ADVERTISEMENT

ಸಂಗತ: ಕಾಸರಗೋಡು ಕನ್ನಡಿಗರ ಅನಾಥಪ್ರಜ್ಞೆ!

ಪ್ರಜಾವಾಣಿ ವಿಶೇಷ
Published 31 ಅಕ್ಟೋಬರ್ 2025, 23:30 IST
Last Updated 31 ಅಕ್ಟೋಬರ್ 2025, 23:30 IST
   

ಎಂದಿನಂತೆ ಈ ಬಾರಿಯ ರಾಜ್ಯೋತ್ಸವವೂ ಕಾಸರಗೋಡಿನ ಕನ್ನಡಿಗರಲ್ಲಿ ಸಂಭ್ರಮ–ಪುಲಕ ಹುಟ್ಟಿಸುತ್ತಿಲ್ಲ.

ರಾಜ್ಯೋತ್ಸವವನ್ನು ಕಾಸರಗೋಡಿನ ಕನ್ನಡಿಗರಾದ ನಾವು ಕರಾಳ ದಿನವಾಗಿ ಅನೇಕ ವರ್ಷಗಳಿಂದ ಆಚರಿಸುತ್ತಾ ಬಂದಿದ್ದೇವೆ. ರಾಜ್ಯ ಪುನರ್ ವಿಂಗಡಣೆ ಆಗಿ 63 ವರ್ಷಗಳಿಗೂ ಹೆಚ್ಚಿನ ಕಾಲ ಕಳೆದಿದೆ. ಬೇರೆ ಬೇರೆ ರೀತಿಯಲ್ಲಿ ಗರಿಷ್ಠ ಪ್ರಮಾಣದ ಹೋರಾಟ ನಡೆದಿವೆ. ಪರಿಣಾಮ ಮಾತ್ರ ಶೂನ್ಯವೇ ಹೊರತು ನಮ್ಮ ಉದ್ದೇಶ ಯಾವ ರೀತಿಯಿಂದಲೂ ಮಾನ್ಯವಾಗಲಿಲ್ಲ.

ಈಗಾಗಲೇ, ‘ಕರ್ನಾಟಕದೊಂದಿಗೆ ಸಾಂಸ್ಕೃತಿಕ ವಿಲೀನೀಕರಣ’ ಎನ್ನುವ ಸೂತ್ರವನ್ನು ಸರ್ಕಾರಗಳ ಗಮನಕ್ಕೆ ತಂದಿದ್ದೇವೆ. ಕನ್ನಡಿಗರ, ಕನ್ನಡ ಭಾಷೆಯ, ಸಂಸ್ಕೃತಿಯ ಹಿತದೃಷ್ಟಿಯಿಂದ ಶುಭವನ್ನು ಹಾರೈಸುವ ಎಲ್ಲರ ಗಮನಕ್ಕೂ ಈ ಸೂತ್ರವನ್ನು ವಿವಿಧ ಸಂವಹನ ಮಾಧ್ಯಮಗಳ ಮೂಲಕ ತರಲಾಗಿದೆ.

ADVERTISEMENT

ಸೂತ್ರದ ಬಗ್ಗೆ ಮಾತಾಡುವುದಕ್ಕೆ ಮೊದಲು ಒಂದು ಪ್ರಸ್ತುತವಾದ ಪ್ರಶ್ನೆಯನ್ನು ನಾವು ಎತ್ತಬೇಕು. ಭಾಷಾ ನೆಲೆಯಲ್ಲಿ ಅಥವಾ ಸಂಸ್ಕೃತಿಯ ನೆಲೆಯಲ್ಲಿ ಕಾಸರಗೋಡಿನ ಸ್ಥಾನಮಾನ ಏನು ಎನ್ನುವುದಕ್ಕೆ ಕರ್ನಾಟಕ ಸರ್ಕಾರದ ದೃಷ್ಟಿಯಿಂದ ಸ್ಪಷ್ಟೀಕರಣ ಇನ್ನೂ ನಮಗೆ ದೊರೆತಿಲ್ಲ. ಕಾಸರಗೋಡನ್ನು ಗಡಿನಾಡು ಎನ್ನುವ ವಿಭಾಗಕ್ಕೆ ಸೇರಿಸಿ (ವಿವಾದಿತ ಪ್ರದೇಶ) ಬೇರೆ ಬೇರೆ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಕೇಂದ್ರ ಸರ್ಕಾರವೂ ಆಂಶಿಕವಾಗಿಯಾದರೂ ಇದನ್ನು ಒಪ್ಪಿಕೊಂಡಿದೆ ಎನ್ನುವುದಕ್ಕೆ ಇತ್ತೀಚೆಗಿನ ಒಂದು ಜ್ವಲಂತ ನಿದರ್ಶನ ಹೇಳುವುದಾದರೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾಸರಗೋಡಿಗೆ ಆದ ಅನ್ಯಾಯವನ್ನು ತಿದ್ದುವಲ್ಲಿ ತಕ್ಷಣ ತಮ್ಮದೇ ಆದ ರೀತಿಯಿಂದ ಸ್ಪಂದಿಸಿದ್ದಾರೆ.

