ADVERTISEMENT

ಸಂಪಾದಕೀಯ | ಮತಗಳವು: ಚುನಾವಣಾ ಆಯೋಗ ವಿಶ್ವಾಸಾರ್ಹತೆ ಕಳೆದುಕೊಳ್ಳದಿರಲಿ

ಸಂಪಾದಕೀಯ
Published 26 ಅಕ್ಟೋಬರ್ 2025, 23:30 IST
Last Updated 26 ಅಕ್ಟೋಬರ್ 2025, 23:30 IST
   

ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ‘ಮತಗಳ್ಳತನ’ ನಡೆದಿರುವ ಆರೋಪಗಳ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿರುವ ತನಿಖೆಯಿಂದ ಹೊರಬರುತ್ತಿರುವ ಸಂಗತಿಗಳು ಭಾರತದ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸುವಂತಿವೆ. 2023ರ ವಿಧಾನಸಭಾ ಚುನಾವಣೆಗೂ ಮುನ್ನ ಒಬ್ಬ ಮತದಾರನ ಚೀಟಿಯನ್ನು ಅಕ್ರಮವಾಗಿ ರದ್ದುಪಡಿಸಲು ₹80 ಪಾವತಿ ಮಾಡಲಾಗುತ್ತಿತ್ತು ಎನ್ನುವುದು ಎಸ್‌ಐಟಿ ತನಿಖೆಯಲ್ಲಿ ತಿಳಿದುಬಂದಿದೆ. ಆರು ಸಾವಿರಕ್ಕೂ ಹೆಚ್ಚು ಮತದಾರರ ಚೀಟಿಗಳನ್ನು ಅಕ್ರಮವಾಗಿ ರದ್ದುಗೊಳಿಸಲು ಫಾರ್ಮ್‌–7 ಸಲ್ಲಿಸಲಾಗಿದೆ. ಇದಕ್ಕಾಗಿ ₹4.80 ಲಕ್ಷ ‍ಪಾವತಿ ಮಾಡಲಾಗಿದೆ ಎಂದು ಹೇಳಲಾಗಿದೆ. ಅಕ್ರಮವಾಗಿ ರದ್ದುಪಡಿಸಲು ಸಲ್ಲಿಸಲಾದ ಹೆಚ್ಚಿನ ಅರ್ಜಿಗಳು ದಲಿತರು ಹಾಗೂ ಅಲ್ಪಸಂಖ್ಯಾತ ವರ್ಗದ ಮತದಾರರಿಗೆ ಸೇರಿವೆ. ಮತದಾರರ ಪಟ್ಟಿಯಲ್ಲಿನ ಅಕ್ರಮದ ಪ್ರಮಾಣ ಮತ್ತು ಸ್ವರೂಪ ಚುನಾವಣಾ ಆಯೋಗಕ್ಕೆ ಎಚ್ಚರಿಕೆಯ ಗಂಟೆಯಂತಿದೆ. ದುರದೃಷ್ಟವಶಾತ್‌, ಆರೋಪಗಳಿಂದ ಎಚ್ಚೆತ್ತುಗೊಳ್ಳಬೇಕಾದ ಆಯೋಗ ಅಕ್ರಮ ಜರುಗಿರುವುದನ್ನು ಸಾರಾಸಗಟಾಗಿ ನಿರಾಕರಿಸುವ ಮೂಲಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಮಾರ್ಗವನ್ನು ಆರಿಸಿಕೊಂಡಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರು ಮತಗಳ್ಳತನದ ತನಿಖೆಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಆರೋಪಿಸುವ ಮೂಲಕ ಆಳಂದದ ಪ್ರಕರಣ ದೇಶದ ಗಮನಸೆಳೆದಿತ್ತು. ಎಸ್‌ಐಟಿಗೆ ಮುನ್ನ ತನಿಖೆ ನಡೆಸಿದ್ದ ಸಿಐಡಿ, ಅಗತ್ಯ ತಾಂತ್ರಿಕ ದತ್ತಾಂಶಗಳನ್ನು ಒದಗಿಸುವಂತೆ ಬರೆದ ಹದಿನೆಂಟು ಪತ್ರಗಳಿಗೆ ಆಯೋಗ ಒಮ್ಮೆಯೂ ಸ್ಪಂದಿಸಲಿಲ್ಲ ಎಂದು ರಾಹುಲ್‌ ಗಾಂಧಿ ದೂರಿದ್ದರು. ತನಿಖೆಗೆ ಆಯೋಗದ ಸಹಕಾರ ದೊರೆಯುತ್ತಿಲ್ಲ ಎಂದು ರಾಜ್ಯ ಸರ್ಕಾರವೂ ಹೇಳಿದೆ. ಈ ಮೊದಲು, ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಲೋಪದೋಷಗಳು ಇರುವುದಾಗಿ ರಾಹುಲ್‌ ಆರೋಪಿಸಿದ್ದರು. ಆ ಬಗ್ಗೆ ಪರಿಶೀಲನೆ ನಡೆಸಿದ ಸ್ವತಂತ್ರ ಸತ್ಯಶೋಧನಾ ತಂಡಗಳು, ಮತದಾರರ ಪಟ್ಟಿಯಲ್ಲಿ ಲೋಪಗಳು ಇರುವುದನ್ನು ದೃಢೀಕರಿಸಿದ್ದವು. ಆರೋಪಗಳಿಗೆ ಸಂಬಂಧಿಸಿದ ತನಿಖೆಗೆ ಸಹಕಾರ ನೀಡದಿರುವುದು ಹಾಗೂ ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ವ್ಯತ್ಯಾಸಗಳ ಬಗ್ಗೆ ಚುನಾವಣಾ ಆಯೋಗ ಮೌನವಾಗಿರುವುದು ಅದರ ಬಗ್ಗೆ ಸಾರ್ವಜನಿಕರು ಹೊಂದಿರುವ ವಿಶ್ವಾಸಾರ್ಹತೆಗೆ ಕುಂದು ತರುವಂತಿದೆ. ಆಯೋಗದ ನಡವಳಿಕೆಯೂ ಸಮಸ್ಯಾತ್ಮಾಕವಾಗಿದೆ. ರಾಹುಲ್‌ ಗಾಂಧಿ ಅವರು ಮತಗಳ್ಳತನದ ಆರೋಪಗಳನ್ನು ಮಾಡಿದಾಗ, ಪ್ರಮಾಣಪತ್ರ ಸಲ್ಲಿಸುವಂತೆ ಆಯೋಗ ಒತ್ತಾಯಿಸಿತ್ತು. ಇದೇ ಬಗೆಯ ಆರೋಪಗಳನ್ನು ಬಿಜೆಪಿ ಮುಖಂಡರು ಮಾಡಿದಾಗ ಆಯೋಗ ಯಾವುದೇ ಬಗೆಯ ಪ್ರಮಾಣಪತ್ರ ಕೇಳಲಿಲ್ಲ. ಮತದಾರರ ಪಟ್ಟಿಯ ದತ್ತಾಂಶಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಹಿಡಿತ ಹೊಂದಿರುವ ಆಯೋಗ, ಬೇರೆಯವರಿಂದ ಸಾಕ್ಷ್ಯಗಳನ್ನು ನಿರೀಕ್ಷಿಸುವುದು ವಿಚಿತ್ರವಾಗಿದೆ. ಸಾಕ್ಷ್ಯ ಹಾಗೂ ಸಮಗ್ರ ಮಾಹಿತಿ ತನ್ನ ಬಳಿಯೇ ಇದ್ದರೂ, ಆರೋಪಗಳು ಎದುರಾದ ಸಂದರ್ಭದಲ್ಲಿ ಅದನ್ನು ಸರಿಪಡಿಸುವ ಹೊಣೆಗಾರಿಕೆಯನ್ನು ಪ್ರದರ್ಶಿಸುವಲ್ಲಿ ಆಯೋಗ ವಿಫಲವಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಆಗಿರಬಹುದಾದ ಅಕ್ರಮಗಳನ್ನು ಗುರ್ತಿಸಿ ಸರಿ‍ಪಡಿಸಿಕೊಳ್ಳುವ ಅಗತ್ಯವನ್ನು ಆಯೋಗ ಗಂಭೀರವಾಗಿ ಪರಿಗಣಿಸಿರುವಂತೆ ಕಾಣಿಸುತ್ತಿಲ್ಲ.

