
ಮಲೆನಾಡು ಎಂದರೆ ಹಸಿರು, ಧಾರಾಕಾರ ಮಳೆ, ಸಮೃದ್ಧಿ ಹಾಗೂ ನೆಮ್ಮದಿಯ ಜೀವನ ಎನ್ನುವ ಕಲ್ಪನೆ ಬಯಲು ಪ್ರದೇಶದ ಅನೇಕರ ಮನಸ್ಸಿನಲ್ಲಿ ಜೀವಂತವಾಗಿದೆ. ಆದರೆ,ಮಲೆನಾಡು ಈಗ ಮೊದಲಿನಂತಿಲ್ಲ. ಅದರಲ್ಲೂ, ಮಲೆನಾಡಿನ ಹೃದಯಭಾಗ ಆಗಿರುವ ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ರೈತರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಒಂದು ಕಾಲದಲ್ಲಿ ‘ಅನ್ನದ ಕಣಜ’ ಎಂದು ಕರೆಸಿಕೊಳ್ಳುತ್ತಿದ್ದ ಈ ಭಾಗದಲ್ಲಿ ಪ್ರಸ್ತುತ ರೈತನ ಬದುಕು ಬಿರುಗಾಳಿಗೆ ಸಿಲುಕಿರುವ ಸೊಡರಿನಂತಿದೆ.
ಹಿಂದೆ ಈ ಭಾಗದಲ್ಲಿ ಭತ್ತದ ಬೆಳೆಯೇ ರೈತನ ಜೀವನವಾಗಿತ್ತು. ಭತ್ತ ಬೆಳೆಯುವುದನ್ನು ಜಮೀನ್ದಾರ ಕುಟುಂಬಗಳಿಗೆ ಹೆಮ್ಮೆಯ ವಿಷಯವೆಂದು ಪರಿಗಣಿಸಲಾಗು ತ್ತಿತ್ತು. ಒಂದು ಮನೆತನದ ಗೌರವ, ಸಮೃದ್ಧಿ, ಸಾಮಾಜಿಕ ಸ್ಥಾನಮಾನ ಎಲ್ಲವೂ ಭತ್ತದ ಬೆಳೆಯೊಂದಿಗೆ ತಳಕು ಹಾಕಿಕೊಂಡಿತ್ತು. ಕಾಲಕ್ರಮೇಣ ಭತ್ತದ ಬೆಳೆಯು ರೈತನಿಗೆ ಲಾಭವಿಲ್ಲದ, ನಷ್ಟದ ವ್ಯವಹಾರವಾಗಿ ಬದಲಾಯಿತು. ಪ್ರಸ್ತುತ, ಒಂದು ಎಕರೆಗೆ ಸುಮಾರು ₹40 ಸಾವಿರ ವೆಚ್ಚ ಮಾಡಿದರೂ, ಅದರಿಂದ ಬರೀ ₹28 ಸಾವಿರದಷ್ಟು ಉತ್ಪತ್ತಿ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಶ್ರಮಕ್ಕೂ, ಹೂಡಿದ ಹಣಕ್ಕೂ ಮೌಲ್ಯ ಸಿಗದ ಕಾರಣ ಭತ್ತದ ಬೆಳೆಯನ್ನು ರೈತನು ಕೈಬಿಡಬೇಕಾದ ಅನಿವಾರ್ಯತೆ ಎದುರಾಗಿದೆ.
