ADVERTISEMENT

ಸಂಪಾದಕೀಯ | ಹಿಂಡನ್‌ಬರ್ಗ್‌ ವರದಿ: ಸಮಿತಿ ನೇತೃತ್ವದಲ್ಲಿ ತನಿಖೆ ಸ್ವಾಗತಾರ್ಹ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 19:31 IST
Last Updated 5 ಮಾರ್ಚ್ 2023, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ಅದಾನಿ ಸಮೂಹದ ಕುರಿತು ಪ್ರಕಟಿಸಿದ ವರದಿ, ನಂತರದಲ್ಲಿ ಅದಾನಿ ಸಮೂಹದ ಕಂಪನಿಗಳ ಷೇರುಮೌಲ್ಯದ ಮೇಲೆ ಹಾಗೂ ದೇಶದ ಷೇರುಪೇಟೆಗಳ ಮೇಲೆ ಆದ ಪರಿಣಾಮದ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ಸಮಿತಿಯೊಂದನ್ನು ರಚಿಸಿರುವುದು ಸ್ವಾಗತಾರ್ಹ.

ಷೇರುಪೇಟೆಗಳಲ್ಲಿ ಆಗುವ ಏರಿಳಿತಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶ ಮಾಡುವುದು ತೀರಾ ವಿರಳ. ಆದರೆ, ಅದಾನಿ ಸಮೂಹಕ್ಕೆ ಸಂಬಂಧಿಸಿದ ಪ್ರಕರಣವು ಭಿನ್ನ. ಈ ಸಮೂಹವು ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡ ವೇಗ, ಷೇರುದಾರರ ಹಿತಾಸಕ್ತಿಯ ಮೇಲೆ ಆಗಿರುವ ಪರಿಣಾಮ ಮತ್ತು ಅದಾನಿ ಅವರ ಕುಟುಂಬವು ಆಡಳಿತಾರೂಢರ ಜೊತೆ ಹೊಂದಿದೆ ಎನ್ನಲಾಗಿರುವ ನಿಕಟ ಬಾಂಧವ್ಯದ ಕಾರಣದಿಂದಾಗಿ ಈ ಪ್ರಕರಣ ಭಿನ್ನ.

ಅದಾನಿ ಸಮೂಹವು ತನ್ನ ಕಂಪನಿಗಳ ಷೇರುಮೌಲ್ಯದ ಮೇಲೆ ಅಕ್ರಮವಾಗಿ ಪ್ರಭಾವ ಬೀರುತ್ತಿದೆ, ದೇಶದಾಚೆ ಇರುವ ಕಂಪನಿಗಳ ಮೂಲಕ ವಂಚನೆ ನಡೆದಿದೆ ಎಂಬ ಆರೋಪವಿರುವ ವರದಿ ಪ್ರಕಟವಾದ ನಂತರದಲ್ಲಿ ಮೂಡಿರುವ ಪ್ರಶ್ನೆಗಳಿಗೆ ಅದಾನಿ ಸಮೂಹ, ನಿಯಂತ್ರಣ ವ್ಯವಸ್ಥೆ, ತನಿಖಾ ಸಂಸ್ಥೆಗಳು ಮತ್ತು ಸರ್ಕಾರದಿಂದ ಉತ್ತರ ಸಿಗಬೇಕಿದೆ. ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯ ವರದಿ ಪ್ರಕಟವಾಗಿ ಐದು ವಾರಗಳು ಕಳೆದಿದ್ದರೂ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲದ್ದನ್ನು ಹಿನ್ನೆಲೆಯಲ್ಲಿ ಇರಿಸಿಕೊಂಡು, ಸುಪ್ರೀಂ ಕೋರ್ಟ್‌ ಸಮಿತಿ ರಚಿಸಿರುವುದರ ಮಹತ್ವವನ್ನು ಗ್ರಹಿಸಬೇಕು.

ADVERTISEMENT

ಸುಪ್ರೀಂ ಕೋರ್ಟ್‌ ಈ ಸಮಿತಿಗೆ ನಾಲ್ಕು ಸೂಚನೆಗಳನ್ನು ನೀಡಿದೆ. ಮೊದಲನೆಯದು, ಪರಿಸ್ಥಿತಿಯ ಸಮಗ್ರ ಪರಿಶೀಲನೆ ನಡೆಸುವುದು ಹಾಗೂ ‘ಮಾರುಕಟ್ಟೆ ಅಸ್ಥಿರತೆ’ಗೆ ಕಾರಣವಾದ ಅಂಶಗಳನ್ನು ಕೂಡ ಪರಿಶೀಲಿಸುವುದು. ಎರಡನೆಯದು, ಅದಾನಿ ಸಮೂಹದ ಕಂಪನಿಗಳು ನಡೆಸಿವೆ ಎನ್ನಲಾದ ಅಕ್ರಮಗಳ ವಿಚಾರದಲ್ಲಿ ನಿಯಂತ್ರಣ ವ್ಯವಸ್ಥೆಯಿಂದ ವೈಫಲ್ಯ ಆಗಿದೆಯೇ ಎಂಬುದನ್ನು ಹುಡುಕುವುದು. ಮೂರನೆಯದು, ಕಾನೂನು ಹಾಗೂ ನಿಯಂತ್ರಣ ಚೌಕಟ್ಟನ್ನು ಬಲಪಡಿಸಲು ಕ್ರಮಗಳನ್ನು ಸೂಚಿಸುವುದು. ನಾಲ್ಕನೆಯದು, ಹೂಡಿಕೆದಾರರಲ್ಲಿ ಅರಿವನ್ನು ಹೆಚ್ಚಿಸಲು ಕ್ರಮಗಳನ್ನು ಸೂಚಿಸುವುದು.

