‘ಮೊನ್ನಿ ಹೊಸ ವರ್ಷದಲ್ಲಿ ನಮ್ಮ ಎಣ್ಣೆವೀರರು ಹಾರಿಸಿದ ಗುಂಡಿಗೆ ಸರ್ಕಾರದ ಖಜಾನಿ ತುಂಬೋತಂತಪ. ಒಂದೇ ದಿನ 308 ಕೋಟಿ ರೂಪಾಯಿ ಗುಂಡು ವ್ಯಾಪಾರ ಆತಂತೆ’ ದುಬ್ಬೀರ ವರದಿ ಒಪ್ಪಿಸಿದ.
‘ಎಣ್ಣೆವೀರರಾ? ಕುಡುಕರು ಅನ್ನು. ಫುಲ್ ಟೈಟಾಗಿ ಗಟಾರದಾಗೆಲ್ಲ ಬಿದ್ದು ಎದ್ದು ತೇಲಾಡ್ತಿದ್ರು’ ಮಂಜಮ್ಮ ನಕ್ಕಳು.
‘ಕುಡುಕರು ಅಂದ್ರೆ ಸರಿ ಇರಲ್ಲ ನೋಡು, ಆಪತ್ಬಾಂಧವರು ಅನ್ನು. ಸರ್ಕಾರದ ಕಷ್ಟಕ್ಕೆ ದುಡ್ಡು ಕೊಡೋರು ಅವರು. ತಮ್ಮ ಲಿವರ್ ಹಾಳಾದ್ರೂ ಸರ್ಕಾರಕ್ಕೆ ಪವರ್, ಅಂದ್ರೆ ಶಕ್ತಿ ತುಂಬೋರು, ದಿಕ್ಕು ತೋರಿಸೋರು’ ಗುಡ್ಡೆ ಆಕ್ಷೇಪಿಸಿದ.
‘ದಿಕ್ಕು ತೋರಿಸೋರಲ್ಲ, ದಿಕ್ಕು ತಪ್ಪಿಸೋರು ಅನ್ನು’.
‘ಸದ್ಯ ದಿಕ್ಕು ತಪ್ಪದೇ ಇರೋರು ಯಾರದಾರೆ ಮಂಜಮ್ಮ, ಸೂರ್ಯನೇ ಸಂಕ್ರಾಂತಿ ಟೈಮಿಗೆ ದಿಕ್ಕು ಬದಲಿಸ್ತಾನಂತೆ, ಇನ್ನು ನಾವೆಲ್ಲ ಯಾವ ಲೆಕ್ಕ?’ ಎಂದ ತೆಪರೇಸಿ.
‘ಈಗ ಹೊಸ ವರ್ಷದಾಗೆ ಯಾರ್‍ಯಾರು ದಿಕ್ಕು ಬದಲಿಸಬಹುದು ಹೇಳ್ರಪ್ಪ’ ಕೊಟ್ರೇಶಿ ಕೊಕ್ಕೆ.
‘ಹೈಕಮಾಂಡ್ ಹೇಳಿದ್ರೆ ನಮ್ ಯತ್ನಾಳ್ ಸಾಹೇಬ್ರು ದಿಕ್ಕು ಬದಲಿಸಬಹುದು, ಕಾಂಗ್ರೆಸ್‌ನೋರು ಆಪರೇಷನ್ ಮಾಡಿದ್ರೆ ಬಿಜೆಪಿ, ಜೆಡಿಎಸ್‌ನ ಕೆಲವರು ದಿಕ್ಕು ಬದಲಿಸಬಹುದು’ ಗುಡ್ಡೆ ಹೇಳಿದ.
‘ಕಾಂಗ್ರೆಸ್ ಸರ್ಕಾರದ ದಿಕ್ಕೇನಾದ್ರೂ ಬದಲಾಗಬೋದಾ? ಮಂತ್ರಿಗಳು, ಅಧ್ಯಕ್ಷರು ಬದಲಾಗಬೋದಾ?’ ದುಬ್ಬೀರ ಕೇಳಿದ.
‘ಏನೋಪ್ಪ, ದಿಕ್ಕು ಬದಲಾಗೋವು ಬಾಳದಾವೆ. ನಮ್ ಕ್ರಿಕೆಟ್ ಟೀಮ್ ಯಾಕೋ ದಿಕ್ಕು ತಪ್ಪೇತಿ, ಅದರ ದಿಕ್ಕು ಬದಲಾಗಬೋದು. ಅಲ್ಲಿ ನಿತೀಶ್ ಕುಮಾರ್ ಯಾಕೋ ದಿಕ್ಕು ಬದಲಿಸೋ ಹಂಗೆ ಕಾಣುಸ್ತತಿ. ಇಲ್ಲಿ ಜೆಡಿಎಸ್ ಪಕ್ಷಕ್ಕೆ ಹೊಸ ದಿಕ್ಕು ತೋರಿಸೋರು ಬರಬೋದು’.
‘ನಮ್ ಹರಟೆಕಟ್ಟೆ ದಿಕ್ಕೇನಾದ್ರೂ ಬದಲಾಗಬೋದಾ?’ ಮಂಜಮ್ಮ ಕೇಳಿದಳು.
‘ಯಾರ ದಿಕ್ಕು ಬದಲಾದ್ರೂ ನಮ್ಮಗಳ ದಿಕ್ಕು, ಈ ಮಂಜಮ್ಮನ ಬಾಕಿ ಲೆಕ್ಕದ ಬುಕ್ಕು ಯಾವತ್ತಿಗೂ ಬದಲಾಗಲ್ಲ ಬಿಡ್ರಲೆ’ ಎಂದ ಗುಡ್ಡೆ.
ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.