ಎಪ್ಪತ್ತರ ದಶಕದಲ್ಲಿ ಭತ್ತದ ಬೆಳೆಯು ಕಷ್ಟಕರವಾಗುತ್ತಿದೆ ಎಂಬ ಅರಿವು ರೈತರಿಗೆ ಬಂತು. ಅದರ ಪರಿಣಾಮವಾಗಿ, ತೊಂಬತ್ತರ ದಶಕದ ವೇಳೆಗೆ ಶೃಂಗೇರಿ ಕ್ಷೇತ್ರ ಸಂಪೂರ್ಣವಾಗಿ ಅಡಿಕೆಮಯ ಪ್ರದೇಶವಾಗಿ ಪರಿವರ್ತಿತವಾಯಿತು. ಅಡಿಕೆ ಬೆಳೆಯು ಆರಂಭದಲ್ಲಿ ರೈತರಿಗೆ ನೆಮ್ಮದಿಯ ಉಸಿರನ್ನು ನೀಡಿತು. ಆದಾಯ ದೊರೆಯಿತು, ಸಾಲ ತೀರಿತು, ಬದುಕು ಸ್ವಲ್ಪ ಸ್ಥಿರವಾಯಿತು. ಆ ನೆಮ್ಮದಿ ಹೆಚ್ಚುಕಾಲ ಉಳಿಯಲಿಲ್ಲ. 2000ರ ಇಸವಿಯ ನಂತರ ಅಡಿಕೆಗೆ ತಗುಲಿದ ಭೀಕರ ರೋಗಗಳು, ವಿಶೇಷವಾಗಿ ಹಳದಿ ರೋಗ, ಎಲೆಚುಕ್ಕಿ ರೋಗ, ಕೊಳೆ ರೋಗ ಮತ್ತು ನುಸಿ ರೋಗ, ಶೃಂಗೇರಿ ಕ್ಷೇತ್ರದ ಅಡಿಕೆ ತೋಟಗಳನ್ನು ಸಂಪೂರ್ಣವಾಗಿ ನಾಶಮಾಡುತ್ತಾ ಬಂದವು. ಒಂದು ಕಾಲದಲ್ಲಿ ನೂರು ಕ್ವಿಂಟಲ್ ಅಡಿಕೆ ಬೆಳೆಯುತ್ತಿದ್ದ ಜಾಗಗಳಲ್ಲಿ ಇಂದು ಎರಡು ಕ್ವಿಂಟಲ್ ಬೆಳೆಯುವುದೇ ಕಷ್ಟ ಎಂಬಂತಹ ದಾರುಣ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಷಗಳ ಕಾಲ ಬೆಳೆಸಿದ ತೋಟಗಳು ಕಣ್ಣೆದುರೇ ಒಣಗುತ್ತಿರುವುದನ್ನು ನೋಡುತ್ತಾ ರೈತನು ಅಸಹಾಯಕನಾಗಿ ನಿಂತಿದ್ದಾನೆ.
ಭತ್ತ ಬೆಳೆಯುವುದನ್ನು ಬಿಟ್ಟ ಮೇಲೆ ಅಡಿಕೆ ಹೊರತುಪಡಿಸಿ ಬೇರೆ ಬೆಳೆ ಬೆಳೆಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯೂ ಮಲೆನಾಡಿನಲ್ಲಿದೆ. ಮಳೆ ಅವಲಂಬಿತ ಕೃಷಿಯು ರೈತನನ್ನು ಆಯ್ಕೆಗಳಿಲ್ಲದ ದುಃಸ್ಥಿತಿಗೆ ತಳ್ಳಿದೆ. ಅರಣ್ಯ ಇಲಾಖೆಯ ಹಾಗೂ ಕಂದಾಯ ಇಲಾಖೆಯ ಅಮಾನವೀಯ ಕಾನೂನುಗಳು ಮತ್ತು ಬೆಳೆಹಾನಿಗೆ ಸೂಕ್ತ ಪರಿಹಾರ ದೊರೆಯದಿರುವ ಸ್ಥಿತಿಯೂ ರೈತರನ್ನು ಕಂಗಾಲಾಗಿಸಿದೆ.
ರೈತ ಕುಟುಂಬಗಳ ಕೆಲವು ಮಕ್ಕಳು ಉತ್ತಮ ಶಿಕ್ಷಣ ಪಡೆದಿದ್ದಾರೆ; ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳ ಸಾಫ್ಟ್‌ವೇರ್ ಕಂಪನಿಗಳಲ್ಲಿ ಉದ್ಯೋಗ ಪಡೆದು, ನಗರ ಜೀವನಕ್ಕೆ ಹೊಂದಿಕೊಂಡಿದ್ದಾರೆ. ಹಳ್ಳಿಗೆ, ಶೃಂಗೇರಿ ಭಾಗದ ಗ್ರಾಮೀಣ ಬದುಕಿಗೆ ಮರಳುವ ಬದಲು, ನಗರಗಳಲ್ಲಿಯೇ ಭವಿಷ್ಯದ ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ. ಹೀಗಾಗಿ ಹಳ್ಳಿಯಲ್ಲಿ ಉಳಿದಿರುವುದು ವಯೋವೃದ್ಧ ತಂದೆ–ತಾಯಿ ಅಥವಾ ಇತರೆ ಆಯ್ಕೆಗಳಿಲ್ಲದ ಅಣ್ಣ–ತಮ್ಮಂದಿರು ಮಾತ್ರ. ಆದಾಯವಿಲ್ಲದ ಕೃಷಿ, ಬೆಳೆ ನಾಶ, ಸಾಲದ ಒತ್ತಡ – ಇವೆಲ್ಲವೂ ಅವರನ್ನು ನಿರಂತರವಾಗಿ ಆತಂಕದಲ್ಲಿ ಬದುಕುವಂತೆ ಮಾಡಿವೆ.
ಅಡಿಕೆ, ಕಾಳುಮೆಣಸು, ರಬ್ಬರ್ ಇಂತಹ ಪ್ರಮುಖ ಬೆಳೆಗಳು ಪ್ರಸ್ತುತ ಆದಾಯಶೂನ್ಯ ಸ್ಥಿತಿಗೆ ತಲಪಿವೆ. ಒಂದು ವರ್ಷ ಬೆಳೆ ಬರುತ್ತದೆ ಎಂಬ ನೆಮ್ಮದಿಯ ಸ್ಥಿತಿಗೆ ಹೊಂದಿ ಕೊಳ್ಳುವ ಮೊದಲೇ ಸಮಸ್ಯೆಗಳ ಸರಮಾಲೆ ಎದುರಾಗುತ್ತದೆ. ನಿರಂತರ ಮಳೆಯಿಂದ ಕೊಳೆ ರೋಗ, ಮಳೆ ಸ್ವಲ್ಪ ನಿಂತಾಗ ನುಸಿ ರೋಗ, ಎಲೆಚುಕ್ಕಿ ರೋಗ, ಮಳೆ ಭೀಕರವಾದಾಗ ಗಾಳಿಯಿಂದ ಅಡಿಕೆ ಹಾಗೂ ಭತ್ತದ ಬೆಳೆ ನಾಶವಾಗುತ್ತದೆ. ಇದರೊಂದಿಗೆ ಕಾಟಿಗಳ ಕಾಟ, ಆನೆ ದಾಳಿ, ಕಾಡು ಹಂದಿಗಳಿಂದ ಬೆಳೆಯ ಸರ್ವನಾಶ – ಇವೆಲ್ಲವೂ ರೈತನಿಗೆ ನಿತ್ಯದ ಯಾತನೆಯಾಗಿವೆ.
ಮಲೆನಾಡು, ವಿಶೇಷವಾಗಿ ಶೃಂಗೇರಿ ಕ್ಷೇತ್ರ ಇಂದು ಹಸಿರು ಸ್ವರ್ಗವಲ್ಲ, ಅದು ನಲುಗುತ್ತಿರುವ ರೈತ ಬದುಕಿನ ಪ್ರತಿಬಿಂಬ. ಈ ಸಂಕಷ್ಟವನ್ನು ಅರ್ಥಮಾಡಿಕೊಂಡು, ಸರ್ಕಾರ, ಆಡಳಿತ ವ್ಯವಸ್ಥೆ ಮತ್ತು ಸಮಾಜ ಒಟ್ಟಾಗಿ ಮಲೆನಾಡಿನ ರೈತರ ಬದುಕು ಕೊಂಚ ಹಸನಾಗಲು ಸ್ಪಂದಿಸಬೇಕಾದ ಅವಶ್ಯಕತೆ ಇದೆ. ಆದರೆ, ಸರ್ಕಾರದ ಕಾಳಜಿ ಬೆಂಗಳೂರು, ಮೈಸೂರು ನಗರ ವ್ಯಾಪ್ತಿಗಳಿಗೆ ಸೀಮಿತ ಎನ್ನುವಂತಾಗಿದೆ.
ಶೃಂಗೇರಿ ಕ್ಷೇತ್ರಕ್ಕೆ ಬಹುತೇಕ ರಾಜಕೀಯ ನಾಯಕರು ಭೇಟಿ ನೀಡುವುದೇ ಹೆಲಿಕಾಪ್ಟರ್‌ನಲ್ಲಿ! ಗಗನಗಾಮಿಗಳಿಗೆ ನೆಲದ ಸಮಸ್ಯೆಗಳು ಅರ್ಥವಾಗುವುದು ಹೇಗೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.