ADVERTISEMENT

ಚುರುಮುರಿ: ಮಾಲಿನ್ಯಕ್ಕಿಲ್ಲ ಮದ್ದು

ಸುಮಂಗಲಾ
Published 26 ಅಕ್ಟೋಬರ್ 2025, 23:30 IST
Last Updated 26 ಅಕ್ಟೋಬರ್ 2025, 23:30 IST
   

‘ದೀಪಾವಳಿ ಆದಮ್ಯಾಲೆ ದಿಲ್ಲೀವಳಗೆ ವಾಯುಮಾಲಿನ್ಯ ಮಿತಿ ಮೀರೈತಂತೆ. ಕೆಲವು ಕಡಿಗಿ ಗಾಳಿ ಗುಣಮಟ್ಟ ಸೂಚ್ಯಂಕ 400 ದಾಟೈತಂತ.’ ಬೆಕ್ಕಣ್ಣ ದೆಹಲಿಯ ಹವಾಮಾನ ವರದಿ ಓದಿತು.

‘ಅಲ್ಲಿ ಪ್ರತೀ ವರ್ಷ ಈ ಟೈಮಿನಾಗೆ ಮಾಲಿನ್ಯದ ಗೋಳು ಇದ್ದಿದ್ದೇ. ಇಷ್ಟಾದ್ರೂ ಮಂದಿ ಪಟಾಕಿ ಹೊಡಿಯೂದೂ ಬಿಡಂಗಿಲ್ಲ’ ಎಂದೆ.

‘ದೀಪಾವಳಿ ದೊಡ್ಡಬ್ಬ. ಪಟಾಕಿ ಹೊಡಿಯೂದು ಹೆಂಗ ಬಿಡತಾರೆ? ನೀನು ಜಿಪುಣಿ, ನನಗೆ ಪಟಾಕಿ ಕೊಡಿಸಲಿಲ್ಲ ಅಂದರೆ ರಾಜಧಾನಿ ಮಂದೀನೂ ಪಟಾಕಿ ಹೊಡೆಯಬಾರದೇನು?’ ಎಂದು ಬೆಕ್ಕಣ್ಣ ದುರುಗುಟ್ಟಿಕೊಂಡು ನೋಡುತ್ತಾ ಗುರುಗುಟ್ಟಿತು.

ADVERTISEMENT

‘ಮೋದಿಮಾಮಾರು ಪ್ರಧಾನಿಯಾಗಿ ಸಂಸತ್ತಿನೊಳಗೆ ಕುಂತು ಹನ್ನೊಂದು ವರ್ಸ ಆಯಿತು… ಇನ್ನಾ ತನಾ ಈ ಸಮಸ್ಯೆಗೆ ಎದಕ್ಕೆ ಪರಿಹಾರ ಸಿಕ್ಕಿಲ್ಲ?’ ನಾನು ರಾಗವೆಳೆದೆ.   

‘ನೀ ಎಲ್ಲಿಂದೆಲ್ಲಿಗೋ ಸಂಬಂಧ ಕಲ್ಪಿಸಬ್ಯಾಡ. ಮೋದಿಮಾಮಾರು ಗಾಳಿ ಗುಣಮಟ್ಟ ಅಳೀತಾ ಕೂಡಬೇಕೇನು? ಪಂಜಾಬ್‌ ಕಡೆ ಹೊಲದಾಗೆ ಕೂಳೆ ಸುಡತಾರಲ್ಲ, ಅದರ ಹೊಗೆ ಬರತೈತಿ ದಿಲ್ಲಿಗೆ’ ಬೆಕ್ಕಣ್ಣ ವಾದಿಸಿತು.

‘ಹರಿಯಾಣದಾಗೆ ಕೂಳೆ ಸುಡಂಗಿಲ್ಲೇನು? ಅಲ್ಲಿಯ ಗಾಳಿ ದಿಲ್ಲಿಗೆ ಸೋಕಂಗಿಲ್ಲೇನು?’ ನಾನು ಕಿಚಾಯಿಸಿದೆ.

‘ಹೋಗಲಿ ಬಿಡು… ನಮಗ್ಯಾಕೆ ದಿಲ್ಲಿ ಸುದ್ದಿ? ನಮ್ಮ ಬೆಂಗಳೂರಿನಾಗೆ ಈ ಸಲ ದೀಪಾವಳಿ ನಂತರ ವಾಯುಮಾಲಿನ್ಯ ಕಡಿಮೆ ಆಗೈತಂತ. ಅದಕ್ಕೆ ಖುಷಿ ಪಡೂಣು’ ಎಂದು ಮಾತು ಬದಲಿಸಿತು.

‘ಮಂದಿ ಹಸಿರು ಪಟಾಕಿ ಹಚ್ಯಾರೆ. ಲಾಲ್‌ಬಾಗ್‌, ಕಬ್ಬನ್‌ಪಾರ್ಕ್‌ ಇಂಥಾ ಕಡಿಗೆ ಮರಗಳು ಅದಾವು ಅಂತ ನಮ್ಮಲ್ಲಿ ಮಾಲಿನ್ಯ ಕಡಿಮೆಯಾಗೈತೆ’ ಎಂದೆ ನಾನು.

‘ಅಲ್ಲಿಯ ಮರಗಳೂ ಮಾಯವಾಗತಾವೆ! ‌ಹೊಸದಾಗಿ ಮಾಡೋ ಸುರಂಗ ರಸ್ತೆಗೆ ಲಾಲ್‌ಬಾಗಿನ ಆರು ಎಕರೆ ಬಲಿಯಾಗತೈತಿ. ಯಾರ‍್ಯಾರ ಜೇಬುಗಳು ಎಷ್ಟು ತುಂಬತಾವೋ ಗೊತ್ತಿಲ್ಲ, ಮರಗಳಂತೂ ಮಾಯವಾಗತಾವೆ. ನೀವು ಶ್ರೀಸಾಮಾನ್ಯರು ನೋಡಿಕೋತ ಕುಂದರತೀರಿ’ ಎಂದು ಬೆಕ್ಕಣ್ಣ ನನ್ನ ಮೂತಿಗೆ ತಿವಿಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.