ಒಳನಾಡು, ಹೊರನಾಡು, ಗಡಿನಾಡು ಎಂಬ ವಿಭಾಗೀಕರಣ ಇದೆ. ಇದರಲ್ಲಿ ನಿಜವಾದ ಅರ್ಥದಲ್ಲಿ ಗಡಿನಾಡು ಯಾವುದು? ನಾನು ತಿಳಿದಂತೆ ಕಾಸರಗೋಡು ಮತ್ತು ಇನ್ನೂ ಒಂದೆರಡು ಪ್ರದೇಶಗಳು ಗಡಿನಾಡು ಎಂದರೆ ವಿವಾದಾಸ್ಪದ ಆದಂತಹ ಪ್ರದೇಶಗಳಾಗಿ ಗುರುತಿಸಲ್ಪಟ್ಟಿವೆ. ಈ ಗಡಿನಾಡಿಗೆ ಪ್ರತ್ಯೇಕವಾದಂತಹ ಕೆಲವು ನಿಯಾಮಾವಳಿಗಳು ಇವೆ ಎನ್ನುವುದನ್ನು ಸರ್ಕಾರವೂ ಒಪ್ಪಿಕೊಂಡಿದೆ ಎಂಬ ಕಾರಣದಿಂದಾಗಿಯೇ ವರ್ಷಗಳ ಅಂತರದಲ್ಲಿ ಅಲ್ಪಸಂಖ್ಯಾತರ ಆಯೋಗ ಈ ಪ್ರದೇಶಕ್ಕೆ ಬಂದು ಇಲ್ಲಿನ ಜನರ ಯೋಗಕ್ಷೇಮ ವಿಚಾರಿಸುತ್ತಿರುವುದನ್ನು ನಾವು ನೋಡಿದ್ದೇವೆ.

ಆದರೆ, ಗಡಿನಾಡು ಎನ್ನುವ ಪ್ರತ್ಯೇಕವಾದ ಅಸ್ತಿತ್ವ ಇರುವುದೇ ಹೌದಾದರೆ, ಕೇರಳ ಸರ್ಕಾರ ಕೂಡ ಈ ಸತ್ಯವನ್ನು ಅಂಗೀಕರಿಸಬೇಕಾಗುತ್ತದೆ. ಕೇರಳ ಸರ್ಕಾರ ಈಗ ಇದನ್ನು ಗಡಿನಾಡು ಎಂದು ಗುರುತಿಸಿದ ಚಿಹ್ನೆಗಳು ಮಾತ್ರ ಕಾಣಿಸುತ್ತಿಲ್ಲ. ಅದರ ಬದಲು, ಇದನ್ನು ಒಳನಾಡು ಎಂಬಂತೆ ಅವರು ನಡೆಸಿಕೊಂಡಿದ್ದಾರೆ. ಇದರಿಂದ ಗಡಿನಾಡಿನ ಭಾಷೆ, ಸಂಸ್ಕೃತಿಯ ಅಸ್ತಿತ್ವಕ್ಕೆ, ಅದರ ಸಂರಕ್ಷಣೆಗೆ ತುಂಬಾ ಅಪಾಯದ ವಿದ್ಯಮಾನಗಳು ಸಂಭವಿಸುತ್ತಿವೆ. ಮುಖ್ಯವಾಗಿ, ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ. ಅಭಿವೃದ್ಧಿ ಕ್ಷೇತ್ರದಲ್ಲೂ ಈ ಪ್ರದೇಶ ಅವಗಣನೆಗೆ ಒಳಗಾಗಿದೆ.

ಕೇರಳದ ಒಳನಾಡಿಗೆ ನಾವು ಸಂಬಂಧಿಸಿದವರಾದರೆ, ಇಲ್ಲಿನ ಕನ್ನಡಿಗರ ಅರ್ಥಾತ್ ಸಮಸ್ತ ಕೇರಳಿಗರೊಂದಿಗೆ ವಿಲೀನಗೊಂಡಿರುವ ಕನ್ನಡಿಗರ ಸುಖ–ದುಃಖವನ್ನು ಸಂಪೂರ್ಣವಾಗಿ ನಿರ್ವಹಿಸಬೇಕಾದ ಹೊಣೆಗಾರಿಕೆ ಕೇರಳ ಸರ್ಕಾರಕ್ಕಿದೆ. ಅದರೊಂದಿಗೆ ಗಡಿನಾಡು ಎಂಬ ನೆಲೆಯಲ್ಲಿ ವಿವಾದಿತ ಪ್ರದೇಶಕ್ಕೆ ಏನೆಲ್ಲಾ ವಿಶೇಷ ಸೌಲಭ್ಯಗಳನ್ನು ಕೊಡಬೇಕೋ ಅದೆಲ್ಲವನ್ನು ನೀಡುವುದು ಕೇರಳ ಸರ್ಕಾರದ ಕರ್ತವ್ಯ. ಇಲ್ಲಿನ ಸಂಸ್ಕೃತಿಗೆ ಬಾಧಕವಾಗದ ಹಾಗೆ ಸರ್ಕಾರದ ಸುತ್ತೋಲೆಗಳನ್ನು ಒಳಗೊಂಡಂತೆ ಎಲ್ಲವನ್ನು ಕನ್ನಡದಲ್ಲಿ ಅಥವಾ ಇಂಗ್ಲಿಷ್‌ನಲ್ಲಾದರೂ ಒದಗಿಸಬೇಕಾದ್ದೂ ಈ ಕರ್ತವ್ಯದಲ್ಲಿ ಒಳಗೊಳ್ಳುತ್ತದೆ. ಕರ್ನಾಟಕ ಸರ್ಕಾರ ಈ ಬಗ್ಗೆ ಏನು ನಿಲುವು ಹೊಂದಿದೆ ಎನ್ನುವುದು ಅತ್ಯಂತ ಪ್ರಸ್ತುತವಾದ ಪ್ರಶ್ನೆ. ಆದರೆ, ಇದಕ್ಕೆ ಸ್ಪಷ್ಟವಾದ ಉತ್ತರವು ಕರ್ನಾಟಕ ಸರ್ಕಾರದ ಪರವಾಗಿ ನಮಗೆ ಸಿಗುವುದಿಲ್ಲ.

ಒಳನಾಡು ಎಂದು ಗುರುತಿಸಿದ್ದರೆ, ಒಳನಾಡಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ನಮಗೆ ಸಿಗಬೇಕು. ಅದು ಸಾಧ್ಯವೂ ಅಲ್ಲ ಮತ್ತು ಅದನ್ನು ಭಾಷಾವಾರು ರಾಜ್ಯ ರಚನೆಯ ಸಂದರ್ಭದಲ್ಲಿ ಶಾಸನಬದ್ಧವಾಗಿ ಯಾರೂ ಒಪ್ಪಿಕೊಳ್ಳುವ ಹಾಗಿಲ್ಲ. ಹಾಗಾದರೆ ಇದನ್ನು ಹೊರನಾಡು ಎಂದು ಗುರುತಿಸಿರುವರೆ ಅಥವಾ ಗಡಿನಾಡು ಎಂದು ಗುರುತಿಸಿರುವರೆ? ಇಲ್ಲಿಗೆ ಕರ್ನಾಟಕ ಸರ್ಕಾರ ಕೊಡಬೇಕಾದ ಸೌಲಭ್ಯಗಳು ಯಾವುವು? ಅಥವಾ ಕರ್ನಾಟಕ ಸರ್ಕಾರ ಇಲ್ಲಿ ವಾಸಿಸುತ್ತಿರುವ ಕನ್ನಡಿಗರ ಪರವಾಗಿ, ಸಮಸ್ತ ಕಾಸರಗೋಡು ಪ್ರಶ್ನೆಯ ಪರವಾಗಿ ಯಾವ ಧೋರಣೆ ಹೊಂದಿದೆ? ಮಹಾಜನ ಆಯೋಗ ಇದು ಕರ್ನಾಟಕಕ್ಕೆ ಸೇರಬೇಕಾದ ಭೂಪ್ರದೇಶ ಎಂದು ತನ್ನ ವರದಿಯಲ್ಲಿ ಹೇಳಿದೆ. ಆ ವರದಿ ಇಂದಿಗೂ ಕಡತದಲ್ಲಿ ಹಾಗೇ ಉಳಿದಿದೆ. ನೇರವಾಗಿ ನಾವು ಪ್ರಶ್ನಿಸಬಯಸುವುದು, ನಮ್ಮಲ್ಲಿಂದ ಚುನಾಯಿತರಾಗಿ ಹೋದ ಜನಪ್ರತಿನಿಧಿಗಳು ಯಾವ ಕಾರಣಕ್ಕೆ ಮಹಾಜನ ಆಯೋಗದ ವರದಿಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲಿಲ್ಲ? ಇದು ಅತ್ಯಂತ ಗಂಭೀರ ಪ್ರಶ್ನೆ. ಕಾಸರಗೋಡಿನ ಕನ್ನಡಿಗರನ್ನು ಅನಾಥಪ್ರಜ್ಞೆ ಬಾಧಿಸುತ್ತಿದೆ. ಹೀಗಾಗುವುದು ಪ್ರಜಾಸತ್ತೆಗೆ ಯಾವ ದೃಷ್ಟಿಯಿಂದಲೂ ಆರೋಗ್ಯಕರವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.