ಈ ಸಮಿತಿಯ ಜೊತೆ ಸಹಕರಿಸಬೇಕು ಎಂದು ಸುಪ್ರೀಂ ಕೋರ್ಟ್‌, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮತ್ತು ಇತರ ಸಂಸ್ಥೆಗಳಿಗೆ ತಿಳಿಸಿದೆ. ಸಮಿತಿಯ ನೇತೃತ್ವವನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಎಂ. ಸಪ್ರೆ ವಹಿಸಲಿದ್ದಾರೆ. ಉದ್ಯಮ ವಲಯದ ನಂದನ್ ನಿಲೇಕಣಿ, ಕೆ.ವಿ. ಕಾಮತ್ ಅವರೂ ಸಮಿತಿಯಲ್ಲಿ ಇದ್ದಾರೆ. ಸಮಿತಿಯು ಮುಚ್ಚಿದ ಲಕೋಟೆಯಲ್ಲಿ ತನ್ನ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕಿದೆ. ಅಂದರೆ, ವರದಿಯು ಗೋಪ್ಯವಾಗಿ ಇರಲಿದೆ.

ಅದಾನಿ ಸಮೂಹವು ನಿಯಮಗಳನ್ನು ಉಲ್ಲಂಘಿಸಿದೆಯೇ ಎಂಬ ಬಗ್ಗೆ, ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯ ವರದಿ ಪ್ರಕಟವಾಗುವ ಮೊದಲು ಹಾಗೂ ಪ್ರಕಟವಾದ ನಂತರದಲ್ಲಿ ಸಮೂಹ ನಡೆಸಿದ ಚಟುವಟಿಕೆಗಳ ಬಗ್ಗೆ ತಾನು ಈಗಾಗಲೇ ತನಿಖೆ ನಡೆಸುತ್ತಿರುವುದಾಗಿ ಕೋರ್ಟ್‌ಗೆ ಸೆಬಿ ತಿಳಿಸಿದೆ. ಇದರಲ್ಲಿ, ಈಗ ಹಿಂದಕ್ಕೆ ಪಡೆಯಲಾಗಿರುವ, ಅದಾನಿ ಎಂಟರ್‌ಪ್ರೈಸಸ್‌ನ ಷೇರು ಮಾರಾಟ ಪ್ರಕ್ರಿಯೆಯೂ (ಎಫ್‌ಪಿಒ) ಸೇರಬೇಕು. ಅದೇನೇ ಇರಲಿ, ಸೆಬಿ ವಿಚಾರಣೆಯು ಕೋರ್ಟ್‌ಗೆ ತೃಪ್ತಿ ತಂದಿಲ್ಲ ಎಂಬುದು ಸ್ಪಷ್ಟ.

ತನಿಖೆಯಲ್ಲಿ ಮೂರು ನಿರ್ದಿಷ್ಟ ಅಂಶಗಳನ್ನು ಒಳಗೊಳ್ಳಬೇಕು ಎಂದು ಕೋರ್ಟ್‌ ಹೇಳಿರುವುದು ಸೆಬಿಯ ಬಗ್ಗೆ ಒಳ್ಳೆಯ ಚಿತ್ರಣ ನೀಡುವುದಿಲ್ಲ. ಇಲ್ಲಿ ಮುಖ್ಯ ವಿಚಾರವೆಂದರೆ, ತನ್ನದೇ ತಪ್ಪೊಂದರಿಂದಾಗಿ ಉಂಟಾಗಿರಬಹುದಾದ ಪರಿಸ್ಥಿತಿಯ ಬಗ್ಗೆ ಸೆಬಿ ತನಿಖೆ ನಡೆಸುತ್ತಿದೆ. ಸೆಬಿ ಕಡೆಯಿಂದ ಆಗಿರಬಹುದಾದ ಲೋಪವು ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೆ, ಒಂದಿಷ್ಟಾದರೂ ಪರಿಣಾಮ ಉಂಟುಮಾಡಿರಬಹುದು. ಇದನ್ನು ಸ್ವತಂತ್ರವಾಗಿ ಪರಿಶೀಲನೆಗೆ ಒಳಪಡಿಸಬೇಕಿತ್ತು. ಹೀಗಾಗಿ ಸಮಿತಿಯು ಈಗಿನ ಪರಿಸ್ಥಿತಿಗೆ ಸಂಬಂಧಿಸಿದ ವಿಚಾರಗಳನ್ನು ಹಾಗೂ ಸೆಬಿಯ ಪಾತ್ರವನ್ನು ಪರಿಶೀಲನೆಗೆ ಒಳಪಡಿಸಲಿದೆ. ಆದರೆ, ಸಮಿತಿಯ ವರದಿಯು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆಯಾಗಬೇಕಿರಲಿಲ್ಲ. ವರದಿಯಲ್ಲಿನ ವಿವರಗಳನ್ನು ಸಾರ್ವಜನಿಕರ ಎದುರು ತೆರೆದಿಡಬೇಕು. ‘ಮುಚ್ಚಿದ ಲಕೋಟೆ’ಯಲ್ಲಿ ಮಾಹಿತಿ ಸಲ್ಲಿಸುವ ಸಂಸ್ಕೃತಿಯ ಬಗ್ಗೆ ಕೋಪ ತೋರಿಸಿದ್ದ ಕೋರ್ಟ್‌, ಈ ಪ್ರಕರಣದಲ್ಲಿ ಅದರ ಮೊರೆ ಹೋಗಿರುವುದು ಆಶ್ಚರ್ಯಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.