ಭಾರತದ ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ದೊಮ್ಮರಾಜು ಅವರು 18 ವರ್ಷ ವಯಸ್ಸಿನಲ್ಲೇ ವಿಶ್ವ ಚೆಸ್ ಚಾಂಪಿಯನ್ ಪಟ್ಟಕ್ಕೆ ಏರಿ ಇತಿಹಾಸ ಸೃಷ್ಟಿಸಿದ್ದಾರೆ. ಅತಿ ಕಿರಿಯ ವಿಶ್ವ ಚಾಂಪಿಯನ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
ಚೀನಾದ ಡಿಂಗ್ ಲಿರೆನ್ ವಿರುದ್ಧ ವಿಶ್ವ ಚಾಂಪಿಯನ್‌ಷಿಪ್‌ನ 14 ಪಂದ್ಯಗಳ ಫೈನಲ್ ಅನ್ನು 7.5–6.5ರಿಂದ ಗೆದ್ದು ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಕ್ರಿಕೆಟ್ ಜನಪ್ರಿಯವಾಗಿ ರುವ ದೇಶದಲ್ಲಿ ಚೆಸ್ ಕ್ರಾಂತಿಗೆ ನಾಂದಿ ಹಾಡಿದ ವಿಶ್ವನಾಥನ್ ಆನಂದ್ ಈ ಹಿಂದೆ ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು. ಈಗ ಗುಕೇಶ್, ವಿಶ್ವ ಚಾಂಪಿಯನ್ ಆದ ಭಾರತದ ಎರಡನೇ ಆಟಗಾರ ಎನಿಸಿದ್ದಾರೆ.
ಚೆನ್ನೈನಲ್ಲಿ ನೆಲಸಿರುವ ತೆಲುಗು ಭಾಷಿಕ ಕುಟುಂಬದ ಈ ಚೆಸ್ ತಾರೆ, ಸಿಂಗಪುರದ ಸೆಂಟೋಸಾ ದ್ವೀಪದ ರೆಸಾರ್ಟ್‌ವೊಂದರಲ್ಲಿ ಚಾಂಪಿಯನ್‌ಷಿಪ್ ಆರಂಭವಾಗುವ ಮೊದಲೇ ಪ್ರಶಸ್ತಿಗೆ ನೆಚ್ಚಿನ ಆಟಗಾರ ಎನಿಸಿದ್ದರು. ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದು, ವಿಶ್ವ ಚಾಂಪಿಯನ್ ಪಟ್ಟಕ್ಕೆ ಚಾಲೆಂಜರ್ ಆದ ನಂತರ ಒಲಿಂಪಿಯಾಡ್‌ನಲ್ಲಿ ಅವರ ಅಮೋಘ ಯಶಸ್ಸು ಸಹಜವಾಗಿ ಈ ಅಭಿಪ್ರಾಯ ಮೂಡಿಸಿತ್ತು. ಇನ್ನೊಂದೆಡೆ, ವಿಶ್ವ ಕ್ರಮಾಂಕದಲ್ಲಿ 23ನೇ ಸ್ಥಾನದಲ್ಲಿರುವ ಲಿರೆನ್ ಅವರು ಕಳೆದ ವರ್ಷ ವಿಶ್ವ ಚಾಂಪಿಯನ್ ಆದ ಬಳಿಕ ಸಮಸ್ಯೆಗಳನ್ನು ಎದುರಿಸಿದರು. ಖಿನ್ನತೆ ಬಾಧಿಸಿತ್ತು.
ಅವರು ಒಳ್ಳೆಯ ಲಯದಲ್ಲೂ ಇರಲಿಲ್ಲ. ಆದರೆ ಫೈನಲ್ ಹೋರಾಟ ನಿರೀಕ್ಷೆ ಮೀರಿ ಅಂತಿಮ ಸುತ್ತಿನವರೆಗೆ ಬೆಳೆಯಿತು. ಇನ್ನೇನು ಈ ಸುತ್ತು ಕೂಡ ‘ಡ್ರಾ’ ಆಗಿ ಟೈಬ್ರೇಕರ್ ಅನಿವಾರ್ಯ ಆಗಬಹುದು ಎನ್ನುವ ಹಂತದಲ್ಲೇ ಲಿರೆನ್ ಎಸಗಿದ ಅಚಾತುರ್ಯ ಗುಕೇಶ್‌ಗೆ ಗೆಲುವಿನ ಅವಕಾಶ ಸೃಷ್ಟಿಸಿತು. ವಿಶ್ವ ಚಾಂಪಿಯನ್‌ಷಿಪ್ ಆಡುವುದು ಪ್ರತಿಯೊಬ್ಬ ಚೆಸ್ ಆಟಗಾರನ ಕನಸು. ಆದರೆ ದೀರ್ಘ ಅವಧಿಯ ಫೈನಲ್ ಆಟ ಆಡಲು ಬಹಳಷ್ಟು ಸಿದ್ಧತೆಯ ಜೊತೆಗೆ ಗಟ್ಟಿ ಮನೋಬಲ ಬೇಕು. ಇಲ್ಲಿ ಗುಕೇಶ್ ಪ್ರತಿ ಪಂದ್ಯದಲ್ಲೂ ಕೊನೆಯವರೆಗೆ ಅವಕಾಶಗಳಿಗಾಗಿ ಕಾಯುತ್ತಿದ್ದರು, ಲಿರೆನ್ ಬಹುತೇಕ ಪಂದ್ಯಗಳಲ್ಲಿ ‘ಡ್ರಾ’ಕ್ಕೆ ಒಲವು ತೋರಿದಂತೆ ಕಂಡಿತು. ಒಟ್ಟಾರೆ ಚೀನಾದ ಆಟಗಾರನ ಹೋರಾಟವೂ ಗಮನ ಸೆಳೆಯಿತು.
ಮೂರೇ ತಿಂಗಳ ಹಿಂದೆ ಭಾರತದ ಓಪನ್ ಮತ್ತು ಮಹಿಳಾ ತಂಡಗಳು ಹಂಗೆರಿಯ ಬುಡಾಪೆಸ್ಟ್
ನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದಿದ್ದವು. ಆ ಕೂಟದಲ್ಲಿ ಮೊದಲ ಬೋರ್ಡ್‌ನ ಅಮೋಘ ಸಾಧನೆಗಾಗಿ ಚಿನ್ನ ಗೆದ್ದಿದ್ದ ಗುಕೇಶ್ ಈಗ ವರ್ಷದ ಕೊನೆಯಲ್ಲಿ ಭಾರತದ ಯಶಸ್ಸಿನ ಓಟಕ್ಕೆ ಕಳಶಪ್ರಾಯ ಎಂಬಂತೆ ವಿಶ್ವ ಚಾಂಪಿಯನ್ ಆಗಿದ್ದಾರೆ.
ಅವರ ಕಠಿಣ ಪರಿಶ್ರಮ, ಕಂಡಿದ್ದ ಕನಸು, ಅದಕ್ಕೆ ನೀರೆರೆಯಲು ಪೋಷಕರ ತ್ಯಾಗ ಮತ್ತು ಫೈನಲ್‌ನಲ್ಲಿ ಅವರ ತಂಡದ ಸಿದ್ಧತೆ ಎಲ್ಲವೂ ಫಲ ನೀಡಿವೆ. ಆಟದಲ್ಲಿ ಅಪೂರ್ವ ಏಕಾಗ್ರತೆ, ಬೋರ್ಡ್‌ನಲ್ಲಿ ಪ್ರತಿ ನಡೆಗೆ ಮೊದಲು ಆಳವಾದ ಲೆಕ್ಕಾಚಾರ, ಪಂದ್ಯ ಡ್ರಾ ಸ್ಥಿತಿಯಲ್ಲಿದ್ದರೂ ಕೊನೆಯ ಹಂತದವರೆಗೂ ಅವಕಾಶ ಅರಸುವ ಸಕಾರಾತ್ಮಕ ಮನೋಭಾವ– ಇವೆಲ್ಲಾ ಗುಣಗಳು ಅವರಿಗೆ ಅನುಭವಿ ಎದುರಾಳಿಯ ವಿರುದ್ಧ ಸೆಣಸಾಡುವಲ್ಲಿ ವಿಶ್ವಾಸ ಮೂಡಿಸಿದವು.
ಭಾರತದ ಯುವ ಪ್ರತಿಭೆಗಳಾದ ಪ್ರಜ್ಞಾನಂದ ರಮೇಶಬಾಬು, ಗುಕೇಶ್, ಅರ್ಜುನ್ ಇರಿಗೇಶಿ ಅವರು ಸಾಧನೆಗಳ ಮೂಲಕ ಸುದ್ದಿಯಾಗುತ್ತಿದ್ದಾರೆ. ಚೆನ್ನೈನ ಪ್ರಜ್ಞಾನಂದ 2023ರಲ್ಲಿ ವಿಶ್ವಕಪ್ ಫೈನಲ್ ತಲುಪಿದ್ದರು. ಈ ವರ್ಷ ಕ್ಯಾಂಡಿಡೇಟ್ಸ್ ಟೂರ್ನಿಯ ಎಂಟು ಆಟಗಾರರಲ್ಲಿ ಭಾರತದ ಮೂವರು (ಪ್ರಜ್ಞಾನಂದ, ಗುಕೇಶ್, ವಿದಿತ್ ಗುಜರಾತಿ) ಆಡಿದ್ದರೆನ್ನುವುದು ಗಮನಾರ್ಹ.
ಒಲಿಂಪಿಯಾಡ್‌ನಲ್ಲಿ ಚಿನ್ನ ಗೆಲ್ಲಲು ಈ ಯುವಪಡೆಯ ಪಾತ್ರ ನಿರ್ಣಾಯಕವಾಯಿತು. ಅಲ್ಲಿ ಅರ್ಜುನ್ ಇರಿಗೇಶಿ ಕೂಡ ಮೂರನೇ ಬೋರ್ಡ್‌ನ ಅಮೋಘ ಆಟಕ್ಕಾಗಿ ವೈಯಕ್ತಿಕ ಚಿನ್ನ ಗೆದ್ದಿದ್ದರು. ತೆಲಂಗಾಣದ ಇರಿಗೇಶಿ ಈಗ ಫಿಡೆ ವಿಶ್ವ ಕ್ರಮಾಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನದಲ್ಲಿರುವ ಗುಕೇಶ್ ಅವರ ಈಗಿನ ಸಾಧನೆಯು ದೇಶದಲ್ಲಿ ಚೆಸ್ ಬೆಳವಣಿಗೆಗೆ ಇನ್ನಷ್ಟು ಶಕ್ತಿ ತುಂಬುವುದರಲ್ಲಿ ಅನುಮಾನವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.