ADVERTISEMENT

ಸಂಪಾದಕೀಯ | ಕಸ ವಿಲೇವಾರಿ: ತಪ್ಪುಗಳಿಂದ ಪಾಠ ಕಲಿಯದ ಬಿಬಿಎಂಪಿ

ಸಂಪಾದಕೀಯ
Published 14 ಮಾರ್ಚ್ 2025, 23:30 IST
Last Updated 14 ಮಾರ್ಚ್ 2025, 23:30 IST
   

ಬೆಂಗಳೂರಿನ ಕಸದ ಸಮಸ್ಯೆ ಈಗ ಮತ್ತೆ ದೊಡ್ಡ ಸುದ್ದಿಯಾಗುತ್ತಿದೆ. ಈ ಹಿಂದೆ, ಮಾವಳ್ಳಿಪುರ ಕಸ ಸಂಗ್ರಹ ಘಟಕ ಬಂದ್‌ ಆದಾಗ, ಮಂಡೂರು ಭೂಭರ್ತಿ ಘಟಕ ತುಂಬಿಹೋದಾಗ, ಅಲ್ಲಿನ ರಸ್ತೆಗಳು ತ್ಯಾಜ್ಯ ಸಂಗ್ರಹ ಘಟಕಗಳಂತೆ ಗೋಚರಿಸಿ ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆಗಿನ ಮಾವಳ್ಳಿಪುರ–ಮಂಡೂರು ಜಾಗದಲ್ಲಿ ಈಗ ಮಿಟ್ಟಗಾನಹಳ್ಳಿ–ಬೆಳ್ಳಹಳ್ಳಿ ಇವೆ. ಅಷ್ಟೇ ಬದಲಾವಣೆ. ಮಿಟ್ಟಗಾನಹಳ್ಳಿ ಭೂಭರ್ತಿ ಘಟಕದಲ್ಲಿ ಕಸ ವಿಲೇವಾರಿಯು ವೈಜ್ಞಾನಿಕವಾಗಿ ಆಗುತ್ತಿಲ್ಲ ಎಂದು ದೂರಿರುವ ಗ್ರಾಮಸ್ಥರು, ಕಸ ಹೊತ್ತು ತಂದಿರುವ 300ಕ್ಕೂ ಅಧಿಕ ಕಾಂಪ್ಯಾಕ್ಟರ್‌ಗಳನ್ನು ರಸ್ತೆಯಲ್ಲೇ ತಡೆದಿದ್ದಾರೆ. ನಾಲ್ಕು ದಿನಗಳಿಂದಲೂ ಕಸವನ್ನು ಘಟಕದಲ್ಲಿ ಸುರಿದು ಹೋಗಲು ಬಿಟ್ಟಿಲ್ಲ. ಕಾಂಪ್ಯಾಕ್ಟರ್‌ಗಳು ಮರಳಿ ಬಾರದಿರುವ ಕಾರಣ ಅವುಗಳಿಗೆ ಕಸ ವರ್ಗಾಯಿಸಲು ಸಾಧ್ಯವಾಗದೆ ಆಟೊ ಟಿಪ್ಪರ್‌ಗಳು ನಗರದ ರಸ್ತೆಗಳಲ್ಲಿ ಹಾಗೇ ನಿಂತಿವೆ. ಹೀಗಾಗಿ, ಹಲವು ವಾರ್ಡ್‌ಗಳಲ್ಲಿ ರಸ್ತೆಗಳ ಮೇಲೆಯೇ ಕಸ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ದುರ್ನಾತವೂ ಹರಡಿದೆ. ಬೆಂಗಳೂರಿನ ಜನಸಂಖ್ಯೆಯು ವಿಪರೀತ ಎನಿಸುವಷ್ಟು ಬೆಳೆದಿರುವುದು, ವಾರ್ಡ್‌ ಮಟ್ಟದಲ್ಲಿ ಡಂಪ್‌ಯಾರ್ಡ್‌ ಇಲ್ಲದಿರುವುದು, ದಿನದ 24 ಗಂಟೆ ಕೆಲಸದ ಸಂಸ್ಕೃತಿ ಬೆಳೆದಿರುವುದು, ಜೀವನಶೈಲಿಯಲ್ಲಿ ಭಾರಿ ಬದಲಾವಣೆ ಆಗಿರುವುದು, ಕಸ ವಿಲೇವಾರಿಗೆ ಕೇಂದ್ರೀಕೃತ ವ್ಯವಸ್ಥೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವುದು–ಕಸದ ಸಮಸ್ಯೆಯ ಪ್ರಮುಖ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು. ಈ ಸಮಸ್ಯೆಯು ಬಿಗಡಾಯಿಸುವಂತೆ ನೋಡಿಕೊಂಡಿದ್ದು ಮಾತ್ರ ರಾಜಕೀಯ ನಂಟು ಹೊಂದಿರುವ ಕಸದ ಮಾಫಿಯಾ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿಯ ಪ್ರತಿ ಕಂಬವೂ ಉಸುರುತ್ತದೆ. ಕಸ ವಿಲೇವಾರಿ ಸಮಸ್ಯೆ ದೈತ್ಯಾಕಾರ ತಾಳಿದಾಗಲೆಲ್ಲ ಬಿಬಿಎಂಪಿಯು ಮೈಕೊಡವಿ ಮೇಲೆದ್ದಂತೆ ಒಂದಿಷ್ಟು ಚಟುವಟಿಕೆಗಳಲ್ಲಿ ತೊಡಗಿದಂತೆ ಮಾಡುವುದು, ನಂತರ ಮತ್ತೆ ಕುಂಭಕರ್ಣ ನಿದ್ರೆಗೆ ಜಾರುವುದು ದಶಕಗಳಿಂದ ನಡೆಯುತ್ತಿರುವ ವಿದ್ಯಮಾನ. ಶಾಶ್ವತ ಪರಿಹಾರಕ್ಕೆ ಕಾರಣವಾಗುವಂತಹ ಸುಸ್ಥಿರ ವ್ಯವಸ್ಥೆಯೊಂದನ್ನು ರೂಪಿಸುವಲ್ಲಿ ಅದು ಸಂಪೂರ್ಣವಾಗಿ ಸೋತಿದೆ. ರಾಜಧಾನಿಯ ಈ ಸಮಸ್ಯೆಗೆ ತಕ್ಕ ಪರಿಹಾರ ಒದಗಿಸಲು ಇದುವರೆಗೆ ಸರ್ಕಾರ ಕೂಡ ಇಚ್ಛಾಶಕ್ತಿಯನ್ನು ಪ್ರದರ್ಶಿಸಿಲ್ಲ.

ಮಂಡೂರಿನಲ್ಲಿ ಸಮಸ್ಯೆ ಬಿಗಡಾಯಿಸಿದಾಗ ಮೂಲದಲ್ಲೇ ಕಸ ಬೇರ್ಪಡಿಸಬೇಕು, ವಿಕೇಂದ್ರೀಕೃತ ತ್ಯಾಜ್ಯ ನಿರ್ವಹಣೆ ಹಾಗೂ ವಿಲೇವಾರಿ ವ್ಯವಸ್ಥೆಯನ್ನು ಮಾಡಬೇಕು, ಪ್ರತಿ ವಾರ್ಡ್‌ನಲ್ಲಿ ಒಣಕಸ ಸಂಗ್ರಹ ಕೇಂದ್ರ ತೆರೆಯಬೇಕು ಮತ್ತು ಭೂಭರ್ತಿ ಮಾಡುವ ಕಸದ ಪ್ರಮಾಣವನ್ನು ಒಟ್ಟು ನಗರ ಕಸ ಉತ್ಪಾದನೆಯ ಶೇಕಡ 20ಕ್ಕೆ ಸೀಮಿತಗೊಳಿಸಬೇಕು ಎಂಬ ನಿರ್ಣಯಕ್ಕೆ ಬಿಬಿಎಂಪಿ ಬಂದಿತ್ತು. ಹದಿಮೂರು ವರ್ಷಗಳಷ್ಟು ಹಿಂದೆಯೇ ಕೈಗೊಂಡ ಈ ನಿರ್ಣಯಗಳನ್ನು ಒಂದುವೇಳೆ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದರೆ ಈ ವೇಳೆಗೆ ಕಸ ವಿಲೇವಾರಿಯ ಸಮಸ್ಯೆ ಬಹುಪಾಲು ನೀಗುತ್ತಿತ್ತು. ಬಹುತೇಕ ವಾರ್ಡ್‌ಗಳಲ್ಲಿ ಒಣಕಸ ಸಂಗ್ರಹ ಕೇಂದ್ರಗಳನ್ನೇನೋ ತೆರೆಯಲಾಗಿದೆ. ಆದರೆ, ಮೂಲದಲ್ಲಿ ಕಸ ಬೇರ್ಪಡಿಸುವ ನಿಯಮ ಸರಿಯಾಗಿ ಜಾರಿಯಾಗದ ಕಾರಣ ಮಿಶ್ರಕಸ ಭೂಭರ್ತಿ ಘಟಕಗಳ ಕಡೆಗೆ ಹೋಗುತ್ತಿದೆಯೇ ವಿನಾ ಮರುಬಳಕೆ ಮಾಡಬಹುದಾದ ತ್ಯಾಜ್ಯ ವಸ್ತುಗಳು ಒಣಕಸ ಕೇಂದ್ರಗಳನ್ನು ತಲುಪುತ್ತಿಲ್ಲ. ಪಕ್ಕದ ಗೋವಾ ರಾಜ್ಯದ ಪಣಜಿ ನಗರದ ಉದಾಹರಣೆಯನ್ನೇ ನೋಡಿ. ಮರುಬಳಕೆ ಮಾಡಬಹುದಾದ ತ್ಯಾಜ್ಯವನ್ನು ಶಾಲೆಗೆ ತಂದರೆ ಮಕ್ಕಳಿಗೆ ಬಹುಮಾನ ನೀಡಲಾಗುತ್ತದೆ. ಅಲ್ಲಿನ ಕಾಲೊನಿಗಳಲ್ಲಿ ಹಸಿಕಸವನ್ನು ಗೊಬ್ಬರವಾಗಿ ಪರಿವರ್ತಿಸಲು ಮುನ್ಸಿಪಾಲಿಟಿ ವತಿಯಿಂದಲೇ ಮನೆಗಳ ಸಂಖ್ಯೆಗೆ ಅನುಗುಣವಾಗಿ ಗುಂಡಿಗಳನ್ನು ನಿರ್ಮಿಸಿಕೊಡಲಾಗುತ್ತದೆ. ಕಣ್ಣು ತೆರೆದು ನೋಡಿದರೆ ಸುತ್ತಲೂ ಇಂತಹ ಬೇಕಾದಷ್ಟು ಒಳ್ಳೆಯ ಮಾದರಿಗಳು ಕಾಣುತ್ತವೆ. ಬಿಬಿಎಂಪಿ ಈಗಲಾದರೂ ತನ್ನ ಹೊಣೆಯನ್ನು ಸರಿಯಾಗಿ ನಿಭಾಯಿಸಬೇಕು. ಸುಸ್ಥಿರ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ಕಸದ ಅವೈಜ್ಞಾನಿಕ ವಿಲೇವಾರಿಯಿಂದ ಆರೋಗ್ಯ ಸಮಸ್ಯೆ ಎದುರಿಸಬೇಕಿದೆ, ಅಂತರ್ಜಲವೂ ಕಲುಷಿತಗೊಳ್ಳುತ್ತಿದೆ ಎಂಬ ಮಿಟ್ಟಗಾನಹಳ್ಳಿ–ಬೆಳ್ಳಹಳ್ಳಿ ಗ್ರಾಮಸ್ಥರು ವ್ಯಕ್ತಪಡಿಸಿರುವ ಆತಂಕ ಸಹಜವಾದದ್ದು. ಅವರ ಆತಂಕ ದೂರ ಮಾಡುವಂತಹ ಕ್ರಮಗಳನ್ನು ಕೈಗೊಂಡು, ಅವರಲ್ಲಿ ವಿಶ್ವಾಸ ತುಂಬಿ ಸಹಕಾರ ಪಡೆಯುವಂತಹ ಕೆಲಸ ಬಿಬಿಎಂಪಿಯಿಂದ ಆಗಬೇಕು. ಬೆಂಗಳೂರಿನ ಜನ ಬಿಬಿಎಂಪಿಯೇ ಎಲ್ಲವನ್ನೂ ಮಾಡಲಿ ಎಂದು ಮಿಶ್ರಕಸ ಕೊಡುವಂತಹ ಹೊಣೆಗೇಡಿತನ ಪ್ರದರ್ಶಿಸದೆ ‘ಮೂಲದಲ್ಲೇ ಕಸ ಬೇರ್ಪಡಿಸುವಿಕೆ, ಗರಿಷ್ಠ ಮರುಬಳಕೆ, ಭೂಭರ್ತಿ ಘಟಕಕ್ಕೆ ಕನಿಷ್ಠ’ ಎಂಬ ನಿಯಮ ಅಳವಡಿಸಿಕೊಳ್ಳಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT