ್ಮಗಳಲ್ಲೂ ಇದೆ’ ಎಂದು ಪ್ರತಿಪಾದಿಸಿದ್ದಾರೆ. ಇಲ್ಲಿ ಇಬ್ಬರ ವೈಚಾರಿಕ ಸೌಮ್ಯತೆಯನ್ನು ಗಮನಿಸಬಹುದು.

ವಿವೇಕಾನಂದರು ಹೇಳಿದ ಇನ್ನೊಂದು ಮಾತು ಮುಖ್ಯವಾದುದು: ‘ಧರ್ಮವು ದೇವಸ್ಥಾನ ಕಟ್ಟುವು
ದರಲ್ಲಿ ಇಲ್ಲ ಅಥವಾ ಸಾಮಾಜಿಕ ಪೂಜೆಗೆ ಹೋಗು ವುದರಲ್ಲಿಯೂ ಇಲ್ಲ...’ ಧರ್ಮವೆಂದರೆ ಸಾಕ್ಷಾತ್ಕಾರ ಎಂಬ ಅವರ ನುಡಿಗಳನ್ನು ಗಮನಿಸಿದಾಗ 12ನೇ ಶತಮಾನದಲ್ಲೇ ಬಸವಣ್ಣನವರು ‘ದೇಹವೇ ದೇಗುಲ’, ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂದು ಪ್ರತಿಪಾದಿಸಿದ ಹೊಸ ಪರಿಕಲ್ಪನೆ ನೆನಪಾಗುತ್ತದೆ. ಅಂತೆಯೇ ಕುವೆಂಪು ಅವರು ‘ಜಲಗಾರ’ ನಾಟಕದಲ್ಲಿ ದೇಗುಲ ಮತ್ತು ದೇವರನ್ನು ಹೃದಯಕ್ಕೆ ತಂದದ್ದು ಗಮನೀಯವಾಗುತ್ತದೆ.

ಧಾರ್ಮಿಕ ಸಾಮರಸ್ಯ ಕುರಿತಂತೆ ವಿವೇಕಾನಂದರು ದೃಢದನಿಯಲ್ಲಿ ಪ್ರತಿಪಾದಿಸಿದ ವಿಚಾರಧಾರೆಯು ಎಂದೆಂದಿಗೂ ಪ್ರಸ್ತುತವಾದುದು: ‘ನಾವು ಮಾನವವರ್ಗವನ್ನು ಎಲ್ಲಿ ವೇದಗಳು, ಬೈಬಲ್, ಕುರಾನ್ ಇಲ್ಲವೋ ಅಲ್ಲಿಗೆ ಕರೆದೊಯ್ಯಬೇಕು. ಆದರೂ ಕೂಡ ವೇದ, ಬೈಬಲ್, ಕುರಾನ್‌ಗಳ ಐಕ್ಯತೆ ಯಿಂದ ಇದನ್ನು ಸಾಧಿಸಬೇಕಾಗಿದೆ. ನಮ್ಮ ಮಾತೃಭೂಮಿಯಲ್ಲಿ ಹಿಂದೂ, ಮುಸಲ್ಮಾನ ಧರ್ಮಗಳು ಒಂದಾಗಿರಬೇಕು. (ಹಿಂದೂ) ವೇದಾಂತದ ಮೆದುಳು, ಇಸ್ಲಾಮಿನ ದೇಹ – ಇದೊಂದೇ ನಮ್ಮ ಪುರೋಗಮನಕ್ಕೆ ಹಾದಿ’ (ಕೃತಿಶ್ರೇಣಿ, ಸಂಪುಟ–7). ವಿವೇಕಾನಂದರ ಆಶಯ ಹಿಂದೂಗಳಿಗಷ್ಟೇ ಅಲ್ಲ, ಎಲ್ಲ ಧರ್ಮೀಯರಿಗೂ ಅರ್ಥವಾಗಬೇಕು.

ವಿವೇಕಾನಂದರು ಸರ್ವಧರ್ಮ ಸಮ್ಮೇಳನದ ಕೊನೆಯ ದಿನ, 1893ರ ಸೆಪ್ಟೆಂಬರ್ 27ರಂದು ನೀಡಿದ ಉಪನ್ಯಾಸದ ಕೊನೆಯಲ್ಲಿ ಹೇಳಿದ್ದು: ‘ಸಂಘರ್ಷವಲ್ಲ, ಸೌಹಾರ್ದ; ವಿನಾಶವಲ್ಲ, ಸ್ವೀಕಾರ; ದ್ವೇಷವಲ್ಲ, ಸಾಮರಸ್ಯ ಮತ್ತು ಶಾಂತಿ’. ಎಲ್ಲ ಧರ್ಮಗಳಿಗೆ ವಿವೇಕಾನಂದರ ಈ ಆಶಯ ಅರ್ಥವಾಗಬೇಕು; ಎಲ್ಲ ಧರ್ಮಗಳಲ್ಲೂ ‘ವಿವೇಕಾನಂದರು’ ಇರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.