ಮತದಾನದ ಪಾವಿತ್ರ್ಯವನ್ನು ರಕ್ಷಿಸುವುದು ಚುನಾವಣಾ ಆಯೋಗದ ಕರ್ತವ್ಯವಾಗಿದೆಯೇ ಹೊರತು, ತನ್ನನ್ನು ತಾನು ಪರಿಶೀಲನೆಗಳಿಂದ ತಪ್ಪಿಸಿಕೊಳ್ಳುವುದಲ್ಲ. ತನಿಖೆಗಳಿಗೆ ಸಹಕರಿಸದಿರುವುದು ಹಾಗೂ ಕಾನೂನುಬದ್ಧ ಪ್ರಶ್ನೆಗಳನ್ನು ಕೇಳದಿರುವಂತೆ ತಡೆಯುವ ನಡವಳಿಕೆ, ಆಯೋಗದ ನೈತಿಕ ಶಕ್ತಿಯನ್ನು ಕುಗ್ಗಿಸುವಂತಹದ್ದು ಹಾಗೂ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಬಗ್ಗೆ ಸಾರ್ವಜನಿಕರು ಇಟ್ಟಿರುವ ನಂಬಿಕೆಯನ್ನು ಹಾಳುಮಾಡುವಂತಹದ್ದು. ಆಳಂದ ‍ಪ್ರಕರಣದಲ್ಲಿನ ಅಕ್ರಮಗಳನ್ನು ನಿರ್ಲಕ್ಷಿಸುವ ಧೋರಣೆ ಆಯೋಗದ ಸಾಂಸ್ಥಿಕ ವಿಶ್ವಾಸಾರ್ಹತೆಗೆ ಧಕ್ಕೆ ತರುವಂತಿದೆ. ಪ್ರಶ್ನೆಗಳು ಎದುರಾದಾಗ ಮುಕ್ತವಾಗಿ ಎದುರಿಸಬೇಕೇ ಹೊರತು, ಇನ್ನಷ್ಟು ಸಂಶಯಕ್ಕೆ ಆಸ್ಪದ ಕಲ್ಪಿಸುವಂತಾಗಬಾರದು. ರಕ್ಷಣಾತ್ಮಕ ವರ್ತನೆಯಿಂದ ಆಯೋಗ ಹೊರಬಂದು ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕಾಗಿದೆ. ಉತ್ತರದಾಯಿತ್ವದಿಂದ ನುಣುಚಿಕೊಳ್ಳುವುದೇ ಆಯ್ಕೆಯಾದಲ್ಲಿ, ಆಯೋಗ ತನ್ನ ಘನತೆಯನ್ನು ಕಳೆದುಕೊಳ್ಳಲಿದೆ ಹಾಗೂ ನ್ಯಾಯಸಮ್ಮತ ಚುನಾವಣೆಗಳ ಬಗೆಗಿನ ಸಾರ್ವಜನಿಕರ ನಂಬಿಕೆಯೂ ಅಪಾಯಕ್ಕೆ ಸಿಲುಕಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.